ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 4 June 2015

ಪದಗಳಿಗೆ ಪದ್ಯ ಕಟ್ಟುವ ಕಿಮ್ಮತ್ತಿಲ್ಲ


ಪದಗಳಿಗೆ ಪದ್ಯ ಕಟ್ಟುವ
ಕಿಮ್ಮತ್ತಿಲ್ಲ,

ಮರಳಿ ಬರುವ ಪದಗಳಿಗೆ
ಅರವತ್ತರ ಅರಳು ಮರಳು,
ನಿನಾದಕ್ಕೆ ಪದ ಹೆಕ್ಕಿ,
ಹುಕ್ಕಿನಲ್ಲಿ ಸಿಕ್ಕಿಸಿ
ಹೊಸೆದ ಸಾಲೊಳಗೆ ಪದ್ಯವೆಲ್ಲಿ?

ಅಭಿವ್ಯಕ್ತಿಯ ಅಡವಿಟ್ಟು,
ಚೌಕಟ್ಟಿನ ಕೊರಳುಪಟ್ಟಿ
ಬಿಗಿದುಕೊಂಡ ಭಾವಗಳಲಿ,
ನರಳಿ ಸತ್ತ ನೋವಿದೆ,
ಕಟ್ಟಕುಳಿತ ಪದ್ಯವೆಲ್ಲಿ?

ಸಂಜೆಯ ಕೆಂಧೂಳಿನ
ಹಿಂದೆ ಓಡಿ ಬಸವಳಿದು,
ದಾಹಕ್ಕೆ ಬೀರಿಳಿಸಿ
ಎಚ್ಚರ ತಪ್ಪುವಂತೆ ಮತ್ತೇರಿದೆ,
ನಶೆಯೊಳಗೆ ಪದ್ಯವೆಲ್ಲಿ?

ಬಿಡಿಸಿಕೊಂಡು ಹಗುರಾದೆ,
ಅಂಥದೊಂದು ಹುಂಬ ಆಸೆ,
ಸಮಾಜದ ಕಟಕಟೆಯಲಿ
ತೊಡರಿ ಬಿದ್ದ ಅವಮಾನ
ಸ್ವಾತಂತ್ರ್ಯದ ಪದ್ಯವೆಲ್ಲಿ?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Friday, 22 May 2015

ನಾನು ಪದ್ಯ ಮಾರುವುದನ್ನು ಬಿಟ್ಟಿದ್ದೇನೆ,


ಕಟ್ಟು ಕರದಂಟು, ಕೀರೆ
ಕಿಲ್ ಕೀರೆ ಸೊಪ್ಪುಗಳ ನಡುವೆ
ಅಮಾಯಕವಾಗಿ ಬಿದ್ದ
ಬೆವರ ಹನಿ,
ಚಿಲ್ಲರೆ ಕಾಸಿನ ಅಸಹಾಯಕತೆ
ಮತ್ತು
ನೂರು ರೂ ಬಂಧದ ಆಸೆಗೆ
ಹಲ್ಲು ಕಿರಿದ ಒಳಗಿಸೆಗಳು,
ಆಗಾಗ ಒಂದೋ ಎರಡೋ ಕಟ್ಟುಗಳ
ಹೆಚ್ಚುವರಿ
ಕೈ ಬದಲಾವಣೆಗೆ
ಚಲಾವಣೆಯಾಗುವ ಅಯ್ಯನ್, ಅಮ್ಮನ್
ಉವಾಚಗಳು;
ಬೈಗುಳಗಳು ಪದ್ಯಗಳಾಗಿವೆ!

