----------
ಒಲುಮೆಯ ಮುದ್ದುಗೆ,
ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು ಕಣೇ. ಈ ಒಂದು ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕ, ನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲ, ಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆ, ಈ ಥರದ ಭ್ರಮೆಗೆ ಅದೇನೆನ್ನುವರೋ? ನನಗೆ ಮಾತ್ರ ತೀರದ ಚಡಪಡಿಕೆ. ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆ, ಕನ್ನಡಿಯೊಳಗಿನ ನಿನ್ನ ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡ? ನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವ, ಆ ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸು, ಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟ, ಮಾತು, ಸ್ಪರ್ಶ, ಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲ, ಎಂಥ ತಮಾಶೆ ನೋಡು? ಈ ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನ ಈ ಬಲೆಯಿಂದ ಪಾರು ಮಾಡ್ತೀಯಾ?
ಈ ಪತ್ರ ಬರಿವಾಗ ನಿನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ಕೂತಿದ್ದೇನೆ. ಅಕ್ಷರಗಳೆಲ್ಲಾ ತಡವರಿಸಿ ಬೀಳುತ್ತಿವೆ, ಪದಗಳು ನೀರಸ ಅನ್ನುಸ್ತಿವೆ. ನಾಳಿನ ಕನಸುಗಳಿಗೆ ಪುಳಕಗೊಳ್ಳುತ್ತಾ, ಪತ್ರವನ್ನು ಮುಗಿಸುತ್ತಿದ್ದೇನೆ. ನನಸುಗಳು ಕನಸುಗಳಿಗಿಂತ ರುಚಿಕಟ್ಟಾಗುವ ಕ್ಷಣಗಳಿಗೆ ಜಾತಕ ಪಕ್ಷಿಯಾಗಿದ್ದೇನೆ.
ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)
No comments:
Post a Comment