ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 15 August 2013

ಜೈ ಜವಾನ್!



“ಅರವಿಂದ್sssssssssss…” ಎಂದು ಯಾರೋ ಗಾವುದ ದೂರದಿ ನಿಂತು ಕೂಗುತ್ತಿದ್ದರು. ನನ್ನ ಕಣ್ಣುಗಳಿಗೆ ನಿರಾಯಾಸವಾಗಿ ಕತ್ತಲು ಕವಿಯುತ್ತಿತ್ತು. ನಾನು ನಿಸ್ತೇಜನಾಗಿ ಭೂಮಿಯ ಮೇಲೆ ಬೀಳುತ್ತಿದ್ದೇನೆ ಎನಿಸುತ್ತಿತ್ತು. ನಾನೀಗಲೇ ಕೆಳಗೆ ಬಿದ್ದು ಮಣ್ಣುಗೂಡುವುದು ನನ್ನಾತ್ಮಕ್ಕೂ ಬೇಕಿರಲಿಲ್ಲ! ಒಬ್ಬ ಸೈನಿಕನಾಗಿ ಅಷ್ಟು ಬೇಗ ಸೋತು ಕುಸಿಯುವುದು ತನ್ನ ಶೌರ್ಯಕ್ಕೆ ತಕ್ಕುದಾದ ಮಾತೇ ಆಗಿರಲಿಲ್ಲ. ಆದರೂ ನಾನೇನು ಮಾಡಲು ಸಾಧ್ಯವಿತ್ತು, ಒಂದಲ್ಲ, ಎರಡಲ್ಲ, ಮೂರು ಬುಲೆಟ್ಟುಗಳು ಹೊಟ್ಟೆಯ ಒಳ ಹೊಕ್ಕಿದ್ದವು. ಆ ಕ್ಷಣಕ್ಕೆ ನನಗೆ ಆ ಶತ್ರು ಸೈನಿಕನ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು, ಹೊಡೆಯುವವನು ಗುರಿಯಿಟ್ಟು ಹಣೆಗೆ ಹೊಡೆಯಬೇಕಿತ್ತಲ್ಲವೇ? ಹೊಟ್ಟೆಯೊಳಗೆ ಮೂರು ಗುಂಡುಗಳನ್ನು ನುಗ್ಗಿಸಿ ನನ್ನ ಸಾವಿನ ನೋವನ್ನನುಭವಿಸುವುದಲ್ಲದೆ, ಅಸಹಾಯಕತೆಯನ್ನೂ ಅನುಭವಿಸಿ ಪರಿತಪಿಸುವಂತೆ ಮಾಡಿದ್ದ. ಒಬ್ಬ ಸೈನಿಕನಾದವನಿಗೆ, ತಾನು ಸಾಯುವಾಗಲೂ ತನ್ನ ಎದುರಿಗೆ ನಗುವ ಸೈನಿಕನ ಎದೆ ಬಗೆಯಬೇಕು ಎನ್ನಿಸುತ್ತಿರುತ್ತದೆ. ಆದರೆ ಅದನ್ನು ಮಾಡಲಾಗದ ಅಸಹಾಯಕತೆ ಇದೆಯಲ್ಲಾ, ಅದು ನಿಜವಾಗಲೂ ಸೈನಿಕನನ್ನು ಕೊಲ್ಲುವುದು. ಅಸಹಾಯಕತೆ ನನ್ನಿಂಚಿಂಚನ್ನೂ ತಿನ್ನುತ್ತಿತ್ತು, ಕಣ್ಣ ರೆಪ್ಪೆಗಳು ಅರಿವಿಲ್ಲದಂತೆ ತೆರೆದು ಮುಚ್ಚಿಕೊಳ್ಳುತ್ತಿದ್ದವು.