ನೆನ್ನೆ ಬಿದ್ದ ಮಳೆಗೆ
ಹದಕೆ ಬಂದ ಇಳೆಗೆ
ಮಿಲನದ ಸಂಭ್ರಮ,
ಮಳೆ ಗಂಡೋ ಹೆಣ್ಣೋ?
ಇಳೆ ಸಲಿಂಗಿಯೋ?
ಎಂಬ ಜಿಜ್ಞಾಸೆಗಳು,
ಮೊನ್ನೆ ಅಮೇರಿಕಾದ ವಾಷಿಂಗ್ಟನ್ನಲ್ಲಾದ
ಸ್ನೋ ಫಾಲಿಗದೆಷ್ಟು ಜನರ
ಜೀವನ ಅಸ್ತವ್ಯಸ್ತವಾಗಿದೆಯೋ
ಎಂಬ ಆತಂಕಗಳು,
ನಿಗೂಢ ಚರ್ಯೆ ಹೊತ್ತ
ಪಶ್ಚಿಮ ಘಟ್ಟಗಳು,
ಮಂಜು ಹೊತ್ತು ಮಳೆ ಕರೆದಾಗ
ಮಿದುವಾಗುವ ಕವಿ ಹೃದಯ
ಹೆಣ್ಣೋ ಗಂಡೋ?
ಕುತೂಹಲಗಳಿಗೆ ಕವಿತೆ
ಬರೆಯುತ್ತದೆ,
ನಾನವುಗಳನ್ನೆಲ್ಲಾ ಬುಟ್ಟಿಗಾಕಿಕೊಂಡು
ಮಾರಲು ಹೊರಡುತ್ತಿದ್ದೆ!

ಒಂದು ವರ್ಷದಿಂದೀಚೆಗೆ
ಮಹಾನ್ ಆದ ಭವ್ಯ ಭಾರತದ
ಕನಸುಗಳನ್ನು
ಅಪ್ಪಟ ವ್ಯಾಪಾರಿಯೊಬ್ಬ ಮಾರುತ್ತಾನೆ,
ನನಸು ಮಾಡಿಸಿಕೊಳ್ಳಲಾಗದ
ಅಸಹಾಯಕ ಜನ
ಕೊಳ್ಳುತ್ತಾರೆ, ಕೊಳ್ಳುತ್ತಾರೆ...
ಬೀದಿ ಬದಿಯಲ್ಲೇ ಬಿದ್ದ ಬಡತನ,
ನಿರ್ಗತಿಕರ ಅನಾಥತೆ,
ಕರುಳು ಸುತ್ತುವ ಹಸಿವು,
ದುಡಿಯಗೊಡದ ನಿರುದ್ಯೋಗಗಳು
ವಿದೇಶ ಸಂಚಾರಿಯ ಫ್ಲೈಟ್ ಮೋಡಿನಲ್ಲಿ
ಸದ್ದಡಗಿಸುತ್ತವೆ,
ಒಂದು ವರ್ಷವಾದರೂ ಏನೂ ಬದಲಾಗಿಲ್ಲ
ಎಂಬ ಹತಾಶೆಯ ಪದ್ಯವೊಂದಿತ್ತು
ಭಾರೀ ಬೆಲೆ ಬಾಳುವಂಥದ್ದು,
ಈಗೆಲ್ಲಿ, ಮಾರುವುದಿಲ್ಲ!

ಪದ್ಯವನ್ನು ಸಗಟು ಸಗಟು
ಮಾರಿ ಬಂದ ಹಣದಲ್ಲಿ
ಬನ್ನು ಕೂಡ ಕೊಳ್ಳಲಾಗದ
ನಿರಾಸೆಗೆ,
ಮುಟ್ಟಿ ಮುಟ್ಟಿ ಒದ್ದೆಯಾದ
ಖಾಲಿ ಜೇಬು ನೋಡಿಕೊಳ್ಳುವಾಗ
ಅನಿಸುತ್ತದೆ; ಇಲ್ಲಿ
ಕನಸುಗಳನು ಮಾರುವುದು ಮೋಜು,
ವಾಸ್ತವದ
ಪದ್ಯಗಳನ್ನು ಮಾರುವುದು ಜೂಜು,
ಅದಕ್ಕೆ ನಾನು ಪದ್ಯ ಮಾರುವುದನ್ನು ಬಿಟ್ಟಿದ್ದೇನೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 7 May 2015

ನಾನುಣಬಡಿಸುವ ಪದ್ಯ!


ನಾನುಣಬಡಿಸುವ ಪದ್ಯಕ್ಕೆ
ಹಸಿ ಮಾಂಸದ ಬಿಸಿ ನೆತ್ತರ
ಭಾವಗಳ ಸ್ಪರ್ಶವಿದೆ,
ಓದಬೇಡಿರೆಂದು ಕೈ ಮುಗಿದು
ಕೋರುತ್ತೇನೆ;
ಮುಂದಾಗುವ ಅನಾಹುತಗಳಿಗೆ
ನಾನು ಜವಾಬ್ದಾರನಲ್ಲ,
ಹಸಿದ ಹಲ್ಲುಗಳಿಗೆ
ಮೃದು ಹೃದಯ ಹೊರತಲ್ಲ!

