ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 29 November 2012

ಅರಿಷಡ್ವರ್ಗಗಳ ಉರಿ



ಕಾರುತ್ತವೆ, ಉರಿಯುತ್ತವೆ,
ದೇಹವನ್ನೇ ದಹಿಸುತ್ತವೆ,
ನಿಗ್ರಹಿಸಿದವನು ಸಂತ,
ನಿಗ್ರಹಿಸದವಗವು ಸ್ವಂತ!
ಸೊಂಪಾದ ಬತ್ತಿಗೆ ಕಿಡಿಯಿಟ್ಟವನು
ಅವನೋ ಆಟವಾಡುತ್ತಾನೆ!
ಉರಿದವರು ಮಾತ್ರ ನಾವೇ!
ಅರಿಷಡ್ವರ್ಗಗಳ ಉರಿಗೆ!

ದಗದಗಿಸಿ ಉರಿದು
ಸ್ಖಲಿಸಿ ಉಗಿದದ್ದಷ್ಟೇ
ಪ್ರೇಮಕ್ಕೆ ಹಿಡಿಯಷ್ಟು ಮಣ್ಣು!
ಕಾಮಕ್ಕೆ ನೂರೆಂಟು ಕಣ್ಣು!
ಕ್ರೋಧದ ದಾವಾಗ್ನಿಗೆ
ಬೆಂದುಹೋಯಿತು ಕುರುವಂಶ
ಕಾರಿಕೊಂಡವನು ಸುಯೋಧನ
ಪಡೆದದ್ದು ಏನು?

ಶಕುನಿಯ ಕುಯುಕ್ತಿಗೆ
ಸುಯೋಧನನ ದಾಹ ಬೆಸೆತ!
ರಾಜ್ಯದಾಸೆಯ ಲೋಭಕ್ಕೆ
ಬರೆಸಿಕೊಂಡ ಭಾರತ!
ತಾರುಣ್ಯವತಿ ದ್ರೌಪದಿ,
ಏನ ಕಂಡನೋ ಕೀಚಕ!
ಮೋಹಕ್ಕೆ ಮತ್ತೊಂದು ಬಲಿ
ಬಲ ಭೀಮನ ಕೈಯ್ಯಲ್ಲಿ!

ಋಷಿಗಳ ಕೊರಳ್ ಹಿಡಿದು
ಗೋಪಿಕೆಯರ ಸೆರೆ ಹಿಡಿದ
ಅದಮ ನರಕನ ಬಲಿ ತೆಗೆದದ್ದು
ಮದ, ಭಾಮೆಯು ಸುಳಿಮದ್ದು!
ಶಕುನಿಯ ಮಾತ್ಸರ್ಯವು
ಕುರುಕ್ಷೇತ್ರಕೆ ಧಾಳ ಹೂಡಿ,
ಅವನಾದರೂ ಉಳಿದನೆ?
ಅವನೂ ಹಳಿದು ಹತನಾದವನೇ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Monday, 26 November 2012

ಈ ಹೃದಯ ಹಾಡಿದೆ!



ನಲ್ಮೆಯ ಗೆಳತಿ,

ಇದೇನು ಕಾರಣವಿಲ್ಲದೆ ಪತ್ರ ಅನಾಮಧೇಯನಿಂದ, ಎಂದು ಬೇಸರಿಸದಿರು. ಹೆಸರು ನೋಡಿ ಎಸೆಯದಿರಲೆಂದೇ ಹೆಸರ ಮರೆ ಮಾಚಿದ್ದೇನೆ. ಪತ್ರ  ಓದುತ್ತಿದ್ದಂತೆ ಹೆಸರು ನಿನಗೇ ತಿಳಿಯುತ್ತದೆ ಎಂಬುದು ನನ್ನ ನಂಬಿಕೆ, ಮುದ್ದು ಬಂದರೆ ಮುದ್ದಿಸು ಸಾಕು! ಪ್ರೀತಿ ಹರಿವ ನೀರು ಅದನ್ನು ತಡೆವವರಾರು ಎಂದು ಹರಿದಿದ್ದೇ ನನ್ನ ತಪ್ಪಾಯ್ತು ಎನಿಸುತ್ತದೆ. ನೆನಪು ಉಡುಗೊರೆಯಾಯ್ತು, ವಿರಹ ಆಸರೆಯಾಯ್ತು, ಬರವಣಿಗೆಯೊಂದೇ ಆಸ್ತಿಯಾದದ್ದು!

