ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday, 28 September 2012

ನನ್ನ ಮುದ್ದು




ಮುದ್ದು ಮುದ್ದಾದ ಮನಸ್ಸಿಗೆ,
ಪೆದ್ದು ಪೆದ್ದಾಗಿ ಕೇಳಿದ್ದೆ,
ಹಕ್ಕಿಗಳಾಗುವ ಬಾರೆ,
ಬಾನೆತ್ತರಕ್ಕೆ ಹಾರಿ ಪುರ್ರೆಂದು..
ಚುಕ್ಕಿ ಚಂದ್ರಮರಂಕಿತವ ತರುವ
ನಮ್ಮ ಪ್ರೀತಿಗೆ..!
ಒಂದು ತುದಿಯಲ್ಲಿ ನೀನು,
ಇನ್ನೊಂದರಲ್ಲಿ ನಾನು..!

ನನ್ನವಳು ಜಾಣೆ,
ಕೇಳಬೇಕವಳ ಉತ್ತರವ ನೀವು,
ಹಕ್ಕಿಗಳಾಗುವ ನಲ್ಲ,
ಅಡ್ಡಿಯಿಲ್ಲ, ಕೈಯಲ್ಲಿ ಕೈ ಹಿಡಿದು,
ನೀ ಜೊತೆಗಿದ್ದರೆ ಸಾಕು,
ನನಗೆ ಬೇರೇನು ಬೇಕು?
ಚುಕ್ಕಿ ಚಂದ್ರಮನಲ್ಲೇ
ಮನೆ ಮಾಡಿ ನೆಲೆಯಾಗಬೇಕು..!

ಅವಳೋ ಮುದ್ದು ಮುದ್ದು,
ನಾನೋ ಪೆದ್ದು ಪೆದ್ದು,
ಉಕ್ಕುತ್ತಿದ್ದ ಪ್ರೀತಿಗೆ
ಅವಳ ಗಲ್ಲ ಹಿಡಿದೆತ್ತಿ
ಹೂ ಮುತ್ತು ನೀಡಿದ್ದು ಬಿಟ್ಟರೆ
ಇನ್ನೇನೂ ಮಾಡಿಲ್ಲ ನಾನು..!
ನಾನೋ ಪೆದ್ದು ಪೆದ್ದು,
ಅವಳೋ ನನ್ನ ಮುದ್ದು..!

- ಪ್ರಸಾದ್.ಡಿ.ವಿ.

Wednesday, 15 August 2012

ಮೇರಾ ಭಾರತ್ ಮಹಾನ್




ಫೆಬ್ರವರಿ ೨೬, ೧೯೯೯ರ ಶುಕ್ರವಾರ ಸಂಜೆ ಐದು ಗಂಟೆ.

ಎಂದಿನಂತೆ ಯಾವುದೇ ಸಂಭ್ರಮಗಳಿಲ್ಲದೆ ಜಮ್ಮುವಿನ ಗಡಿಗಳಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆವು. ಹೆಚ್ಚಿನ ಚಟುವಟಿಕೆಗಳಿಲ್ಲದೆ ಇದೂ ಕೂಡ ಒಂದು ಸಾಮಾನ್ಯ ದಿನವಾಗಿತ್ತು. ಮನಸ್ಸು ಮಾತ್ರ ಹಿಂದಿನ ದಿನಗಳೆಡೆಗೆ ಓಡುತ್ತಿತ್ತು. ಮನೆ, ಅಪ್ಪ-ಅಮ್ಮ, ಹೆಂಡತಿ, ಮಗ ಭಗತ್ ಹೀಗೆ ಎಲ್ಲವೂ ನೆನಪಾಗುತ್ತಿದ್ದವು. ದೇಶದ ಹೆಮ್ಮೆಯ ಪುತ್ರ ಭಗತ್ ಸಿಂಗ್ ನ ಮೇಲಿನ ಗೌರವದಿಂದ ನನ್ನ ಮಗನಿಗೆ ಭಗತ್ ಎಂದೇ ಹೆಸರಿಟ್ಟಿದ್ದೆ. ಹೀಗೆ ಹಳೆಯ ನೆನಪುಗಳ ಹಿಂದೆ ಮನಸ್ಸು ಓಡುತ್ತಿತ್ತು. ಇದು ನನ್ನಂತಹ ಸೈನಿಕರ ದೈನಂದಿನ ದಿನಚರಿಯಾಗಿತ್ತು. ಸಮಯ ಸಿಕ್ಕಾಗ ಮನೆಯವರೊಂದಿಗೆ ದೂರವಾಣಿಯ ಮೂಲಕ ಒಂದಷ್ಟು ಮಾತು ಮತ್ತು ಪತ್ರಗಳೇ ನಮ್ಮ ಆಮ್ಲಜನಕಗಳು. ಅವುಗಳನ್ನು ಉಸಿರಾಡುತ್ತ ದೇಶವನ್ನು ಕಾಯುವ ಜವಾಬ್ದಾರಿ ನಿಭಾಯಿಸುತ್ತೇವೆ ಎಂಬುದನ್ನು ನೆನಪಿಸಿಕೊಂಡಾಗ ಯೋಧರ ಬಗ್ಗೆ ಹೆಮ್ಮೆ ಎನಿಸುತ್ತದೆ. ಹೀಗೆ ನೆನಪಿನ ಬುತ್ತಿ ಬಿಚ್ಚುತ್ತಿದ್ದ ನನ್ನನ್ನು ಎಚ್ಚರಿಸಿದ್ದು ವಿಕಾಸ್ ಗುಪ್ತನ "ಅಚ್ಚಪ್ಪ ಯು ಹ್ಯಾವ್ ಅ ಕಾಲ್ ಫ್ರಂ ಯುವರ್ ಹೋಂ ಮ್ಯಾನ್" ಎಂಬ ಮಾತುಗಳು. ಮನೆಯಿಂದ ದೂರವಾಣಿ ಕರೆ ಎಂದು ಆನಂದ ಸಂತುಲಿತನಾದ ನಾನು ಓಡಿ ಹೋಗಿ ಫೋನ್ ರಿಸೀವರ್ ಎತ್ತಿಕೊಂಡೆ.

