ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday, 14 September 2013

ಕದ್ದಿಂಗಳಾ ಬೆಳದಿಂಗಳು!?


ಕೌಮಾರ್ಯ ಕೈಬೀಸಿ
ಕರೆದಂತೆ,
ತನುವಿನೊಂದಿಗೆ ಮನವೂ
ಹೆಣ್ಣಾಗುತ್ತಿತ್ತು!
ಹಣ್ಣೊಳಗಿನ ಬೀಜಗಳು ಮೊಳೆತು
ಸಸಿಯಾಗಿ, ಮರವಾಗಿ
ಮತ್ತೆ ಜೊಂಪೆ ಜೊಂಪೆಯ
ಹಣ್ಣುಗಳು ತೂಗಬೇಕು,
ವಂಶ ಬೆಳಗಬೇಕು!

ವರದ ಬಲದಿಂದ
ಮದುವೆಗೆ ಮುನ್ನವೇ
ಒಂದು ಹೆತ್ತ
ಫಲಭರಿತ ಒಡಲು ನನ್ನದು,
ರಾಜ್ಯ ಕಟ್ಟಿ ಆಳಬಲ್ಲ
ರಾಜಕುಮಾರರೇ
ಹುಟ್ಟಿಬರುತ್ತಾರೆಂಬ ಆಸೆ!
ಮದುವೆಗೆ ಮೊದಲ ಬಸಿರ
ಗಂಗೆಯಲ್ಲಿ ತೊಳೆದುಬಿಟ್ಟೆ!

ಸ್ವಯಂವರದ ಸಿದ್ಧತೆ,
ದೂರ ದೂರದ ದೇಶದ
ರಾಜರು ಸಾಲುಗಟ್ಟಿಹರು,
ಅಪ್ಪ-ಅಮ್ಮನ ವರ್ಣನೆಯಿಂದ
ಕಣ್ಣೊಳಗೆ ಹೊಳೆದವನು
ಅವನೊಬ್ಬನು ಮಾತ್ರ!
ಪಾಂಡು ರಾಜಕುಮಾರ!
ಮೈಬಣ್ಣ ಸ್ವಲ್ಪ ಒಣಗಿದಂತೆ ಕಂಡರೂ
ಬಲಶಾಲಿ ಮೈಕಟ್ಟು!
ಮರು ಕ್ಷಣವೇ ನಾನು
ಕುರುವಂಶದ ಸ್ವತ್ತು!

ಕೌಮಾರ್ಯದಿ ಕಂಡ ಕನಸುಗಳು
ತಿಂಗಳಿಗೂ ಉಳಿಯದೆ
ಗಾಳಿ ಗೋಪುರ!
ರಾಜ್ಯ ಕಟ್ಟುವುದರಲ್ಲಿ
ಪಾಂಡುವಿಗಿದ್ದ ಆಸಕ್ತಿ,
ವಂಶ ಬೆಳೆಸುವುದರಲ್ಲಿ ಕಾಣುವುದಿಲ್ಲ!
ಅಷ್ಟರಲ್ಲಿ ನನ್ನೊಡಲನ್ನು ಶಂಕಿಸಿದ
ಭೀಷ್ಮ, ಮಾದ್ರಿಯನ್ನು
ನನ್ನ ಸವತಿಯಾಗಿ ತಂದ!
ಉಹೂಂ... ವಂಶ ಚಿಗುರಲಿಲ್ಲ!

ಸರಿ, ಹೇಗಾದರೂ ದೇಶ ಬೆಳೆದಂತೆ
ವಂಶ ಬೆಳೆಯಬೇಕು,
ಯಮಧರ್ಮ, ವಾಯು, ಇಂದ್ರರ
ಜಪಿಸಿ ಅನುಗ್ರಹದಿ
ಮಕ್ಕಳ ಪಡೆದರೂ
ಮನದಲ್ಲಿದ್ದುದು ಪಾಂಡುವೊಬ್ಬನೇ!
ಸಾದ್ವಿ ಈ ಕುಂತಿ, ಕುಲಟೆಯಲ್ಲ!
ಅಶ್ವಿನಿ-ದೇವತೆಯರ ಅನುಗ್ರಹದಿಂದ
ಮಾದ್ರಿಯೂ ಎರಡು ಹಡೆದಳು!

ಐವರೂ ಪಾಂಡು ಕುಮಾರರು,
ಒಬ್ಬರಿಗಿಂತೊಬ್ಬ ವೀರ ಯೋಧರು!
ಅವನೇನೆಂದನಂತೆ,
ಆ ಗಾಂಧಾರಿಯ ಮಗ ದುರ್ಯೋದನ...
ಆ ಕುಂತಿಯ ಮಕ್ಕಳನ್ನು
ಪಾಂಡುಕುಮಾರರು ಎನ್ನಲು
ಅವರೇನು
ಪಾಂಡು ಮಹರಾಜನಿಗೆ ಹುಟ್ಟಿದವರೇ?
ಎಂದನಂತಲ್ಲ, ಅವನ
ನಾಲಿಗೆ ಸೀಳಬೇಕು!
ಹಸ್ತಿನಾವತಿಯಲ್ಲಿ ಪಾಂಡವರಿಗೆ
ಪಟ್ಟ ಕಟ್ಟಬೇಕು!
ಈ ಬೆಳದಿಂಗಳೇಕೆ ಮೈ ಬೆವರಿಸುತ್ತಿದೆ,
ಕಣ್ಣು ಕತ್ತಲೆ ಕಟ್ಟುತ್ತಿದೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Wednesday, 28 August 2013

ರಾಧೆ – ಕೃಷ್ಣ


ಹೆಣ್ಣಲ್ಲವೆ ರಾಧೆ ಪ್ರೀತಿಯ ಕಣ್ಣಲ್ಲವೆ?
ಎದೆಗಾತುಕೊಂಡರೂ ವಿರಹ
ಸುಮ್ಮನೆ ನಗಲಿಲ್ಲವೇ?
ಗೋಪಿಕೆಯರ ಗೊಲ್ಲನ
ಒಲವ ಪೂಜೆಯ ನೆಪದಿ
ತಾನೇ ಸೆಳೆದಪ್ಪಿಕೊಳಲಿಲ್ಲವೆ?

ಗಂಗಾ-ತುಂಗಾಕಾವೇರಿಯರಿಗಿಂತ
ಸುಸ್ಪಷ್ಟ ಚಲನೆ!
ಗಮ್ಯ ಮರೆಯದ ಪ್ರೇಮದ ಹೊನಲು,
ಇಕ್ಕೆಲದಿ ಸಿಕ್ಕ ನೆಲಕೆಲ್ಲ ಫಸಲು,
ಪ್ರೀತಿ ಅರಳಿ ಜಗವೆಲ್ಲ ನಗಲು!

ಪ್ರೀತಿ ಬಿತ್ತಿಪ್ರೀತಿ ಬೆಳೆಯುವಳವಳು
ಕೃಷ್ಣನೆಡೆಗಿನ ಹಾದಿಯ ಬೆಳಗು,
ಸುರಗಿಯ ಮೊಗ್ಗು, ಕಣ್ಣೊಳ ಬೆರಗು,
ಸುಗಂಧದ ಎಸಳು, ರಾಧೆ -
ಕೃಷ್ಣನ ಒಳಗಣ ಒಳಗು ಮತ್ತೂ ಬೆಳಗು!

ಪ್ರಸಾದ್.ಡಿ.ವಿ.

ಶ್ರೀ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು :-)

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Thursday, 15 August 2013

ಜೈ ಜವಾನ್!



