ಯಾವುದೇ ನೋವಾಗಲಿ, ರೋಗವೇ ಆಗಲಿ ಅಥವಾ ಅಪಘಾತವೇ ಆಗಲಿ ಮುಂಜಾಗ್ರತ ಕ್ರಮ ಕೈಗೊಂಡರೆ ತಪ್ಪಿಸಬಹುದು ಎಂಬ ಮಾತಿದೆ. ಆದರೆ ಎಷ್ಟೇ ಮುಂಜಾಗ್ರತೆ ವಹಿಸಿದರೂ ತಪ್ಪಿಸಿಕೊಳ್ಳಲಾಗದ ಒಂದೇ ರೋಗ ಅಥವಾ ಅಪಘಾತವೆಂದರೆ ಪ್ರೇಮವೇ ಇರಬಹುದು. ಜೀವನದ ಯಾವುದೋ ಒಂದು ಕ್ಷಣದಲ್ಲಿ ಪ್ರೀತಿಯೂ ಬೇಡ-ಪ್ರೇಮವೂ ಬೇಡ ಎಂದು ಸತ್ಯಾಗ್ರಹ ಹೂಡಿದ್ದ ಮನಸ್ಸು ಅವಳ ಕುಡಿ ನೋಟಕ್ಕೋ, ನಗುವಿಗೋ ಸೋತುಹೋಗುತ್ತದೆ. ಕ್ಷಣದಲ್ಲೇ ಅವಳೊಂದಿಗೆ ಅನುರಕ್ತನಾಗಿಬಿಡಬೇಕೆಂಬ ಆಸೆ ಕಾಡುತ್ತದೆ. ಜೀವನದಲ್ಲಿನ ಡಿ.ವಿ.ಡಿ ಗಳ ಅಂಗಡಿ ತನ್ನ ಉದ್ಘಾಟನೆ ಮಾಡಿಕೊಳ್ಳುತ್ತದೆ..!
ಪ್ರೀತಿ-ಪ್ರೇಮಕ್ಕೆ ತನ್ನದೇ ಆದ ಒಂದು ಸಾರ್ವತ್ರಿಕ ವ್ಯಾಖ್ಯಾನ ಇಲ್ಲವೆನಿಸುತ್ತದೆ. ಅದು ಅವರವರು ಭಾವಿಸಿಕೊಂಡಂತೆ ತನ್ನ ವ್ಯಾಖ್ಯಾನವನ್ನು ಮಾರ್ಪಡಿಸಿಕೊಳ್ಳುತ್ತದೆ, ಯಾವುದೇ ಆಕಾರ ಪಡೆಯುವ ಹರಿವ ನೀರಿನಂತೆ. ಪ್ರೀತಿಯೇ ಸವಿಯೆಂದರೆ, ಪ್ರೀತಿಯ ಮೊದಲ ಪುಟ ಸವಿಜೇನೆಂದೇ ಹೇಳಬೇಕು. ಅದೇ ಮೊದಲ ಪ್ರೇಮದ ಗಮ್ಮತ್ತು. ಯಾವುದೇ ಫೋಟೋ ಆಲ್ಬಮ್ ನೋಡುವ ಮೊದಲು ಅದರ ಕವರ್ ಪೇಜನ್ನು ನೀವು ಗಮನಿಸಿರಬಹುದು. ಅದು ಎಷ್ಟು ಆಕರ್ಷಣೀಯವಾಗಿರುತ್ತದೋ ಅಷ್ಟೇ ರಮಣೀಯವೂ ಆಗಿರುತ್ತದೆ. ಅಂತೆಯೇ ಪ್ರತಿಯೊಬ್ಬರ ಜೀವನದಲ್ಲಿನ ಮೊದಲ ಪ್ರೇಮ. ಸವಿಯಾದ ನೆನಪುಗಳೊಂದಿಗೆ ಜೀವನದುದ್ದಕ್ಕೂ ಕಾಡುತ್ತಾ, ಖುಷಿ ಕೊಡುತ್ತಾ ತನ್ನ ತಾಜಾತನವನ್ನು ಉಳಿಸಿಕೊಳ್ಳುವುದರೊಂದಿಗೆ ಜೀವನಕ್ಕೂ ತಾಜಾತನ ತುಂಬುತ್ತದೆ ಮೊದಲ ಪ್ರೇಮ.