"ಹಲೋ ಕಾವೇರಿ, ನಾನು ಕಣೇ.." ಎಂದೆ. ಕಾವೇರಿ ನನ್ನ ಮಡದಿ.
"....." ಆ ಕಡೆಯಿಂದ ಹತ್ತು ಸೆಕೆಂಡ್ ಗಳವರೆಗೆ ನೀರವ ಮೌನ.
"ಮಾತಾಡು ಕಾವೇರಿ...ಅಪ್ಪ-ಅಮ್ಮ ಹೇಗಿದ್ದಾರೆ? ಭಗತ್ ನನ್ನು ನೋಡಬೇಕೆನಿಸುತ್ತಿದೆ..".
"........" ಆ ಕಡೆಯಿಂದ ಸಣ್ಣದಾಗಿ ಅಳುವಿನ ಶಬ್ಧ ಕೇಳಿಸಿತು.
"ನೀನೂ ನೆನಪಾಗ್ತಿದ್ದೀಯೇ ಮಾರಾಯ್ತಿ...ಅಳಬೇಡ!"
"ರೀ...ರೀ... ನಮ್ಮ ಭಗತ್" ಎಂದು ಹೇಳಿ ಬಿಕ್ಕಲು ಶುರು ಮಾಡಿದಳು.
"ಏನಾಯ್ತು ಭಗತ್ ಗೆ... ಸರಿಯಾಗಿ ಹೇಳು?" ಎಂದೆ.
"ಭಗತ್ ರಸ್ತೆ ದಾಟುವಾಗ ಒಂದು ಟ್ರಕ್ ಬಂದು...ಆ ಅಪಘಾತದಲ್ಲಿ ಭಗತ್ ಗೆ..." ಎಂದ ಅವಳ ಅಳು ಇನ್ನೂ ಜೋರಾಯಿತು.
"ಭಗತ್ ಗೆ...ಭಗತ್ ಗೆ... ಏನಾಯ್ತಮ್ಮ ಹೇಳು?" ಎಂದೆ.
"ನಮ್ಮ ಭಗತ್ ಇನ್ನಿಲ್ಲಾರೀ..." ಎಂದು ಹೇಳಿ ಕುಸಿದು ಕುಳಿತಳು.
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ನನ್ನಲ್ಲೂ ದುಃಖ ಮಡುಗಟ್ಟುತ್ತಿತ್ತು. ಆದರೂ ನನ್ನ ದುಃಖವನ್ನು ಅದುಮಿಟ್ಟುಕೊಳ್ಳುತ್ತ,
"ನಾನು ಬರ್ತಿದ್ದೇನೆ ಕಣೋ... ಧೈರ್ಯಗೆಡಬೇಡ. ಕೊಡಗಿನ ವೀರ ಸೈನಿಕ, ಕ್ಯಾಪ್ಟನ್ ಅಚ್ಚಪ್ಪನ ಹೆಂಡತಿ ನೀನು ಮರೆಯಬೇಡ" ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದೆ.
ಫೋನ್ ರಿಸೀವರ್ ಕೆಳಗಿಟ್ಟವನೆ ನಿರ್ಲಿಪ್ತನಾದೆ. ಆದರೆ ಎದೆಯಲ್ಲಿ ಹೆಪ್ಪುಗಟ್ಟುತ್ತಿದ್ದ ದುಃಖದ ಕಟ್ಟೆ ಒಡೆಯಲಾರದೆ ಒಳಗೊಳಗೆ ಕುಸಿಯುತ್ತಿದ್ದೆ.
ನನ್ನ ಪ್ರಜ್ಞೆ ನನ್ನ ಜವಾಬ್ದಾರಿಗಳ ಅರಿವನ್ನು ಕಣ್ಮುಂದೆ ತಂದಿತು. ತಕ್ಷಣವೇ ಅಲ್ಲಿಯ ಸಿಬ್ಬಂದಿಗೆ ವಿಷಯ ಮುಟ್ಟಿಸಿ, ಲಗ್ಗೇಜ್ ಸಿದ್ಧಪಡಿಸಿಕೊಂಡು ಹೊರಟೆ.

ಜಮ್ಮುವಿನಿಂದ ಶ್ರೀನಗರ ವಿಮಾನ ನಿಲ್ದಾಣ ಸುಮಾರು ಐದು ಗಂಟೆಯ ಪ್ರಯಾಣ. ನನ್ನ ಜೀವನದಲ್ಲೇ ದುರ್ಗಮವೆನಿಸಿದ ಪ್ರಯಾಣ ಅದು. ಮುಖದ ಮೇಲೆ ಯಾವುದೇ ಭಾವನೆಗಳನ್ನು ತೋರಗೊಡದೆ ಕುಳಿತಿದ್ದ ನನ್ನನ್ನು ಟ್ಯಾಕ್ಸಿ ಡ್ರೈವರ್ ತಿರುಗಿ ತಿರುಗಿ ನೋಡುತ್ತಿದ್ದ. ನಾನವನ ಕಣ್ಣಿಗೆ ಯಾವುದೋ ಅನ್ಯ ಗ್ರಹ ಜೀವಿಯಂತೆ ಕಂಡಿರಬೇಕು. ಕಾರು ವಿಮಾನ ನಿಲ್ದಾಣದೆಡೆಗೆ ಚಲಿಸುತ್ತಿದ್ದಂತೆ ಬೆಟ್ಟಗಳು, ಗುಡ್ಡಗಳು, ಕಟ್ಟಡಗಳು ಮತ್ತು ಮರಗಳು ಹಿಂದಿಂದೆ ಓಡುತ್ತಿದ್ದವು. ಅದರಂತೆ ನನ್ನ ಮನಸ್ಸೂ ಹಿಂದಿಂದೆ ಓಡುತ್ತಿತ್ತು.

ಇಂದಿಗೆ ನಾಲ್ಕು ವರ್ಷಗಳ ಹಿಂದಷ್ಟೆ ಹುಟ್ಟಿದ್ದ ಮಗ. ಅವನು ಹುಟ್ಟಿದ ಹೊಸತರಲ್ಲಿ ಅವನನ್ನು ಎತ್ತಿಕೊಳ್ಳಲೂ ನನಗೇನೋ ಪುಳಕ ಮತ್ತು ಭಯ. ಆ ಎಳೆಯ ಕಂದನ ಹಸಿ ಮೈಯ್ಯ ಬಿಸಿ ಸ್ಪರ್ಷ ನನ್ನಲ್ಲಿ ನನ್ನದೇ ಚೈತನ್ಯ ಪ್ರವಹಿಸುವಂತೆ ಮಾಡುತ್ತಿತ್ತು. ನನ್ನ ಕೈಯನ್ನೆತ್ತಿ ಮೂಸಿದೆ, ಅವನ ಹಾಲು ಕುಡಿದ ತುಟಿಯೊರಸಿದ ವಾಸನೆ ಮೂಗಿಗೆ ಬಡಿದಂತೆ ಭಾಸವಾಯ್ತು. ಹಾಗೆ ಹುಟ್ಟಿ ಬೆಳೆಯುತ್ತಿದ್ದುದನ್ನು ನನ್ನ ಹೆಂಡತಿ ನನಗೆ ವರದಿ ಒಪ್ಪಿಸುವಾಗ ಅವಳ ಸಂಭ್ರಮ ವರ್ಣಿಸಲಸದಳ. ಅವನು ಮೊದಲ ಬಾರಿಗೆ ಅಪ್ಪ ಎಂದದ್ದನ್ನು ಸಾವಿರ ಸಲ ಹೇಳಿ ಖುಷಿಪಟ್ಟಿದ್ದಳು. ರಿಸೀವರ್ ಕೊಟ್ಟು ನನಗೂ ಕೇಳಿಸಿದ್ದಳು. ನಾನು ಕಡೆಯ ಬಾರಿ ಊರಿಗೆ ಹೋಗಿದ್ದಾಗ "ನಾನು ನನ್ನಪ್ಪನಂತೆ ಸೈನ್ಯ ಸೇರಿ ಎಲ್ಲಾ ಶತ್ರುಗಳನ್ನು ಶೂಟ್ ಮಾಡುತ್ತೇನೆ" ಎಂದು ಹೇಳಿದ್ದನ್ನು ಕಂಡು ನನ್ನ ಎದೆ ಹೆಮ್ಮೆಯಿಂದ ಉಬ್ಬಿ ಹೋಗಿತ್ತು.