ಬಸ್ ನಲ್ಲಿನ ಜೊತೆ ಪ್ರಯಾಣದೊಂದಿಗೆ ಮೊದಲ್ಗೊಂಡ ಸ್ನೇಹ, ಎದುರಿಗೆ ಸಿಕ್ಕಾಗ ಹೊರಬೀಳುತ್ತಿದ್ದ ಹಾಯ್-ಹಲೋಗಳು ಮತ್ತು ಕಣ್ಣೋಟಗಳಲ್ಲಿ ಪ್ರೀತಿಯಾಗಿ ಬೆಳೆಯುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಪ್ರೀತಿಯಲ್ಲಿ ನನಗಿನ್ನೂ ಅರ್ಥವಾಗದ ಸಂಗತಿ ಎಂದರೆ ನಿರುಪದ್ರವಿಗಳು ನಾವು, ನಮ್ಮ ಪ್ರೀತಿಗೇ ಇಂತಹ ಅಡೆತಡೆಗಳು ಬರಬೇಕಾ? ನಿನ್ನ ನೆನಪಾದಾಗಲೆಲ್ಲಾ ಆ ವಿಧಿಯನ್ನು ಅದೆಷ್ಟು ಶಪಿಸಿದ್ದೇನೋ? ಆದರೆ ಅವನಿಗೆ ಮಾತ್ರ ಸ್ವಲ್ಪವೂ ತಟ್ಟಿದಂತೆ ಕಾಣುತ್ತಿಲ್ಲ!

ನಿನಗೆ ಕಾಡುತ್ತಿರಬಹುದು, ಒಂದೂವರೆ ವರ್ಷ ಒಂದೂ ಮಾತನಾಡದೆ ದೂರ ಉಳಿದವನು, ಹುಟ್ಟುಹಬ್ಬದಂದು ಶುಭಾಷಯ ತಿಳಿಸಲೂ ನೆನಪಿಸಿಕೊಳ್ಳದವನು ಈಗ್ಯಾಕೆ ಬಂದ ಎಂದು? ಎಲ್ಲದಕ್ಕೂ ಕಾರಣಗಳಿಲ್ಲವೆಂದಲ್ಲ ಆದರೆ ನಿನಗೆ ಆ ಕಾರಣಗಳನ್ನು ಹೇಳಲಾರೆ. ನಿನ್ನ ಜೀವನದ ಬಗ್ಗೆ ನನಗಿದ್ದ ಕಾಳಜಿ ನನ್ನನ್ನು ನನ್ನವೇ ಊಹೆಗಳಲ್ಲಿ ತಳ್ಳಿಬಿಟ್ಟಿತ್ತು. ನಿನ್ನ ನೆನಪಾದಗಾಲೆಲ್ಲ ನೀ ಕೈ ಹಿಡಿದು ನಡೆದ ಈ ಕೈಗಳನ್ನು ಎದೆಗೊತ್ತಿ ಮಲಗಿಬಿಡುತ್ತಿದ್ದೆ.