ಹದ್ದಿನ ಸರಹದ್ದು
ಕಣ್ಣುಗಳು ಕಾದು ಕುಳಿತಿವೆ,
ನೋವಿಗೆ, ನೆರಳಿಗೆ,
ವಿರಹಕೆ, ಪ್ರೇಮಕೆ,
ಬಳಲಿದ ಬಂಧಕೆ,
ಇಡಿಯಾಗಿ ಸಿಕ್ಕ ದೇಹಕೆ,
ನರ ನೆತ್ತರು, ಮೂಳೆ ಮಜ್ಜೆಗಳು,
ಯಾವುದಾದರೂ ಸರಿ,
ಹುಲಿ ಹರಿದರೆ ಹಳಸು ಮಾಂಸ,
ಹಸೀದೇ ಸಿಕ್ಕರೆ
ರುಚಿಕಟ್ಟು ಎಳೆಸು ಮಾಂಸ!

ಅವು ಕಚ್ಚಿ ಕತ್ತರಿಸಿದ
ಪದ್ಯ ನಿಮ್ಮೆಡೆಗೆ,
ಕ್ಷಮಿಸಿ ನಿಮಗರಿವಿರದೆ
ನೀವು ನರ ಭಕ್ಷಕರಾಗಿದ್ದೀರಿ,
ನನ್ನ ಪಾಪಗಳ
ವಾರಸುದಾರರಾಗಿದ್ದೀರಿ,
ನೈತಿಕತೆ - ಅನೈತಿಕತೆ
ಮೀರಿದ ಶುದ್ಧ ಭಾವಗಳ
ಮೆರವಣಿಗೆಯಲಿ
ಬಂದು ಹೋದಿರಿ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Tuesday, 14 April 2015

ಒಲುಮೆಯ ಮುದ್ದುವಿಗೆ: ಪತ್ರ - ೭


ಪತ್ರ - ೭
--------

ಒಲುಮೆಯ ಮುದ್ದುಗೆ,

ನಿನ್ನ ಸಾನಿಧ್ಯದಲ್ಲಿ ಕರಗುತ್ತಿರುವ ಮೌನದೊಳಗೆಕಣ್ಣ ಭಾಷೆಯ ರುಚಿಕಟ್ಟು ಊಟವನು ಸವಿದ ಹೃದಯದ ಹಸಿವು ಕುಡಿದಷ್ಟೂ ಇಂಗುತ್ತಿಲ್ಲ. ಒಲವಿಗೆ ಮಾತುಮೌನಗಳ ಹಂಗಿಲ್ಲ. ಹಾಗೆ ನೋಡುವುದಾದರೆ ನಿನ್ನ ಹೃದಯದೊಳಗೆ ಕಂಡ ಅಷ್ಟೂ ಕಾವ್ಯದ ಮುಂದೆ ನನ್ನ ಪತ್ರಗಳೂ ನೀರಸ. ಜೀವಂತ ಕಾವ್ಯದ ಮುಂದೆ ಶರಣಾಗುತ್ತಿದ್ದೇನೆಒಲವ ಪರಿಭಾಷೆಯನ್ನು ನಿನ್ನಿಂದ ಕದಿಯುವ ಅತಿಯಾಸೆಯಿಂದ.

ಪತ್ರಗಳ ಕಡೆಗಾದರೂ ಹೇಳಿ ಬಿಡುತ್ತೇನೆ, 'ಐ ಲವ್ ಯೂ ಮುದ್ದುಲವ್ ಯೂ ಮೋರ್ ದ್ಯಾನ್ ಎನಿ ಒನ್ ಆನ್ ದಿಸ್ ಯೂನಿವರ್ಸ್...ಭುಜಕ್ಕೊರಗಿರುವ ನಿನಗೆ ಮೆತ್ತನೆ ಹಾಸಿಗೆಯಿದೆ ಎದೆಯೊಳಗೆಮಲಗೆನ್ನ ಮನದೊಡತಿಎದೆಯ ಬಡಿತವೇ ನಿನಗೆ 'ಜೋ ಜೋ ಲಾಲಿ'..<3

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಟ್ಟು ಏಳು ಪತ್ರಗಳು ಫೆಬ್ರವರಿಯಲ್ಲಿ ’ಅವಳ’ನ್ನು ತಲುಪಿವೆ :-)