“ಸೈನಿಕನೆಂದರೆ ಸಾವಿನೊಂದಿಗೆ ಸರಸವೇ ಆದ್ದರಿಂದ ಸಾಯುವ ಭಯ ಖಂಡಿತಾ ಇಲ್ಲ. ಆದರೆ ಶತ್ರು ಸೈನಿಕರ ಎದುರಿಟ್ಟುಕೊಂಡು ಮಾತ್ರ ಸಾವು ನನ್ನ ಹತ್ತಿರ ಬರಲು ಬಿಡುವುದಿಲ್ಲ. ಸಾಯುವುದೇ ಸಿದ್ಧವಾದರೆ ಕಣ್ಣೆದುರಿನ ಶತ್ರುಗಳೆಲ್ಲಾ ಧೂಳೀಪಟವಾಗಬೇಕು. ಅಲ್ಲಿಯವರೆಗೂ ಯಮನೂ ನನ್ನನ್ನು ಮುಟ್ಟಲು ಬಿಡುವುದಿಲ್ಲ.” ಇವು ನಾನೇ, ನನ್ನ ವೃತ್ತಿ ಸಾವಿನೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಬಗ್ಗೆ ಕೇಳುವವರಿಗೆಲ್ಲಾ ಹೇಳುತ್ತಿದ್ದ ಮಾತುಗಳು. ಇಂದು ಇವೇ ಮಾತುಗಳು ನನ್ನೊಳಗೆ ಮತ್ತೆ ಮತ್ತೆ ರಿಂಗುಣಿಸುತ್ತಿವೆ! ಇದ್ದಕ್ಕಿದ್ದಂತೆ ಅಲ್ಲೆಲ್ಲೋ ಇದ್ದ ಜೀವಸೆಲೆ ಒಮ್ಮೆಲೆ ನನ್ನೊಳಗೆ ಸಂಚಿಯಿಸುತ್ತಿತ್ತು. ಒಸರುತ್ತಿದ್ದ ರಕ್ತಕ್ಕೆ ತಡೆಯೊಡ್ಡುವ ಸಲುವಾಗಿ ತೊಟ್ಟ ಅಂಗಿಯನ್ನೇ ತೆಗೆದು ಹೊಟ್ಟೆಯ ಸುತ್ತಾ ಸುತ್ತಿಕೊಂಡೆ.

“ಎಲ್ಲಿ… ಎಲ್ಲಿ ನನ್ನ ಬಂದೂಕು…” ಹುಡುಕುತ್ತಿದ್ದೆ. ಬಂದೂಕು ಅಲ್ಲೆಲ್ಲೂ ಕಾಣಿಸಲಿಲ್ಲ. ಸುತ್ತಮುತ್ತ ನೋಡುವಾಗ ನನ್ನ ದೇಶದ ಯಾವ ಸೈನಿಕರೂ ಕಾಣಲಿಲ್ಲ. ಐದು ಜನರು ತಮ್ಮ ರುಂಂಡು ಮುಂಡಗಳು ಚಿದ್ರವಾದ ದೇಹ ಹೊತ್ತು ಅಲ್ಲೇ ಬಿದ್ದಿದ್ದರು. ಆ ಬಂಕರ್'ನ ಸುತ್ತಾ ಹತ್ತಾರು ಶತ್ರು ಸೈನಿಕರಾದರೂ ಜೀವ ಕಳೆದುಕೊಂಡು ಬಿದ್ದಿರಬೇಕೆಂದು ಊಹಿಸಿಕೊಂಡೆ! ನನಗೀಗ ಒಂದು ಬಂದೂಕು ಬೇಕಿತ್ತು, ಶತ್ರು ಶೇಷ ಉಳಿಯಲೇ ಕೂಡದು, ಅದರಲ್ಲೂ ಶತ್ರುವೊಬ್ಬನ ಕಣ್ಣೆದುರು ಮಾತ್ರ ಸಾಯಲಾರೆ. ನಾನು ಕುದಿಯುತ್ತಲೇ ಇದ್ದೆ. ಭಾವಗಳು ಹೆಪ್ಪುಗಟ್ಟುತ್ತಿದ್ದವು ಹಾಗೇ ರಕ್ತವೂ ಇರಬಹುದು! ನಾನು ಬಂದೂಕು ಹುಡುಕುವ ಭರಾಟೆಯಲ್ಲಿ ನನ್ನ ಸಾವಿನ ಬರಸಿಡಿಲು ಬಡಿಯಲಿರುವ ಮನೆಯ ಚಿತ್ರಣಗಳು ಕಾಡಿದವು.

