ನಾನುಣಬಡಿಸುವ ಪದ್ಯಕ್ಕೆ
ಹಸಿ ಮಾಂಸದ ಬಿಸಿ ನೆತ್ತರ
ಭಾವಗಳ ಸ್ಪರ್ಶವಿದೆ,
ಓದಬೇಡಿರೆಂದು ಕೈ ಮುಗಿದು
ಕೋರುತ್ತೇನೆ;
ಮುಂದಾಗುವ ಅನಾಹುತಗಳಿಗೆ
ನಾನು ಜವಾಬ್ದಾರನಲ್ಲ,
ಹಸಿದ ಹಲ್ಲುಗಳಿಗೆ
ಮೃದು ಹೃದಯ ಹೊರತಲ್ಲ!
ಹದ್ದಿನ ಸರಹದ್ದು
ಕಣ್ಣುಗಳು ಕಾದು ಕುಳಿತಿವೆ,
ನೋವಿಗೆ, ನೆರಳಿಗೆ,
ವಿರಹಕೆ, ಪ್ರೇಮಕೆ,
ಬಳಲಿದ ಬಂಧಕೆ,
ಇಡಿಯಾಗಿ ಸಿಕ್ಕ ದೇಹಕೆ,
ನರ ನೆತ್ತರು, ಮೂಳೆ ಮಜ್ಜೆಗಳು,
ಯಾವುದಾದರೂ ಸರಿ,
ಹುಲಿ ಹರಿದರೆ ಹಳಸು ಮಾಂಸ,
ಹಸೀದೇ ಸಿಕ್ಕರೆ
ರುಚಿಕಟ್ಟು ಎಳೆಸು ಮಾಂಸ!
ಅವು ಕಚ್ಚಿ ಕತ್ತರಿಸಿದ
ಪದ್ಯ ನಿಮ್ಮೆಡೆಗೆ,
ಕ್ಷಮಿಸಿ ನಿಮಗರಿವಿರದೆ
ನೀವು ನರ ಭಕ್ಷಕರಾಗಿದ್ದೀರಿ,
ನನ್ನ ಪಾಪಗಳ
ವಾರಸುದಾರರಾಗಿದ್ದೀರಿ,
ನೈತಿಕತೆ - ಅನೈತಿಕತೆ
ಮೀರಿದ ಶುದ್ಧ ಭಾವಗಳ
ಮೆರವಣಿಗೆಯಲಿ
ಬಂದು ಹೋದಿರಿ!
--> ಮಂಜಿನ ಹನಿ
ಚಿತ್ರಕೃಪೆ: ಗೂಗಲ್ ಅಂತರ್ಜಾಲ
ನಮಗೂ ಸೊಪ್ಪು ಸೆದೆ ತಿಂದು ನಾಲಿಗೆ ಜಡ್ಡುಗಟ್ಟಿತ್ತು ಗೆಳೆಯ.
ReplyDeleteನರಭಕ್ಷಕರಾದರೂ ಸೈ ಇಂತಹ ಮಾಂಸದೂಟದ ಪದ್ಯಕ್ಕೆ ನಾವು ಚಿರ ಋಣಿಗಳು.
ಸುಂದರ ದೇಹದೊಳಗಿನ ಭಾವದ ಮಾಂಸಾಹಾರ ಸೇವಿಸಿ ಎಲ್ಲರೂ ಭಕ್ಷಕರಾದವರೇ. ಭಾವಭಕ್ಷಕರು.
ReplyDeleteಭಾವಗಳು ಹಲವು ಸಲ ಹೀಗಾಗುತ್ತವೆ... ನೈತಿಕತೆಯ ಮೂಸೆಯೊಳಗೆ ಅನೈತಿಕತೆಯ ಜಾಡು.. ಮತ್ತಷ್ಟು ಬಲಿಯಾಗಲಿ ಕ್ರೂರ ವಾಸ್ತವಗಳು ನಿಮ್ಮ ಖಡ್ಗದಲ್ಲಿ :)
ReplyDelete