ಮನಸ್ಸಿನಿಂದ ಭಾವಗಳು ತೊಟ್ಟಿಕ್ಕುವಾಗ ಹೃದಯ ಮೌನವಾಗಿ ಮಾತನಾಡುತ್ತದೆ. ಕೇಳಲು ಕಿವಿಯಿದ್ದರೂ ಮನಸ್ಸು ಅಂತರಂಗದ ಕಿವಿಯನ್ನೇ ಬಯಸುತ್ತದೆ. ಏನಿದು ಶೀರ್ಷಿಕೆಗೂ ಮಾತಿಗೂ ಹೊಂದಿಕೆಯೇ ಇಲ್ಲ, ಸುಮ್ಮನೆ ಬಡ ಬಡಿಸುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ವಿಷಯಕ್ಕೆ ಬರುತ್ತೇನೆ ಒಮ್ಮೊಮ್ಮೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೂ ಚೆನ್ನವೇ!
ನನಗೆ ಗೊತ್ತು ಶೀರ್ಷಿಕೆ ನಿಮ್ಮಲ್ಲಿ ಅನುಮಾನಗಳನ್ನು, ಅಸಹನೆಯನ್ನು ಬಿತ್ತಬಹುದು. ಕನಸ್ಸುಗಳಲ್ಲೇ ಜೀವಿಸುವ ನಮಗೆ ಜೀವನವೆಂಬುದು ನಾಳೆಗಳಲ್ಲೇ ಎಂಬುದನ್ನು ಬಲ್ಲೆ, ಅದು ಸಹಜವೂ ಹೌದು. ಮೊನ್ನೆ ಹೀಗೆ ಉದಯವಾಣಿಯಲ್ಲಿ ಒಂದು ಲೇಖನ ಓದುತ್ತಿದ್ದೆ. 'ನಾಳೆಯಲ್ಲಿ ನಾನಿಲ್ಲ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಲೇಖನ ಅದು. ಶೀರ್ಷಿಕೆಯೇ ನನ್ನಲ್ಲಿ ಕುತೂಹಲ ಹುಟ್ಟಿಸಿತು. ಒಬ್ಬ ವಿದವೆಯಾದ ಹೆಣ್ಣು ಮಗಳೊಬ್ಬಳ ಕರುಣಾಜನಕ ಮಿಂಚಂಚೆಯ ಮೇಲೆ ಕೇಂದ್ರಿತವಾಗಿತ್ತು. ಲೇಖಕರು, ವಯಸ್ಸು ಎಷ್ಟೇ ಚಿಕ್ಕದಿದ್ದರು ಆಸ್ತಿಗಳ ಗಳಿಕೆಯ ನಂತರ ಉಯಿಲು ಬರೆದಿಡಬೇಕಾದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿದ್ದರು. ಆ ಪ್ರಕಾರ ತಮ್ಮ ಮೇಲಿನವರ ಪ್ರೀತಿಯನ್ನು ಸಾವಿನ ನಂತರವೂ ವಿಸ್ತರಿಸಿದಂತಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಆ ಲೇಖನ ನನ್ನ ದೃಷ್ಟಿಕೋನಕ್ಕೆ ಸಿಕ್ಕಿ ಬೇರೆಯದೇ ಯೋಚನೆಗಳನ್ನು ಬಿತ್ತಿತು. ಆ ಭಾವಗಳನ್ನು ನನ್ನ ಹುಡಿ ಚೆಲ್ಲಿ ನಿಮ್ಮಲ್ಲಿ ಈಗ ಹರಹುತ್ತಿದ್ದೇನೆ.
