ಈ ಮೂರು ವಿಷಯಗಳು ಎಲ್ಲಿ ಬೆರೆತು ನಿಲ್ಲುತ್ತವೋ
ಅಲ್ಲಿ ದುರ್ನಾತ ಬೀರುವ ಕಶ್ಮಲಗಳ ಕೊಂಪೆ ಜೀವ ತಳೆಯಬಹುದು ಎಂಬುದು ಇತ್ತೀಚೆಗೆ ನನ್ನನ್ನು ಕಾಡುತ್ತಿರುವ
ಸತ್ಯ! ನನ್ನಲ್ಲಿ ಈ ಮೂರೂ ವಿಷಯಗಳ ಬಗ್ಗೆಯೂ ಸಂಪೂರ್ಣ ಸ್ಪಷ್ಟತೆಯಿದ್ದರೂ ನಾನು ಅವುಗಳ ಬಗ್ಗೆ ಮಾತನಾಡುವುದು
ತೀರಾ ವಿರಳ ಏಕೆಂದರೆ ಈ ವಿಷಯಗಳು ನಮ್ಮ ಭಾರತೀಯರ ಮೇಲೆ ಮೂಡಿಸಿರುವ ಛಾಯೆ ಗಾಢವಾದದ್ದು! ಒಬ್ಬರು
ಮಾತನಾಡುವುದರಿಂದ ಇಲ್ಲಿ ಏನೂ ಬದಲಾಗುವುದಿಲ್ಲ ಮತ್ತು ಯಾರೂ ತಮ್ಮ ಪೂರ್ವಾಗ್ರಹಗಳನ್ನು, ಆ ಮಾತುಗಳನ್ನು
ಕೇಳಿ ಬಲಿಕೊಡುವುದಿಲ್ಲ. ಅಷ್ಟಿದ್ದಿದ್ದರೆ ಬಸವಾದಿ ಬುದ್ಧ ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ”
ಎಂದು ಹೇಳಿದಾಗಲೇ ಭಾರತ ಸಮಾನತೆಯ ಶಾಂತಿಯ ತೋಟವಾಗಬಹುದಿತ್ತು. ಆದರೆ ಈಗಲೂ ಅಸಮಾನತೆ, ಜಾತೀಯತೆ,
ಧರ್ಮಾಂಧತೆಗಳು ದೇಶವನ್ನು ಆಳುತ್ತಿವೆ. ಇವುಗಳೆಲ್ಲವನ್ನೂ ತನ್ನ ಓಟ್ ಬ್ಯಾಂಕ್ ಮಾಡಿಕೊಂಡು ದೇಶವನ್ನು
ಇನ್ನಷ್ಟು ಕುಲಗೆಡಿಸುತ್ತಿರುವುದು ಹೊಲಸು ರಾಜಕೀಯ!
ಈ ಬಗ್ಗೆ ಮಾತಾಡುವುದು ತೀರಾ ವಿರಳ
ಎಂದವನು ಈಗ ಯಾಕೆ ಇಂತಹದ್ದೊಂದು ಲೇಖನ ಬರೆಯುತ್ತಿದ್ದಾನೆ ಎಂದು ಕೆಲವರು ಮೂಗು ಮುರಿಯಬಹುದು, ಆದರೆ
ಕರ್ನಾಟಕದಲ್ಲಿ ಕಳೆದ ತಿಂಗಳಷ್ಟೇ ಆದ ರಾಜಕೀಯ ಬದಲವಾಣೆಗಳಿಂದ ಉತ್ತೇಜಿತಗೊಂಡೋ, ಹತಾಶೆಗೊಂಡೋ ಪುಂಖಾನುಪುಂಖವಾಗಿ
ಜನ ಮಾತನಾಡುತ್ತಿರುವುದು ನನ್ನನ್ನು ಕೆರಳಿಸಿತು. ಅದಕ್ಕಾಗಿಯೇ ಈ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ
ಮೌನ ಮುರಿಯುತ್ತಿದ್ದೇನೆ.