ಇಷ್ಟೆಲ್ಲಾ ಯೋಚಿಸಿದ ನಂತರ ನೀನು ಸಂತೋಷವಾಗಿರಬೇಕಾದರೆ ನಾನು ದೂರವಿರಬೇಕು ಎಂಬ ನಿರ್ಧಾರಕ್ಕೆ ನನ್ನ ಮನಸ್ಸು ಬಂದುಬಿಟ್ಟಿತ್ತು. ಆ ನಿರ್ಧಾರಕ್ಕೆ ಲಾಜಿಕ್ ಹುಡುಕಬೇಡ, ನನಗೂ ಇನ್ನೂ ಸಿಕ್ಕಿಲ್ಲ! ಒಂದೂವರೆ ವರ್ಷಗಳ ನಂತರ ಉಳಿದಿರುವ ಆ ಒಂದು ಸಾಲ ನನ್ನನ್ನು ಮತ್ತೆ ನಿನ್ನ ಮುಂದೆ ನಿಲ್ಲಿಸುತ್ತಿದೆ. 'ನೀನು ಚೆನ್ನಾಗಿರುವುದನ್ನು ನೋಡಲು ನಾನು ಯಾವ ನೋವಾದರೂ ಸಹಿಸುತ್ತೇನೆ' ಎಂದು ಬಂದ ನನ್ನ ಉದ್ವೇಗದ ಮಾತಿಗೆ ನಿನ್ನ ಕಣ್ಣುಗಳಲ್ಲಿ ಇಣುಕಿದ ಆ ಮುತ್ತು ಹನಿಗಳು ಅವುಗಳಲ್ಲಿನ ಪ್ರೀತಿ, ಆ ನಿನ್ನ ನೋಟ! ನನ್ನ ಜೀವನ ಪರ್ಯಂತ ನಿನ್ನ ಪ್ರೀತಿಸಿದರೂ ಸವೆಯದ ಸಾಲಗಾರನನ್ನಾಗಿ ಮಾಡಿವೆ. ಸಾಲಗಾರನಾಗಿ ಸಾಯಲಾರೆ! ದಯವಿಟ್ಟು ನನ್ನ ಪ್ರೀತಿಯನ್ನು ಮತ್ತೆ ಅಪ್ಪಿ ಮುದ್ದಿಸು ಗೆಳತಿ! ಜೀವದ ಪರ್ಯಂತ ಕಾವಲಿರುತ್ತೇನೆ.

ನಿನ್ನ ಸ್ನೇಹ, ನಿನ್ನ ಒಡನಾಟ, ನಿನ್ನ ನಗು, ಆ ನಿನ್ನ ಪುಟ್ಟ ಪುಟ್ಟ ಭಯಗಳು ನನ್ನನ್ನು ಈಗಲೂ ಕಾಡುತ್ತಿವೆ. ಉಸಿರು ಬಿಗಿ ಹಿಡಿದು, ನಿನ್ನ ಅಪ್ಪಿ ಲಾಲಿ ಹಾಡಬೇಕು ಎನ್ನಿಸುತ್ತದೆ. ಮಧ್ಯ ರಾತ್ರಿಯಲಿ ನೀನು ಮಗುವಂತೆ ನಿದ್ರಿಸುವುದನ್ನು ನೋಡಬೇಕೆನಿಸುತ್ತದೆ. ಬೆಳಗಿನ ಮುಂಜಾನೆಗೆ ನಿನ್ನ ಕಿವಿಯಲ್ಲಿ ಪಿಸುಗುಟ್ಟಿ ಎಬ್ಬಿಸಿದಂತೆ ಕನಸ್ಸು ಬೀಳುತ್ತದೆ. ಎಲ್ಲದಕ್ಕೂ ಕಾರಣ ಹುಡುಕುತ್ತಾ ಹೋದರೆ ಮತ್ತೆ ಮನಸ್ಸು ನಿನ್ನಲ್ಲಿಯೇ ಬಂದು ನಿಲ್ಲುತ್ತದೆ. ಉತ್ತರ ಹುಡುಕುವುದನ್ನು ನಿಲ್ಲಿಸುತ್ತೇನೆ, ದಾರಿದೀಪವಾಗಿ ನೀ ಬರುವೆಯಾ? ಪ್ರೀತಿಯ ಸೆಲೆ ಬತ್ತದಂತೆ ಕಾಯುವೆಯಾ?

