ಕಟ್ಟು ಕರದಂಟು, ಕೀರೆ
ಕಿಲ್ ಕೀರೆ ಸೊಪ್ಪುಗಳ ನಡುವೆ
ಅಮಾಯಕವಾಗಿ ಬಿದ್ದ
ಬೆವರ ಹನಿ,
ಚಿಲ್ಲರೆ ಕಾಸಿನ ಅಸಹಾಯಕತೆ
ಮತ್ತು
ನೂರು ರೂ ಬಂಧದ ಆಸೆಗೆ
ಹಲ್ಲು ಕಿರಿದ ಒಳಗಿಸೆಗಳು,
ಆಗಾಗ ಒಂದೋ ಎರಡೋ ಕಟ್ಟುಗಳ
ಹೆಚ್ಚುವರಿ
ಕೈ ಬದಲಾವಣೆಗೆ
ಚಲಾವಣೆಯಾಗುವ ಅಯ್ಯನ್, ಅಮ್ಮನ್
ಉವಾಚಗಳು;
ಬೈಗುಳಗಳು ಪದ್ಯಗಳಾಗಿವೆ!
ನೆನ್ನೆ ಬಿದ್ದ ಮಳೆಗೆ
ಹದಕೆ ಬಂದ ಇಳೆಗೆ
ಮಿಲನದ ಸಂಭ್ರಮ,
ಮಳೆ ಗಂಡೋ ಹೆಣ್ಣೋ?
ಇಳೆ ಸಲಿಂಗಿಯೋ?
ಎಂಬ ಜಿಜ್ಞಾಸೆಗಳು,
ಮೊನ್ನೆ ಅಮೇರಿಕಾದ ವಾಷಿಂಗ್ಟನ್ನಲ್ಲಾದ
ಸ್ನೋ ಫಾಲಿಗದೆಷ್ಟು ಜನರ
ಜೀವನ ಅಸ್ತವ್ಯಸ್ತವಾಗಿದೆಯೋ
ಎಂಬ ಆತಂಕಗಳು,
ನಿಗೂಢ ಚರ್ಯೆ ಹೊತ್ತ
ಪಶ್ಚಿಮ ಘಟ್ಟಗಳು,
ಮಂಜು ಹೊತ್ತು ಮಳೆ ಕರೆದಾಗ
ಮಿದುವಾಗುವ ಕವಿ ಹೃದಯ
ಹೆಣ್ಣೋ ಗಂಡೋ?
ಕುತೂಹಲಗಳಿಗೆ ಕವಿತೆ
ಬರೆಯುತ್ತದೆ,
ನಾನವುಗಳನ್ನೆಲ್ಲಾ ಬುಟ್ಟಿಗಾಕಿಕೊಂಡು
ಮಾರಲು ಹೊರಡುತ್ತಿದ್ದೆ!
ಒಂದು ವರ್ಷದಿಂದೀಚೆಗೆ
ಮಹಾನ್ ಆದ ಭವ್ಯ ಭಾರತದ
ಕನಸುಗಳನ್ನು
ಅಪ್ಪಟ ವ್ಯಾಪಾರಿಯೊಬ್ಬ ಮಾರುತ್ತಾನೆ,
ನನಸು ಮಾಡಿಸಿಕೊಳ್ಳಲಾಗದ
ಅಸಹಾಯಕ ಜನ
ಕೊಳ್ಳುತ್ತಾರೆ, ಕೊಳ್ಳುತ್ತಾರೆ...
ಬೀದಿ ಬದಿಯಲ್ಲೇ ಬಿದ್ದ ಬಡತನ,
ನಿರ್ಗತಿಕರ ಅನಾಥತೆ,
ಕರುಳು ಸುತ್ತುವ ಹಸಿವು,
ದುಡಿಯಗೊಡದ ನಿರುದ್ಯೋಗಗಳು
ವಿದೇಶ ಸಂಚಾರಿಯ ಫ್ಲೈಟ್ ಮೋಡಿನಲ್ಲಿ
ಸದ್ದಡಗಿಸುತ್ತವೆ,
ಒಂದು ವರ್ಷವಾದರೂ ಏನೂ ಬದಲಾಗಿಲ್ಲ
ಎಂಬ ಹತಾಶೆಯ ಪದ್ಯವೊಂದಿತ್ತು
ಭಾರೀ ಬೆಲೆ ಬಾಳುವಂಥದ್ದು,
ಈಗೆಲ್ಲಿ, ಮಾರುವುದಿಲ್ಲ!
ಪದ್ಯವನ್ನು ಸಗಟು ಸಗಟು
ಮಾರಿ ಬಂದ ಹಣದಲ್ಲಿ
ಬನ್ನು ಕೂಡ ಕೊಳ್ಳಲಾಗದ
ನಿರಾಸೆಗೆ,
ಮುಟ್ಟಿ ಮುಟ್ಟಿ ಒದ್ದೆಯಾದ
ಖಾಲಿ ಜೇಬು ನೋಡಿಕೊಳ್ಳುವಾಗ
ಅನಿಸುತ್ತದೆ; ಇಲ್ಲಿ
ಕನಸುಗಳನು ಮಾರುವುದು ಮೋಜು,
ವಾಸ್ತವದ
ಪದ್ಯಗಳನ್ನು ಮಾರುವುದು ಜೂಜು,
ಅದಕ್ಕೆ ನಾನು ಪದ್ಯ ಮಾರುವುದನ್ನು ಬಿಟ್ಟಿದ್ದೇನೆ!
- ಮಂಜಿನ ಹನಿ
ಚಿತ್ರಕೃಪೆ: ಗೂಗಲ್ ಅಂತರ್ಜಾಲ
No comments:
Post a Comment