ರಾಜಕೀಯ ಸ್ಥಿತ್ಯಂತರ ಇಷ್ಟೆಲ್ಲಾ ವಿಷಯಗಳಿಗೆ
ಜೀವ ನೀಡಬಹುದೇ ಎಂದರೆ, ಹೌದು ಜೀವ ನೀಡಬಹುದು! ಏಕೆಂದರೆ ರಾಜಕೀಯ ಸ್ಥಾನ ಮಾನ ಎಂಬುದು ಒಂದು ಸ್ವಾಮ್ಯ,
ಅದನ್ನು ಪಡೆದವರು ಹೇಗೆ ಬೇಕಾದರೂ ದಬ್ಬಾಳಿಕೆ ನಡೆಸಬಹುದು, ತಮ್ಮ ಅಭಿಪ್ರಾಯಗಳನ್ನು ಜನ ಸಾಮಾನ್ಯರ
ಮೇಲೆ ಹೇರಬಹುದು, ತಮ್ಮನ್ನು ನಂಬಿ ಕೂತ ಸಮುದಾಯಗಳ ಹಿತಾಸಕ್ತಿಯನ್ನು ಕಾಯಬಹುದು ಎಂಬ ಸಂಕುಚಿತ ಭಾವ
ನಮ್ಮಲ್ಲಿ ಮತ್ತು ನಮ್ಮನ್ನಾಳುವ ಜನರಲ್ಲಿ ನೆಲೆಯೂರಿದೆ! ಆ ಒಂದು ಹೊಲಸು ನಂಬಿಕೆಯೇ ವ್ಯವಸ್ಥೆಯನ್ನು
ಕಂಗೆಡಿಸಿರುವುದು. ಈ ರೀತಿಯ ಅರಾಜಕತೆಗೆ ನಿದರ್ಶನ ಹುಡುಕಲು ಇತಿಹಾಸದ ಕಾಲಗರ್ಭವನ್ನೇನೂ ಹೊಕ್ಕಬೇಕಿಲ್ಲ,
ಕರ್ನಾಟಕದ ನೆನ್ನೆ ಮೊನ್ನೆಯ ಹಾಳೆಗಳನ್ನು ತಿರುವಿ ಹಾಕಿದರೆ ತಿಳಿಯುತ್ತದೆ. ಅವುಗಳೇ ಯಡಿಯೂರಪ್ಪನವರನ್ನು
ಲಿಂಗಾಯತರ ಮುಖ್ಯಮಂತ್ರಿಯನ್ನಾಗಿಸಿದ್ದು, ಭಾರತೀಯ ಜನತಾ ಪಾರ್ಟಿಯನ್ನು, ಹಿಂದೂಗಳ ನಂಬಿಕೆಗಳನ್ನು
ಓಟುಗಳನಾಗಿಸಿಕೊಳ್ಳುವ ಹೀನ ಕೃತ್ಯಕ್ಕಿಳಿಸಿದ್ದು, ದೇವೇಗೌಡರನ್ನು ಒಕ್ಕಲಿಗರ ಸರ್ವೋಚ್ಚ ಪ್ರತಿನಿಧಿಯಾಗಿಸಿದ್ದು!
ಕಾಂಗ್ರೇಸ್ ನಮ್ಮ ಸಮಾಜದಲ್ಲಿನ ಜಾತಿ ಸಮೀಕರಣಗಳನ್ನು ಬಿಡಿಸುತ್ತ ತನ್ನ ಬೇಳೆ ಬೇಯಿಸಿಕೊಂಡಿದ್ದು!
ಗೋಹತ್ಯಾ ನಿಷೇಧದ ವಾಪಸಾತಿ, ಜಾತಿಯಾಧಾರಿತ ಮೀಸಲಾತಿಯ ಬಗ್ಗೆ ಎದ್ದ ಚರ್ಚೆಗಳು, ಬಲಪಂಥೀಯರು, ಎಡ
ಪಂಥೀಯರು ಎಂಬ ಮತೀಯವಾದಗಳು ಹುಟ್ಟಿಕೊಂಡಿದ್ದು.
ಇಲ್ಲಿ ಗಮನಿಸಬೇಕಾದ ಒಂದೇ ಅಂಶ, ಇಷ್ಟೆಲ್ಲಾ
ಮತೀಯವಾದ ಅಥವಾ ಅವ್ಯವಸ್ಥೆಗೆ ನಾಂದಿಯಾದದ್ದು ರಾಜಕೀಯ ಆಡಳಿತ ಎಂಬ ಸ್ವಾಮ್ಯ! ನನಗೆ ಇದನ್ನೆಲ್ಲಾ
ನೋಡುವಾಗ ನಾವು ಎತ್ತ ಸಾಗುತ್ತಿದ್ದೇವೆ, ಮನುಷ್ಯತ್ವವನ್ನು ಮರೆತು, ತಮ್ಮ ಸ್ವಾರ್ಥ ಸಾಧನೆಗಾಗಿ ಬದುಕುವ
ಅನಾಗರೀಕತೆಯ ಮುನ್ನೋಟವೇ ಈ ಮೇಲಾಟಗಳಾ ಎಂಬ ಅನುಮಾನ ಕಾಡುತ್ತದೆ. ಇಂತಹ ಚರ್ಚೆಗಳಿಗೆಲ್ಲಾ ಮುನ್ನುಡಿಯಾದದ್ದು
ಹಿಂದುಳಿದ ಸಮುದಾಯವೊಂದರಿಂದ ಬಂದವನೊಬ್ಬ ಮುಖ್ಯಮಂತ್ರಿಗಾದಿಯೇರಿ ಕುಳಿತದ್ದು! ಆತ ಇನ್ನೆಲ್ಲಿ ತನ್ನ
ಸಮುದಾಯದ ಏಳಿಗೆಗೆ ನಿಂತು ನಮ್ಮನ್ನೆಲ್ಲಾ ಕಡೆಗಣಿಸಿಬಿಡುತ್ತಾನೋ ಎಂಬ ಭಯ ಇಷ್ಟನ್ನೆಲ್ಲಾ ಮಾತನಾಡಿಸುತ್ತಿದೆ!