ಇಂತಿ (ನಿನ್ನ) ಗೆಳೆಯಾ!


- ಪ್ರಸಾದ್.ಡಿ.ವಿ

ಈ ಪತ್ರವು ’ಕನ್ನಡ ಪ್ರಭ’ ದಲ್ಲಿ ಡಿಸೆಂಬರ್ ೨೨ರ ಬೈಟೂ ಕಾಫಿಯ ’ಮಕರಂದ’ ಆವೃತ್ತಿಯಲ್ಲಿ ಪ್ರಕಟಿತವಾಗಿದೆ.


ಚಿತ್ರ ಕೃಪೆ: ಅಂತರ್ಜಾಲ

Sunday, 11 November 2012

ಹಚ್ಚೋಣ ಹಣತೆಯನ್ನು


ಹಚ್ಚೋಣ ಹಣತೆಯನ್ನು,
ಹಾದಿಗೂ ಬೀದಿಗೂ,
ಓಣಿಗೂ ಕೋಣೆಗೂ,
ತಮವನ್ನು ತೊಡೆವ,
ದೂರದೃಷ್ಟಿಯ ಹಡೆವ,
ದಿವ್ಯಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಕೋಶ-ಕೋಶದೊಳಗೆ,
ಅಂತರಂಗನಾತ್ಮದೊಳಗೆ,
ತೋಮರದಿ ತಿವಿದು, ರಕುತವನೇ ಬಸಿದ
ಮಾನವನ ಮನಶ್ಶುದ್ಧಿಗೆ
ಜ್ಞಾನಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಅಂಧತೆಯ ನೆರಳೊಳಗೂ,
ನೋಡಲಿ ನಮ್ಮ ಕಣ್ಣು,
ಸೇರಿದ ಮೇಲೂ ಈ ದೇಹ
ಭೂದೇವಿಯ ಮಣ್ಣು,
ಹಚ್ಚೋಣ ಬನ್ನಿರೈ ಬನ್ನಿ
ತೇಜೋರೂಪಿ ದೀಪ್ತಿಯನ್ನು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 3 November 2012

ಉಚ್ಛ್ವಾಸ-ನಿಶ್ವಾಸದೊಳಗೆ


ಉಸಿರಾಟದಿ ಒಳ ಸೇರಿ
ಶ್ವಾಸ ನಾಳದೊಳಿಳಿದು
ದೇಹ ಸೇರಿದ ಪ್ರಾಣವಾಯು,
ಹೊರಗೆ ಹಾರಿದಿಂಗಾಲದನಿಲ,
ಊದಿಕೊಂಡಿತ್ತು ಶ್ವಾಸನಾಳ!
ಉಚ್ಛ್ವಾಸ-ನಿಶ್ವಾಸಗಳಿವು,
ಜೀವದಲ್ಲಷ್ಟೆ ಅರಳುವವು!

ದೇಹದಲ್ಲಿ ಪ್ರಾಣವಾಯುವನ್ನು
ಬೆರೆಸಲೆಂದೇ ಹೃದಯ ತಾ ಬಡಿಯುತ್ತದೆ!
ರಕ್ತದೊಳ ಪ್ರಾಣವಾಯು
ದೇಹದಣುವಣುವನ್ನೂ ಸೇರಿದರೆ ಲಬ್!
ಇಂಗಾಲದನಿಲ ಹೊತ್ತುತರುವಾಗ ಡಬ್!
ಹೃದಯದ ಕವಾಟಗಳವು
ಮುಚ್ಚಿಕೊಂಡು ಬಿಚ್ಚಿಕೊಳ್ಳುವವು!