ಕ್ರಷ್’ಗಳಿಗೂ ಮೊದಲ ಪ್ರೇಮಕ್ಕೂ ಕೇವಲ ಕೂದಲೆಳೆಯಷ್ಟು ವ್ಯತ್ಯಾಸವಷ್ಟೆ. ಅದಕ್ಕಾಗಿಯೇ ಕ್ರಷ್’ಗಳಂತೆ ಮೊದಲ ಪ್ರೇಮವೂ ಕೂಡ ಬ್ರೇಕ್ ಅಪ್’ನಲ್ಲಿ ಅಂತ್ಯಗೊಂಡರೂ ಹಚ್ಚಹಸಿರಾಗಿ ಮನದಲ್ಲುಳಿಯುತ್ತದೆ. ಮೊದಲ ಪ್ರೇಮದಲ್ಲಿನ ಹುಚ್ಚುತನಗಳಾಗಲಿ, ಪೆದ್ದುತನಗಳಾಗಲಿ ನಮಗೆ ಟೈಂ ವೇಸ್ಟ್ ಎನಿಸುವುದೇ ಇಲ್ಲ. ಹುಡುಗಿಗಾಗಿ ಘಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾದಿದ್ದರೂ ಅವಳ ಕಣ್ಣೆದುರು ಕಂಡೊಡನೆ ಅನುಭವಿಸಿದ ತಳಮಳ, ಕಾಯುತ್ತ ಕಳೆದ ಸಮಯ ಗಣನೆಗೂ ಬರುವುದಿಲ್ಲ. ಅದೇ ಹೆಂಡತಿಗಾಗಿಯೋ, ಸಹ ಉದ್ಯೋಗಿಗಾಗಿಯೋ ಕಾಯ್ದಿದ್ದರೆ ಅದರ ವರಸೆಯೆ ಬೇರೆ. ಎದುರಿಗಿದ್ದವರನ್ನು ಉರಿದು ಮುಕ್ಕುವುದೊಂದು ಬಾಕಿ..! ಆದರೆ ಇವಳು ಮೊದಲ ಮನದನ್ನೆ. ಸುಮ್ಮನೆ ಬಡಿಯುತ್ತಿದ್ದ ಹೃದಯಕ್ಕೆ ರಾಗ-ಬದ್ದ ತಾಳ ಬೆರೆಸಿದವಳು, ಹಾಗೆ ಉರಿದು ಬೀಳಲಾದೀತೆ..!
ಈಗ ನನ್ನ ಜೀವನವನ್ನೇ ತೆಗೆದುಕೊಂಡರೆ, ನನ್ನ ಮೊದಲ ಕ್ರಷ್ ಆದದ್ದು ಪ್ರೌಢ ಶಾಲೆಯಲ್ಲೇ ಆದರೂ ಅದು ಪ್ರೇಮವಾಗಲಿಲ್ಲ. ಹಾಗೆಂದು ಅದು ಮಧುರ ಭಾವ ತಂತುಗಳನ್ನು ಮೂಡಿಸಿದ್ದು ಸುಳ್ಳಲ್ಲ, ಆದರೆ ಆ ತಂತುಗಳೊಡನೆ ಮೊದಲ ವೀಣೆ ನುಡಿಸಿದವಳು ಅವಳು. ಅವಳು ನನ್ನ ಜೀವನದಲ್ಲಿ ಬಂದದ್ದು ನನ್ನ ಇಂಜಿನಿಯರಿಂಗ್’ನ ದಿನಗಳಲ್ಲಿ. ಅವಳು ನನ್ನ ಜೀವನದಲ್ಲಿ ಹಸಿರಾಗಿರುವಷ್ಟು ಇನ್ಯಾವ ಹುಡುಗಿಯರಿಗೂ ಸಾಧ್ಯವಾಗಿಲ್ಲ, ಮುಂದೆ ಯಾರಿಗೂ ಸಾಧ್ಯವಿಲ್ಲವೆನಿಸುತ್ತದೆ..! ನನ್ನಲ್ಲಿ ಅದೇನು ಕಂಡು ಮೆಚ್ಚಿದ್ದಳೋ, ನನಗೇ ಸೋಜಿಗವೆನಿಸುತ್ತದೆ.