ಬಲ ಪಂಥೀಯರು ಬಲಕ್ಕೂ, ಎಡ ಪಂಥೀಯರೂ ಎಡಕ್ಕೂ ತಿರುಗಿ ನಿಂತಿದ್ದಾರೆ, ಸಮಾನತೆ ಅನಾಥವಾಗಿ ರಸ್ತೆಯಲ್ಲಿ
ಬಿದ್ದು ಒದ್ದಾಡುತ್ತಿದೆ! ಅದಕ್ಕಾಗಿಯೇ ನಮ್ಮ ದೇಶ ಇನ್ನೂ ಮುಂದುವರೆಯುತ್ತಿರುವ ದೇಶ!
ನಾನು ಎಲ್ಲೋ ಓದಿದ ನೆನಪು, ವಿವೇಕಾನಂದರೊಮ್ಮೆ
ಜಪಾನ್ ಗೆ ಹೋಗಿದ್ದರಂತೆ, ಆಗ ಅಲ್ಲಿಂದ ಭಾರತದ ಜನತೆಗೆ ಒಂದು ಪತ್ರ ಬರೆದರಂತೆ. ಅದರ ಸಾರಾಂಶ ಇಂತಿತ್ತು:
“ಜಪಾನ್ ದೇಶ ಬಹಳ ಸುಂದರವಾಗಿದೆ. ನಾನಿಲ್ಲಿ
ಶ್ರಮ, ಉತ್ಸಾಹ ಮತ್ತು ನಿಷ್ಠೆಯ ಗಾಳಿಯನ್ನು ಉಸಿರಾಡುತ್ತಿದ್ದೇನೆ. ಇವರಿಗೆ ಭಾರತೀಯರೆಂದರೆ ಈಗಲೂ
ಬಹಳ ಗೌರವ. ಬಹಳ ಹಿಂದೆಯೇ ವಿಜ್ಞಾನ, ಬೌದ್ಧಿಕತೆ, ಸನಾತನ ಸಂಸ್ಕೃತಿ ಮತ್ತು ನಡವಳಿಕೆಗಳಲ್ಲಿ ಔನ್ನತ್ಯವನ್ನು
ಹೊಂದಿದವರು ಎಂದು ನಂಬಿದ್ದಾರೆ. ಅದಕ್ಕಾಗಿಯೇ ಭಾರತವೆಂದರೆ ಇವರಿಗೆ ಎಲ್ಲಿಲ್ಲದ ಆದರ ಮತ್ತು ಪ್ರೀತಿ.
ಅದರೆ ಅವರಿಗೆ ತಿಳಿದಿಲ್ಲ ನೀವಿನ್ನೂ ಮಡಿ ಮೈಲಿಗೆ ಎಂಬ ಭ್ರಮೆಯಲ್ಲಿ ಇಲ್ಲದ ಕಂದಕಗಳನ್ನು ಸೃಷ್ಟಿಸಿಕೊಂಡು
ಒದ್ದಾಡುತ್ತಿದ್ದೀರಿ ಎಂದು, ಅಭಿವೃದ್ಧಿಯನ್ನು ಕಾಲ ಕೆಳಗೆ ಹಾಕಿ ತುಳಿಯುತ್ತಿದ್ದೀರಿ ಎಂದು. ಉಣ್ಣುವ
ಆಹಾರಕ್ಕೆ ಸಸ್ಯಾಹಾರ, ಮಾಂಸಾಹಾರ ಎಂದು ನೂರೆಂಟು ಸಲ ಯೋಚಿಸುತ್ತೀರಿ ಎಂದು. ಇವುಗಳೆಲ್ಲಾ ಅವರಿಗೆ
ತಿಳಿಯುವ ಮುನ್ನ ಅವುಗಳ ಕಪಿಮುಷ್ಠಿಯಿಂದ ಹೊರಬನ್ನಿ, ಹಿಂದೂ ಧರ್ಮದ ನಿಜವಾದ ಮೌಲ್ಯಗಳನ್ನು ಅರಿತುಕೊಂಡು
ಆ ಧರ್ಮಕ್ಕೆ ಹೆಮ್ಮೆಯೆನಿಸುವಂತೆ ಬದುಕಿ. ಇಲ್ಲದಿದ್ದರೆ ಕೇವಲ ಜಪಾನೀಯರ ಮುಂದಷ್ಟೇ ಅಲ್ಲ, ಜಗತ್ತಿನ
ಮುಂದೆಯೇ ತಲೆ ತಗ್ಗಿಸಬೇಕಾದೀತು.”