ಜೀವವಿಲ್ಲದೆ ಬರಿಯ ಬೂದಿಯೂ
ಮಾನವನ ದೇಹವಿದು,
ದೇಹಕ್ಕೆ ಜೀವ ತುಂಬಿ,
ಅದರೊಳಗೆ ಆತ್ಮನಿರಿಸಿ,
ತಾನೂ ಒಳ ಸೇರಿಬಿಟ್ಟ ಅವನು!
ಜಪಿಸುತ್ತೇನೆ ಕೃಷ್ಣಾರ್ಪಣಂ
ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದೊಳಗೆ!

- ಪ್ರಸಾದ್.ಡಿ.ವಿ.

Monday, 29 October 2012

ರಾಗವಿದೋ ಮೇಲೆದ್ದಿದೆ



ರಾಗವಿದೋ ಮೇಲೆದ್ದಿದೆ,
ಅರಿವಿನಂಚಿನಲಿ ಅಳಿದು ಸೊರಗಿದ್ದ
ರಾಗವೊಂದು ಮತ್ತೆ ಮೇಲೆದ್ದು
ಗಗನವ ಚುಂಬಿಸ ಬಯಸುತಿದೆ!

ಹೂಳು ಹೊದ್ದು ಮಲಗಿದ್ದ
ಹಾಳು ರಾಗವೊಂದು ಮೇಲೆದ್ದಿದೆ!
ಸಾಲುಬಿದ್ದ ಸಾವಿರ ಕಾಲು ಮುರಿದ
ಕನಸುಗಳ ಅಣಕಿಸಿದೆ!
ಏನಿತ್ತು ತಣಿಸಲಿ ಇದನು
ಮೌನಕ್ಕೆ ಶರಣು ನನ್ನೊಳಗಿನ ಆನು!

!!ರಾಗವಿದೋ ಮೇಲೆದ್ದಿದೆ!!

ನಿರಾಸೆಯನ್ನು ಮೀರಿ ನಿಂತ
ಚಿತ್ತಕ್ಕೆ ಹಸಿರನ್ನೇ ಮೆತ್ತುತಿದೆ!
ಹಣೆಯಾ ಬರಹವನ್ನೂ
ಅಲುಗಿಸುತ್ತಿದೆ! ಆಳುತ್ತಿದೆ!
ಸುಪ್ತವಾಗಿದ್ದ ಅತೃಪ್ತರನ್ನು
ಮತ್ತೆ ಕರೆಯುತ್ತಿದೆ!

!!ರಾಗವಿದೋ ಮೇಲೆದ್ದಿದೆ!!

ಹೊಸ ಕನಸುಗಳನ್ನು
ಮೇಲೆಬ್ಬಿಸಿ ನಾನೊಳಗೆ
ತಾನನ್ನು ಬೆರೆಸುತ್ತಿದೆ!

!!ರಾಗವಿದೋ ಮೇಲೆದ್ದಿದೆ!!

- ಪ್ರಸಾದ್.ಡಿ.ವಿ.

Monday, 15 October 2012

ಆವರಿಸೆನ್ನ ಓ ಗುರುವೇ ಅಂತರಾತ್ಮ




ಅರಿವಿನಣುವಣುವನ್ನೂ ಬಿಡದೆ ಆವರಿಸು
ಸಾಕ್ಷಾತ್ಕಾರಕ್ಕೆ ಕಾದಿರುವೆನುದ್ಧರಿಸು
ಓ ಗುರುವೇ ಕರಪಿಡಿದು ನಿಂತಿರುವೆ
ಕೈಹಿಡಿದು ನಡೆಸೆನ್ನ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ನಾನು-ನಾನೆಂಬ ನಂದಿಸೆನ್ನನು
ನಂದದಿರುವ ನಿನ್ನನೆನ್ನೊಳುಳಿಸಿನ್ನು
ಓ ಗುರುವೇ ಜಗದರಿವೇ
ಕೃಷ್ಣನೊಲವೇ ನೀ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ದೀಪದ ತಳದಂಧಕಾರವಳಿಸುವವನು
ಆತ್ಮನಲ್ಲೇ ಪರಮಾತ್ಮನ ನೆಲೆಗೊಳಿಸುವನು
ಓ ಗುರುವೇ ಶರಣು ನಾನು
ಆತ್ಮನೊಳಗಿನಾತ್ಮ ನೀನು ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