“ಅರವಿಂದ್sssssssssss…” ಎಂದು ಯಾರೋ ಗಾವುದ ದೂರದಿ ನಿಂತು ಕೂಗುತ್ತಿದ್ದರು. ನನ್ನ ಕಣ್ಣುಗಳಿಗೆ ನಿರಾಯಾಸವಾಗಿ ಕತ್ತಲು ಕವಿಯುತ್ತಿತ್ತು. ನಾನು ನಿಸ್ತೇಜನಾಗಿ ಭೂಮಿಯ ಮೇಲೆ ಬೀಳುತ್ತಿದ್ದೇನೆ ಎನಿಸುತ್ತಿತ್ತು. ನಾನೀಗಲೇ ಕೆಳಗೆ ಬಿದ್ದು ಮಣ್ಣುಗೂಡುವುದು ನನ್ನಾತ್ಮಕ್ಕೂ ಬೇಕಿರಲಿಲ್ಲ! ಒಬ್ಬ ಸೈನಿಕನಾಗಿ ಅಷ್ಟು ಬೇಗ ಸೋತು ಕುಸಿಯುವುದು ತನ್ನ ಶೌರ್ಯಕ್ಕೆ ತಕ್ಕುದಾದ ಮಾತೇ ಆಗಿರಲಿಲ್ಲ. ಆದರೂ ನಾನೇನು ಮಾಡಲು ಸಾಧ್ಯವಿತ್ತು, ಒಂದಲ್ಲ, ಎರಡಲ್ಲ, ಮೂರು ಬುಲೆಟ್ಟುಗಳು ಹೊಟ್ಟೆಯ ಒಳ ಹೊಕ್ಕಿದ್ದವು. ಆ ಕ್ಷಣಕ್ಕೆ ನನಗೆ ಆ ಶತ್ರು ಸೈನಿಕನ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು, ಹೊಡೆಯುವವನು ಗುರಿಯಿಟ್ಟು ಹಣೆಗೆ ಹೊಡೆಯಬೇಕಿತ್ತಲ್ಲವೇ? ಹೊಟ್ಟೆಯೊಳಗೆ ಮೂರು ಗುಂಡುಗಳನ್ನು ನುಗ್ಗಿಸಿ ನನ್ನ ಸಾವಿನ ನೋವನ್ನನುಭವಿಸುವುದಲ್ಲದೆ, ಅಸಹಾಯಕತೆಯನ್ನೂ ಅನುಭವಿಸಿ ಪರಿತಪಿಸುವಂತೆ ಮಾಡಿದ್ದ. ಒಬ್ಬ ಸೈನಿಕನಾದವನಿಗೆ, ತಾನು ಸಾಯುವಾಗಲೂ ತನ್ನ ಎದುರಿಗೆ ನಗುವ ಸೈನಿಕನ ಎದೆ ಬಗೆಯಬೇಕು ಎನ್ನಿಸುತ್ತಿರುತ್ತದೆ. ಆದರೆ ಅದನ್ನು ಮಾಡಲಾಗದ ಅಸಹಾಯಕತೆ ಇದೆಯಲ್ಲಾ, ಅದು ನಿಜವಾಗಲೂ ಸೈನಿಕನನ್ನು ಕೊಲ್ಲುವುದು. ಅಸಹಾಯಕತೆ ನನ್ನಿಂಚಿಂಚನ್ನೂ ತಿನ್ನುತ್ತಿತ್ತು, ಕಣ್ಣ ರೆಪ್ಪೆಗಳು ಅರಿವಿಲ್ಲದಂತೆ ತೆರೆದು ಮುಚ್ಚಿಕೊಳ್ಳುತ್ತಿದ್ದವು.

“ಸೈನಿಕನೆಂದರೆ ಸಾವಿನೊಂದಿಗೆ ಸರಸವೇ ಆದ್ದರಿಂದ ಸಾಯುವ ಭಯ ಖಂಡಿತಾ ಇಲ್ಲ. ಆದರೆ ಶತ್ರು ಸೈನಿಕರ ಎದುರಿಟ್ಟುಕೊಂಡು ಮಾತ್ರ ಸಾವು ನನ್ನ ಹತ್ತಿರ ಬರಲು ಬಿಡುವುದಿಲ್ಲ. ಸಾಯುವುದೇ ಸಿದ್ಧವಾದರೆ ಕಣ್ಣೆದುರಿನ ಶತ್ರುಗಳೆಲ್ಲಾ ಧೂಳೀಪಟವಾಗಬೇಕು. ಅಲ್ಲಿಯವರೆಗೂ ಯಮನೂ ನನ್ನನ್ನು ಮುಟ್ಟಲು ಬಿಡುವುದಿಲ್ಲ.” ಇವು ನಾನೇ, ನನ್ನ ವೃತ್ತಿ ಸಾವಿನೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಬಗ್ಗೆ ಕೇಳುವವರಿಗೆಲ್ಲಾ ಹೇಳುತ್ತಿದ್ದ ಮಾತುಗಳು. ಇಂದು ಇವೇ ಮಾತುಗಳು ನನ್ನೊಳಗೆ ಮತ್ತೆ ಮತ್ತೆ ರಿಂಗುಣಿಸುತ್ತಿವೆ! ಇದ್ದಕ್ಕಿದ್ದಂತೆ ಅಲ್ಲೆಲ್ಲೋ ಇದ್ದ ಜೀವಸೆಲೆ ಒಮ್ಮೆಲೆ ನನ್ನೊಳಗೆ ಸಂಚಿಯಿಸುತ್ತಿತ್ತು. ಒಸರುತ್ತಿದ್ದ ರಕ್ತಕ್ಕೆ ತಡೆಯೊಡ್ಡುವ ಸಲುವಾಗಿ ತೊಟ್ಟ ಅಂಗಿಯನ್ನೇ ತೆಗೆದು ಹೊಟ್ಟೆಯ ಸುತ್ತಾ ಸುತ್ತಿಕೊಂಡೆ.

“ಎಲ್ಲಿ… ಎಲ್ಲಿ ನನ್ನ ಬಂದೂಕು…” ಹುಡುಕುತ್ತಿದ್ದೆ. ಬಂದೂಕು ಅಲ್ಲೆಲ್ಲೂ ಕಾಣಿಸಲಿಲ್ಲ. ಸುತ್ತಮುತ್ತ ನೋಡುವಾಗ ನನ್ನ ದೇಶದ ಯಾವ ಸೈನಿಕರೂ ಕಾಣಲಿಲ್ಲ. ಐದು ಜನರು ತಮ್ಮ ರುಂಂಡು ಮುಂಡಗಳು ಚಿದ್ರವಾದ ದೇಹ ಹೊತ್ತು ಅಲ್ಲೇ ಬಿದ್ದಿದ್ದರು. ಆ ಬಂಕರ್'ನ ಸುತ್ತಾ ಹತ್ತಾರು ಶತ್ರು ಸೈನಿಕರಾದರೂ ಜೀವ ಕಳೆದುಕೊಂಡು ಬಿದ್ದಿರಬೇಕೆಂದು ಊಹಿಸಿಕೊಂಡೆ! ನನಗೀಗ ಒಂದು ಬಂದೂಕು ಬೇಕಿತ್ತು, ಶತ್ರು ಶೇಷ ಉಳಿಯಲೇ ಕೂಡದು, ಅದರಲ್ಲೂ ಶತ್ರುವೊಬ್ಬನ ಕಣ್ಣೆದುರು ಮಾತ್ರ ಸಾಯಲಾರೆ. ನಾನು ಕುದಿಯುತ್ತಲೇ ಇದ್ದೆ. ಭಾವಗಳು ಹೆಪ್ಪುಗಟ್ಟುತ್ತಿದ್ದವು ಹಾಗೇ ರಕ್ತವೂ ಇರಬಹುದು! ನಾನು ಬಂದೂಕು ಹುಡುಕುವ ಭರಾಟೆಯಲ್ಲಿ ನನ್ನ ಸಾವಿನ ಬರಸಿಡಿಲು ಬಡಿಯಲಿರುವ ಮನೆಯ ಚಿತ್ರಣಗಳು ಕಾಡಿದವು.

ನನ್ನ ಶವ ಮೈಸೂರಿನ ರಥ ಬೀದಿಯಲ್ಲಿ ಸಾಗುತ್ತಿದ್ದರೆ ಸಾವಿರಾರು ಭಾರತೀಯರ ಕಣ್ಣುಗಳು ಒದ್ದೆಯಾಗುತ್ತಿರಬಹುದು. ಅಲ್ಲೆಲ್ಲೋ, ’ಜೈ ಜವಾನ್…’ ಎಂಬ ಸೊಲ್ಲು ಕೇಳುತ್ತಿದೆ. ಸೈನಿಕರ ಶ್ರಮ ಬಸಿಯುವುದನ್ನು ಮನಗಂಡು ’ಜೈ ಜವಾನ್, ಜೈ ಕಿಸಾನ್’ ಎಂಬ ಉಕ್ತಿಯನ್ನು ನಮ್ಮೆಲ್ಲರಿಗೂ ಸಮರ್ಪಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮೃತಿಪಟಲದ ಮೇಲೊಮ್ಮೆ ಬಂದು ಹೋದರು. ಇದನ್ನೆಲ್ಲಾ ಕೇಳಿ ಹೆಮ್ಮೆಯಿಂದ ಎದೆಯುಬ್ಬಿಸಿ ಎದ್ದು ನಿಲ್ಲಬೇಕೆನಿಸುತ್ತಿದೆ, ಭಾರತ ಧ್ವಜವನ್ನು ಎತ್ತಿ ಹಿಡಿದು, ’ಜೈ ಹಿಂದ್’ ಎಂದು ಕೂಗಬೇಕೆನ್ನಿಸುತ್ತಿದೆ ಆದರೆ ಶವವಾಗಿ ಬಿದ್ದಿರುವ ಅಸಹಾಯಕತೆ ನನ್ನ ಕೈಗಳನ್ನು ಮತ್ತೆ ಕಟ್ಟುತ್ತಿದೆ.