ನನ್ನ ಶವ ಮೈಸೂರಿನ ರಥ ಬೀದಿಯಲ್ಲಿ ಸಾಗುತ್ತಿದ್ದರೆ ಸಾವಿರಾರು ಭಾರತೀಯರ ಕಣ್ಣುಗಳು ಒದ್ದೆಯಾಗುತ್ತಿರಬಹುದು. ಅಲ್ಲೆಲ್ಲೋ, ’ಜೈ ಜವಾನ್…’ ಎಂಬ ಸೊಲ್ಲು ಕೇಳುತ್ತಿದೆ. ಸೈನಿಕರ ಶ್ರಮ ಬಸಿಯುವುದನ್ನು ಮನಗಂಡು ’ಜೈ ಜವಾನ್, ಜೈ ಕಿಸಾನ್’ ಎಂಬ ಉಕ್ತಿಯನ್ನು ನಮ್ಮೆಲ್ಲರಿಗೂ ಸಮರ್ಪಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮೃತಿಪಟಲದ ಮೇಲೊಮ್ಮೆ ಬಂದು ಹೋದರು. ಇದನ್ನೆಲ್ಲಾ ಕೇಳಿ ಹೆಮ್ಮೆಯಿಂದ ಎದೆಯುಬ್ಬಿಸಿ ಎದ್ದು ನಿಲ್ಲಬೇಕೆನಿಸುತ್ತಿದೆ, ಭಾರತ ಧ್ವಜವನ್ನು ಎತ್ತಿ ಹಿಡಿದು, ’ಜೈ ಹಿಂದ್’ ಎಂದು ಕೂಗಬೇಕೆನ್ನಿಸುತ್ತಿದೆ ಆದರೆ ಶವವಾಗಿ ಬಿದ್ದಿರುವ ಅಸಹಾಯಕತೆ ನನ್ನ ಕೈಗಳನ್ನು ಮತ್ತೆ ಕಟ್ಟುತ್ತಿದೆ.