ಇನ್ನೊಂದು ವೃತ್ತಾಂತ:
ತೇಜಸ್ವಿಯವರು ಮೂಡಿಗೆರೆಯ ಬೀದಿಯಲ್ಲಿ
ನಡೆದುಕೊಂಡು ಹೋಗುತ್ತಿದ್ದರಂತೆ. ಆಗ ನಾಲ್ಕೈದು ರಿಸರ್ವ್ ಪೋಲೀಸ್ ವ್ಯಾನ್ಗಳು ಹೋದವಂತೆ. ಅವರಿಗೆ
ಇದೇನಿದು ಪೋಲೀಸ್ ವ್ಯಾನ್ಗಳು ಹೋಗುತ್ತಿವೆಯಲ್ಲ ಎಂದು ಆಶ್ಚರ್ಯವಾಯ್ತಂತೆ. ಹಾಗೇ ಮಟನ್ ಅಂಗಡಿಯಲ್ಲಿ
ಮಟನ್ ಕೊಂಡುಕೊಂಡು ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಅಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ
ಮುಸಲ್ಮಾನನೊಬ್ಬ ಸಿಕ್ಕನಂತೆ. ಅವನನ್ನು ಇವರು ಕೇಳಿದ್ದಾರೆ, ಈ ವ್ಯಾನ್ ಗಳೆಲ್ಲಾ ಊರಿಗೆ ಬಂದದ್ದು
ಯಾಕೆ ಎಂದು. ಆಗ ಅವನು, ’ಇವತ್ತು ನಮ್ಮ ಹಬ್ಬ ಅಲ್ವಾ? ಅದಕ್ಕೆ ಸೆಕ್ಯೂರಿಟಿಗೆ ಬಂದಿದ್ದಾರೆ’ ಎಂದನಂತೆ.
ಅದಕ್ಕೆ ಇವರ ಉತ್ತರ, “ಬೋಳೀ ಮಗನೆ ಪೋಲೀಸ್ ಇಟ್ಕೊಂಡ್ ಹಬ್ಬ ಮಾಡ್ಬೇಕೇನೋ? ಮಾನ ಏನಾದ್ರೂ ಇದೆಯೇನೋ
ನಿಮ್ಗೆ” ಅಂದರಂತೆ. ಎಷ್ಟು ಸರಳವಾದ ಸತ್ಯವಲ್ಲವೇ? ಸಾಮರಸ್ಯ, ಸಮಾನತೆಯಿಂದ ಹಬ್ಬ ಮಾಡುವುದನ್ನು ಬಿಟ್ಟು.
ಧರ್ಮ ಧರ್ಮಗಳ ನಡುವೆ ಜಗಳ ಮಾಡಿಕೊಂಡು, ಸಾಮರಸ್ಯ ಹಾಳು ಮಾಡಿಕೊಂಡು ಅಮಾನುಷರಾಗಿ ಬದುಕುವ ಅಗತ್ಯವಿದೆಯೇ?
ಈ ಎರಡೂ ವೃತ್ತಾಂತಗಳು ಈ ಲೇಖನದಲ್ಲಿ
ಬಹಳ ಪ್ರಸ್ತುತವೇನೋ. ನನಗೆ ಈ ಬಲ ಪಂಥೀಯರು ಮತ್ತು ಎಡ ಪಂಥೀಯರು ಎಂಬ ಕಲ್ಪನೆಯೇ ವಾಕರಿಕೆ ತರಿಸುವಂತದ್ದು.