ನಿಮಗೆ ಮೊದಲ ಪ್ರೇಮದ ಮತ್ತೊಂದು ಮಜಲನ್ನು ಪರಿಚಯಿಸಲೇಬೇಕು. ಮೊದಲ ಪ್ರೇಮ ಸಾಮಾನ್ಯವಾಗಿ ಮುರಿದು ಬೀಳುತ್ತದೆ ಎಂಬುದು ನಿಮಗೆ ತಿಳಿದ ವಿಷಯವೆ, ಆದರೆ ಅವಳಲ್ಲಿ ನಾವು ಕಂಡುಕೊಂಡ ಗುಣಗಳನ್ನು ಮತ್ತು ಅವಳ ಹುಚ್ಚುತನಗಳನ್ನು ಮರೆಯಲೂ ಸಾಧ್ಯವೇ ಇಲ್ಲ. ಮತ್ತೊಂದು ಸೋಜಿಗದ ಸಂಗತಿಯೆಂದರೆ ಮುಂದೆ ಬರುವ ಎಲ್ಲಾ ಹುಡುಗಿಯರಲ್ಲೂ ಆ ಹುಚ್ಚುತನಗಳನ್ನು ಹುಡುಕುತ್ತೇವೆ..! ಅವಳು ಆ ಹುಚ್ಚುತನಗಳನ್ನು ಪ್ರದರ್ಶಿಸಿದ್ದಾಗ ನಾವು ಹುಸಿ ಮುನಿಸು ತೋರಿಸಿ ಜಗಳವಾಡಿರುತ್ತೇವೆ, ಆದರೆ ಅದೇ ಹುಚ್ಚುತನಗಳು ಅವಳು ದೂರವಾದೊಡನೆ ತುಂಬಾ ಇಷ್ಟವಾಗುತ್ತವೆ. ಅದೇ ಕಾರಣಕ್ಕೆ ಅವಳನ್ನು ಈಗ ಮೊದಲಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇವೆ, ಸಿಗಳೆಂದು ಗೊತ್ತಿದ್ದರೂ..! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಂದೆ ಬೇರೊಬ್ಬರೊಂದಿಗೆ ಮದುವೆಯಾದರೂ, ಮಕ್ಕಳಾದರೂ ಆ ಅವಳೇ ಪ್ರೇಮ ಲಾಂಛನವಾಗುಳಿಯುತ್ತಾಳೆ. ಮಗಳ ನಾಮಾಂಕಿತವಾಗಿಯೂ ಉಳಿಯಬಹುದು..! ಅದಕ್ಕಾಗಿಯೇ ’ಲವ್ ಹ್ಯಾಪನ್ಸ್ ಓನ್ಲೀ ಒನ್ಸ್, ರೆಸ್ಟ್ ಈಸ್ ಜಸ್ಟ್ ಲೈಫ್’ ಎಂಬ ಮಾತಿದೆ.
ಮೊದಲ ಪ್ರೇಮದ ಬಗ್ಗೆ ಎಷ್ಟೇ ಬರೆದರೂ ಮುಗಿಯದು. ಎಷ್ಟೇ ಮಿಂದರೂ ಮನಸ್ಸು ಹಗುರಾಗಿಸುವ ಮುಂಗಾರು ಮೊದಲ ಪ್ರೇಮ. ಈ ಮೂಲಕ ಅದಕ್ಕೊಂದು ನಮನ.
- ಪ್ರಸಾದ್.ಡಿ.ವಿ.
ಮೊದಮೊದಲ ಎದೆಯ ಮಿಡಿತ ಹೊಸ ಕನಸಿಗೆ...
ReplyDeleteಏನೇನೋ ಹೊಸ ತುಡಿತ ಜೊತೆ ಬಯಸುವ ಮನಸಿಗೆ...
:::
::
:
ಚಂದನೆ ಬರಹ...
ಭಾವನಾತ್ಮಕ ಬರಹ. ಪ್ರೀತಿಯೊಳಗೆ ನುಸುಳುವ ಮನಸುಗಳ ಮೊದಲ ಹೆಜ್ಜೆಗೆ ಹುರುಪು ತುಂಬಬಹುದೇನೋ.