ಜೀವನ ನೀರ ಮೇಲಿನ ಗುಳ್ಳೆ ಎಂಬ ದಾಸ ಶ್ರೇಷ್ಟರ ವಚನ ಕೇಳಿದ್ದರು ಮನುಷ್ಯ ಅದನ್ನು ಒಪ್ಪಿಕೊಳ್ಳಲೊಲ್ಲ. ನಾವು ಎಷ್ಟೇ ಚಿಕ್ಕ ವಯಸ್ಸಿನವರಾಗಿದ್ದರು ಸಾವು ಕ್ಷಣಗಳಲ್ಲಿ ಬಂದೆರಗಬಹುದು. ಅದಕ್ಕೆ ಹಲವಾರು ಕಾರಣಗಳಿರಬಹುದು. ಅಪಘಾತ, ಆಹಾರದಲ್ಲಿನ ಅಪೌಷ್ಟಿಕತೆ, ಮಾರಣಾಂತಿಕ ರೋಗಗಳು, ಸಣ್ಣ ವಿಷಯಕ್ಕೂ ಬದುಕಿನಿಂದ ವಿಮುಖರಾಗುವ ಮನಸ್ಥಿತಿ, ಹೀಗೆ ನೂರೆಂಟು ಕಾರಣಗಳು. ಇಷ್ಟೆಲ್ಲಾ ಇದ್ದಾಗ್ಯೂ ನಾವು ಬದುಕುವುದನ್ನು ಮುಂದೂಡುತ್ತೇವೆ. ವಾರಾಂತ್ಯಕ್ಕೆ ಹೆಂಡತಿ-ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಾತು ಕೊಟ್ಟು ಮುಂದಿನ ವಾರಕ್ಕೆ ಹೋದರಾಯ್ತು ಎಂದು ಮುಂದೂಡುತ್ತೇವೆ. ದಿನವೂ ವ್ಯಾಯಾಮ ಮಾಡಬೇಕು ಎಂದು ಪಣ ತೊಟ್ಟು ನಾಳೆ ಎಂಬ ಹಣೆ ಪಟ್ಟಿ ನೀಡಿ ಮುಂದೂಡುತ್ತೇವೆ. ಸ್ನೇಹಿತರೊಂದಿಗೆ ಒಂದು ಸುಂದರ ಭೇಟಿ ಎಂದು ಆಯೋಜಿಸಿ ನಂತರ ಯಾವುದಾದರು ನೆಪ ಹೂಡಿ ಭೇಟಿಯನ್ನು ಮುಂದೂಡುತ್ತೇವೆ. ಹೀಗೆ ನೋಡುತ್ತಾ ಹೋದರೆ ಬದುಕಿದ ಜೀವನಕ್ಕಿಂತ ಮುಂದೂಡಿದ ಜೀವನವೇ ಲಂಬವಾಗಿರುತ್ತದೆ.
ಹೀಗೆ ಎಲ್ಲವನ್ನೂ ನಾಳೆಗಳಿಗೆ ಕಾಯ್ದಿರಿಸುವ ನಮ್ಮ ಪ್ರೌವೃತ್ತಿ ಕಾಯ್ದಿರಿಸಿದ ಬದುಕನ್ನು ಬದುಕುವ ಮುಂಚೆಯೇ ನಮ್ಮನ್ನು ಜೀವನದಂಚಿಗೆ ತಂದು ನಿಲ್ಲಿಸುವುದು ದುರಂತ. ಹುಡುಕುತ್ತಾ ನಿಂತರೆ ಜೀವನಕ್ಕೆ ಅರ್ಥವೇ ಇಲ್ಲದಷ್ಟು ಸಣ್ಣದಾಗಿ ಜೀವನವನ್ನು ಬದುಕಿರುತ್ತೇವೆ. ಅಪ್ಪ-ಅಮ್ಮನ ಮಮತೆ ಕೊಡದ ಹಣಕ್ಕಾಗಿ ಕಾಲು ಭಾಗದಷ್ಟು ಜೀವನವನ್ನು ಸವೆಸಿರುತ್ತೇವೆ. ಸಂಗಾತಿಯ ಸಾಂಗತ್ಯ ಕೊಡದ ಕಾರು-ಬಂಗಲೆಯ ಕನಸಲ್ಲಿ ಇನ್ನು ಕಾಲು ಭಾಗದ ಬದುಕು. ಮಕ್ಕಳೊಂದಿಗಿನ ಆಪ್ಯಾಯಮಾನತೆ ಮತ್ತು ಸಂತೋಷ ಕೊಡದ ಕೆಲಸದ ಒತ್ತಡದಲ್ಲಿ ಮತ್ತೂ ಕಾಲು ಭಾಗದ ಬದುಕು. ಸ್ನೇಹದ ಆತ್ಮೀಯತೆ ಕೊಡದ ಅಹಂ ಒಳಗಿನ ಗರ್ವದ ಕೋಟೆಯೊಳಗೆ ಉಳಿದ ಕಾಲು ಭಾಗದ ಬದುಕು. ಹೀಗೆ ಹುಡುಕುತ್ತಾ ಹೋದರೆ ನಾವು ಬದುಕಿದ್ದೆವು ಎಂಬುದೇ ನಮಗೆ ಮರೆತು ಹೋಗುತ್ತದೆ. ನಾವು ನಮಗಾಗಿ, ನಮ್ಮ ಸಂತೋಷಕ್ಕಾಗಿ ಬದುಕಲೇ ಇಲ್ಲವೇ ಎನಿಸಿಬಿಡುತ್ತದೆ.