ನಿಜಕ್ಕೂ ಇವುಗಳ ನಿಜ ಅರ್ಥವೂ ನನಗೆ ತಿಳಿಯುತ್ತಿಲ್ಲ. ಮನುಷ್ಯ ಮನುಷ್ಯತ್ವ ಕಳೆದುಕೊಂಡು ಯಾಕೆ ಈ
ಮತೀಯವಾದಗಳ ಬಾಲ ಹಿಡಿಯುತ್ತಾನೋ ಗೊತ್ತಿಲ್ಲ. ಎಲ್ಲರಿಗೂ ಸಮಾನತೆಯೂ, ಮನುಷ್ಯ ಪಥವೂ ಒಂದು ಪ್ರಬುದ್ಧ
ಆಯ್ಕೆ ಎಂದು ಯಾಕೆ ಅನ್ನಿಸುವುದಿಲ್ಲವೋ ಗೊತ್ತಿಲ್ಲ.
ಇನ್ನು ಮೀಸಲಾತಿ ಮತ್ತು ಜಾತಿ ವ್ಯವಸ್ಥೆಗಳು
ಇಂದಿಗೂ ಜೀವಂತ ಎಂಬ ವಿಷಯಗಳು ಅವೈಜ್ಞಾನಿಕ ಮತ್ತು ಈಗ ಅವುಗಳನ್ನು ತೆರವುಗೊಳಿಸಬಹುದು ಎನ್ನುವವರು
ಈಗಲೂ ಹಳ್ಳೀಗಾಡು ಪ್ರದೇಶಗಳಿಗೆ ಭೇಟಿ ಕೊಡಬೇಕು. ಮೇಲೆ ಎಲ್ಲವೂ ಸರಿಯಿದ್ದಂತೆನಿಸುತ್ತದೆ ಆದರೆ ಗರ್ಭದಲ್ಲಿ
ಯಾವುದೂ ಸಮವಾಗಿಲ್ಲ. ಮುಂದುವರೆಯುವವರು ಮುಂದುವರೆಯುತ್ತಲೇ ಇದ್ದಾರೆ, ಹಿಂದುಳಿಯುವವರು ಹಿಂದುಳಿಯುತ್ತಲೇ
ಇದ್ದಾರೆ. ಶೈಕ್ಷಣಿಕ ಮತ್ತು ಆರ್ಥಿಕ ಕಂದಕಗಳು ಹಾಗೆಯೇ ಇವೆ. ಹೊಟ್ಟೆ ಹಸಿದವರಿಗೆಲ್ಲರಿಗೂ ಹೊಟ್ಟೆ
ತುಂಬುವಷ್ಟು ಕೂಳು ಸಿಗುತ್ತಿಲ್ಲ. ಅಂತಹ ಅಸಮಾನತೆಗಳು ತೊಲಗುವವರೆಗೂ ಮೀಸಲಾತಿಗಳು ಅಗತ್ಯವೇನೋ ಎನ್ನುವ
ಭಾವನೆ ನನ್ನದು.
ಗೋಹತ್ಯಾ ನಿಷೇಧ ಎಂಬುದು ನನ್ನ ಕಣ್ಣಿಗೆ
ಒಂದು ಬೇಸ್ಲೆಸ್ ಆರ್ಗ್ಯುಮೆಂಟ್ ಅನ್ನಿಸುತ್ತದೆ! ಹಿಂದುಗಳೆಲ್ಲರಿಗೂ ಹಸು ಕಾಮದೇನುವಂತೆ ಕಂಡರೂ “ಹಸುವಿನ
ಮಾಂಸ”ವನ್ನು ಆಹಾರವಾಗಿ ಉಪಯೋಗಿಸುವ ಸಾಕಷ್ಟು ಮಂದಿ ಹಿಂದುಗಳಲ್ಲೂ ಇದ್ದಾರೆ, ಕೇವಲ ಮುಸ್ಲೀಮರಷ್ಟೇ
ಅಲ್ಲ. ಅಲ್ಲದೆ ವಯಸ್ಸಾದ ಹಸುಗಳು ಸತ್ತ ನಂತರ ಅವುಗಳ ವಿಲೇವಾರಿ ಎಷ್ಟು ಕಷ್ಟ ಎಂಬುದನ್ನು ಹೈನುಗಾರಿಕೆ
ಮಾಡುವವನನ್ನು ಕೇಳಬೇಕು. ಅದು ಬಿಟ್ಟು ಹಸುವನ್ನು ಕಾಮದೇನು ಎಂದೆಲ್ಲ ಹೇಳಿ, ಮತ್ತೊಬ್ಬರ ಆಹಾರ ಪದ್ದತಿಗಳನ್ನು
ಪ್ರಶ್ನಿಸುವುದು ಎಷ್ಟರಮಟ್ಟಿಗೆ ಸರಿ? ನಿಮಗೆ ಒಂದು ಸತ್ಯ ಹೇಳುತ್ತೇನೆ, ಹಸುವಿಗೆ ಕರುವನ್ನು ಈಯುವ
ಶಕ್ತಿ ಇಲ್ಲ ಎಂದಾಗ, ಹಸುವನ್ನೇ ಕಸಾಯಿಕಾನೆಗೆ ಮಾರಿಬಿಡುತ್ತಾರೆ. ಇನ್ನೂ ಮುದಿ ಎತ್ತು ಮತ್ತು ಹಸುಗಳನ್ನು
ಸಾಕುತ್ತಾರೆಯೇ ಜನ? ಇದು ನಾನು ಕಣ್ಣಾರೆ ಕಂಡ ದೃಶ್ಯಗಳು. ನಾನು ಯಾಕೆ ಹೀಗೆ ಮಾಡುತ್ತೀರಿ ಎಂದಾಗ,
ಆತ ಕೊಟ್ಟ ಉತ್ತರವೇನು ಗೊತ್ತೆ? “ಲಾಭ ತರದ ಹಸು ಮತ್ತು ಎತ್ತುಗಳನ್ನು ಸಾಕಿ ಏನು ತಾನೆ ಮಾಡುವುದು.