ಒಲುಮೆಯ ಮುದ್ದುವಿಗೆ: ಪತ್ರ - ೬


ಪತ್ರ - ೬
----------

ಒಲುಮೆಯ ಮುದ್ದುಗೆ,

ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು ಕಣೇ. ಈ ಒಂದು ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆಈ ಥರದ ಭ್ರಮೆಗೆ ಅದೇನೆನ್ನುವರೋನನಗೆ ಮಾತ್ರ ತೀರದ ಚಡಪಡಿಕೆ. ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆಕನ್ನಡಿಯೊಳಗಿನ ನಿನ್ನ ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವಆ ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸುಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟಮಾತುಸ್ಪರ್ಶಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲಎಂಥ ತಮಾಶೆ ನೋಡುಈ ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನ ಈ ಬಲೆಯಿಂದ ಪಾರು ಮಾಡ್ತೀಯಾ?

ಈ ಪತ್ರ ಬರಿವಾಗ ನಿನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ಕೂತಿದ್ದೇನೆ. ಅಕ್ಷರಗಳೆಲ್ಲಾ ತಡವರಿಸಿ ಬೀಳುತ್ತಿವೆಪದಗಳು ನೀರಸ ಅನ್ನುಸ್ತಿವೆ. ನಾಳಿನ ಕನಸುಗಳಿಗೆ ಪುಳಕಗೊಳ್ಳುತ್ತಾಪತ್ರವನ್ನು ಮುಗಿಸುತ್ತಿದ್ದೇನೆ. ನನಸುಗಳು ಕನಸುಗಳಿಗಿಂತ ರುಚಿಕಟ್ಟಾಗುವ ಕ್ಷಣಗಳಿಗೆ ಜಾತಕ ಪಕ್ಷಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೫


ಪತ್ರ - ೫
----------

ಒಲುಮೆಯ ಮುದ್ದುಗೆ,

ಇತ್ತೀಚೆಗೆ ಕನಸುಗಳು ಬೀಳ್ತವೆ ಕಣೆಎಷ್ಟ್ ಚೆನ್ನಾಗಿರ್ತವೆ ಗೊತ್ತಾನಂಗೆ ಪ್ರಾಣಿಗಳು ಅಂದ್ರೆ ಅಷ್ಟೇನೂ ಅಕ್ಕರೆ ಇಲ್ಲ ಮತ್ತೆ ಚಿಕ್ಕೋನಿದ್ದಾಗ ಅದ್ಯಾವ್ದೋ ಗೌಜಲಕ್ಕಿ ಮರಿನ ಹಿಡ್ಕೊಂಡ್ ಬಂದು ಸಾಕ್ತೀನಿ ಅಂತ ಸಾಯ್ಸಿದ್ದೆ. ಅದೆಲ್ಲೋ ಒಂಟಿಯಾಗಿದೆ ಮುದ್ದಾದ್ ನಾಯಿ ಮರಿ ಅಂತ ಎತ್ಕೊಂಡ್ ಬಂದು ಸಾಕ್ತೀನಿ ಅಂತ ಆಟ ಕಟ್ಟಿ ಎರ್ಡ್ಮೂರ್ ದಿನ ಊಟ ಹಾಕಿ ನಮ್ ದೊಡ್ಡಮ್ಮ ನಂಗೇ ಗೊತ್ತಿಲ್ದಂಗೆ ಅದ್ರು ಕಟ್ಟು ಬಿಚ್ಚಿ ಊರಾಚೆ ಬಿಟ್ಟು ಬಂದಾಗ ಜೋರಾಗಿ ಕಿರ್ಚಾಡಿ ಅತ್ತಿದ್ದೆ. ಮತ್ತೊಂದ್ಸಲ ಊರಲ್ಲಿರೋ ಮನೆಯ ಹಂಚಿನ ಸಂದಿಲಿ ಗೂಡು ಕಟ್ಟಿ ಮೊಟ್ಟೆಯಿಟ್ಟಿದ್ದ ಅದ್ಯಾವುದೋ ಹಕ್ಕಿಯ ಗೂಡನ್ನು ಮೊಟ್ಟೆಗಳ ಸಮೇತ ಎಗರಿಸಿಕೊಂಡುಬೆಂಕಿ ಹತ್ರ ಕಾವು ಕೊಟ್ಟು ಮರಿಯಾಗುತ್ತಾ ಅಂತ ಕಾಯ್ತಾ ಕೂತಿದ್ದೆ. ಇನ್ನು ತಿಟ್ಟಲ್ಲಿ ನವಿಲು ಬರ್ತವಂತೆ ಅಂತ ನಮ್ಮೂರ್ ಸತೀಶ ಹೇಳ್ದಾಗ ಅವುಗಳ್ನ ಹಿಡ್ಕೊಂಡ್ ಬಂದ್ ಸಾಕೊಳೋಣ ಅಂತ ಅವುಗಳನ್ನ ಹಿಡಿಯೋಕ್ಹೊಗಿ ತರಚು ಗಾಯಗಳ್ನ ಮಾಡ್ಕೊಂಡಿದ್ದೆ. ಹೀಗೆ ನನ್ ಹುಚ್ಚಾಟಗಳಿಂದ ಮನವರಿಕೆಯಾಗಿದ್ದುನಂಗೆ ಪ್ರಾಣಿಗಳನ್ನ ಸಾಕ್ಬೇಕು ಅನ್ನೋ ಆಸೆಗಿಂತ ಅವುಗಳೊಂದಿಗಿನ ಒಡನಾಟದ ಕುತೂಹಲವಿತ್ತೇನೋಇತ್ತೀಚೆಗೆ ನನ್ ಸೋಮಾರಿತನ ಅವುಗಳನ್ನೆಲ್ಲಾ ನಿಗ್ರಹಿಸಿಬಿಟ್ಟಿದೆನನ್ನ ಚೈತನ್ಯ ಶಕ್ತಿಯಾಗಿ ನೀನೊಬ್ಳಿಲ್ದಿದ್ರೆಬದ್ಕೋದೂ ಬೋರನ್ಸಿರೋದು! :-D