ನಾವು ಆರು ಸೈನಿಕರು, ಪಾಕ್ ಸೈನಿಕರು ಟೆರರಿಸ್ಟ್ ಗಳೊಂದಿಗೆ ಸೇರಿಕೊಂಡು ಹೂಡಿದ ದಾಳಕ್ಕೆ ಮರಣ ಹೊಂದಿದ ಬಗ್ಗೆ ಟಿ.ವಿ.ಗಳಲ್ಲಿ ಪ್ರಸಾರವಾಗುತ್ತಿದೆ. ಕೋಟ್ಯಾಂತರ ಭಾರತೀಯರ ಕಂಬನಿಗಳು ನಮಗಾಗಿ ಮಿಡಿಯುತ್ತಿವೆ. ನನ್ನ ಜನ್ಮ ಸಾರ್ಥಕವಾಯ್ತು ಎಂಬ ಭಾವ ನನ್ನಲ್ಲಿ ಮೂಡಿ ನಿಲ್ಲುತ್ತಿದೆ. ನಮ್ಮ ಸಾವಿನ ಕಾಳ್ಗಿಚ್ಚಿನಿಂದ ರೊಚ್ಚಿಗೆದ್ದ ಮಾಧ್ಯಮಗಳು ಒಬ್ಬ ಕೇಂದ್ರ ಮಂತ್ರಿಯನ್ನು ನಮ್ಮ ಸಾವಿನ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆತ ಹೇಳುತ್ತಾನೆ: “ನಾವು ಜನರ ಜೀವನವನ್ನು ಉತ್ತಮಗೊಳಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ಒಳ್ಳೆಯ ಆಹಾರ ಸಿಗುವಂತೆ ಮಾಡುತ್ತಿದ್ದೇವೆ. ಈಗ ಸೈನಿಕರ ಕುಟುಂಬಗಳಿಗೆ ಪರಿಹಾರ ಕೊಡುತ್ತೇವೆ. ಒಬ್ಬರಿಗೆ ಸರ್ಕಾರಿ ನೌಕರಿ ಕೊಡುತ್ತೇವೆ. ತಲೆ ಕೆಡಿಸಿಕೊಳ್ಳಬೇಡಿ. ಆಯ್ತಾ? ಅವರು ವೀರ ಮರಣ ಹೊಂದಿದ್ದಾರೆ, ಅವರು ತಮ್ಮ ಕರ್ತವ್ಯ ಮಾಡಿದ್ದಾರೆ. ದೇಶಕ್ಕಾಗಿ ಸಾಯುವುದು ಅವರ ಕರ್ತವ್ಯ!” ಈಗ ಮತ್ತೆ ನಾನು ನನ್ನೊಳಗೇ ಕುದಿಯುತ್ತಿದ್ದೆ. ದೇಶದ್ರೋಹಿಗಳು ದೇಶದ ಬಾರ್ಡರ್ ಗಳಲ್ಲಷ್ಟೇ ಇಲ್ಲ, ಇಲ್ಲೂ ಇದ್ದಾರೆ. ’ದೇಶದೊಳಗೂ ದೇಶದ ಆಸ್ತಿಗಳೆಂದು ಮುಖವಾಡ ಧರಿಸಿದ ಶತ್ರುಗಳಿದ್ದಾರೆ’ ಎನಿಸಿತು. ನಮ್ಮ ಸಾವು ಇವರಿಗೆ ಶಿವಪೂಜೆಗೆ ಬಳಿದುಕೊಳ್ಳುವ ವಿಭೂತಿ!

ನನ್ನ ಶವ ಸುಣ್ಣದಕೇರಿಯಲ್ಲಿದ್ದ ನಮ್ಮ ಮನೆ ತಲುಪಿತು. ಅತ್ತು ಅತ್ತೂ ನಿತ್ರಾಣಳಾಗಿದ್ದ ಅಮ್ಮಾ, ’ಮಗನೇ ಅರವಿಂದಾssss…” ಎಂದು ಓಡಿ ಬರುತ್ತಿದ್ದರು. ಅಪ್ಪ ಮುಂದೆ ನಿಂತ ನನ್ನ ಪಾರ್ಥೀವ ಶರೀರವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಬೇಕಾದ ಏರ್ಪಾಡುಗಳನ್ನು ಮುಗಿಸುತ್ತಿದ್ದರು. ತಮ್ಮ ಮುಷ್ಠಿಯನ್ನು ಬಿಗಿ ಹಿಡಿದು ತಮ್ಮ ದುಃಖವನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿದ್ದರು. ಕಂಗಳು ಧಾರಾಕಾರವಾಗಿ ನೀರನ್ನು ಬಸಿಯುತ್ತಿದ್ದರೂ ಕಣ್ಣೊರೆಸಿಕೊಂಡು ತಮ್ಮ ಕರ್ತವ್ಯಗಳೆಡೆಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ನನ್ನ ಶವ ಮತ್ತಿಬ್ಬರನ್ನು ಅಲ್ಲಿ ಹುಡುಕುತ್ತಿತ್ತು! ಎಲ್ಲಿರಬಹುದು, ಎಲ್ಲಿರಬಹುದು ಅವರಿಬ್ಬರು? ನಾನು ಮೇಲೆದ್ದು ಕೂಗಬೇಕೆನ್ನಿಸುತ್ತಿತ್ತು. “ಭಾರತೀ… ಮಧುಕರ…”. ಭಾರತಿ ನನ್ನ ಧರ್ಮಪತ್ನಿ ಮದುವೆಯಾಗಿ ಐದು ವರ್ಷಗಳಾಗಿತ್ತಷ್ಟೆ. ಇಪ್ಪತ್ತೆಂಟರ ಪ್ರಾಯಕ್ಕೇ ಅವಳ ಹಣೆಯನ್ನು ಬರಿದಾಗಿಸಿಬಿಟ್ಟೆ. ಅವಳು ಬಯಸಿ ಬಯಸಿ ಒಬ್ಬ ಯೋಧನನ್ನು ಮದುವೆಯಾದದ್ದಕ್ಕೆ ಚಿಕ್ಕವಯಸ್ಸಿಗೆ ವಿಧವೆ ಪಟ್ಟ ನೀಡಿದೆ! ಅವಳನ್ನು ಹುಡುಕಬೇಕು, ನನ್ನ ದೇಶಪ್ರೇಮದ ಹೆಸರಲ್ಲಿ ಅವಳಿಗೆ ಮಾಡಿದ ಮೋಸಕ್ಕೆ ಕ್ಷಮೆ ಕೇಳಬೇಕು. ನಾಲ್ಕು ವರ್ಷ ವಯಸ್ಸಿನ ಹಾಲುಗಲ್ಲದ ನನ್ನ ಕಂದ ಮಧುಕರ ಎಲ್ಲಿದ್ದಾನೋ, ಏನೋ? ನಾನವನನ್ನು ನೋಡಿ ಒಂದು ವರ್ಷವೆ ಆಗಿರಬಹುದು. ಅವನ ಭವಿಷ್ಯ ಭದ್ರ ಮಾಡಬೇಕಿದ್ದ ಅವನಪ್ಪ ತಾನೇ ನಿಶ್ಚಲನಾಗಿ ಮಣ್ಣು ಸೇರುವ ಹಾದಿಯಲ್ಲಿ ಮನೆ ಸೇರಿದ್ದ. ಅವರು ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದ ನನ್ನ ಕಣ್ಣ ಮುಂದೆಯೇ ಅವರಿಬ್ಬರೂ ಪ್ರತ್ಯಕ್ಷ ನಿಂತರು. ಭಾರತಿಯ ಕೂದಲೆಲ್ಲ ಕೆದರಿ ನಿತ್ರಾಣಗೊಂಡಂತೆ ಕಾಣುತ್ತಿದ್ದಳು. ಮಧುಕರ, ’ಅಪ್ಪಾ… ಅಮ್ಮಾ…’ ಎಂದು ಅಳುತ್ತಿದ್ದ. ಮನೆಯ ಮುಂದೆ ನೂರಾರು ಮಂದಿ ಜಮಾಯಿಸಿದ್ದರು.

ಭಾರತಿ ಓಡಿ ಬಂದು ನಿಶ್ಚೇತನನಾಗಿ ಬಿದ್ದಿದ್ದ ನನ್ನ ಮೇಲೆ ಬಿದ್ದಳು. ಮೇಲೆದ್ದು ಸಂತೈಸುವ ಮನಸ್ಸಾಗಿದ್ದರೂ ಮಲಗೇ ಇದ್ದೆ. ತನ್ನ ಜೀವನವೂ ನಿಶ್ಚಲವಾದಂತೆ ಒಂದೇ ಸಮನೆ ಅಳುತ್ತಿದ್ದಳು. ಎಲ್ಲರೂ ಅವಳನ್ನು ಸಮಾಧಾನಿಸಲು ಹೆಣಗುತ್ತಿದ್ದರು. ಅಂತ್ಯ ಕ್ರಿಯೆಯ ಕಾರ್ಯಗಳೆಲ್ಲಾ ಸರಾಗವಾಗಿ ಜರಗುತ್ತಿದ್ದವು. 'ಅತ್ತೆ ನೋಡಿ, ಒಮ್ಮೆ ಮುಖವನ್ನೂ ತೋರಿಸದೆ ಹೋಗಿಬಿಡುತ್ತಿದ್ದಾರೆ.. ರೀ ಏಳಿ, ನನ್ನ ಒಂದ್ಸಲಕ್ಕಾದ್ರೂ ಮಾತಾಡ್ಸಿ..' ಎಂದು ಅಳುತ್ತಿದ್ದಳು.