ReplyDeleteಪ್ರಸಾದ್, ಮತ್ತೊಮ್ಮೆ ಎಳೆಯ ಭಾವಗಳಿಗೆ ಎಳೆದೊಯ್ಯುವ ಬರಹ... ಖಾಲಿಯಾಗಿದ್ದ ಡಬ್ಬಕ್ಕೆ ಸಣ್ಣ ಗಂಟೆಯೊಂದ ಕಟ್ಟಿದಿರಿ... ಮತ್ತೆ ಸದ್ದು ಕೇಳುತಿದೆ....ತುಂಬಾ ಸುಂದರ ನಿರೂಪಣೆ... ಅಭಿನಂದನೆಗಳು...
ReplyDeleteಮನಸ್ಸನ್ನು ಎಲ್ಲೋ ತೇಲಿಸಿ ಬಿಟ್ರಿ ನೀವು... ನಿಮ್ಮ ಮಾತು ನಿಜ ಮೊದಲ ಪ್ರೀತಿಯ ಬಗ್ಗೆ ಅದೆಷ್ಟು ಬರೆದರೂ ಮುಗಿಯದು...
ReplyDeletehttp://nenapinasanchi.wordpress.com/
ಮೊದಲ ಪ್ರೇಮದ ಪರಿಯನ್ನು ನಿಮ್ಮ ಅನುಭವದ ಜೊತೆಗೆ ವಿವರಿಸಿದ್ದೀರಿ....ಲೇಖನ ಇಷ್ಟವಾಯಿತು :-)
ReplyDeleteತುಂಬಾ ಚಂದವಾಗಿ ಬರೆಯುತ್ತಿರಿ ಪ್ರಸಾದ್...
ReplyDeleteಮೊದಲ ಪ್ರೇಮ, ತಲ್ಲಣಗಳು....
"ಹೆಂಡತಿಗಾಗಿಯೋ, ಸಹ ಉದ್ಯೋಗಿಗಾಗಿಯೋ ಕಾಯ್ದಿದ್ದರೆ ಅದರ ವರಸೆಯೆ ಬೇರೆ. ಎದುರಿಗಿದ್ದವರನ್ನು ಉರಿದು ಮುಕ್ಕುವುದೊಂದು ಬಾಕಿ..! ಆದರೆ ಇವಳು ಮೊದಲ ಮನದನ್ನೆ. ಸುಮ್ಮನೆ ಬಡಿಯುತ್ತಿದ್ದ ಹೃದಯಕ್ಕೆ ರಾಗ-ಬದ್ದ ತಾಳ ಬೆರೆಸಿದವಳು, ಹಾಗೆ ಉರಿದು ಬೀಳಲಾದೀತೆ..!"
ಕಾಡುವ ಸಾಲುಗಳು......
ಬಹಳ ಇಷ್ಟವಾಯಿತು....
ಹರೆಯದ ದಾರಿ ಹಿಡಿದು ಹೃದಯ ಹೀಗೆಯೇ ಅಲೆಮಾರಿಯಾಗಿ ಭಾವನಾ ಲಹರಿಯಲಿ ಅಲೆಯುವುದು. ಅಲ್ಲಿ ಎಲ್ಲವೂ ವಿನೂತನ. ಮೊದಲ ಪ್ರೇಮ ಸ್ಪಂದನ ಓದುತ್ತಾ ಬರೀ ಪೀಠಿಕೆ ಅಷ್ಟೇ ಇತ್ತು ಅನಿಸಿತು ಓದುವುದು ಮುಗಿದಾಗಲೂ ಇನ್ನಷ್ಟಿದ್ದಿದ್ದರೆ ಎನ್ನುವ ಭಾವನೆ ಮನಕೆ.
ReplyDeleteಮೊದಲ ಪ್ರೇಮವೇ ಹಾಗೆ ಅಲ್ಲವೆ. ಮನಸಿನಲ್ಲಿ ಅಚ್ಚು ಹಾಕಿ ಬಿಡುತ್ತದೆ. ಚೆಂದದ ಬರಹ ಪ್ರಸಾದ್.
ರುಕ್ಮಿಣಿ ಎನ್