ಈಗ ವಿಷಯಕ್ಕೆ ಬರ್ತೀನಿ ನನ್ ಕನಸಲ್ಲಿನಾವೆಲ್ಲಾ ಇದ್ವಿ. ಅಂದ್ರೆ ನಾನುಅಪ್ಪಜಿಮಮ್ಮಿಪ್ರಮೋದ ಮತ್ತೆ ನೀನು. ಮೋಸ್ಟ್ಲಿ ಮದ್ವೆ ಆಗಿತ್ತು ಅನ್ಸುತ್ತೆ. ಇಲ್ದಿದ್ರೆ ನೀನೆಲ್ಲಿ ನಮ್ ಮನೇಲಿರ್ತಿದ್ದೆ. ಆಗ ನಮ್ಗಳ ಜೊತೆ ಒಂದು ಲ್ಯಾಬ್ರಡಾರ್ ನಾಯಿ ಮತ್ತೆ ಬಿಳಿ ಬೆಕ್ಕುಗಳೂ ಇದ್ವು. ನಮ್ಮನೆಲಿ ಪ್ರಾಣಿಗಳನ್ನ ಸಾಕೋಕೆ ಏನಾದ್ರೂ ಕೊಂಕು ತೆಗ್ಯೋ ಮಮ್ಮಿಅಸಡ್ಡೆ ತೋರ್ಸೋ ಅಪ್ಪಜಿ ಎಲ್ರೂ ಆ ಪ್ರಾಣಿಗಳನ್ನ ಸಾಕೊಳೋಕೆ ಹೆಂಗ್ ಒಪ್ಕೊಂಡ್ರುನಾನು ಯೋಚ್ನೆ ಮಾಡ್ತೀನಿ ಈಗ.
ನಿಂಗೆ ಇನ್ನೊಂದ್ ಅಚ್ಚರಿ ವಿಷ್ಯ ಹೇಳ್ಬೇಕುಆ ನಾಯಿ ಮತ್ತು ಬೆಕ್ಕುಗಳು ನೀನವತ್ತು ಬೆಳದಿಂಗಳ ರಾತ್ರಿಲಿ ನನ್ ಮಡಿಲಲ್ಲಿ ತಲೆಯಿಟ್ಟು ಹೇಳಿದ್ಯಲ್ಲಾನಿಮ್ ಪಕ್ಕದ್ ಮನೆಯಿಂದ ಕಾಣೆಯಾಗಿವೆ ನಾಯಿಬೆಕ್ಕು ಅಂತ.. ಥೇಟ್ ಹಾಗೇ ಇದ್ವು. ಮೋಸ್ಟ್ಲಿ ನಿನ್ಗೆ ಅದೆಲ್ಲಾ ಇಷ್ಟ ಅಂತನೇ ಮನೆಯವ್ರೆಲ್ಲಾ ಸಾಕೋಕೆ ಒಪ್ಕೊಂಡಿರ್ಬೇಕಲ್ವಾ ಮುದ್ದುನೋಡಿದ್ಯಾ ನಮ್ಮನೆ ಅಂದ್ರೆ ಹೀಗೆಯಾವುದೇ ವಿಷಯ ತಗೊಂಡ್ರೂ ಮೂರ್ ಮೂರ್ ದಿಕ್ಕಲ್ಲಿ ಯೋಚ್ನೆ ಮಾಡ್ತೀವಿ. ಪ್ರೀತಿ ವಿಷ್ಯ ಬಂದ್ರೆ ಮಾತ್ರ ಒಂದೇ ಮಂತ್ರಒಂದೇ ದಿಕ್ಕು. ಈ ದಿನ ನಿನ್ಗೊಂದು ಪ್ರಾಮಿಸ್ ಮಾಡ್ತಿದ್ದೀನಿಪ್ರಪಂಚದ ಪ್ರೀತಿಯನ್ನೆಲ್ಲಾ ನಿನ್ನ ಮಡಿಲಿಗೆ ಸುರಿಯುವ ನಾನುನನ್ನ ಜಗತ್ತಿಗೆ ನಿನ್ನ ರಾಣಿಯಾಗುಸ್ತೀನಿನಿನ್ನ ಪುಟ್ಟ ಜಗತ್ತೊಳಗೆ ನನ್ನನ್ನೊಂದು ಭಾಗವಾಗಿಸ್ಕೋತೀಯಾ? :-)