- ಪ್ರಸಾದ್.ಡಿ.ವಿ.
--------------------------------------------------------------------------------------
ಗುರುವಿನ ಪಾದತಲದಲ್ಲಿ ಮೊದಲ ಕಮಲ

Monday, 8 October 2012

ಹಾಳೆಂಬ ನಾಳೆಯಲಿ ನಾನಿಲ್ಲ




ಮನಸ್ಸಿನಿಂದ ಭಾವಗಳು ತೊಟ್ಟಿಕ್ಕುವಾಗ ಹೃದಯ ಮೌನವಾಗಿ ಮಾತನಾಡುತ್ತದೆ. ಕೇಳಲು ಕಿವಿಯಿದ್ದರೂ ಮನಸ್ಸು ಅಂತರಂಗದ ಕಿವಿಯನ್ನೇ ಬಯಸುತ್ತದೆ. ಏನಿದು ಶೀರ್ಷಿಕೆಗೂ ಮಾತಿಗೂ ಹೊಂದಿಕೆಯೇ ಇಲ್ಲ, ಸುಮ್ಮನೆ ಬಡ ಬಡಿಸುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ವಿಷಯಕ್ಕೆ ಬರುತ್ತೇನೆ ಒಮ್ಮೊಮ್ಮೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೂ ಚೆನ್ನವೇ!

ನನಗೆ ಗೊತ್ತು ಶೀರ್ಷಿಕೆ ನಿಮ್ಮಲ್ಲಿ ಅನುಮಾನಗಳನ್ನು, ಅಸಹನೆಯನ್ನು ಬಿತ್ತಬಹುದು. ಕನಸ್ಸುಗಳಲ್ಲೇ ಜೀವಿಸುವ ನಮಗೆ ಜೀವನವೆಂಬುದು ನಾಳೆಗಳಲ್ಲೇ ಎಂಬುದನ್ನು ಬಲ್ಲೆ, ಅದು ಸಹಜವೂ ಹೌದು. ಮೊನ್ನೆ ಹೀಗೆ ಉದಯವಾಣಿಯಲ್ಲಿ ಒಂದು ಲೇಖನ ಓದುತ್ತಿದ್ದೆ. 'ನಾಳೆಯಲ್ಲಿ ನಾನಿಲ್ಲ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಲೇಖನ ಅದು. ಶೀರ್ಷಿಕೆಯೇ ನನ್ನಲ್ಲಿ ಕುತೂಹಲ ಹುಟ್ಟಿಸಿತು. ಒಬ್ಬ ವಿದವೆಯಾದ ಹೆಣ್ಣು ಮಗಳೊಬ್ಬಳ ಕರುಣಾಜನಕ ಮಿಂಚಂಚೆಯ ಮೇಲೆ ಕೇಂದ್ರಿತವಾಗಿತ್ತು. ಲೇಖಕರು, ವಯಸ್ಸು ಎಷ್ಟೇ ಚಿಕ್ಕದಿದ್ದರು ಆಸ್ತಿಗಳ ಗಳಿಕೆಯ ನಂತರ ಉಯಿಲು ಬರೆದಿಡಬೇಕಾದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿದ್ದರು. ಆ ಪ್ರಕಾರ ತಮ್ಮ ಮೇಲಿನವರ ಪ್ರೀತಿಯನ್ನು ಸಾವಿನ ನಂತರವೂ ವಿಸ್ತರಿಸಿದಂತಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಆ ಲೇಖನ ನನ್ನ ದೃಷ್ಟಿಕೋನಕ್ಕೆ ಸಿಕ್ಕಿ ಬೇರೆಯದೇ ಯೋಚನೆಗಳನ್ನು ಬಿತ್ತಿತು. ಆ ಭಾವಗಳನ್ನು ನನ್ನ ಹುಡಿ ಚೆಲ್ಲಿ ನಿಮ್ಮಲ್ಲಿ ಈಗ ಹರಹುತ್ತಿದ್ದೇನೆ.