ನಾವು ಆರು ಸೈನಿಕರು, ಪಾಕ್ ಸೈನಿಕರು ಟೆರರಿಸ್ಟ್ ಗಳೊಂದಿಗೆ ಸೇರಿಕೊಂಡು ಹೂಡಿದ ದಾಳಕ್ಕೆ ಮರಣ ಹೊಂದಿದ ಬಗ್ಗೆ ಟಿ.ವಿ.ಗಳಲ್ಲಿ ಪ್ರಸಾರವಾಗುತ್ತಿದೆ. ಕೋಟ್ಯಾಂತರ ಭಾರತೀಯರ ಕಂಬನಿಗಳು ನಮಗಾಗಿ ಮಿಡಿಯುತ್ತಿವೆ. ನನ್ನ ಜನ್ಮ ಸಾರ್ಥಕವಾಯ್ತು ಎಂಬ ಭಾವ ನನ್ನಲ್ಲಿ ಮೂಡಿ ನಿಲ್ಲುತ್ತಿದೆ. ನಮ್ಮ ಸಾವಿನ ಕಾಳ್ಗಿಚ್ಚಿನಿಂದ ರೊಚ್ಚಿಗೆದ್ದ ಮಾಧ್ಯಮಗಳು ಒಬ್ಬ ಕೇಂದ್ರ ಮಂತ್ರಿಯನ್ನು ನಮ್ಮ ಸಾವಿನ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆತ ಹೇಳುತ್ತಾನೆ: “ನಾವು ಜನರ ಜೀವನವನ್ನು ಉತ್ತಮಗೊಳಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ಒಳ್ಳೆಯ ಆಹಾರ ಸಿಗುವಂತೆ ಮಾಡುತ್ತಿದ್ದೇವೆ. ಈಗ ಸೈನಿಕರ ಕುಟುಂಬಗಳಿಗೆ ಪರಿಹಾರ ಕೊಡುತ್ತೇವೆ. ಒಬ್ಬರಿಗೆ ಸರ್ಕಾರಿ ನೌಕರಿ ಕೊಡುತ್ತೇವೆ. ತಲೆ ಕೆಡಿಸಿಕೊಳ್ಳಬೇಡಿ. ಆಯ್ತಾ? ಅವರು ವೀರ ಮರಣ ಹೊಂದಿದ್ದಾರೆ, ಅವರು ತಮ್ಮ ಕರ್ತವ್ಯ ಮಾಡಿದ್ದಾರೆ. ದೇಶಕ್ಕಾಗಿ ಸಾಯುವುದು ಅವರ ಕರ್ತವ್ಯ!” ಈಗ ಮತ್ತೆ ನಾನು ನನ್ನೊಳಗೇ ಕುದಿಯುತ್ತಿದ್ದೆ. ದೇಶದ್ರೋಹಿಗಳು ದೇಶದ ಬಾರ್ಡರ್ ಗಳಲ್ಲಷ್ಟೇ ಇಲ್ಲ, ಇಲ್ಲೂ ಇದ್ದಾರೆ. ’ದೇಶದೊಳಗೂ ದೇಶದ ಆಸ್ತಿಗಳೆಂದು ಮುಖವಾಡ ಧರಿಸಿದ ಶತ್ರುಗಳಿದ್ದಾರೆ’ ಎನಿಸಿತು. ನಮ್ಮ ಸಾವು ಇವರಿಗೆ ಶಿವಪೂಜೆಗೆ ಬಳಿದುಕೊಳ್ಳುವ ವಿಭೂತಿ!