ಅವುಗಳಿಗೆ ತಿನ್ನಲು ಒದಗಿಸುವ ಮೇವು, ಹುಲ್ಲು ಎಲ್ಲಾ ಬಿಟ್ಟಿ ಬರುತ್ತವೆಯೇ? ಸಾಯುವ ಜನಗಳಿಗೇ ಹೂಳಲು
ಜಾಗವಿಲ್ಲ, ಇನ್ನು ದನಗಳನ್ನು ಎಲ್ಲಿ ಹೂಳುವುದು?”. ಇಲ್ಲಿ ಆಹಾರ ಪದ್ದತಿಗಿಂತ ಹೆಚ್ಚಿನ ಸಮಸ್ಯೆ
ವಿಲೇವಾರಿಯದು. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಗೋಹತ್ಯಾ ಕಾಯ್ದೆ ಒಂದು ಚರ್ಚೆಯ ವಸ್ತು
ಎಂದೇ ನನಗನ್ನಿಸುವುದಿಲ್ಲ.
ಕಡೆಯದಾಗಿ, ಕರ್ನಾಟಕದ ಜನರ ವಿಶ್ವಾಸ
ಪಡೆದು ಗದ್ದುಗೆಯೇರಿರುವ ಸಿದ್ದರಾಮಯ್ಯನವರೂ ಎಲ್ಲರಂತೆಯೇ ಸ್ವಜನ ಪಕ್ಷಪಾತ ಮತ್ತು ತನ್ನ ಕುಟುಂಬದವರ
ಉದ್ದಾರಕ್ಕೆ ನಿಂತರೆ ಅವರು ರಾಜ್ಯ ರಾಜಕೀಯದ ದುರಂತ ನಾಯಕರ ಸಾಲಿಗೆ ಸೇರುವುದು ಶತ ಸಿದ್ಧ. ಆದರೆ
ಅದಕ್ಕೆ ಮುಂಚೆಯೇ ಅವರು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಜಾರಿಗೆ ತಂದ ೧
ರೂನಂತೆ ೩೦ ಕೆ.ಜಿ. ಅಕ್ಕಿ ಮತ್ತು ಮುಂತಾದ ಜನಪರ ಕಾರ್ಯಕ್ರಮಗಳನ್ನು ಅನಗತ್ಯವಾಗಿ ಟೀಕಿಸುವುದು ತರವಲ್ಲ.
ಪ್ರಜ್ಞಾವಂತರಾಗಿ ಒಮ್ಮೆ ನೀವೇ ಯೋಚಿಸಿ ನೋಡಿ, ನಮಗೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ನಮಗಿದ್ದ
ಆಯ್ಕೆಗಳಾದರೂ ಎಷ್ಟು? ಕಾಂಗ್ರೇಸ್ ಅಲ್ಲದೆ ಮತ್ತೆ ಅಸ್ಥಿರ ಮತ್ತು ಕರ್ನಾಟಕದ ಜನರ ಸ್ವಾಭಿಮಾನವನ್ನು
ಗಾಳಿಗೆ ತೂರಿದ ಬಿ.ಜೆ.ಪಿ ಯನ್ನೇ ಚುನಾಯಿಸಲು ಸಾಧ್ಯವಿತ್ತೇ? (ನನ್ನ ಈ ನಿಲುವುಗಳು ಕೇಂದ್ರದಲ್ಲಿನ
ಕಾಂಗ್ರೇಸ್ ಸರ್ಕಾರದ ಭ್ರಷ್ಟ ಆಡಳಿತವನ್ನು ಸಮರ್ಥಿಸುವುದಿಲ್ಲ!) ಕಾಂಗ್ರೇಸ್ ಗೆ ಅವಕಾಶ ಕೊಟ್ಟಾಗಿದೆ.