ಫೆಬ್ರವರಿ ೨೬, ೧೯೯೯ರ ಶುಕ್ರವಾರ ರಾತ್ರಿ ಹತ್ತು ಗಂಟೆ.

ನೆನಪುಗಳಲ್ಲಿ ಕಳೆದು ಹೋಗಿದ್ದ ನನ್ನನ್ನು ಡ್ರೈವರ್,
"ಸಾಬ್ ಆಪ್ಕಾ ಏರ್ ಪೋರ್ಟ್ ಆಗಯಾ.." ಎಂದು ಎಚ್ಚರಿಸಿದ್ದ.
ನನ್ನ ಲಗ್ಗೇಜ್ ಎತ್ತಿಕೊಂಡವನೆ ಅವನಿಗೆ ಹಣ ಪಾವತಿ ಮಾಡಿ ಕೆಳಗಿಳಿದು ಹೊರಟೆ. ನನ್ನ ಅದೃಷ್ಟವೋ ಎಂಬಂತೆ ಒಂದು ಗಂಟೆಯ ಕಾಯುವಿಕೆಯ ನಂತರ ವಿಮಾನ ಹಿಡಿದು ಕಾಶ್ಮೀರದಿಂದ ಹೊರಟೆ. ನನ್ನ ನೆನಪುಗಳೊಂದಿಗೆ ಶತಪತ ಹಾಕುತ್ತಿದ್ದ ನನಗೆ ಮೂರು ಗಂಟೆಗಳ ಹಾದಿ ನೂರು ಗಂಟೆಗಳಂತೆ ಭಾಸವಾಗುತ್ತಿತ್ತು. ಹಾಗೋ ಹೀಗೋ ಹವಾ ನಿಯಂತ್ರಿತ ವಿಮಾನದಲ್ಲಿಯ ಪ್ರಯಾಣ ಕ್ರಮಿಸಿ ನಿಸ್ತೇಜನಾಗಿ ಮಂಗಳೂರು ಫ್ಲೈಟ್ ಗಾಗಿ ಕಾದು ಕುಳಿತೆ. ಬೆಳಗ್ಗಿನ ನಾಲ್ಕರ ಹೊತ್ತಿಗೆ ಮಂಗಳೂರು ವಿಮಾನ ಹಿಡಿದು ಹೊರಟೆ. ಅಲ್ಲಿ ವಿಮಾನ ಇಳಿದು ವಿರಾಜಪೇಟೆಯ ದಾರಿ ಹಿಡಿಯುವುದರೊಳಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದು ಹೋಗಿದ್ದೆ. ಟ್ಯಾಕ್ಸಿಯಲ್ಲಿ ಕುಳಿತವನನ್ನು ನಿಧಾನವಾಗಿ ನಿದ್ರಾದೇವಿ ಆವರಿಸಿದಳು.

೨೭ ಫೆಬ್ರವರಿ, ೧೯೯೯ರ ಶನಿವಾರ ಬೆಳಗ್ಗೆ  ಎಂಟು ಗಂಟೆ.

ಕಣ್ಣು ಬಿಟ್ಟಾಗ ನಾನು ನನ್ನ ಮನೆ ಮುಂದೆ ಇದ್ದೆ. ನಿರ್ಲಿಪ್ತ ಭಾವ ಹೊತ್ತು ಜನಸಂದಣಿಯನ್ನು ದಾಟಿ ಮುಂದೆ ಹೋದೆ. ನನ್ನ ನಿಸ್ತೇಜವಾದ ಕಣ್ಣುಗಳ ನೋಟ ನಿಶ್ಚಲವಾಗಿ ಮಲಗಿದ್ದ ನನ್ನ ಮಗನ ದೇಹದ ಮೇಲೆ ಬಿತ್ತು. ಕಾವೇರಿ ಓಡಿ ಬಂದು ನನ್ನನ್ನು ತಬ್ಬಿಕೊಂಡಳು.

"ರೀ ನಮ್ಮ ಮಗ...ನಮ್ಮ ಮಗ..." ಎಂದು ಒಂದೇ ಸಮನೆ ಅಳಲು ಶುರು ಮಾಡಿದಳು.

ಅಲ್ಲಿಯವರೆಗೂ ಉದುಗಿದ್ದ ದುಃಖ ಒಮ್ಮೆಲೆ ಒದ್ದುಕೊಂಡು ಮೇಲೆ ಬಂದಂತಾಯ್ತು. ನನಗೇ ಅರಿವಿಲ್ಲದೆ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಹೆಬ್ಬಂಡೆಯೂ ಕರಗಿ ನೀರಾಗುತ್ತಿತ್ತು. ಪರಿಸ್ಥಿತಿಯ ಅರಿವಾದೊಡನೆ ನನ್ನ ಭಾವೋದ್ವೇಗಕ್ಕೆ ಕಡಿವಾಣ ಹಾಕಲು ಹರಸಾಹಸ ಮಾಡುತ್ತಿದ್ದೆ. ಹಾಗೇ ನನ್ನ ದುಃಖವನ್ನು ಮನದಲ್ಲೇ ಹಿಂಗಿಸಿ ಕಣ್ಣೊರೆಸಿಕೊಂಡೆ.

"ಕಾವೇರಿ ಹೀಗೆಲ್ಲ ಅಳಬಾರದು. ನೀನು ಸೈನಿಕನ ಹೆಂಡತಿ. ಮುಂದೆ ನಾನೇ ಯುದ್ಧದಲ್ಲಿ ಸತ್ತರೂ ನೀನು ದುಃಖವನ್ನು ತಡೆದುಕೊಳ್ಳುವ ಹೆಬ್ಬಂಡೆಯಾಗಬೇಕು... ಬಲಿದಾನ ನಿನ್ನ ಮೈಗೂಡಬೇಕು" ಎಂದು ಸಂತೈಸಲು ಪ್ರಯತ್ನಿಸಿದೆ.

ನಂತರದ ಶವಸಂಸ್ಕಾರದ ಕಾರ್ಯಗಳೆಲ್ಲ ಅಡೆತಡೆಗಳಿಲ್ಲದೆ ಸಾಗಿದವು. ಮೊಮ್ಮಗನನ್ನು ಕಳೆದುಕೊಂಡ ನನ್ನಪ್ಪ-ಅಮ್ಮನನ್ನು ಎದುರಿಸಲೂ ನನಗೆ ಭಯವಾಗುತ್ತಿತ್ತು. ಅಂದು ಸಂಜೆಯೊಳಗೆ ಮಗನನ್ನು ಮಣ್ಣು ಮಾಡಿ ಮನೆಯ ಮುಂದೆ ದೀಪ ಹಚ್ಚಿಟ್ಟೆವು. ಅತ್ತು ಅತ್ತು ನಿತ್ರಾಣಗೊಂಡಿದ್ದ ಕಾವೇರಿಯ ಮುಖ ನೋಡುವಾಗಲಂತೂ ಕರಳು ಕಿವುಚಿದಂತಾಗುತ್ತಿತ್ತು. ಹೇಗೆ ಎಲ್ಲವನ್ನು ನಿಭಾಯಿಸುವುದು ಎಂಬುದೆ ದೊಡ್ಡ ತಲೆ ನೋವಾಗಿತ್ತು ನನಗೆ.