ನನ್ನೊಂದಿಗೆ ಸೈನ್ಯದಲ್ಲಿದ್ದ ಕೆಲವು ಸೈನಿಕರು ನನ್ನನ್ನು ಸಕಲ ಗೌರವಗಳೊಂದಿಗೆ ಬೀಳ್ಕೊಡಲು ಸನ್ನದ್ಧರಾಗಿ ನಿಂತಿದ್ದರು. ನನ್ನ ಶವಸಂಸ್ಕಾರದ ನಂತರ ಮಾಧ್ಯಮದವರು ನನ್ನ ಹೆಂಡತಿಯನ್ನು ಕೇಳಬಹುದು: “ಅರವಿಂದ್ ರವರು ನಮ್ಮನ್ನೆಲ್ಲ ಅಗಲಿ ದೇಶ ರಕ್ಷಣೆಯಲ್ಲಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಈ ಬಗ್ಗೆ ನಿಮಗೇನೆನಿಸುತ್ತದೆ?” ನನ್ನವಳ ಉತ್ತರಕ್ಕೆ ನಾನು ಕಾತರನಾಗಿದ್ದೇನೆ. ಕೇಳಬೇಕು, ಆ ಉತ್ತರವನ್ನು ಕೇಳಬೇಕು. “ಅವರು ನನ್ನ ಗಂಡ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ತನ್ನ ನಲವತ್ತು ಜನರ ತುಕುಡಿಯನ್ನು ರಕ್ಷಿಸಿರುವುದಲ್ಲದೆ ಶತ್ರು ಸೈನ್ಯದ ಒಬ್ಬನೂ ಉಳಿಯದಂತೆ ಮಾಡಿದ್ದಾರೆ. ಅವರು ದೇಶದ ಹೆಮ್ಮೆಯ ಮಗ” ಎಂದು ಹೇಳಬಹುದೇ?

ಎಲ್ಲೆಲ್ಲೋ ಓಡುತ್ತಿದ್ದ ಮನಸ್ಸು ವಾಸ್ತವಕ್ಕಿಳಿಯುತ್ತಿದೆ. ಎದುರಲ್ಲಿ ನಿಂತಿದ್ದ ಶತ್ರು ಸೈನಿಕ ನಗುತ್ತಲೇ ಇದ್ದಾನೆ. ಹುಡುಕುತ್ತಿದ್ದ ಕೈಗಳಿಗೆ ಯಾವುದೋ ಎಡತಾಕಿದಂತಾಗಿ ಆ ಕಡೆಗೆ ತಿರುಗಿ ನೋಡಿದರೆ ನನ್ನ ಕೈಯಿಂದ ಜಾರಿಬಿದ್ದ ಬಂದೂಕು ಅಲ್ಲೇ ಇತ್ತು. ಅದು ನನ್ನ ಕೈಗೆ ಸಿಗುತ್ತಿದ್ದಂತೆ, ಅಷ್ಟೂ ಹೊತ್ತು ನನ್ನಲ್ಲಿ ಸಂಚಯಿಸುತ್ತಿದ್ದ ಆಕ್ರೋಶ ಒಮ್ಮೆಲೇ ಗುಂಡುಗಳೋಪಾದಿಯಲ್ಲಿ ಹೊರಬಂದವು. ಶತ್ರು ಸೈನಿಕ ನಿಂತಿದ್ದ ದಿಕ್ಕಿನೆಡೆಗೆ ಸತತ ದಾಳಿ ನಡೆಸಿದ್ದೆ. ಅವನು ಅಲ್ಲೇ ಹತನಾಗಿ ಬಿದ್ದಿರಬಹುದು. ಯಾವುದೋ ಒಂದು ಗುಂಡು ಪಕ್ಕದಲ್ಲಿದ್ದ ಬಂಕರ್'ಗೆ ತಗುಲಿ ಅದೂ ಸಿಡಿದು ಹೋಯ್ತು. ಅದರಿಂದ್ಹಾರಿದ ಬೆಂಕಿ ನನ್ನನ್ನೂ, ಅಲ್ಲೆ ಸುತ್ತ ಮುತ್ತ ಬಿದ್ದಿದ್ದ ನನ್ನ ತುಕಡಿಯ ಇನ್ನೈದು ಸೈನಿಕರನ್ನೂ ದಹಿಸುತ್ತಿತ್ತು.

*********

ದೇಶದೆಲ್ಲೆಡೆಯ ನ್ಯೂಸ್ ಛಾನೆಲ್ಗಳಲ್ಲಿ ಅರವಿಂದನ ಸಾಹಸಗಾಥೆಯ ಬಗ್ಗೆ ಬಣ್ಣಬಣ್ಣ ತಳೆಯುತ್ತಿದ್ದ ಸುದ್ಧಿ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಲೀನವಾಗುತ್ತಿತ್ತು. “೩೪ ಯೋಧರ ಜೀವ ರಕ್ಷಿಸಿದ ಕಮಾಂಡರ್ ಅರವಿಂದ. ಕೆಲವು ಟೆರರಿಸ್ಟ್’ಗಳೂ ಸೇರಿದಂತೆ 37 ಜನ ಶತ್ರುಗಳನ್ನು ಹೊಡೆದುರುಳಿಸಿದ ಅರವಿಂದ್ ಪಡೆ” ಎಂಬ ಹೆಡ್ ಲೈನ್ಸ್ ಗಳು ಬಿತ್ತರವಾಗುತ್ತಿದ್ದವು. ಅರವಿಂದ ಮತ್ತವನೊಂದಿಗೆ ಸತ್ತ ಐವರು ಯೋಧರು ಒಂದು ದಿನದ ನವಾಬರಾಗಿದ್ದರು. ಆ ದಿನದ ಹೆಡ್’ಲೈನ್ಸ್ ಮತ್ತು ಕವರ್ ಸ್ಟೋರಿಗಳಲ್ಲಿ ರಾರಾಜಿಸುತ್ತಿದ್ದರು. ಸೈನಿಕರ ಜೀವನವೇ ಹೀಗಿರಬಹುದು, ಅವರು ಬದುಕಿದ್ದಷ್ಟು ದಿನ ಅವರ ಶ್ರಮ ಮತ್ತು ಸೇವೆಗಳು ಗುರ್ತಿಸಿಕೊಳ್ಳಲಾರವು! ಸತ್ತ ಒಂದು ದಿನಕ್ಕೆ ಅವರೇ ಹೀರೋಗಳು! ಅರವಿಂದನಿಗೇನೋ ತಾನು ತಾಯ್ನಾಡಿನ ಋಣ ತೀರಿಸಿದೆ ಎಂಬ ಹೆಮ್ಮೆಯಿತ್ತು.

ಅರವಿಂದನ ಸಾವು ಇನ್ನೂ ಅಚ್ಚ ಹಸಿರಾಗಿರುವಂತೆಯೇ, ಜಮ್ಮು-ಕಾಶ್ಮೀರದ ಶ್ರೀನಗರದ ಸೇನೆಯ ಕೇಂದ್ರ ಕಛೇರಿಯ ಫೋನ್ ಮತ್ತೆ ರಿಂಗುಣಿಸುತ್ತಿದೆ. ಅಲ್ಲಿನ ಇಂಚಾರ್ಜ್ ಆಗಿದ್ದ ಸುದರ್ಶನ್ ದಿಗ್ವೇಧಿ ಕರೆ ಸ್ವೀಕರಿಸುತ್ತಾರೆ. ಆ ಕಡೆಯಿಂದ ಧ್ವನಿ ಕೇಳಿಸುತ್ತದೆ: “ಸರ್, ಪೂಂಚ್ ನ ಗಡಿಯಲ್ಲಿ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆಯಾಗಿದೆ. ಭಾರತೀಯ ಸೇನೆಯ ಐದು ಜನ ಯೋಧರನ್ನು ಕೊಲ್ಲಲಾಗಿದೆ”. ಕಛೇರಿಯ ವಾತಾವರಣ ಕಾವೇರುತ್ತದೆ. ಮುಂದಿನ ಕಾರ್ಯಾಚರಣೆಗಳ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡು ಕೂರುತ್ತಾರೆ.

*******

ಕೆಲವು ವಿವರಗಳು:

ಭಾರತದ ಗಡಿಗಳನ್ನು ಆಕ್ರಮಿಸಲು ಹವಣಿಸಿರುವ ಪಾಕಿಸ್ಥಾನೀ ಸೈನ್ಯ ಲಷ್ಕರ್-ಇ-ತೋಯ್ಬಾ ಎಂಬ ಉಗ್ರಗಾಮಿ ಸಂಘಟನೆಯ ಸಹಾಯ ಪಡೆದುಕೊಂಡಿದೆ. ಭಾರತದ ಗಡಿಗಳಲ್ಲಿ ಇಂತಹ ಕುಕೃತ್ಯಕ್ಕಾಗಿಯೇ ’ಲಷ್ಕರ್-ಇ-ತೋಯ್ಬಾ’ ಸಂಘಟನೆಯಿಂದ ತರಬೇತಿ ಪಡೆದು ಸಜ್ಜಾದ ’ಬ್ಯಾಟ್ (BAT)’ ಎಂಬ ಪಡೆಯನ್ನು ನಿಯೋಜಿಸಲಾಗಿದೆ! ಸೈನ್ಯದ ಮಾಹಿತಿಯ ಪ್ರಕಾರ ೨೦೧೩ರಲ್ಲಿ, ಭಾರತೀಯ ಗಡಿಗಳಲ್ಲಿ ಈಗಾಗಲೇ ೫೫ ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು ಶೇ.೫೦ ಕ್ಕಿಂತ ಜಾಸ್ತಿ. ಸುಮಾರು ೫೦ಕ್ಕಿಂತಲೂ ಹೆಚ್ಚಿನ ಸೈನಿಕರು ಈ ವರ್ಷದಲ್ಲಿ ಕದನ ವಿರಾಮದ ಉಲ್ಲಂಘನೆಯಂತಹ ಘಟನೆಗಳಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಕೃತ್ಯಗಳು ಒಂದಾದ ಮೇಲೊಂದರಂತೆ ನಡೆಯುತ್ತಲೇ ಇದೆ. ನಿರಾತಂಕವಾಗಿ ಸೈನಿಕರ ಮಾರಣ ಹೋಮವೂ ಕೂಡ!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday, 15 July 2013

ಕಾದಿಹ ರಾಧೆ!



