ಪತ್ರ - ೧
--------
ಒಲುಮೆಯ ಮುದ್ದುಗೆ,
ನಿಂಗೆ ನನ್ ಪತ್ರ ಅರ್ಥವಾಗುತ್ತೋ, ನಿದ್ರೆನೇ ಬರಿಸುತ್ತೋ ಅನ್ನೋ ಭಯಗಳನ್ನು ಮೀರಿ ಪತ್ರ ಬರೀತಿದ್ದೀನಿ ಸಹಿಸ್ಕೊ.
ನಿದ್ರೆ ಬಂದ್ರೆ ತಾಚಿ ಮಾಡು, ನನ್ನ ಪತ್ರ ನಿನ್ನ ತಟ್ಟಿ ಮಲಗಿಸುತ್ತೆ.
ನಿನ್ಜೊತೆ ಅಷ್ಟು ಕೊರೀತೀನಿ, ಆದ್ರೂ ಯಾಕ್ ಪತ್ರ ಬರೀತಿದ್ದೀನಿ ಅಂತ ಆಶ್ಚರ್ಯ ಅಲ್ವಾ? ನಂಗೊತ್ತು! ಇವೆಲ್ಲಾ ನನ್ನೆದೆಯ ಪಿಸುಮಾತುಗಳು. ಕಿವಿಯಲ್ಲಷ್ಟೇ ಪಿಸುಗುಟ್ಟುವ
ನನ್ನೊಲವ ಗುಟ್ಟುಗಳು. ನನ್ನೊಳಗೆ ಕುಡಿಯೊಡೆವ ಕನಸುಗಳು, ನಿನಗಾಗಿ ಕಾತರಿಸಿದ ಕ್ಷಣಗಳು, ನಿನಗಾಗಿ ಕಾದಿರುವ ನಾನು, ನನ್ನ ಜಗತ್ತು,
ನೀನು, ನಿನ್ನ ಜಗತ್ತು, ಎಲ್ಲವನ್ನೂ ಅಕ್ಷರಕ್ಕಿಳಿಸುತ್ತಿದ್ದೇನೆ.
ನಿನ್ನೊಲವ ನೈವೇದ್ಯಕ್ಕೆ ಮುಡಿಪಿಡುತ್ತಿದ್ದೇನೆ.
ಇದೇ ರೀತಿ ಫೆಬ್ರವರಿ ೧೪ರ ವರೆಗೂ ಒಂದಷ್ಟು
ಪತ್ರಗಳು ನಿನ್ನನ್ನು ತಲುಪಲಿವೆ. ಅದರಲ್ಲಿ ಕಿವಿಗೊಟ್ಟರಷ್ಟೇ ಕೇಳಿಸುವ ಎದೆಬಡಿತಗಳಿವೆ.
ಹೆಣ್ಣಿನ ಪ್ರೀತಿ ಮತ್ತು ಮನಸ್ಸುಗಳು
ಸಮುದ್ರಕ್ಕಿಂತ ಆಳ ಮತ್ತು ನಿಶ್ಚಲವಂತೆ. ನಾವೇ(ಗಂಡಸರು) ನದಿಗಳು, ಚಲನೆಯನ್ನೇ ಪ್ರೀತಿ ಎಂದು ನಂಬಿರುತ್ತೇವೆ. ಅಂಕು, ಡೊಂಕೆನ್ನದೆ ಚಲಿಸುತ್ತಲೇ ಇರುತ್ತೇವೆ. ನೀನು ಸಿಕ್ಕ ಮೇಲೆಯೇ
ನನಗಿದರರ್ಥವಾಗುತ್ತಿದೆ. ನಿನ್ನೊಲವೊಳಗೆ ಕರಗಿದಷ್ಟೂ ನಿನಗಿಷ್ಟದ ರುಚಿ ಪಡೆದು ಭೋರ್ಗರೆದು ಉಕ್ಕುತ್ತಿದ್ದೇನೆ,
ನಾನಾಗೇ ಉಳಿಯುತ್ತಿದ್ದೇನೆ. ನಿನ್ನ ತೀರ ತಾಕುವವರೆಗೂ
ಹೀಗೇ ಇರುತ್ತೇನೆ, ತಾಕಿದ ಮೇಲೂ ಹೀಗೇ ಇರುತ್ತೇನೆ.
ನಾನಿರುವಂತೆಯೇ ಒಪ್ಪಿಕೊಂಡು ಅಪ್ಪಿಕೊಂಡಿರುವ ನಿನಗೆ ಋಣಿಯಾಗಿದ್ದೇನೆ.
ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)
ಪ್ರೇಮಿಗಳ ದಿನದ ವಿಶೇಷಕ್ಕೆ ಬರೆದ ಒಂದಷ್ಟು ಪತ್ರಗಳು, ಫೆಬ್ರವರಿ ತಿಂಗಳಲ್ಲಿ...
ಏಳು ಪತ್ರಗಳೂ ಬೇರೆ ಬೇರೆ ಪೋಸ್ಟ್ ತರಹ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಆಗುತ್ತ ನೋಡಿ ಗೆಳೆಯ.
ReplyDelete