ನನ್ನ ಶವ ಸುಣ್ಣದಕೇರಿಯಲ್ಲಿದ್ದ ನಮ್ಮ ಮನೆ ತಲುಪಿತು. ಅತ್ತು ಅತ್ತೂ ನಿತ್ರಾಣಳಾಗಿದ್ದ ಅಮ್ಮಾ, ’ಮಗನೇ ಅರವಿಂದಾssss…” ಎಂದು ಓಡಿ ಬರುತ್ತಿದ್ದರು. ಅಪ್ಪ ಮುಂದೆ ನಿಂತ ನನ್ನ ಪಾರ್ಥೀವ ಶರೀರವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಬೇಕಾದ ಏರ್ಪಾಡುಗಳನ್ನು ಮುಗಿಸುತ್ತಿದ್ದರು. ತಮ್ಮ ಮುಷ್ಠಿಯನ್ನು ಬಿಗಿ ಹಿಡಿದು ತಮ್ಮ ದುಃಖವನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿದ್ದರು. ಕಂಗಳು ಧಾರಾಕಾರವಾಗಿ ನೀರನ್ನು ಬಸಿಯುತ್ತಿದ್ದರೂ ಕಣ್ಣೊರೆಸಿಕೊಂಡು ತಮ್ಮ ಕರ್ತವ್ಯಗಳೆಡೆಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ನನ್ನ ಶವ ಮತ್ತಿಬ್ಬರನ್ನು ಅಲ್ಲಿ ಹುಡುಕುತ್ತಿತ್ತು! ಎಲ್ಲಿರಬಹುದು, ಎಲ್ಲಿರಬಹುದು ಅವರಿಬ್ಬರು? ನಾನು ಮೇಲೆದ್ದು ಕೂಗಬೇಕೆನ್ನಿಸುತ್ತಿತ್ತು. “ಭಾರತೀ… ಮಧುಕರ…”. ಭಾರತಿ ನನ್ನ ಧರ್ಮಪತ್ನಿ ಮದುವೆಯಾಗಿ ಐದು ವರ್ಷಗಳಾಗಿತ್ತಷ್ಟೆ. ಇಪ್ಪತ್ತೆಂಟರ ಪ್ರಾಯಕ್ಕೇ ಅವಳ ಹಣೆಯನ್ನು ಬರಿದಾಗಿಸಿಬಿಟ್ಟೆ. ಅವಳು ಬಯಸಿ ಬಯಸಿ ಒಬ್ಬ ಯೋಧನನ್ನು ಮದುವೆಯಾದದ್ದಕ್ಕೆ ಚಿಕ್ಕವಯಸ್ಸಿಗೆ ವಿಧವೆ ಪಟ್ಟ ನೀಡಿದೆ! ಅವಳನ್ನು ಹುಡುಕಬೇಕು, ನನ್ನ ದೇಶಪ್ರೇಮದ ಹೆಸರಲ್ಲಿ ಅವಳಿಗೆ ಮಾಡಿದ ಮೋಸಕ್ಕೆ ಕ್ಷಮೆ ಕೇಳಬೇಕು. ನಾಲ್ಕು ವರ್ಷ ವಯಸ್ಸಿನ ಹಾಲುಗಲ್ಲದ ನನ್ನ ಕಂದ ಮಧುಕರ ಎಲ್ಲಿದ್ದಾನೋ, ಏನೋ? ನಾನವನನ್ನು ನೋಡಿ ಒಂದು ವರ್ಷವೆ ಆಗಿರಬಹುದು. ಅವನ ಭವಿಷ್ಯ ಭದ್ರ ಮಾಡಬೇಕಿದ್ದ ಅವನಪ್ಪ ತಾನೇ ನಿಶ್ಚಲನಾಗಿ ಮಣ್ಣು ಸೇರುವ ಹಾದಿಯಲ್ಲಿ ಮನೆ ಸೇರಿದ್ದ. ಅವರು ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದ ನನ್ನ ಕಣ್ಣ ಮುಂದೆಯೇ ಅವರಿಬ್ಬರೂ ಪ್ರತ್ಯಕ್ಷ ನಿಂತರು. ಭಾರತಿಯ ಕೂದಲೆಲ್ಲ ಕೆದರಿ ನಿತ್ರಾಣಗೊಂಡಂತೆ ಕಾಣುತ್ತಿದ್ದಳು. ಮಧುಕರ, ’ಅಪ್ಪಾ… ಅಮ್ಮಾ…’ ಎಂದು ಅಳುತ್ತಿದ್ದ. ಮನೆಯ ಮುಂದೆ ನೂರಾರು ಮಂದಿ ಜಮಾಯಿಸಿದ್ದರು.

ಭಾರತಿ ಓಡಿ ಬಂದು ನಿಶ್ಚೇತನನಾಗಿ ಬಿದ್ದಿದ್ದ ನನ್ನ ಮೇಲೆ ಬಿದ್ದಳು. ಮೇಲೆದ್ದು ಸಂತೈಸುವ ಮನಸ್ಸಾಗಿದ್ದರೂ ಮಲಗೇ ಇದ್ದೆ. ತನ್ನ ಜೀವನವೂ ನಿಶ್ಚಲವಾದಂತೆ ಒಂದೇ ಸಮನೆ ಅಳುತ್ತಿದ್ದಳು. ಎಲ್ಲರೂ ಅವಳನ್ನು ಸಮಾಧಾನಿಸಲು ಹೆಣಗುತ್ತಿದ್ದರು. ಅಂತ್ಯ ಕ್ರಿಯೆಯ ಕಾರ್ಯಗಳೆಲ್ಲಾ ಸರಾಗವಾಗಿ ಜರಗುತ್ತಿದ್ದವು. 'ಅತ್ತೆ ನೋಡಿ, ಒಮ್ಮೆ ಮುಖವನ್ನೂ ತೋರಿಸದೆ ಹೋಗಿಬಿಡುತ್ತಿದ್ದಾರೆ.. ರೀ ಏಳಿ, ನನ್ನ ಒಂದ್ಸಲಕ್ಕಾದ್ರೂ ಮಾತಾಡ್ಸಿ..' ಎಂದು ಅಳುತ್ತಿದ್ದಳು.