ಮಧುರೆಗೆ ಹೋದೆಯಾ ಮಾಧವ,
ತೊರೆದು ನೆರಳಂತಹ ರಾಧೆಯಾ,
ತಾನ್ ತುಳಿದ ಮಣ್ಣ ವಾಸನೆಯರಿಯದೆ
ಪಾದ, ಮರಳಿ ಬರುವ ಹಾದಿಯ ಮರೆತು,
ಅಳುತಿಹಳು ಕೃಷ್ಣಮಯಿ ನಿನಗೇ ಸೋತು!                           !!ಮಧುರೆಗೆ ಹೋದೆಯಾ!!

ಉಳಿದ ಮಾತುಗಳ ಮಾಲೆಯೊಸೆದಳು,
ಕೊರಳೊಡ್ಡಬಾರದೇ ಮುರುಳಿ,
ಸುಳಿದ ರಾಗಗಳು ಝೇಂಕಾರದ ಸುರುಳಿ,
ಕಾದೇ ಕಾದಳು ಬೃಂದಾವನದಲಿ,
ಬರುವೆಯೋ ಬಾರೆಯೋ, ಹೇಳೆಯಾ?                                !!ಮಧುರೆಗೆ ಹೋದೆಯಾ!!

ಜೀವದುದ್ದಕ್ಕೂ ಬೆಳಕು ಕೊಟ್ಟಂತೆ
ಹೋದವನಿಗೆ ಹಚ್ಚಿಟ್ಟ ಹಣತೆ,
ಕರಗುತಿರುವಳು ಕರ್ಪೂರದಂತೆ,
ಭ್ರಮೆಯಾಗಿಸಬೇಡವಳ ಪ್ರೇಮವ,
ಬಂದು ಸೇರೋ ಕಾದಿಹ ರಾಧೆಯ!                                    !!ಮಧುರೆಗೆ ಹೋದೆಯಾ!!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್

Sunday, 16 June 2013

ನಿನ್ನ ಸನಿಹ


ಸನಿಹದ ವಿನಃ ಬೇಡೆನು ಏನೂ,
ನಾನೇ ಇನಿಯ, ನಿನ್ನ ಸನಿಹ...
ಸಾಕೀ ವಿರಹ, ತೀರದ ಮೋಹ,
ಬಾರೇ ಓ ಹುಡುಗಿ, ನನ್ನಾಸೆಯ ಬೆಡಗಿ,
ಸವಿಯೊಲವಿನ ನಗುವಾಗಿ!


ಮಾತಿನ ಮೌನ, ಪ್ರೀತಿಯ ಧ್ಯಾನ,
ಬಡಿತಕೂ ಉಂಟು ಹೃದಯದ ಗಾನ,
ನಾನೇ ನೀನಾ, ನೀನೇ ನಾನಾ...
ಕೇಳೇ ಓ ಹುಡುಗಿ, ಉಸಿರಿನ ಕಿವಿಯಾಗಿ,
ಪ್ರತಿ ಸ್ಪರ್ಷವೂ ಹಾಡಾಗಿ!


ಚಳಿಗಾಲದಿ ನೀ ಮುತ್ತಿಟ್ಟ ತುಟಿ
ಮುಂಗಾರಿಗೆ ಕೆಂಪಾಗಿದೆ,
ಮಳೆಗಾಲದ ಈ ಸೋನೆಯ ಚಿಟಪಟ,
ಮತ್ತೇ ಮತ್ತೇ ನನ್ನೇ ಕಾಡಿದೆ!
ಕಾಡುವೆ ಹೀಗೇಕೆ, ನೀನೇ ನನ್ನಾಕೆ!

ಮಳೆಗೂ ನೆನಪುಇಳೆಯ ಸನಿಹ,
ಅದಕೇ ಬರುವ ಪುನಃ ಪುನಃ...
ನನಗೂ ಹಾಗೆನೀನೇ ಗೆಳತಿ,
ನಾನೇ ಮಳೆಯಾಗಿನೀನೇ ಇಳೆಯಾಗಿ,
ಅಪ್ಪುವೆ ಇನ್ನೇನುನನಗೇ ನೀನಿನ್ನು...


ಪ್ರಸಾದ್.ಡಿ.ವಿ.

Saturday, 1 June 2013

ರಾಜಕೀಯ – ಧರ್ಮಾಂಧತೆ – ಜಾತೀಯತೆ!


ಈ ಮೂರು ವಿಷಯಗಳು ಎಲ್ಲಿ ಬೆರೆತು ನಿಲ್ಲುತ್ತವೋ ಅಲ್ಲಿ ದುರ್ನಾತ ಬೀರುವ ಕಶ್ಮಲಗಳ ಕೊಂಪೆ ಜೀವ ತಳೆಯಬಹುದು ಎಂಬುದು ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಸತ್ಯ! ನನ್ನಲ್ಲಿ ಈ ಮೂರೂ ವಿಷಯಗಳ ಬಗ್ಗೆಯೂ ಸಂಪೂರ್ಣ ಸ್ಪಷ್ಟತೆಯಿದ್ದರೂ ನಾನು ಅವುಗಳ ಬಗ್ಗೆ ಮಾತನಾಡುವುದು ತೀರಾ ವಿರಳ ಏಕೆಂದರೆ ಈ ವಿಷಯಗಳು ನಮ್ಮ ಭಾರತೀಯರ ಮೇಲೆ ಮೂಡಿಸಿರುವ ಛಾಯೆ ಗಾಢವಾದದ್ದು! ಒಬ್ಬರು ಮಾತನಾಡುವುದರಿಂದ ಇಲ್ಲಿ ಏನೂ ಬದಲಾಗುವುದಿಲ್ಲ ಮತ್ತು ಯಾರೂ ತಮ್ಮ ಪೂರ್ವಾಗ್ರಹಗಳನ್ನು, ಆ ಮಾತುಗಳನ್ನು ಕೇಳಿ ಬಲಿಕೊಡುವುದಿಲ್ಲ. ಅಷ್ಟಿದ್ದಿದ್ದರೆ ಬಸವಾದಿ ಬುದ್ಧ ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ” ಎಂದು ಹೇಳಿದಾಗಲೇ ಭಾರತ ಸಮಾನತೆಯ ಶಾಂತಿಯ ತೋಟವಾಗಬಹುದಿತ್ತು. ಆದರೆ ಈಗಲೂ ಅಸಮಾನತೆ, ಜಾತೀಯತೆ, ಧರ್ಮಾಂಧತೆಗಳು ದೇಶವನ್ನು ಆಳುತ್ತಿವೆ. ಇವುಗಳೆಲ್ಲವನ್ನೂ ತನ್ನ ಓಟ್ ಬ್ಯಾಂಕ್ ಮಾಡಿಕೊಂಡು ದೇಶವನ್ನು ಇನ್ನಷ್ಟು ಕುಲಗೆಡಿಸುತ್ತಿರುವುದು ಹೊಲಸು ರಾಜಕೀಯ!

ಈ ಬಗ್ಗೆ ಮಾತಾಡುವುದು ತೀರಾ ವಿರಳ ಎಂದವನು ಈಗ ಯಾಕೆ ಇಂತಹದ್ದೊಂದು ಲೇಖನ ಬರೆಯುತ್ತಿದ್ದಾನೆ ಎಂದು ಕೆಲವರು ಮೂಗು ಮುರಿಯಬಹುದು, ಆದರೆ ಕರ್ನಾಟಕದಲ್ಲಿ ಕಳೆದ ತಿಂಗಳಷ್ಟೇ ಆದ ರಾಜಕೀಯ ಬದಲವಾಣೆಗಳಿಂದ ಉತ್ತೇಜಿತಗೊಂಡೋ, ಹತಾಶೆಗೊಂಡೋ ಪುಂಖಾನುಪುಂಖವಾಗಿ ಜನ ಮಾತನಾಡುತ್ತಿರುವುದು ನನ್ನನ್ನು ಕೆರಳಿಸಿತು. ಅದಕ್ಕಾಗಿಯೇ ಈ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ ಮೌನ ಮುರಿಯುತ್ತಿದ್ದೇನೆ.