ಸಂತೋಷವೆಂಬುದು ಒಂದು ಬ್ಯಾಂಕ್ ಖಾತೆ ಇದ್ದ ಹಾಗೆ. ನಾವು ನಾವಾಗಿ ಬದುಕುತ್ತಾ ಹೋದಂತೆ ಸಂತೋಷ ತಾನೇ ತಾನಾಗಿ ಜಮ ಆಗುತ್ತಾ ಹೋಗುತ್ತದೆ. ಹಾಗೆ ಪಡೆದ ಸಂತೋಷವನ್ನು ಪ್ರತಿಯೊಬ್ಬರಿಗೂ ಹಂಚುವುದರಲ್ಲೇ ಜೀವನದ ನಿಜವಾದ ಸಾರ್ಥಕ್ಯ. ಜೀವನ ಪ್ರೀತಿ ನಮ್ಮಲ್ಲಿ ಎಷ್ಟಿರಬೇಕೆಂದರೆ ಸಾವು ಇಂದೇ ನಮ್ಮ ಮುಂದೆ ಬಂದು ಕರೆದರೂ 'ನನ್ನ ಜೀವನವನ್ನು ನಾನು ಸಂತೃಪ್ತಿಯಿಂದ ಬದುಕಿದ್ದೇನೆ, ನಿನ್ನ ಕರ್ತವ್ಯವನ್ನು ನೀನು ಮಾಡಬಹುದು' ಎಂಬಂತೆ ಸ್ವಾಗತಿಸಬೇಕು. ನಮ್ಮ ಜೀವನದ ಬಗ್ಗೆ ಕಿಂಚಿತ್ತು ವಿಷಾದವೂ ಇರದಂತೆ. ಅದು ನಿಜವಾದ ಮಾನವನ ಅಂತಸ್ತು.
ಒಮ್ಮೆ ಅಪ್ಪ-ಅಮ್ಮನ ದಿನ ನಿತ್ಯದ ಆರೋಗ್ಯದ ಬಗ್ಗೆ ಗಮನ ಹರಿಸಿ. ಪ್ರಿಯ ಮಡದಿಗೆ ಮೊಲ್ಲೆ ಮುಡಿಸಿ ನಿಮ್ಮ ಪ್ರೇಮವನ್ನು ನಿವೇಧಿಸಿ. ಮಕ್ಕಳ ಆಟ-ಪಾಠಗಳಲ್ಲಿ ಒಮ್ಮೆ ಸಹಕರಿಸಿ. ಸ್ನೇಹಿತರೊಂದಿಗೆ ಒಂದಷ್ಟು ಹಿತಕರ ಕ್ಷಣಗಳನ್ನು ಕಳೆಯಿರಿ. ಅವುಗಳಲ್ಲಿ ಸಿಗುವ ಸಂತೋಷ ಕೋಟಿ ಹಣ ಕೊಟ್ಟರು ಸಿಗದಂತಹದ್ದು. ಜೀವನ ಎಂಬುದೊಂದು ಕಲೆ. ಅದನ್ನು ಅಷ್ಟೇ ಕಲಾತ್ಮಕವಾಗಿ ಬದುಕಬೇಕು. ನಾಳೆ ಎಂಬುದೇ ಇಲ್ಲದಂತೆ, ಇಂದು ಎಂದಿಗೂ ಮುಗಿಯದಂತೆ. 'ನಾಳೆ ಮಾಡುವುದನ್ನು ಇಂದೇ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು, ನಾಳೆ ಎಂಬುದು ಹಾಳು' ಎಂಬ ನಾಣ್ನುಡಿಯಂತೆ 'ಹಾಳೆಂಬ ನಾಳೆಯಲಿ ನಾನಿಲ್ಲ' ಎಂಬ ವಾಸ್ತವದಲ್ಲಿ, 'ಹಾಲೆಂಬ ಇಂದಿನಲ್ಲೇ' ಜೇನನ್ನು ಬೆರೆಸಿ ಜೀವನವನ್ನು ಹಾಲು-ಜೇನಾಗಿಸಿ ಬದುಕಬೇಕು ಕಾಲನೂ ಕರುಬುವಂತೆ.