ನನ್ನೊಂದಿಗೆ ಸೈನ್ಯದಲ್ಲಿದ್ದ ಕೆಲವು ಸೈನಿಕರು ನನ್ನನ್ನು ಸಕಲ ಗೌರವಗಳೊಂದಿಗೆ ಬೀಳ್ಕೊಡಲು ಸನ್ನದ್ಧರಾಗಿ ನಿಂತಿದ್ದರು. ನನ್ನ ಶವಸಂಸ್ಕಾರದ ನಂತರ ಮಾಧ್ಯಮದವರು ನನ್ನ ಹೆಂಡತಿಯನ್ನು ಕೇಳಬಹುದು: “ಅರವಿಂದ್ ರವರು ನಮ್ಮನ್ನೆಲ್ಲ ಅಗಲಿ ದೇಶ ರಕ್ಷಣೆಯಲ್ಲಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಈ ಬಗ್ಗೆ ನಿಮಗೇನೆನಿಸುತ್ತದೆ?” ನನ್ನವಳ ಉತ್ತರಕ್ಕೆ ನಾನು ಕಾತರನಾಗಿದ್ದೇನೆ. ಕೇಳಬೇಕು, ಆ ಉತ್ತರವನ್ನು ಕೇಳಬೇಕು. “ಅವರು ನನ್ನ ಗಂಡ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ತನ್ನ ನಲವತ್ತು ಜನರ ತುಕುಡಿಯನ್ನು ರಕ್ಷಿಸಿರುವುದಲ್ಲದೆ ಶತ್ರು ಸೈನ್ಯದ ಒಬ್ಬನೂ ಉಳಿಯದಂತೆ ಮಾಡಿದ್ದಾರೆ. ಅವರು ದೇಶದ ಹೆಮ್ಮೆಯ ಮಗ” ಎಂದು ಹೇಳಬಹುದೇ?

ಎಲ್ಲೆಲ್ಲೋ ಓಡುತ್ತಿದ್ದ ಮನಸ್ಸು ವಾಸ್ತವಕ್ಕಿಳಿಯುತ್ತಿದೆ. ಎದುರಲ್ಲಿ ನಿಂತಿದ್ದ ಶತ್ರು ಸೈನಿಕ ನಗುತ್ತಲೇ ಇದ್ದಾನೆ. ಹುಡುಕುತ್ತಿದ್ದ ಕೈಗಳಿಗೆ ಯಾವುದೋ ಎಡತಾಕಿದಂತಾಗಿ ಆ ಕಡೆಗೆ ತಿರುಗಿ ನೋಡಿದರೆ ನನ್ನ ಕೈಯಿಂದ ಜಾರಿಬಿದ್ದ ಬಂದೂಕು ಅಲ್ಲೇ ಇತ್ತು. ಅದು ನನ್ನ ಕೈಗೆ ಸಿಗುತ್ತಿದ್ದಂತೆ, ಅಷ್ಟೂ ಹೊತ್ತು ನನ್ನಲ್ಲಿ ಸಂಚಯಿಸುತ್ತಿದ್ದ ಆಕ್ರೋಶ ಒಮ್ಮೆಲೇ ಗುಂಡುಗಳೋಪಾದಿಯಲ್ಲಿ ಹೊರಬಂದವು. ಶತ್ರು ಸೈನಿಕ ನಿಂತಿದ್ದ ದಿಕ್ಕಿನೆಡೆಗೆ ಸತತ ದಾಳಿ ನಡೆಸಿದ್ದೆ. ಅವನು ಅಲ್ಲೇ ಹತನಾಗಿ ಬಿದ್ದಿರಬಹುದು. ಯಾವುದೋ ಒಂದು ಗುಂಡು ಪಕ್ಕದಲ್ಲಿದ್ದ ಬಂಕರ್'ಗೆ ತಗುಲಿ ಅದೂ ಸಿಡಿದು ಹೋಯ್ತು. ಅದರಿಂದ್ಹಾರಿದ ಬೆಂಕಿ ನನ್ನನ್ನೂ, ಅಲ್ಲೆ ಸುತ್ತ ಮುತ್ತ ಬಿದ್ದಿದ್ದ ನನ್ನ ತುಕಡಿಯ ಇನ್ನೈದು ಸೈನಿಕರನ್ನೂ ದಹಿಸುತ್ತಿತ್ತು.