೦೪ ಮಾರ್ಚ್೧೯೯೯ರ ಗುರುವಾರ, ಸಂಜೆ ಆರು ಗಂಟೆ.

ಮನೆಯ ಕುಡಿಯನ್ನು ಕಳೆದುಕೊಂಡು ನರಳುತ್ತಿದ್ದ ಮನೆಯವರನ್ನು ದಿನವೂ ನೋಡುತ್ತ ಮನದಲ್ಲೇ ಬೇಯುತ್ತಿದ್ದೆ. ಹೀಗೆ ನನ್ನ ಚಿಂತೆಯಲ್ಲಿ, ನನ್ನ ಕುಟುಂಬವನ್ನು ಸಂತೈಸುತ್ತ ಒಬ್ಬ ಉತ್ತಮ ಗಂಡನ ಮತ್ತು ಅಪ್ಪನ ಜವಾಬ್ಧಾರಿಯನ್ನು ನಿಭಾಯಿಸುತ್ತಿದ್ದೆ.
ಹೀಗೆ ಇದ್ದಕ್ಕಿದ್ದಂತೆ ಮನೆಯ ಟೆಲಿಫೋನ್ ಹೊಡೆದುಕೊಳ್ಳಲು ಶುರುವಾಯ್ತು. ಕರೆಯನ್ನು ಸ್ವೀಕರಿಸಿ ರಿಸೀವರ್ ಅನ್ನು ಕಿವಿಯ ಮೇಲಿಟ್ಟೆ.

"ಹಲೋ ಮಿ.ಕ್ಯಾಪ್ಟನ್, ಕರ್ನಲ್ ಜಗನ್ನಾಥ್ ಸ್ಪೀಕಿಂಗ್" ಎಂಬ ಗಡುಸಾದ ಧ್ವನಿ ಮಾರ್ಧನಿಸಿತು.
"ಹಲೋ ಕರ್ನಲ್, ಹೇಳಿ..." ಎಂದೆ.
"ನಾಚಿಕೆಗೆಟ್ಟ ಪಾಕಿಗಳು ಕಾರ್ಗಿಲ್ ಅನ್ನು ಗುರಿಯಾಗಿಸಿಕೊಂಡು ಧಾಳಿ ನೆಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮಂತಹ ದಕ್ಷರ ಸೇವೆ ದೇಶಕ್ಕೆ ಅಗತ್ಯ. ನೀವು ಕಾಮ್ಯಾಂಡೋ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಬೇಕೆಂದು ಕೋರುತ್ತೇನೆ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜೀವಿಸಲು ಮತ್ತೊಂದು ಕಾರಣ ಗೋಚರಿಸಿದಂತಾಯ್ತು. ಆ ಪಾಕಿಗಳ ಹೊಟ್ಟೆ ಬಗೆಯುವಷ್ಟು ರೋಷ ಉಕ್ಕಿ ಬಂತು.
"ಅದು ನನ್ನ ಕರ್ತವ್ಯ ಸರ್...ತಾಯಿ ಭಾರತಿಗಾಗಿ ಪ್ರಾಣ ಕೊಡಲೂ ನಾನು ಸಿದ್ಧ... ಈಗಲೆ ಹೊರಡುತ್ತೇನೆ" ಎಂದು ಎದ್ದು ನಿಂತೆ.
"ನನಗೆ ನಿಮ್ಮ ಪರಿಸ್ಥಿತಿ ಗೊತ್ತು ಮಿ.ಅಚ್ಚ...ನೀವೂ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದೀರಿ..." ಎಂದಿತು ಆ ಕಡೆಯ ಧ್ವನಿ.
"ಮಗನನ್ನು ಕಳೆದುಕೊಂಡ ದುಃಖಕ್ಕಿಂತ ತಾಯಿಯನ್ನು ಮತ್ತು ಅವಳ ಮಕ್ಕಳನ್ನು ಕಾಯುವ ಜವಾಬ್ದಾರಿ ಮುಖ್ಯ ಕರ್ನಲ್.  ನಾನು ಬರುತ್ತೇನೆ" ಎಂದು ಕರೆಯನ್ನು ತುಂಡರಿಸಿದೆ.

ನನ್ನೆಲ್ಲಾ ಸಂಭಾಷಣೆಯನ್ನು ಕೇಳುತ್ತಿದ್ದ ನನ್ನ ಹೆಂಡತಿ ಮತ್ತೂ ಅಧೀರಳಾದಂತೆ ಕಂಡುಬಂದಳು. ಅವಳನ್ನು ಸಂತೈಸಬೇಕಾದ ನಾನೇ ಅವಳನ್ನು ಬಿಟ್ಟು ಸಿಂಹದ ಬಾಯಿಗೆ ಹೋಗುತ್ತೇನೆ ಎಂದಾಗ ಅವಳಿಗೆ ಎಷ್ಟು ದುಃಖ ಮತ್ತು ಭಯವಾಗಿರಬೇಡ. ಅವಳ ನೋಟವನ್ನು ಎದುರಿಸಲಾಗದೆ ನನ್ನ ಕೋಣೆಯೊಳ ಹೊಕ್ಕೆ. ಸ್ವಲ್ಪ ಹೊತ್ತಿನ ಬಳಿಕ ಲಗ್ಗೇಜ್ ಕೈಯಲ್ಲಿ ಹಿಡಿದು ರೆಡಿಯಾಗಿ ಹೊರಬಂದು ಕಾವೇರಿಯನ್ನು ಹುಡುಕುತ್ತಿದ್ದೆ.

ಹಣೆಯಲ್ಲಿ ಕುಂಕುಮವಿಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು ಕೈಯಲ್ಲಿ ಆರತಿ ಹಿಡಿದು ಅಂಗಳದಲ್ಲಿ ನಿಂತಿದ್ದಳು ನನ್ನ ಮಡದಿ ಕಾವೇರಿ.

ನನ್ನ ಹಣೆಗೆ ಕುಂಕುಮವಿಟ್ಟವಳೆ, "ನನ್ನ ಮಗ ಬದುಕಿದ್ದರೆ ಅವನನ್ನೂ ದೇಶಕ್ಕಾಗಿ ಬಲಿ ಕೊಡುತ್ತಿದ್ದೆ" ಎಂದಳು ಧೃಡವಾಗಿ.
ಎದುರಲ್ಲಿ ನಿಂತ ನನ್ನ ಭಾರತಾಂಬೆಯನ್ನು ಕಣ್ತುಂಬಿಸಿಕೊಂಡೆ. ದೇಶದಲ್ಲಿರುವ ಲಕ್ಷಾಂತರ ಭಗತ್ ರ ನಾಳೆಗಳನ್ನು ಕಾಯುವ ಪಣ ತೊಟ್ಟೆ. ಟ್ಯಾಕ್ಸಿ ಹತ್ತುವ ಮುನ್ನ ನನ್ನ ಭಗತ್ ನಂತಹದೇ ಒಂದು ಮಗು ತ್ರಿವರ್ಣ ಧ್ವಜವನ್ನು ಕೈಯಲ್ಲಿಟ್ಟೊಡನೆ ವಿದ್ಯುತ್ ಸಂಚಾರವಾದಂತಾಯ್ತು. ಟ್ಯಾಕ್ಸಿ ಹತ್ತಿ ಹೊರಡುತ್ತಿದ್ದವನ ಮೈಮನಗಳಲ್ಲಿದ್ದ ಒಂದೇ ಮಂತ್ರ "ಮೇರಾ ಭಾರತ್ ಮಹಾನ್".