ರಾಜಕೀಯ ಸ್ಥಿತ್ಯಂತರ ಇಷ್ಟೆಲ್ಲಾ ವಿಷಯಗಳಿಗೆ ಜೀವ ನೀಡಬಹುದೇ ಎಂದರೆ, ಹೌದು ಜೀವ ನೀಡಬಹುದು! ಏಕೆಂದರೆ ರಾಜಕೀಯ ಸ್ಥಾನ ಮಾನ ಎಂಬುದು ಒಂದು ಸ್ವಾಮ್ಯ, ಅದನ್ನು ಪಡೆದವರು ಹೇಗೆ ಬೇಕಾದರೂ ದಬ್ಬಾಳಿಕೆ ನಡೆಸಬಹುದು, ತಮ್ಮ ಅಭಿಪ್ರಾಯಗಳನ್ನು ಜನ ಸಾಮಾನ್ಯರ ಮೇಲೆ ಹೇರಬಹುದು, ತಮ್ಮನ್ನು ನಂಬಿ ಕೂತ ಸಮುದಾಯಗಳ ಹಿತಾಸಕ್ತಿಯನ್ನು ಕಾಯಬಹುದು ಎಂಬ ಸಂಕುಚಿತ ಭಾವ ನಮ್ಮಲ್ಲಿ ಮತ್ತು ನಮ್ಮನ್ನಾಳುವ ಜನರಲ್ಲಿ ನೆಲೆಯೂರಿದೆ! ಆ ಒಂದು ಹೊಲಸು ನಂಬಿಕೆಯೇ ವ್ಯವಸ್ಥೆಯನ್ನು ಕಂಗೆಡಿಸಿರುವುದು. ಈ ರೀತಿಯ ಅರಾಜಕತೆಗೆ ನಿದರ್ಶನ ಹುಡುಕಲು ಇತಿಹಾಸದ ಕಾಲಗರ್ಭವನ್ನೇನೂ ಹೊಕ್ಕಬೇಕಿಲ್ಲ, ಕರ್ನಾಟಕದ ನೆನ್ನೆ ಮೊನ್ನೆಯ ಹಾಳೆಗಳನ್ನು ತಿರುವಿ ಹಾಕಿದರೆ ತಿಳಿಯುತ್ತದೆ. ಅವುಗಳೇ ಯಡಿಯೂರಪ್ಪನವರನ್ನು ಲಿಂಗಾಯತರ ಮುಖ್ಯಮಂತ್ರಿಯನ್ನಾಗಿಸಿದ್ದು, ಭಾರತೀಯ ಜನತಾ ಪಾರ್ಟಿಯನ್ನು, ಹಿಂದೂಗಳ ನಂಬಿಕೆಗಳನ್ನು ಓಟುಗಳನಾಗಿಸಿಕೊಳ್ಳುವ ಹೀನ ಕೃತ್ಯಕ್ಕಿಳಿಸಿದ್ದು, ದೇವೇಗೌಡರನ್ನು ಒಕ್ಕಲಿಗರ ಸರ್ವೋಚ್ಚ ಪ್ರತಿನಿಧಿಯಾಗಿಸಿದ್ದು! ಕಾಂಗ್ರೇಸ್ ನಮ್ಮ ಸಮಾಜದಲ್ಲಿನ ಜಾತಿ ಸಮೀಕರಣಗಳನ್ನು ಬಿಡಿಸುತ್ತ ತನ್ನ ಬೇಳೆ ಬೇಯಿಸಿಕೊಂಡಿದ್ದು! ಗೋಹತ್ಯಾ ನಿಷೇಧದ ವಾಪಸಾತಿ, ಜಾತಿಯಾಧಾರಿತ ಮೀಸಲಾತಿಯ ಬಗ್ಗೆ ಎದ್ದ ಚರ್ಚೆಗಳು, ಬಲಪಂಥೀಯರು, ಎಡ ಪಂಥೀಯರು ಎಂಬ ಮತೀಯವಾದಗಳು ಹುಟ್ಟಿಕೊಂಡಿದ್ದು.

ಇಲ್ಲಿ ಗಮನಿಸಬೇಕಾದ ಒಂದೇ ಅಂಶ, ಇಷ್ಟೆಲ್ಲಾ ಮತೀಯವಾದ ಅಥವಾ ಅವ್ಯವಸ್ಥೆಗೆ ನಾಂದಿಯಾದದ್ದು ರಾಜಕೀಯ ಆಡಳಿತ ಎಂಬ ಸ್ವಾಮ್ಯ! ನನಗೆ ಇದನ್ನೆಲ್ಲಾ ನೋಡುವಾಗ ನಾವು ಎತ್ತ ಸಾಗುತ್ತಿದ್ದೇವೆ, ಮನುಷ್ಯತ್ವವನ್ನು ಮರೆತು, ತಮ್ಮ ಸ್ವಾರ್ಥ ಸಾಧನೆಗಾಗಿ ಬದುಕುವ ಅನಾಗರೀಕತೆಯ ಮುನ್ನೋಟವೇ ಈ ಮೇಲಾಟಗಳಾ ಎಂಬ ಅನುಮಾನ ಕಾಡುತ್ತದೆ. ಇಂತಹ ಚರ್ಚೆಗಳಿಗೆಲ್ಲಾ ಮುನ್ನುಡಿಯಾದದ್ದು ಹಿಂದುಳಿದ ಸಮುದಾಯವೊಂದರಿಂದ ಬಂದವನೊಬ್ಬ ಮುಖ್ಯಮಂತ್ರಿಗಾದಿಯೇರಿ ಕುಳಿತದ್ದು! ಆತ ಇನ್ನೆಲ್ಲಿ ತನ್ನ ಸಮುದಾಯದ ಏಳಿಗೆಗೆ ನಿಂತು ನಮ್ಮನ್ನೆಲ್ಲಾ ಕಡೆಗಣಿಸಿಬಿಡುತ್ತಾನೋ ಎಂಬ ಭಯ ಇಷ್ಟನ್ನೆಲ್ಲಾ ಮಾತನಾಡಿಸುತ್ತಿದೆ! ಬಲ ಪಂಥೀಯರು ಬಲಕ್ಕೂ, ಎಡ ಪಂಥೀಯರೂ ಎಡಕ್ಕೂ ತಿರುಗಿ ನಿಂತಿದ್ದಾರೆ, ಸಮಾನತೆ ಅನಾಥವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದೆ! ಅದಕ್ಕಾಗಿಯೇ ನಮ್ಮ ದೇಶ ಇನ್ನೂ ಮುಂದುವರೆಯುತ್ತಿರುವ ದೇಶ!

ನಾನು ಎಲ್ಲೋ ಓದಿದ ನೆನಪು, ವಿವೇಕಾನಂದರೊಮ್ಮೆ ಜಪಾನ್ ಗೆ ಹೋಗಿದ್ದರಂತೆ, ಆಗ ಅಲ್ಲಿಂದ ಭಾರತದ ಜನತೆಗೆ ಒಂದು ಪತ್ರ ಬರೆದರಂತೆ. ಅದರ ಸಾರಾಂಶ ಇಂತಿತ್ತು:

“ಜಪಾನ್ ದೇಶ ಬಹಳ ಸುಂದರವಾಗಿದೆ. ನಾನಿಲ್ಲಿ ಶ್ರಮ, ಉತ್ಸಾಹ ಮತ್ತು ನಿಷ್ಠೆಯ ಗಾಳಿಯನ್ನು ಉಸಿರಾಡುತ್ತಿದ್ದೇನೆ. ಇವರಿಗೆ ಭಾರತೀಯರೆಂದರೆ ಈಗಲೂ ಬಹಳ ಗೌರವ. ಬಹಳ ಹಿಂದೆಯೇ ವಿಜ್ಞಾನ, ಬೌದ್ಧಿಕತೆ, ಸನಾತನ ಸಂಸ್ಕೃತಿ ಮತ್ತು ನಡವಳಿಕೆಗಳಲ್ಲಿ ಔನ್ನತ್ಯವನ್ನು ಹೊಂದಿದವರು ಎಂದು ನಂಬಿದ್ದಾರೆ. ಅದಕ್ಕಾಗಿಯೇ ಭಾರತವೆಂದರೆ ಇವರಿಗೆ ಎಲ್ಲಿಲ್ಲದ ಆದರ ಮತ್ತು ಪ್ರೀತಿ. ಅದರೆ ಅವರಿಗೆ ತಿಳಿದಿಲ್ಲ ನೀವಿನ್ನೂ ಮಡಿ ಮೈಲಿಗೆ ಎಂಬ ಭ್ರಮೆಯಲ್ಲಿ ಇಲ್ಲದ ಕಂದಕಗಳನ್ನು ಸೃಷ್ಟಿಸಿಕೊಂಡು ಒದ್ದಾಡುತ್ತಿದ್ದೀರಿ ಎಂದು, ಅಭಿವೃದ್ಧಿಯನ್ನು ಕಾಲ ಕೆಳಗೆ ಹಾಕಿ ತುಳಿಯುತ್ತಿದ್ದೀರಿ ಎಂದು. ಉಣ್ಣುವ ಆಹಾರಕ್ಕೆ ಸಸ್ಯಾಹಾರ, ಮಾಂಸಾಹಾರ ಎಂದು ನೂರೆಂಟು ಸಲ ಯೋಚಿಸುತ್ತೀರಿ ಎಂದು. ಇವುಗಳೆಲ್ಲಾ ಅವರಿಗೆ ತಿಳಿಯುವ ಮುನ್ನ ಅವುಗಳ ಕಪಿಮುಷ್ಠಿಯಿಂದ ಹೊರಬನ್ನಿ, ಹಿಂದೂ ಧರ್ಮದ ನಿಜವಾದ ಮೌಲ್ಯಗಳನ್ನು ಅರಿತುಕೊಂಡು ಆ ಧರ್ಮಕ್ಕೆ ಹೆಮ್ಮೆಯೆನಿಸುವಂತೆ ಬದುಕಿ. ಇಲ್ಲದಿದ್ದರೆ ಕೇವಲ ಜಪಾನೀಯರ ಮುಂದಷ್ಟೇ ಅಲ್ಲ, ಜಗತ್ತಿನ ಮುಂದೆಯೇ ತಲೆ ತಗ್ಗಿಸಬೇಕಾದೀತು.”