*********

ದೇಶದೆಲ್ಲೆಡೆಯ ನ್ಯೂಸ್ ಛಾನೆಲ್ಗಳಲ್ಲಿ ಅರವಿಂದನ ಸಾಹಸಗಾಥೆಯ ಬಗ್ಗೆ ಬಣ್ಣಬಣ್ಣ ತಳೆಯುತ್ತಿದ್ದ ಸುದ್ಧಿ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಲೀನವಾಗುತ್ತಿತ್ತು. “೩೪ ಯೋಧರ ಜೀವ ರಕ್ಷಿಸಿದ ಕಮಾಂಡರ್ ಅರವಿಂದ. ಕೆಲವು ಟೆರರಿಸ್ಟ್’ಗಳೂ ಸೇರಿದಂತೆ 37 ಜನ ಶತ್ರುಗಳನ್ನು ಹೊಡೆದುರುಳಿಸಿದ ಅರವಿಂದ್ ಪಡೆ” ಎಂಬ ಹೆಡ್ ಲೈನ್ಸ್ ಗಳು ಬಿತ್ತರವಾಗುತ್ತಿದ್ದವು. ಅರವಿಂದ ಮತ್ತವನೊಂದಿಗೆ ಸತ್ತ ಐವರು ಯೋಧರು ಒಂದು ದಿನದ ನವಾಬರಾಗಿದ್ದರು. ಆ ದಿನದ ಹೆಡ್’ಲೈನ್ಸ್ ಮತ್ತು ಕವರ್ ಸ್ಟೋರಿಗಳಲ್ಲಿ ರಾರಾಜಿಸುತ್ತಿದ್ದರು. ಸೈನಿಕರ ಜೀವನವೇ ಹೀಗಿರಬಹುದು, ಅವರು ಬದುಕಿದ್ದಷ್ಟು ದಿನ ಅವರ ಶ್ರಮ ಮತ್ತು ಸೇವೆಗಳು ಗುರ್ತಿಸಿಕೊಳ್ಳಲಾರವು! ಸತ್ತ ಒಂದು ದಿನಕ್ಕೆ ಅವರೇ ಹೀರೋಗಳು! ಅರವಿಂದನಿಗೇನೋ ತಾನು ತಾಯ್ನಾಡಿನ ಋಣ ತೀರಿಸಿದೆ ಎಂಬ ಹೆಮ್ಮೆಯಿತ್ತು.