ಜೀವನ ನೀರ ಮೇಲಿನ ಗುಳ್ಳೆ ಎಂಬ ದಾಸ ಶ್ರೇಷ್ಟರ ವಚನ ಕೇಳಿದ್ದರು ಮನುಷ್ಯ ಅದನ್ನು ಒಪ್ಪಿಕೊಳ್ಳಲೊಲ್ಲ. ನಾವು ಎಷ್ಟೇ ಚಿಕ್ಕ ವಯಸ್ಸಿನವರಾಗಿದ್ದರು ಸಾವು ಕ್ಷಣಗಳಲ್ಲಿ ಬಂದೆರಗಬಹುದು. ಅದಕ್ಕೆ ಹಲವಾರು ಕಾರಣಗಳಿರಬಹುದು. ಅಪಘಾತ, ಆಹಾರದಲ್ಲಿನ ಅಪೌಷ್ಟಿಕತೆ, ಮಾರಣಾಂತಿಕ ರೋಗಗಳು, ಸಣ್ಣ ವಿಷಯಕ್ಕೂ ಬದುಕಿನಿಂದ ವಿಮುಖರಾಗುವ ಮನಸ್ಥಿತಿ, ಹೀಗೆ ನೂರೆಂಟು ಕಾರಣಗಳು. ಇಷ್ಟೆಲ್ಲಾ ಇದ್ದಾಗ್ಯೂ ನಾವು ಬದುಕುವುದನ್ನು ಮುಂದೂಡುತ್ತೇವೆ. ವಾರಾಂತ್ಯಕ್ಕೆ ಹೆಂಡತಿ-ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಾತು ಕೊಟ್ಟು ಮುಂದಿನ ವಾರಕ್ಕೆ ಹೋದರಾಯ್ತು ಎಂದು ಮುಂದೂಡುತ್ತೇವೆ. ದಿನವೂ ವ್ಯಾಯಾಮ ಮಾಡಬೇಕು ಎಂದು ಪಣ ತೊಟ್ಟು ನಾಳೆ ಎಂಬ ಹಣೆ ಪಟ್ಟಿ ನೀಡಿ ಮುಂದೂಡುತ್ತೇವೆ. ಸ್ನೇಹಿತರೊಂದಿಗೆ ಒಂದು ಸುಂದರ ಭೇಟಿ ಎಂದು ಆಯೋಜಿಸಿ ನಂತರ ಯಾವುದಾದರು ನೆಪ ಹೂಡಿ ಭೇಟಿಯನ್ನು ಮುಂದೂಡುತ್ತೇವೆ. ಹೀಗೆ ನೋಡುತ್ತಾ ಹೋದರೆ ಬದುಕಿದ ಜೀವನಕ್ಕಿಂತ ಮುಂದೂಡಿದ ಜೀವನವೇ ಲಂಬವಾಗಿರುತ್ತದೆ.