ಈಗಲೇ ಅದು ಸರಿಯಿಲ್ಲ, ಹಾಗೆ ಮಾಡಿ ಬಿಡುತ್ತಾರೆ, ಹೀಗೆ ಮಾಡಿಬಿಡುತ್ತಾರೆ, ಎಂದು ಬೊಂಬಡ ಬಜಾಯಿಸುವುದಕ್ಕಿಂತ
ಅವರು ತಪ್ಪು ಮಾಡಿದಾಗ ಪ್ರತಿಭಟಿಸಿ, ಬುದ್ಧಿ ಹೇಳುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.
ಕೊನೆ
ಮಾತು: ಮೊದಲನೆಯದಾಗಿ, ನಾನು ಮೊಟ್ಟೆಯನ್ನಷ್ಟೇ ತಿನ್ನುವ ಶುದ್ಧ ಸಸ್ಯಾಹಾರಿ!
ಮಾಂಸ ತಿನ್ನುವುದಿಲ್ಲ. ನಾನು ಕಾಂಗ್ರೇಸ್ ವಾದಿಯಂತೂ ಅಲ್ಲವೇ ಅಲ್ಲ. ನಿಜ ಹೇಳಬೇಕೆಂದರೆ, ಕಳೆದ ವಿಧಾನಸಭಾ
ಚುನಾವಣೆಯಲ್ಲಿ ನನ್ನ ಓಟನ್ನೂ ಸಹ ನಾನು ಕಾಂಗ್ರೇಸ್ ಗೆ ಹಾಕಿಲ್ಲ. ಆದರೆ ಟೀಕಿಸಲೇಬೇಕು ಎಂಬ ಕಾರಣಕ್ಕೆ
ಶೇ. ೭೦ ರಷ್ಟು ಮತದಾರರಿಂದ ಚುನಾಯಿತರಾದವರನ್ನು ಮತ್ತು ಅವರ ಜನಪರ ಕಾರ್ಯಕ್ರಮಗಳನ್ನೂ ಟೀಕಿಸುವುದಿಲ್ಲ!
ನನಗೆ ಯಾರ ಮೇಲೂ ಪೂರ್ವಾಗ್ರಹಗಳಿಲ್ಲ. ಸರಿಯೆನಿಸಿದ್ದಷ್ಟನ್ನೇ ಹೇಳುತ್ತೇನೆ. ಬದುಕಿದ್ದನ್ನೇ
ಬರೆಯುತ್ತೇನೆ. “ಮನುಜ ಮತ, ವಿಶ್ವ ಪಥ” ಇದು ನನ್ನ ಹಾದಿ.
- ಪ್ರಸಾದ್.ಡಿ.ವಿ.
ಚಿತ್ರ ಕೃಪೆ: ಗೂಗಲ್ ಅಂತರ್ಜಾಲ
ಪ್ರಸಾದ್, ನಿಮಗೇನು ಹೇಳಬೇಕೋ ಅದನ್ನು ಸರಳ ಮತ್ತು ಚಂದದ ಸಾತ್ವಿಕ ಕೋಪದ ಧಾಟಿಯಲ್ಲಿ ಹೇಳಿದ್ದೀರಿ...ಸಶಕ್ತ ಬರಹ..ಮಹಾನುಭಾವರು ಜಾತೀಯತೆಯ ಹಾಗೇ ಇನ್ನೋ ಅನೇಕ ದುರ್ಮಾರ್ಗಕ್ಕೊಯ್ಯುವ ವಿಷಯಗಳನ್ನು ತೊರೆಯುವ ಬೋಧನೆ ಮಾಡಿ ಹೋಗಿದ್ದಾರೆ ನಿಜ ಆದರೆ, ನಮ್ಮೊಳಗೊಂದು ಇಂಥ ಮಂಥನ ನಡೆಯದ, ಮತ್ತದರ ಉತ್ಪನ್ನವನ್ನು ನಾವು ನಮ್ಮವರೊಳಗೆ ಹಂಚದ ಹೊರತು ಅವು ಕೇವಲ ಬೋಧನೆಗಳಾಗಿಯೇ ಉಳಿಯುವ ಅಪಾಯವಿದೆ. ಆಗಲೂ ಇನ್ನೊಂದು ಮನಸಿನ ನವನೀತ ಮೆದ್ದು ಬಾಯಿ ಮತ್ತು ತಮ್ಮ ಮನಸನ್ನು ಸಿಹಿಯಾಗಿಸಿಕೊಂಡ ನಿದರ್ಶನಗಳಿದ್ದಿರಬಹುದು,ಆ ವ್ಯಕ್ತಿತ್ವಗಳು ಮಹಾನ್ ಆಗಿರಲಿಕ್ಕಿಲ್ಲ, ಬೆಳಕಿಗೆ ಬಂದಿರಲಿಕ್ಕಿಲ್ಲ.ಹಾಗಾಗಿ ಚರ್ಚೆ ಅಥ್ವಾ ವಿಚಾರಮಂಡನೆ ಯಾವುದೇ ವಿಷಯದಲ್ಲಿ ಅಪ್ರಸ್ತುತ ಅನ್ನಿಸುವುದಿಲ್ಲ. ನಿಮಗನಿಸಿದ್ದು ನೀವು ಹೇಳಿದ್ದು ಎಷ್ಟೋ ಮನಗಳನ್ನು ತಾಕಬಹುದು..May God bless..