- ಪ್ರಸಾದ್.ಡಿ.ವಿ.

Thursday, 9 August 2012

ಸದ್ದಿಲ್ಲದ ಸುವ್ವಾಲಿ



ಸದ್ದಿಲ್ಲದೆ ಕುಳಿತವಳು
ಸದ್ದು ಮಾಡುತ್ತಿದ್ದಾಳೆ,
ಸುದ್ದಿಯೇ ನೀಡದ
ಸ್ನಿಗ್ಧ ಮುಗ್ದತೆಯವಳು,
ನನ್ನವಳು ಅರಳಿದಳೆ?
ರಂಗವಲ್ಲಿಯ ವಲ್ಲಿ...
ನನ್ನೆದೆಯ ಬಾಂದಳದಿ
ಸದ್ದಿಲ್ಲದೇ ಸುವ್ವಾಲಿ..!

ಮೆಲ್ಲ-ಮೆಲ್ಲಗೆ ಮೈ
ಚಿವುಟಿಕೊಳ್ಳುತ್ತೇನೆ,
ಕನಸಲ್ಲೇ ಬಂದಳಾ?
ಎದುರಲ್ಲೆ ಬಂದಳಾ?
ಸದ್ದಿಲ್ಲದೆ ಹೋದವಳು,
ಸನ್ನೆಯಲ್ಲೇ ಕರೆದಳಾ?
ಕನಸೊಳಗಿನ ಕನಸೊಳಗೆ
ನನ್ನವಳ ಸುವ್ವಾಲಿ..!

ಕುಳಿತಲ್ಲಿಂದಲೇ ಇಲ್ಲೆ,
ಹಿಂದಿಂದೆ ಓಡುತ್ತೇನೆ,
ಜೊತೆಗಿಟ್ಟ ಹೆಜ್ಜೆಗಳು,
ನಿಮಿಷಾಂಬ ದೇವಳ,
ಸದ್ದು ಮಾಡಿದಾ ನಾಣ್ಯ,
ಮರೆವು ನುಂಗಲಾಗದ ನೆನಪು,
ಬದುಕೆಂಬ ಬಾಂದಳದಿ
ಬರಿದಾಗದು ಸುವ್ವಾಲಿ..!

- ಪ್ರಸಾದ್.ಡಿ.ವಿ.

Wednesday, 1 August 2012

ದೀಪ ಹಚ್ಚುತ್ತೇನೆ



ಕಗ್ಗತ್ತಲ ಬಾಳಿನಲ್ಲೊಮ್ಮೆ
ಅಂತರಂಗದಂಗಳದಲಿ
ದೀಪ ಹಚ್ಚುತ್ತೇನೆ,
ಸುಮ್ಮನಾದರೂ ಒಮ್ಮೆ..!

ಬಿಕ್ಕಳಿಸಿ ಬಸವಳಿದ
ತುಟಿ ಹಾರದ ಮಾತುಗಳಿವೆ,
ಕಂಬನಿಯ ತಳದಿ
ಕೈಕಟ್ಟಿ ಕುಳಿತ ಕನಸುಗಳಿವೆ,
ದೀಪ ಹಚ್ಚುತ್ತೇನೆ,
ಮೌನ ಮಾತಾಗಲಿ,
ಕನಸು ಕಂಗೊಳಿಸಲಿ..!

ನಿರಾಸೆಯ ಸೆರಗಲ್ಲಿ
ಸೊರಗಿರುವ ಆಸೆಗಳಿವೆ,
ನೀಲಿಯಲ್ಲಿ ತೇಲಿ ಹೋದ
ಅಮೂರ್ತ ರೂಪಕಗಳಿವೆ,
ದೀಪ ಹಚ್ಚುತ್ತೇನೆ,
ಆಸೆ ಚಿಗುರಾಗಲಿ,
ರೂಪಕಗಳುಸಿರಾಡಲಿ..!

ಹಮ್ಮಿನಲ್ಲಿ ಬಿಮ್ಮಿನಲ್ಲಿ
ಹೊರಬಿದ್ದ ಬಿರುನುಡಿಗಳಿವೆ,
ಬೀಳಲಾರೆನೆಂಬ ಕೋಟೆಯೊಳಗೆ
ಅಹಮ್ಮಿನ ಅಹಂಕಾರಗಳಿವೆ,
ದೀಪ ಹಚ್ಚುತ್ತೇನೆ,
ಬಿರುನುಡಿ ಕರಗಿ ತಿಳಿಯಾಗಲಿ,
ನಾನೆಂಬುದು ಕೃಷ್ಣನ
ಪಾದಕಮಲದಡಿಯ ಕಣವಾಗಲಿ..!

- ಪ್ರಸಾದ್.ಡಿ.ವಿ.

Sunday, 10 June 2012

ಮೊದಲ ಪ್ರೇಮದ ಮಧುರ ಸ್ಪಂದನ


ಯಾವುದೇ ನೋವಾಗಲಿ, ರೋಗವೇ ಆಗಲಿ ಅಥವಾ ಅಪಘಾತವೇ ಆಗಲಿ ಮುಂಜಾಗ್ರತ ಕ್ರಮ ಕೈಗೊಂಡರೆ ತಪ್ಪಿಸಬಹುದು ಎಂಬ ಮಾತಿದೆ. ಆದರೆ ಎಷ್ಟೇ ಮುಂಜಾಗ್ರತೆ ವಹಿಸಿದರೂ ತಪ್ಪಿಸಿಕೊಳ್ಳಲಾಗದ ಒಂದೇ ರೋಗ ಅಥವಾ ಅಪಘಾತವೆಂದರೆ ಪ್ರೇಮವೇ ಇರಬಹುದು. ಜೀವನದ ಯಾವುದೋ ಒಂದು ಕ್ಷಣದಲ್ಲಿ ಪ್ರೀತಿಯೂ ಬೇಡ-ಪ್ರೇಮವೂ ಬೇಡ ಎಂದು ಸತ್ಯಾಗ್ರಹ ಹೂಡಿದ್ದ ಮನಸ್ಸು ಅವಳ ಕುಡಿ ನೋಟಕ್ಕೋ, ನಗುವಿಗೋ ಸೋತುಹೋಗುತ್ತದೆ. ಕ್ಷಣದಲ್ಲೇ ಅವಳೊಂದಿಗೆ ಅನುರಕ್ತನಾಗಿಬಿಡಬೇಕೆಂಬ ಆಸೆ ಕಾಡುತ್ತದೆ. ಜೀವನದಲ್ಲಿನ ಡಿ.ವಿ.ಡಿ ಗಳ ಅಂಗಡಿ ತನ್ನ ಉದ್ಘಾಟನೆ ಮಾಡಿಕೊಳ್ಳುತ್ತದೆ..!