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೪


ಪತ್ರ - ೪
-----------

ಒಲುಮೆಯ ಮುದ್ದುಗೆ,

ಅರಿವಾಗದ ಮೌನದೊಳುಹರಿವ ಧ್ಯಾನದೊಳುನಿನ್ನೊಲವಿನೊರತೆ ಹೃದಯದಿಂದ ಚಿಗಿದುಪುಟಿದು ಕಳೆಗಟ್ಟುತ್ತಿದೆ. ಜಿನುಗಿದ ಒಲವನ್ನು ಚೇಸು ಮಾಡುವ ಧಾವಂತಕ್ಕೆ ಬೀಳುತ್ತೇನೆ. ಆಹಾ! ನನ್ನ ಚಲನೆಯನ್ನು ನಿನಗೆ ನಿರೂಪಿಸುವೆ ಕೇಳುಮಜವಿದೆ. ನಿನ್ನ ಕಣ್ಣೊಳಗಿಂದ ಪುಟಿದ ಒಲವು ಗುಂಡಗೆ ಗೋಳಾಕಾರ ಪಡೆಯುತ್ತದೆಉರುಳುತ್ತದೆ. ಒಂದು ಆಯಕಟ್ಟಿನ ಜಾಗ ನೋಡಿ ತಣ್ಣಗೆ ನಿಂತುಬಿಡುತ್ತದೆ. 'ನನಗೊಂದು ಕೋಲು ಕೊಡಿಭೂಮಿಯನ್ನು ಉರುಳಿಸುತ್ತೇನೆಎಂದ ಆರ್ಕಿಮಿಡೀಸ್ ಒಂದು ರೀತಿಯ ಬೆರಗು ಹುಟ್ಟಿಸುತ್ತಾನೆ. ನಾನೂ ಒಲವನ್ನು ನಡೆಸಲು ಸನ್ನೆ ಹುಡುಕುವೆಆಗ ನಡೆದ ಅಚ್ಚರಿಗಳ ಒಟ್ಟು ಮೊತ್ತವೇ ಈ ಪತ್ರ. ಸ್ವಲ್ಪ ಕಾವ್ಯಾತ್ಮಕವಾಗಿಸಲು ಪ್ರಯತ್ನಿಸಿದ್ದೇನೆನನ್ನ ಆರ್ಟಿಫಿಶಿಯಲ್ ಭಾಷೆಯನ್ನು ಸಹಿಸಿಕೋ!