ಇನ್ನೊಂದು ವೃತ್ತಾಂತ:

ತೇಜಸ್ವಿಯವರು ಮೂಡಿಗೆರೆಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರಂತೆ. ಆಗ ನಾಲ್ಕೈದು ರಿಸರ್ವ್ ಪೋಲೀಸ್ ವ್ಯಾನ್ಗಳು ಹೋದವಂತೆ. ಅವರಿಗೆ ಇದೇನಿದು ಪೋಲೀಸ್ ವ್ಯಾನ್ಗಳು ಹೋಗುತ್ತಿವೆಯಲ್ಲ ಎಂದು ಆಶ್ಚರ್ಯವಾಯ್ತಂತೆ. ಹಾಗೇ ಮಟನ್ ಅಂಗಡಿಯಲ್ಲಿ ಮಟನ್ ಕೊಂಡುಕೊಂಡು ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಅಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮುಸಲ್ಮಾನನೊಬ್ಬ ಸಿಕ್ಕನಂತೆ. ಅವನನ್ನು ಇವರು ಕೇಳಿದ್ದಾರೆ, ಈ ವ್ಯಾನ್ ಗಳೆಲ್ಲಾ ಊರಿಗೆ ಬಂದದ್ದು ಯಾಕೆ ಎಂದು. ಆಗ ಅವನು, ’ಇವತ್ತು ನಮ್ಮ ಹಬ್ಬ ಅಲ್ವಾ? ಅದಕ್ಕೆ ಸೆಕ್ಯೂರಿಟಿಗೆ ಬಂದಿದ್ದಾರೆ’ ಎಂದನಂತೆ. ಅದಕ್ಕೆ ಇವರ ಉತ್ತರ, “ಬೋಳೀ ಮಗನೆ ಪೋಲೀಸ್ ಇಟ್ಕೊಂಡ್ ಹಬ್ಬ ಮಾಡ್ಬೇಕೇನೋ? ಮಾನ ಏನಾದ್ರೂ ಇದೆಯೇನೋ ನಿಮ್ಗೆ” ಅಂದರಂತೆ. ಎಷ್ಟು ಸರಳವಾದ ಸತ್ಯವಲ್ಲವೇ? ಸಾಮರಸ್ಯ, ಸಮಾನತೆಯಿಂದ ಹಬ್ಬ ಮಾಡುವುದನ್ನು ಬಿಟ್ಟು. ಧರ್ಮ ಧರ್ಮಗಳ ನಡುವೆ ಜಗಳ ಮಾಡಿಕೊಂಡು, ಸಾಮರಸ್ಯ ಹಾಳು ಮಾಡಿಕೊಂಡು ಅಮಾನುಷರಾಗಿ ಬದುಕುವ ಅಗತ್ಯವಿದೆಯೇ?

ಈ ಎರಡೂ ವೃತ್ತಾಂತಗಳು ಈ ಲೇಖನದಲ್ಲಿ ಬಹಳ ಪ್ರಸ್ತುತವೇನೋ. ನನಗೆ ಈ ಬಲ ಪಂಥೀಯರು ಮತ್ತು ಎಡ ಪಂಥೀಯರು ಎಂಬ ಕಲ್ಪನೆಯೇ ವಾಕರಿಕೆ ತರಿಸುವಂತದ್ದು. ನಿಜಕ್ಕೂ ಇವುಗಳ ನಿಜ ಅರ್ಥವೂ ನನಗೆ ತಿಳಿಯುತ್ತಿಲ್ಲ. ಮನುಷ್ಯ ಮನುಷ್ಯತ್ವ ಕಳೆದುಕೊಂಡು ಯಾಕೆ ಈ ಮತೀಯವಾದಗಳ ಬಾಲ ಹಿಡಿಯುತ್ತಾನೋ ಗೊತ್ತಿಲ್ಲ. ಎಲ್ಲರಿಗೂ ಸಮಾನತೆಯೂ, ಮನುಷ್ಯ ಪಥವೂ ಒಂದು ಪ್ರಬುದ್ಧ ಆಯ್ಕೆ ಎಂದು ಯಾಕೆ ಅನ್ನಿಸುವುದಿಲ್ಲವೋ ಗೊತ್ತಿಲ್ಲ.

ಇನ್ನು ಮೀಸಲಾತಿ ಮತ್ತು ಜಾತಿ ವ್ಯವಸ್ಥೆಗಳು ಇಂದಿಗೂ ಜೀವಂತ ಎಂಬ ವಿಷಯಗಳು ಅವೈಜ್ಞಾನಿಕ ಮತ್ತು ಈಗ ಅವುಗಳನ್ನು ತೆರವುಗೊಳಿಸಬಹುದು ಎನ್ನುವವರು ಈಗಲೂ ಹಳ್ಳೀಗಾಡು ಪ್ರದೇಶಗಳಿಗೆ ಭೇಟಿ ಕೊಡಬೇಕು. ಮೇಲೆ ಎಲ್ಲವೂ ಸರಿಯಿದ್ದಂತೆನಿಸುತ್ತದೆ ಆದರೆ ಗರ್ಭದಲ್ಲಿ ಯಾವುದೂ ಸಮವಾಗಿಲ್ಲ. ಮುಂದುವರೆಯುವವರು ಮುಂದುವರೆಯುತ್ತಲೇ ಇದ್ದಾರೆ, ಹಿಂದುಳಿಯುವವರು ಹಿಂದುಳಿಯುತ್ತಲೇ ಇದ್ದಾರೆ. ಶೈಕ್ಷಣಿಕ ಮತ್ತು ಆರ್ಥಿಕ ಕಂದಕಗಳು ಹಾಗೆಯೇ ಇವೆ. ಹೊಟ್ಟೆ ಹಸಿದವರಿಗೆಲ್ಲರಿಗೂ ಹೊಟ್ಟೆ ತುಂಬುವಷ್ಟು ಕೂಳು ಸಿಗುತ್ತಿಲ್ಲ. ಅಂತಹ ಅಸಮಾನತೆಗಳು ತೊಲಗುವವರೆಗೂ ಮೀಸಲಾತಿಗಳು ಅಗತ್ಯವೇನೋ ಎನ್ನುವ ಭಾವನೆ ನನ್ನದು.