ಪ್ರೀತಿ-ಪ್ರೇಮಕ್ಕೆ ತನ್ನದೇ ಆದ ಒಂದು ಸಾರ್ವತ್ರಿಕ ವ್ಯಾಖ್ಯಾನ ಇಲ್ಲವೆನಿಸುತ್ತದೆ. ಅದು ಅವರವರು ಭಾವಿಸಿಕೊಂಡಂತೆ ತನ್ನ ವ್ಯಾಖ್ಯಾನವನ್ನು ಮಾರ್ಪಡಿಸಿಕೊಳ್ಳುತ್ತದೆ, ಯಾವುದೇ ಆಕಾರ ಪಡೆಯುವ ಹರಿವ ನೀರಿನಂತೆ. ಪ್ರೀತಿಯೇ ಸವಿಯೆಂದರೆ, ಪ್ರೀತಿಯ ಮೊದಲ ಪುಟ ಸವಿಜೇನೆಂದೇ ಹೇಳಬೇಕು. ಅದೇ ಮೊದಲ ಪ್ರೇಮದ ಗಮ್ಮತ್ತು. ಯಾವುದೇ ಫೋಟೋ ಆಲ್ಬಮ್ ನೋಡುವ ಮೊದಲು ಅದರ ಕವರ್ ಪೇಜನ್ನು ನೀವು ಗಮನಿಸಿರಬಹುದು. ಅದು ಎಷ್ಟು ಆಕರ್ಷಣೀಯವಾಗಿರುತ್ತದೋ ಅಷ್ಟೇ ರಮಣೀಯವೂ ಆಗಿರುತ್ತದೆ. ಅಂತೆಯೇ ಪ್ರತಿಯೊಬ್ಬರ ಜೀವನದಲ್ಲಿನ ಮೊದಲ ಪ್ರೇಮ. ಸವಿಯಾದ ನೆನಪುಗಳೊಂದಿಗೆ ಜೀವನದುದ್ದಕ್ಕೂ ಕಾಡುತ್ತಾ, ಖುಷಿ ಕೊಡುತ್ತಾ ತನ್ನ ತಾಜಾತನವನ್ನು ಉಳಿಸಿಕೊಳ್ಳುವುದರೊಂದಿಗೆ ಜೀವನಕ್ಕೂ ತಾಜಾತನ ತುಂಬುತ್ತದೆ ಮೊದಲ ಪ್ರೇಮ.

ಕ್ರಷ್’ಗಳಿಗೂ ಮೊದಲ ಪ್ರೇಮಕ್ಕೂ ಕೇವಲ ಕೂದಲೆಳೆಯಷ್ಟು ವ್ಯತ್ಯಾಸವಷ್ಟೆ. ಅದಕ್ಕಾಗಿಯೇ ಕ್ರಷ್’ಗಳಂತೆ ಮೊದಲ ಪ್ರೇಮವೂ ಕೂಡ ಬ್ರೇಕ್ ಅಪ್’ನಲ್ಲಿ ಅಂತ್ಯಗೊಂಡರೂ ಹಚ್ಚಹಸಿರಾಗಿ ಮನದಲ್ಲುಳಿಯುತ್ತದೆ. ಮೊದಲ ಪ್ರೇಮದಲ್ಲಿನ ಹುಚ್ಚುತನಗಳಾಗಲಿ, ಪೆದ್ದುತನಗಳಾಗಲಿ ನಮಗೆ ಟೈಂ ವೇಸ್ಟ್ ಎನಿಸುವುದೇ ಇಲ್ಲ. ಹುಡುಗಿಗಾಗಿ ಘಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾದಿದ್ದರೂ ಅವಳ ಕಣ್ಣೆದುರು ಕಂಡೊಡನೆ ಅನುಭವಿಸಿದ ತಳಮಳ, ಕಾಯುತ್ತ ಕಳೆದ ಸಮಯ ಗಣನೆಗೂ ಬರುವುದಿಲ್ಲ. ಅದೇ ಹೆಂಡತಿಗಾಗಿಯೋ, ಸಹ ಉದ್ಯೋಗಿಗಾಗಿಯೋ ಕಾಯ್ದಿದ್ದರೆ ಅದರ ವರಸೆಯೆ ಬೇರೆ. ಎದುರಿಗಿದ್ದವರನ್ನು ಉರಿದು ಮುಕ್ಕುವುದೊಂದು ಬಾಕಿ..! ಆದರೆ ಇವಳು ಮೊದಲ ಮನದನ್ನೆ. ಸುಮ್ಮನೆ ಬಡಿಯುತ್ತಿದ್ದ ಹೃದಯಕ್ಕೆ ರಾಗ-ಬದ್ದ ತಾಳ ಬೆರೆಸಿದವಳು, ಹಾಗೆ ಉರಿದು ಬೀಳಲಾದೀತೆ..!

ಈಗ ನನ್ನ ಜೀವನವನ್ನೇ ತೆಗೆದುಕೊಂಡರೆ, ನನ್ನ ಮೊದಲ ಕ್ರಷ್ ಆದದ್ದು ಪ್ರೌಢ ಶಾಲೆಯಲ್ಲೇ ಆದರೂ ಅದು ಪ್ರೇಮವಾಗಲಿಲ್ಲ. ಹಾಗೆಂದು ಅದು ಮಧುರ ಭಾವ ತಂತುಗಳನ್ನು ಮೂಡಿಸಿದ್ದು ಸುಳ್ಳಲ್ಲ, ಆದರೆ ಆ ತಂತುಗಳೊಡನೆ ಮೊದಲ ವೀಣೆ ನುಡಿಸಿದವಳು ಅವಳು. ಅವಳು ನನ್ನ ಜೀವನದಲ್ಲಿ ಬಂದದ್ದು ನನ್ನ ಇಂಜಿನಿಯರಿಂಗ್’ನ ದಿನಗಳಲ್ಲಿ. ಅವಳು ನನ್ನ ಜೀವನದಲ್ಲಿ ಹಸಿರಾಗಿರುವಷ್ಟು ಇನ್ಯಾವ ಹುಡುಗಿಯರಿಗೂ ಸಾಧ್ಯವಾಗಿಲ್ಲ, ಮುಂದೆ ಯಾರಿಗೂ ಸಾಧ್ಯವಿಲ್ಲವೆನಿಸುತ್ತದೆ..! ನನ್ನಲ್ಲಿ ಅದೇನು ಕಂಡು ಮೆಚ್ಚಿದ್ದಳೋ, ನನಗೇ ಸೋಜಿಗವೆನಿಸುತ್ತದೆ.