ಆ ಗೋಳಾಕಾರದ ಒಲವು ಥೇಟು ಸಕ್ಕರೆ ಪಾಕದಲದ್ದಿದಂತೆ ಸವಿಪಾಕವನ್ನು ಸುರಿಸುತ್ತಿದೆ. ನಿಂತ ನಿಲುವಲ್ಲೇ ಕರಗುವ ಐಸ್ಕ್ರೀಮಿನಂತೆ. ಅಲ್ಲಿಂದ್ಹೊರಟ ಒಂದು ಬಿಂದು ಉರುಳಿಉರುಳಿ ಬಿದ್ದು ಕುಡಿಯೊಡೆದು ಹೂವಾಗುತ್ತದೆಹೂವು ಸಿಹಿಯಾಗುತ್ತದೆ. ನಿರ್ಜೀವ ಹೂವು ಫಳ ಫಳ ಹೊಳೆದುಗಾಳಿಗೆ ಗಂಧ ಪೂಸಿಮದುವಣಗಿತ್ತಿಯಾಗಿದೆ. ಚಕಿತ ಕ್ಷಣಗಳ ಹಿಡಿಯಲಾಗದೆಮನ ಚೂರು ಹೊಡೆದು ಬಣ್ಣವಾಗಿದುಂಬಿಚಿಟ್ಟೆಯಾಗಿ ಹೂವನ್ನು ಮುತ್ತುತ್ತಿದೆ. ಮೈಲಿಗೆಯ ಮಿತಿ ಮೀರಿದ ಇದಕೆ ವಿಜ್ಞಾನಿಗಳು ಪರಾಗವೆಂದು ಕರೆದುಬಿಟ್ಟರು. ಹುಟ್ಟುಗಳಿಗೊಂದ್ಹುಟ್ಟು ಕೊಟ್ಟ ಗೋಳ ತನ್ನ ಕಣ್ಣೊರಳಿಸುತ್ತಿದೆ. ಪರಾಗ ನಿರಂತರ ಮತ್ತು ನಿರಾತಂಕ! ಹೂವಿನ ಜಾಡು ಅರಸಿ ಹಾರಿ ಬರುವ ಪಕ್ಷಿಗಳಿಗೂ ಚಿಲಿಪಿಲಿಗುಟ್ಟುವುದನ್ನು ಕಲಿಸುತ್ತಿದೆ ಹೂವ ಗಂಧ. ಒಂದರ ಹೂವ ಕೇಸರಗಳು ಮತ್ತೊಂದಕೆ ಬೆಸೆದು ತರಹೇವಾರಿ ಹೂವುಗಳು ಜೀವತಳೆಯುತ್ತವೆ. ಬಣ್ಣಗಳು ಭಾವತಳೆಯುತ್ತವೆ. ಭೂಮಿ ಜೀವಂತವಾಗುತ್ತದೆ.

ನಿನಗೊಂದು ನಿಜ ಗೊತ್ತಾ ಮುದ್ದುಎಲ್ರೂ ಹೇಳ್ತಾರೆಭೂಮಿ ನಿಂತಿರೋದೆ ಗುರುತ್ವದ ಮೇಲೆಇನ್ನೂ ಕೆಲವರು ಹೇಳ್ತಾರೆ ಭೂಮಿ ನಿಂತಿರೋದು ನಂಬಿಕೆ ಮೇಲೆನಾನು ಹೇಳ್ತೇನೆ, 'ಈ ದುಂಡಾದ ಭೂಮಿ ನಿಂತರೋದು ನಿನ್ನೊಲವ ಮೇಲೆ', ಅದರ ಸೃಷ್ಟಿಯ ಕಾರಣವೂ ನಿನ್ನೊಲವೇಗುಂಡಾದ ಒಲವ ಚಲನೆಗೂ ನಿನ್ನ ಕಣ್ಣೋಟವೇ ಸನ್ನೆ. ಅಷ್ಟೂ ಒಲವನ್ನು ನನ್ನೆದೆಯೊಳಗೆ ಬಚ್ಚಿಟ್ಟುಜೀವನ ಪರ್ಯಂತ ನಿನಗೆ ಎಡೆಯಿಡುತ್ತಿದ್ದೇನೆ. ನಿನ್ನ ಕನಸುಗಳಿಗೆ ರೆಕ್ಕೆಯಾಗುತಿದ್ದೇನೆಸ್ವೀಕರಿಸೆನ್ನ ಒಲವ ಪೂಜೆಗೆ.

ಎಂದೆಂದೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)