ಗೋಹತ್ಯಾ ನಿಷೇಧ ಎಂಬುದು ನನ್ನ ಕಣ್ಣಿಗೆ ಒಂದು ಬೇಸ್ಲೆಸ್ ಆರ್ಗ್ಯುಮೆಂಟ್ ಅನ್ನಿಸುತ್ತದೆ! ಹಿಂದುಗಳೆಲ್ಲರಿಗೂ ಹಸು ಕಾಮದೇನುವಂತೆ ಕಂಡರೂ “ಹಸುವಿನ ಮಾಂಸ”ವನ್ನು ಆಹಾರವಾಗಿ ಉಪಯೋಗಿಸುವ ಸಾಕಷ್ಟು ಮಂದಿ ಹಿಂದುಗಳಲ್ಲೂ ಇದ್ದಾರೆ, ಕೇವಲ ಮುಸ್ಲೀಮರಷ್ಟೇ ಅಲ್ಲ. ಅಲ್ಲದೆ ವಯಸ್ಸಾದ ಹಸುಗಳು ಸತ್ತ ನಂತರ ಅವುಗಳ ವಿಲೇವಾರಿ ಎಷ್ಟು ಕಷ್ಟ ಎಂಬುದನ್ನು ಹೈನುಗಾರಿಕೆ ಮಾಡುವವನನ್ನು ಕೇಳಬೇಕು. ಅದು ಬಿಟ್ಟು ಹಸುವನ್ನು ಕಾಮದೇನು ಎಂದೆಲ್ಲ ಹೇಳಿ, ಮತ್ತೊಬ್ಬರ ಆಹಾರ ಪದ್ದತಿಗಳನ್ನು ಪ್ರಶ್ನಿಸುವುದು ಎಷ್ಟರಮಟ್ಟಿಗೆ ಸರಿ? ನಿಮಗೆ ಒಂದು ಸತ್ಯ ಹೇಳುತ್ತೇನೆ, ಹಸುವಿಗೆ ಕರುವನ್ನು ಈಯುವ ಶಕ್ತಿ ಇಲ್ಲ ಎಂದಾಗ, ಹಸುವನ್ನೇ ಕಸಾಯಿಕಾನೆಗೆ ಮಾರಿಬಿಡುತ್ತಾರೆ. ಇನ್ನೂ ಮುದಿ ಎತ್ತು ಮತ್ತು ಹಸುಗಳನ್ನು ಸಾಕುತ್ತಾರೆಯೇ ಜನ? ಇದು ನಾನು ಕಣ್ಣಾರೆ ಕಂಡ ದೃಶ್ಯಗಳು. ನಾನು ಯಾಕೆ ಹೀಗೆ ಮಾಡುತ್ತೀರಿ ಎಂದಾಗ, ಆತ ಕೊಟ್ಟ ಉತ್ತರವೇನು ಗೊತ್ತೆ? “ಲಾಭ ತರದ ಹಸು ಮತ್ತು ಎತ್ತುಗಳನ್ನು ಸಾಕಿ ಏನು ತಾನೆ ಮಾಡುವುದು. ಅವುಗಳಿಗೆ ತಿನ್ನಲು ಒದಗಿಸುವ ಮೇವು, ಹುಲ್ಲು ಎಲ್ಲಾ ಬಿಟ್ಟಿ ಬರುತ್ತವೆಯೇ? ಸಾಯುವ ಜನಗಳಿಗೇ ಹೂಳಲು ಜಾಗವಿಲ್ಲ, ಇನ್ನು ದನಗಳನ್ನು ಎಲ್ಲಿ ಹೂಳುವುದು?”. ಇಲ್ಲಿ ಆಹಾರ ಪದ್ದತಿಗಿಂತ ಹೆಚ್ಚಿನ ಸಮಸ್ಯೆ ವಿಲೇವಾರಿಯದು. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಗೋಹತ್ಯಾ ಕಾಯ್ದೆ ಒಂದು ಚರ್ಚೆಯ ವಸ್ತು ಎಂದೇ ನನಗನ್ನಿಸುವುದಿಲ್ಲ.

ಕಡೆಯದಾಗಿ, ಕರ್ನಾಟಕದ ಜನರ ವಿಶ್ವಾಸ ಪಡೆದು ಗದ್ದುಗೆಯೇರಿರುವ ಸಿದ್ದರಾಮಯ್ಯನವರೂ ಎಲ್ಲರಂತೆಯೇ ಸ್ವಜನ ಪಕ್ಷಪಾತ ಮತ್ತು ತನ್ನ ಕುಟುಂಬದವರ ಉದ್ದಾರಕ್ಕೆ ನಿಂತರೆ ಅವರು ರಾಜ್ಯ ರಾಜಕೀಯದ ದುರಂತ ನಾಯಕರ ಸಾಲಿಗೆ ಸೇರುವುದು ಶತ ಸಿದ್ಧ. ಆದರೆ ಅದಕ್ಕೆ ಮುಂಚೆಯೇ ಅವರು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಜಾರಿಗೆ ತಂದ ೧ ರೂನಂತೆ ೩೦ ಕೆ.ಜಿ. ಅಕ್ಕಿ ಮತ್ತು ಮುಂತಾದ ಜನಪರ ಕಾರ್ಯಕ್ರಮಗಳನ್ನು ಅನಗತ್ಯವಾಗಿ ಟೀಕಿಸುವುದು ತರವಲ್ಲ. ಪ್ರಜ್ಞಾವಂತರಾಗಿ ಒಮ್ಮೆ ನೀವೇ ಯೋಚಿಸಿ ನೋಡಿ, ನಮಗೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ನಮಗಿದ್ದ ಆಯ್ಕೆಗಳಾದರೂ ಎಷ್ಟು? ಕಾಂಗ್ರೇಸ್ ಅಲ್ಲದೆ ಮತ್ತೆ ಅಸ್ಥಿರ ಮತ್ತು ಕರ್ನಾಟಕದ ಜನರ ಸ್ವಾಭಿಮಾನವನ್ನು ಗಾಳಿಗೆ ತೂರಿದ ಬಿ.ಜೆ.ಪಿ ಯನ್ನೇ ಚುನಾಯಿಸಲು ಸಾಧ್ಯವಿತ್ತೇ? (ನನ್ನ ಈ ನಿಲುವುಗಳು ಕೇಂದ್ರದಲ್ಲಿನ ಕಾಂಗ್ರೇಸ್ ಸರ್ಕಾರದ ಭ್ರಷ್ಟ ಆಡಳಿತವನ್ನು ಸಮರ್ಥಿಸುವುದಿಲ್ಲ!) ಕಾಂಗ್ರೇಸ್ ಗೆ ಅವಕಾಶ ಕೊಟ್ಟಾಗಿದೆ. ಈಗಲೇ ಅದು ಸರಿಯಿಲ್ಲ, ಹಾಗೆ ಮಾಡಿ ಬಿಡುತ್ತಾರೆ, ಹೀಗೆ ಮಾಡಿಬಿಡುತ್ತಾರೆ, ಎಂದು ಬೊಂಬಡ ಬಜಾಯಿಸುವುದಕ್ಕಿಂತ ಅವರು ತಪ್ಪು ಮಾಡಿದಾಗ ಪ್ರತಿಭಟಿಸಿ, ಬುದ್ಧಿ ಹೇಳುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.


ಕೊನೆ ಮಾತು: ಮೊದಲನೆಯದಾಗಿ, ನಾನು ಮೊಟ್ಟೆಯನ್ನಷ್ಟೇ ತಿನ್ನುವ ಶುದ್ಧ ಸಸ್ಯಾಹಾರಿ! ಮಾಂಸ ತಿನ್ನುವುದಿಲ್ಲ. ನಾನು ಕಾಂಗ್ರೇಸ್ ವಾದಿಯಂತೂ ಅಲ್ಲವೇ ಅಲ್ಲ. ನಿಜ ಹೇಳಬೇಕೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಓಟನ್ನೂ ಸಹ ನಾನು ಕಾಂಗ್ರೇಸ್ ಗೆ ಹಾಕಿಲ್ಲ. ಆದರೆ ಟೀಕಿಸಲೇಬೇಕು ಎಂಬ ಕಾರಣಕ್ಕೆ ಶೇ. ೭೦ ರಷ್ಟು ಮತದಾರರಿಂದ ಚುನಾಯಿತರಾದವರನ್ನು ಮತ್ತು ಅವರ ಜನಪರ ಕಾರ್ಯಕ್ರಮಗಳನ್ನೂ ಟೀಕಿಸುವುದಿಲ್ಲ! ನನಗೆ ಯಾರ ಮೇಲೂ ಪೂರ್ವಾಗ್ರಹಗಳಿಲ್ಲ. ಸರಿಯೆನಿಸಿದ್ದಷ್ಟನ್ನೇ ಹೇಳುತ್ತೇನೆ. ಬದುಕಿದ್ದನ್ನೇ ಬರೆಯುತ್ತೇನೆ. “ಮನುಜ ಮತ, ವಿಶ್ವ ಪಥ” ಇದು ನನ್ನ ಹಾದಿ.

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Tuesday, 28 May 2013

ನನ್ನ ದೇವರು!


ದೇವರು ಹುಟ್ಟುತ್ತಾನೆ
ನನ್ನೊಳಗೂ, ನಿನ್ನೊಳಗೂ,
ನಮ್ಮೆಲ್ಲರೊಳಗೂ
ದೇವರು ಹುಟ್ಟುತ್ತಾನೆ!
ಅವರವರ
ವ್ಯಾಖ್ಯಾನಗಳವರವರಿಗೆ!
ಒಬ್ಬರಿಗೆ ದೇವರು
ಗುಡಿಯಳೊಗವಿತು ಕುಳಿತರೆ,
ಮತ್ತೊಬ್ಬರಿಗೆ
ಮಸೀದಿಯ ನಾಲ್ಕು
ಗೋಡೆಗಳೊಳಗೆ ಜೀವಂತ!
ಮಗದೊಬ್ಬರಿಗೆ
ದೇವಾತ್ಮ ಶಿಲುಬೆಗೇರಿ
ಚರ್ಚಿನೊಳು ಬಂಧಿ!
ನನ್ನ ದೇವರು:
ಮಸೀದಿಯೊಳು ನೆಲೆ ನಿಂತ
ಯೇಸುವಿನ ಹೃದಯದೊಳು
ಶ್ರೀ ಕೃಷ್ಣ ತಾನಾಗಿದ್ದಾನೆ!
ಅಲ್ಲಿ ನಿಲ್ಲುವುದಷ್ಟೇ ಅಲ್ಲ
ನನ್ನ ಆತ್ಮನೊಳಗೂ
ಬೆರೆತುಬಿಟ್ಟಿದ್ದಾನೆ!
ನನ್ನನ್ನೀಗ ಕಾಡುವ ಪ್ರಶ್ನೆ:
ನಾನ್ಯಾವ ಧರ್ಮ?
ನನ್ನ ದೇವರಿಗೇನು ಹೆಸರು?

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