ನಿಮಗೆ ಮೊದಲ ಪ್ರೇಮದ ಮತ್ತೊಂದು ಮಜಲನ್ನು ಪರಿಚಯಿಸಲೇಬೇಕು. ಮೊದಲ ಪ್ರೇಮ ಸಾಮಾನ್ಯವಾಗಿ ಮುರಿದು ಬೀಳುತ್ತದೆ ಎಂಬುದು ನಿಮಗೆ ತಿಳಿದ ವಿಷಯವೆ, ಆದರೆ ಅವಳಲ್ಲಿ ನಾವು ಕಂಡುಕೊಂಡ ಗುಣಗಳನ್ನು ಮತ್ತು ಅವಳ ಹುಚ್ಚುತನಗಳನ್ನು ಮರೆಯಲೂ ಸಾಧ್ಯವೇ ಇಲ್ಲ. ಮತ್ತೊಂದು ಸೋಜಿಗದ ಸಂಗತಿಯೆಂದರೆ ಮುಂದೆ ಬರುವ ಎಲ್ಲಾ ಹುಡುಗಿಯರಲ್ಲೂ ಆ ಹುಚ್ಚುತನಗಳನ್ನು ಹುಡುಕುತ್ತೇವೆ..! ಅವಳು ಆ ಹುಚ್ಚುತನಗಳನ್ನು ಪ್ರದರ್ಶಿಸಿದ್ದಾಗ ನಾವು ಹುಸಿ ಮುನಿಸು ತೋರಿಸಿ ಜಗಳವಾಡಿರುತ್ತೇವೆ, ಆದರೆ ಅದೇ ಹುಚ್ಚುತನಗಳು ಅವಳು ದೂರವಾದೊಡನೆ ತುಂಬಾ ಇಷ್ಟವಾಗುತ್ತವೆ. ಅದೇ ಕಾರಣಕ್ಕೆ ಅವಳನ್ನು ಈಗ ಮೊದಲಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇವೆ, ಸಿಗಳೆಂದು ಗೊತ್ತಿದ್ದರೂ..! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಂದೆ ಬೇರೊಬ್ಬರೊಂದಿಗೆ ಮದುವೆಯಾದರೂ, ಮಕ್ಕಳಾದರೂ ಆ ಅವಳೇ ಪ್ರೇಮ ಲಾಂಛನವಾಗುಳಿಯುತ್ತಾಳೆ. ಮಗಳ ನಾಮಾಂಕಿತವಾಗಿಯೂ ಉಳಿಯಬಹುದು..! ಅದಕ್ಕಾಗಿಯೇ ’ಲವ್ ಹ್ಯಾಪನ್ಸ್ ಓನ್ಲೀ ಒನ್ಸ್, ರೆಸ್ಟ್ ಈಸ್ ಜಸ್ಟ್ ಲೈಫ್’ ಎಂಬ ಮಾತಿದೆ.



ಮೊದಲ ಪ್ರೇಮದ ಬಗ್ಗೆ ಎಷ್ಟೇ ಬರೆದರೂ ಮುಗಿಯದು. ಎಷ್ಟೇ ಮಿಂದರೂ ಮನಸ್ಸು ಹಗುರಾಗಿಸುವ ಮುಂಗಾರು ಮೊದಲ ಪ್ರೇಮ. ಈ ಮೂಲಕ ಅದಕ್ಕೊಂದು ನಮನ.

- ಪ್ರಸಾದ್.ಡಿ.ವಿ.

Saturday, 26 May 2012

ಪ್ರೀತಿಗೊಂದು ಸ್ವಗತ


ಅರಳು ಮಲ್ಲಿಗೆಯ
ಗಮದ ಪರಿಮಳಕೆ
ಅರಳಿ ನಿಂತವನು ನಾನು,
ಅರಳಿಸಿದ ಮಲ್ಲಿಗೆಯು ಬಾಡಲೇಕೆ?
ಬಾಡುವ ಮುನ್ನ ಹೃದಯ
ಕಮಲ ಸೇರಬಾರದೇಕೆ?

ನಿನ್ನ ತಲೆ ನೇವರಿಸಿ,
ಮುಂಗುರುಳ ಬಳಿ ಸರಿಸಿ,
ಹಣೆಗೊಂದು ಮುತ್ತಿಡಲೆ ನಲ್ಲೆ,
ಮುದುಡಬಾರದು ಮಲ್ಲಿಗೆ,
ಬೆದರಿ ಭಯದೊಳಗೆ,
ತಿಳಿಯಾಗಿ ಬೀಸಲಿ ಪ್ರೀತಿಯ ತಿಳಿಗಾಳಿ,
ಮೆಲ್ಲಗೆ, ತುಸು ಮೆಲ್ಲಗೆ..!

ಮುನಿಸೂ ಬಿಸಿಯಾಗಿ,
ಕನಸೂ ಹಸಿಯಾಗಿ,
ನಿನ್ನದೇ ಧ್ಯಾನ ಈ ಮನಕೆ,
ಅರಿಯಬಾರದೆ ಹುಸಿಮುನಿಸ ಪರದೆ,
ಹುಣ್ಣಿಮೆಯ ದಿನದೆ ಸಾಗರವೂ
ಉಕ್ಕುಕ್ಕಿ ದಡ ಸೇರುವ ತೆರದಿ..!

- ಪ್ರಸಾದ್.ಡಿ.ವಿ.

Tuesday, 1 May 2012

ವಂದನೆಗೊಂದೋಲೆ


ಮಾನ್ಯರೇ,

             ನಾನೊಬ್ಬ ಪುಟ್ಟ ಬ್ಲಾಗಿಗ, ನನ್ನ ಹೆಸರು ಪ್ರಸಾದ್.ಡಿ.ವಿ. ನಾನು 'ಮಂಜಿನ ಹನಿ’ ಯನ್ನು ಮೊನ್ನೆ ಮೊನ್ನೆ ಎಂದರೆ ಕಳೆದ ವರ್ಷವಷ್ಟೇ ಪ್ರಾರಂಭಿಸಿದ್ದೇನೆ. ನನ್ನ ಬ್ಲಾಗ್ ನ ಬಗ್ಗೆ ಹೇಳುವುದಕ್ಕೆ ಮೊದಲು ನನ್ನಲ್ಲಿ ಸುಪ್ತವಾಗಿದ್ದ ಸಾಹಿತ್ಯದ ಆಸಕ್ತಿ ಮತ್ತೆ ಗರಿ ಕಟ್ಟಿಕೊಂಡ ಬಗ್ಗೆ ತಿಳಿಸುತ್ತೇನೆ.

              ನಾನು ನನ್ನ ಇಂಜಿನಿಯರಿಂಗ್ ಪದವಿಯನ್ನು ಜೂನ್ ೨೦೧೧ ರಲ್ಲಿ ಮುಗಿಸಿ ನನ್ನ ಕಂಪೆನಿಯವರು ನನಗೆ ಕರೆ ಕಳುಹಿಸುವರೆಂದು ಕಾತುರನಾಗಿ ಕಾಯುತ್ತಾ ಕುಳಿತಿದ್ದೆ. ನನ್ನ ಕೈಯಲ್ಲಿ ಒಂದೆರಡು ತಿಂಗಳುಗಳಿದ್ದವು. ಅವುಗಳನ್ನು ಹೇಗಾದರೂ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕೆಂದುಕೊಳ್ಳುತ್ತಿರುವಾಗಲೆ ನೆನಪಾದದ್ದು ಈ ಬರವಣಿಗೆಯ ಗೀಳು. ಮೊದಲಿನಿಂದಲೂ ಬರೆಯುವ ಗೀಳಿದ್ದರೂ ಸಮಾಯಾಭಾವ ಮತ್ತು ಪ್ರೋತ್ಸಾಹಿಸುವ ಕೈಗಳಿಲ್ಲದೆ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಪ್ರೋತ್ಸಾಹಿಸುವ ಪೋಷಕರ ಕೈಗಳು ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಿಸಿದ್ದವು. ಈಗ ಕೈಯಲ್ಲಿ ಡಿಗ್ರಿ ಇದ್ದ ಕಾರಣ ಅವರಿಗೆ ಮಗನ ಮೇಲಿನ ಯೋಚನೆ ಕಡಿಮೆಯಾದಂತೆನಿಸಿತ್ತೋ ಏನೋ ನನ್ನ ಪ್ರೌವೃತ್ತಿಗೆ ಯಾವುದೆ ಅಡ್ಡಿ ಪಡಿಸಲಿಲ್ಲ. ಆನಂತರದಲ್ಲಿ ಮತ್ತೆ ಟೈಂ ಪಾಸ್ ಗೆಂದು ಹಿಡಿದ ಲೇಖನಿಯನ್ನು ಗಟ್ಟಿಗೊಳಿಸಿದ ಕೈಗಳು ಅಪಾರವೆಂದೇ ಹೇಳಬೇಕು. ನಾನು ನನ್ನ ಮನಶ್ಶಾಂತಿಗಾಗಿ ಬರೆಯಲು ಪ್ರಾರಂಭಿಸಿದವನು. ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ.