ReplyDeleteಪ್ರಸಕ್ತ ಸಮಸ್ಯೆಗಳನ್ನು ಇಲ್ಲಿ ಚೆನ್ನಾಗಿ ವಿವರಸಿದ್ದೀರಾ. ರಾಜಕಾರಣಿಗಳು ಜನ್ಮೇಪಿ ರಾಜಕಾರಣಿಗಳೇ!
ReplyDeleteನಿನ್ನಿಂದ ಅನಿರೀಕ್ಷಿತ ಲೇಖನ ಪ್ರಸಾದು :) ತುಂಬಾ ಚೆನ್ನಾಗಿ ಪ್ರಸ್ತಕ ವಾತಾವರಣವನ್ನು ವಿವರಿಸಿದ್ದೀಯ. ಗೋವಿನ ವಿಚಾರದಲ್ಲಿ ನಿನ್ನ ಅನಿಸಿಕೆಯೇ ನನ್ನದೂ ಕೂಡ. ಇನ್ನು ಮೀಸಲಾತಿ, ಯೆಸ್ ಜಾತ್ಯಾಧಾರಿತ ಮೀಸಲಾತಿ ಇಂದಿನ ಸಮಾಜದಲ್ಲಿ ಅಪ್ರಸ್ತುತ, ಪ್ರವರನ ಮಾತಿನಂತೆ, ಹಸಿವೂ ಮಾನದಂಡವಾದರೆ, ಹಸಿವಿನ ಆಧಾರದ ಮೇಲೆ ಮೀಸಲಾತಿಯಾಗಲಿ. ನನ್ನ ಗೆಳೆಯ ಮೀಸಲಾತಿಯ ಉಪಯೋಗ ಪಡೆದುಕೊಂಡ, ನನ್ನ ಕ್ಲಾಸ್ಮೇಟೆ, ಅವನ ತಂದೆ ಸರ್ಕಾರಿ ಅಧಿಕಾರಿ, ಅವರ ಜೀವನಕ್ಕೆ ಯಾವುದೇ ತೊಂದರೆ ಇಲ್ಲ, ಬಹಳ ಅನುಕೂಲಸ್ಥರು, ಆದ್ರು ಅವನಿಗೆ ಸ್ಕಾಲರ್ ಶಿಪ್ ಸಿಕ್ತು. ಪೂರ್ತಿ ಇಂಜನಿಯರಿಂಗ್ ಉಚಿತವಾಗೆ ಓದಿದ. ಮೇಲ್ಜಾತಿ ಕೀಳ್ಜಾತಿ ಇವೆಲ್ಲ ಪಕ್ಕಕ್ಕೆ ಹೋಗಿ ಬಡವರು, ಶ್ರಮಿಕರು, ಹಣವಂತವರು ಆಧಾರದ ಮೇಲೆ ಮೀಸಲಾತಿ ಮಾಡಲಿ. ಮೇಲ್ಜಾತಿಯವರು ಎಂದು ಕರೆಸಿಕೊಂಡವರು ಚಾಮರಾಜಪೇಟೆಯ ದೇವನಾಥಾಚಾರ್ ಸ್ಟ್ರೀಟಿನ ಸ್ಲಮ್ಮಿನಲ್ಲು ಇದ್ದಾರೆ. ಮಕ್ಕಳ ಶಾಲೆಗೆ ಫೀಸು ಭರಿಸಲಾಗದೆ ಒದ್ದಾಡುತ್ತಾರೆ. ಅವರಕಡೆಯೂ ಗಮನ ಹರಿಸಲಿ. ಜಾತಿ ಜಾತಿ ನಡುವೆಯ ಕಂದಕಗಳ ಬದಲು ಎಲ್ಲರ ಹಸಿವನ್ನೂ ಒಂದೇ ರೀತಿ ನೋಡಲಿ.
ReplyDelete