ಅರವಿಂದನ ಸಾವು ಇನ್ನೂ ಅಚ್ಚ ಹಸಿರಾಗಿರುವಂತೆಯೇ, ಜಮ್ಮು-ಕಾಶ್ಮೀರದ ಶ್ರೀನಗರದ ಸೇನೆಯ ಕೇಂದ್ರ ಕಛೇರಿಯ ಫೋನ್ ಮತ್ತೆ ರಿಂಗುಣಿಸುತ್ತಿದೆ. ಅಲ್ಲಿನ ಇಂಚಾರ್ಜ್ ಆಗಿದ್ದ ಸುದರ್ಶನ್ ದಿಗ್ವೇಧಿ ಕರೆ ಸ್ವೀಕರಿಸುತ್ತಾರೆ. ಆ ಕಡೆಯಿಂದ ಧ್ವನಿ ಕೇಳಿಸುತ್ತದೆ: “ಸರ್, ಪೂಂಚ್ ನ ಗಡಿಯಲ್ಲಿ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆಯಾಗಿದೆ. ಭಾರತೀಯ ಸೇನೆಯ ಐದು ಜನ ಯೋಧರನ್ನು ಕೊಲ್ಲಲಾಗಿದೆ”. ಕಛೇರಿಯ ವಾತಾವರಣ ಕಾವೇರುತ್ತದೆ. ಮುಂದಿನ ಕಾರ್ಯಾಚರಣೆಗಳ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡು ಕೂರುತ್ತಾರೆ.

*******

ಕೆಲವು ವಿವರಗಳು:

ಭಾರತದ ಗಡಿಗಳನ್ನು ಆಕ್ರಮಿಸಲು ಹವಣಿಸಿರುವ ಪಾಕಿಸ್ಥಾನೀ ಸೈನ್ಯ ಲಷ್ಕರ್-ಇ-ತೋಯ್ಬಾ ಎಂಬ ಉಗ್ರಗಾಮಿ ಸಂಘಟನೆಯ ಸಹಾಯ ಪಡೆದುಕೊಂಡಿದೆ. ಭಾರತದ ಗಡಿಗಳಲ್ಲಿ ಇಂತಹ ಕುಕೃತ್ಯಕ್ಕಾಗಿಯೇ ’ಲಷ್ಕರ್-ಇ-ತೋಯ್ಬಾ’ ಸಂಘಟನೆಯಿಂದ ತರಬೇತಿ ಪಡೆದು ಸಜ್ಜಾದ ’ಬ್ಯಾಟ್ (BAT)’ ಎಂಬ ಪಡೆಯನ್ನು ನಿಯೋಜಿಸಲಾಗಿದೆ! ಸೈನ್ಯದ ಮಾಹಿತಿಯ ಪ್ರಕಾರ ೨೦೧೩ರಲ್ಲಿ, ಭಾರತೀಯ ಗಡಿಗಳಲ್ಲಿ ಈಗಾಗಲೇ ೫೫ ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು ಶೇ.೫೦ ಕ್ಕಿಂತ ಜಾಸ್ತಿ. ಸುಮಾರು ೫೦ಕ್ಕಿಂತಲೂ ಹೆಚ್ಚಿನ ಸೈನಿಕರು ಈ ವರ್ಷದಲ್ಲಿ ಕದನ ವಿರಾಮದ ಉಲ್ಲಂಘನೆಯಂತಹ ಘಟನೆಗಳಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಕೃತ್ಯಗಳು ಒಂದಾದ ಮೇಲೊಂದರಂತೆ ನಡೆಯುತ್ತಲೇ ಇದೆ. ನಿರಾತಂಕವಾಗಿ ಸೈನಿಕರ ಮಾರಣ ಹೋಮವೂ ಕೂಡ!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

2 comments:

  1. ಸಖತ್ತಾದ ಲೇಖನ ಪ್ರಸಾದ್..
    ನಮ್ಮನ್ನಗಲಿದ ಐದು ಜನ ಸೈನಿಕರಲ್ಲೊಬ್ಬರ ಮನೆಯ ಕತೆಯನ್ನೇ ಓದಿದಂತೆ ಆಯಿತು..

    ReplyDelete
  2. ಕಣ್ಣಂಚಿನಲ್ಲಿ ನೀರು.

    ReplyDelete