             ಹೀಗಿದ್ದವನಿಗೆ ಸಿಕ್ಕ ಒಂದಷ್ಟು ಗೆಳೆಯರ ಬರಹಗಳು ಕೇವಲ ಬರಹಗಳಾಗಿರದೆ ನನಗೆ ದೊಡ್ಡ ಪಠ್ಯಗಳಂತೆ ಕಾಣಿಸುತ್ತಿದ್ದವು. ನಾನು ಅನೇಕ ಹಿರಿಯ ಸಾಹಿತಿಗಳ ಪುಸ್ತಕಗಳನ್ನು, ಕಾದಂಬರಿಗಳನ್ನು, ನಾಟಕಗಳನ್ನು ಮತ್ತು ಕವನಗಳನ್ನು ಆಗಾಗ ಓದುತ್ತಿದ್ದರೂ ಅವುಗಳು ನನಗೆ ಓದುವ ಬಗ್ಗೆ ಆಸಕ್ತಿ ಹೆಚ್ಚಿಸಿದವೆ ಹೊರತು ಬರೆಯಬೇಕೆಂಬ ಉತ್ಕಟವಾದ ಹಂಬಲವನ್ನು ಬಿತ್ತಲಿಲ್ಲ ಎನಿಸುತ್ತದೆ. ಓದುವ ಆ ಪ್ರೌವೃತ್ತಿ ಮತ್ತು ಗೆಳೆಯರು ಬರೆದ ಪಠ್ಯಗಳು(ಬರಹಗಳು) ನನ್ನನ್ನು ಬರೆಯುವಂತೆ ಪ್ರೇರೇಪಿಸಿದವು. ಬರೆಯಲು ಶುರುವಿಟ್ಟುಕೊಂಡೆ. ಗೆಳತಿ ಕೈ ಕೊಟ್ಟಳು ನೆನಪುಗಳು ಸಾಥ್ ಕೊಟ್ಟವು, ಇನ್ನಷ್ಟು ಬರೆದೆ. ಬರೆದದ್ದನ್ನೆಲ್ಲಾ ಒಟ್ಟುಗೂಡಿಸುವ ಹಂಬಲ ಹೆಚ್ಚಾಯ್ತು. ನನ್ನದೇ ಆದ ಬ್ಲಾಗ್ ಮಾಡಿದೆ ’ಡ್ಯೂ ಡ್ರಾಪ್’ ಎಂಬ ನಾಮಕರಣ ಮಾಡಿದೆ. ಅದೇ ಈ ’ಮಂಜಿನ ಹನಿ’.

               ನನ್ನ ಸಾಹಿತ್ಯದ ಈ ಬೆಳವಣಿಗೆಯಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುವ ಮನಸ್ಸಾಯ್ತು. ಅದಕ್ಕಾಗಿ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನನ್ನಲ್ಲಿ ಓದುವ ಆಸಕ್ತಿ ಬೆಳಸಿದ ಹಿರಿಯ ಸಾಹಿತಿಗಳಿಗೆ ನನ್ನ ವಂದನೆಗಳು. ನನ್ನ ಪ್ರತಿಯೊಂದು ಹಾಗು-ಹೋಗುಗಳಲ್ಲಿ ಜೊತೆಗಿರುವ ಅಪ್ಪ-ಅಮ್ಮನಿಗೂ ವಂದನೆಗಳು. ನನ್ನ ಪ್ರತಿಯೊಂದು ಅಂಕುಡೊಂಕುಗಳನ್ನು ಮೊದಲೇ ಎತ್ತಿ ತೋರಿಸುವ ತಮ್ಮನಿಗೂ ವಂದನೆಗಳು. ನನ್ನ ಬರವಣಿಗೆಯ ಆಯಾಮಗಳಿಗೆ ಪಠ್ಯ ಒದಗಿಸಿದ ಗೆಳೆಯರಿಗೂ ವಂದನೆಗಳು. ನೆನಪುಗಳನ್ನು ಕೊಟ್ಟು ಸರಕೊದಗಿಸಿದ ನಲ್ಲೆಗೂ ವಂದನೆಗಳು. ನನ್ನ ಬ್ಲಾಗ್ ಗೆ ಹೆಸರು ಸೂಚಿಸಿದ ಸ್ನೇಹಿತೆಗೂ ವಂದನೆಗಳು. ನಾನು ಬರೆದವುಗಳು ಪ್ರಕಟಣೆಗೆ ಯೋಗ್ಯವೊ, ಇಲ್ಲವೊ ಎಂಬ ಜಿಜ್ಞಾಸೆ ನನ್ನಲ್ಲಿ ಕಾಡುವಾಗ ನನ್ನ ಬ್ಲಾಗ್ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಪರಿಚಯಿಸಿ ಅದು ಪ್ರಕಟವಾಗಲು ಕಾರಣಕರ್ತರಾದ ’ಬ್ಲಾಗ್ ಲೋಕ’ ಖಾಲಂ ನ ಬರಹಗಾರರಿಗೂ ನನ್ನ ಅನಂತ ವಂದನೆಗಳು. ಅದನ್ನು ಪ್ರಕಟಿಸಿದ ’ಸಂಯುಕ್ತ ಕರ್ನಾಟಕ’ ಪತ್ರಿಕೆಯವರಿಗೂ ನನ್ನ ವಂದನೆಗಳು. ಬರೆಯುವ ಕೈಗಳು ಒಂದಷ್ಟು ಇಂಧನವನ್ನಲ್ಲದೆ ಬೇರೇನನ್ನೂ ಕೇಳುವುದಿಲ್ಲ. ನನ್ನ ಕೈಗಳಿಗೆ ಇಚ್ಛಾಶಕ್ತಿಯನ್ನು ತುಂಬಿದ್ದೀರಿ, ಅದನ್ನು ಉಳಿಸಿಕೊಂಡು ಹೋಗುತ್ತೇನೆ ಎಂಬ ಭರವಸೆ ನೀಡುತ್ತೇನೆ.

ಇಂತಿ ವಿನಮೃತೆಯಿಂದ,
- ಪ್ರಸಾದ್.ಡಿ.ವಿ.