- ಪ್ರಸಾದ್.ಡಿ.ವಿ.
'ನಾಳೆ ಮಾಡುವುದನ್ನು ಇಂದೇ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು, ಎಂಬುದು ಅಕ್ಷರಹ ಸತ್ಯ . ಗೆಲುವಿನ ಮೂಲ ಸೂತ್ರವೇ ಈ ನುಡಿ . ಬದುಕಿನ ಎಲ್ಲ ಓರೆ -ಕೋರೆಗಳ ಪಟ್ಟಿ ಮಾಡಿ ವಾಸ್ತವತೆಯ ಚಿತ್ರಣವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀಯ ಕೆಲವು ಕಣ್ಣಿಗೆ ಗೋಚರಿಸಿದ ಅನುಭವಗಳು , ಮತ್ತಷ್ಟು ಸ್ವಯಂ ಅನುಭವಗಳಿಂದ ಬಂದ ಮನದಾಳದ ಮಾತುಗಳಿವು :) ತುಂಬಾ ಇಷ್ಟವಾಯಿತು :) ನಮ್ಮ ಸೋಮಾರಿತನ , ಅಲಕ್ಷ್ಯತನದಿಂದಲೇ ಅರ್ಧ ಬದುಕು ಹಾಳು ಮಾಡಿಕೊಳ್ಳುತ್ತೇವೆ .. ಎಲ್ಲವನ್ನು ಬಿಟ್ಟು, ಶಾಂತ ಮನಸ್ಸು , ಬದುಕುವ ಹುಮ್ಮಸ್ಸು , ಒಟ್ಟಿನಲ್ಲಿ ಬದುಕಿಗೊಂದು ತೇಜಸ್ಸು ಬೆಳೆಸಿಕೊಂಡರೆ ಹೆಚ್ಚಾಗುವುದು ನಮ್ಮಯ ವರ್ಚಸ್ಸು ಅದೇ ಬದುಕಿನ ಮೂಲ ಯಶಸ್ಸು :) ಶುಭವಾಗಲಿ :)
ReplyDeleteಸುಂದರ ಬದುಕಿಗೆ ನೀವು ಮುಂದಿಟ್ಟ ಸೂತ್ರಗಳನ್ನು ಮನಸಾರೆ ಒಪ್ಪಿದ್ದೇನೆ. ಸೋಮಾರಿತನದಿಂದ ನಾವು ಕಳೆದುಕೊಳ್ಳುವ ಬದುಕಿನ ಸುಂದರ ಕ್ಷಣಗಳು ಅಷ್ಟಿಷ್ಟಲ್ಲ .. ತೇಜಮಯ ಬದುಕಿಗೆ ಸೋಮಾರಿತನ ಅತಿ ದೊಡ್ಡ ಶಾಪ.. ಚಿಕ್ಕ ಲೇಖನದಲ್ಲಿ ದೊಡ್ಡದಾದ ಸಂದೇಶವನ್ನು ಮನಮುಟ್ಟುವಂತೆ ನಿರೂಪಿಸಿದ್ದೀರಿ...
ReplyDeleteಹುಸೇನ್