ಹೀಗೆ ಎಲ್ಲವನ್ನೂ ನಾಳೆಗಳಿಗೆ ಕಾಯ್ದಿರಿಸುವ ನಮ್ಮ ಪ್ರೌವೃತ್ತಿ ಕಾಯ್ದಿರಿಸಿದ ಬದುಕನ್ನು ಬದುಕುವ ಮುಂಚೆಯೇ ನಮ್ಮನ್ನು ಜೀವನದಂಚಿಗೆ ತಂದು ನಿಲ್ಲಿಸುವುದು ದುರಂತ. ಹುಡುಕುತ್ತಾ ನಿಂತರೆ ಜೀವನಕ್ಕೆ ಅರ್ಥವೇ ಇಲ್ಲದಷ್ಟು ಸಣ್ಣದಾಗಿ ಜೀವನವನ್ನು ಬದುಕಿರುತ್ತೇವೆ. ಅಪ್ಪ-ಅಮ್ಮನ ಮಮತೆ ಕೊಡದ ಹಣಕ್ಕಾಗಿ ಕಾಲು ಭಾಗದಷ್ಟು ಜೀವನವನ್ನು ಸವೆಸಿರುತ್ತೇವೆ. ಸಂಗಾತಿಯ ಸಾಂಗತ್ಯ ಕೊಡದ ಕಾರು-ಬಂಗಲೆಯ ಕನಸಲ್ಲಿ ಇನ್ನು ಕಾಲು ಭಾಗದ ಬದುಕು. ಮಕ್ಕಳೊಂದಿಗಿನ ಆಪ್ಯಾಯಮಾನತೆ ಮತ್ತು ಸಂತೋಷ ಕೊಡದ ಕೆಲಸದ ಒತ್ತಡದಲ್ಲಿ ಮತ್ತೂ ಕಾಲು ಭಾಗದ ಬದುಕು. ಸ್ನೇಹದ ಆತ್ಮೀಯತೆ ಕೊಡದ ಅಹಂ ಒಳಗಿನ ಗರ್ವದ ಕೋಟೆಯೊಳಗೆ ಉಳಿದ ಕಾಲು ಭಾಗದ ಬದುಕು. ಹೀಗೆ ಹುಡುಕುತ್ತಾ ಹೋದರೆ ನಾವು ಬದುಕಿದ್ದೆವು ಎಂಬುದೇ ನಮಗೆ ಮರೆತು ಹೋಗುತ್ತದೆ. ನಾವು ನಮಗಾಗಿ, ನಮ್ಮ ಸಂತೋಷಕ್ಕಾಗಿ ಬದುಕಲೇ ಇಲ್ಲವೇ ಎನಿಸಿಬಿಡುತ್ತದೆ.

ಸಂತೋಷವೆಂಬುದು ಒಂದು ಬ್ಯಾಂಕ್ ಖಾತೆ ಇದ್ದ ಹಾಗೆ. ನಾವು ನಾವಾಗಿ ಬದುಕುತ್ತಾ ಹೋದಂತೆ ಸಂತೋಷ ತಾನೇ ತಾನಾಗಿ ಜಮ ಆಗುತ್ತಾ ಹೋಗುತ್ತದೆ. ಹಾಗೆ ಪಡೆದ ಸಂತೋಷವನ್ನು ಪ್ರತಿಯೊಬ್ಬರಿಗೂ ಹಂಚುವುದರಲ್ಲೇ ಜೀವನದ ನಿಜವಾದ ಸಾರ್ಥಕ್ಯ. ಜೀವನ ಪ್ರೀತಿ ನಮ್ಮಲ್ಲಿ ಎಷ್ಟಿರಬೇಕೆಂದರೆ ಸಾವು ಇಂದೇ ನಮ್ಮ ಮುಂದೆ ಬಂದು ಕರೆದರೂ 'ನನ್ನ ಜೀವನವನ್ನು ನಾನು ಸಂತೃಪ್ತಿಯಿಂದ ಬದುಕಿದ್ದೇನೆ, ನಿನ್ನ ಕರ್ತವ್ಯವನ್ನು ನೀನು ಮಾಡಬಹುದು' ಎಂಬಂತೆ ಸ್ವಾಗತಿಸಬೇಕು. ನಮ್ಮ ಜೀವನದ ಬಗ್ಗೆ ಕಿಂಚಿತ್ತು ವಿಷಾದವೂ ಇರದಂತೆ. ಅದು ನಿಜವಾದ ಮಾನವನ ಅಂತಸ್ತು.

ಒಮ್ಮೆ ಅಪ್ಪ-ಅಮ್ಮನ ದಿನ ನಿತ್ಯದ ಆರೋಗ್ಯದ ಬಗ್ಗೆ ಗಮನ ಹರಿಸಿ. ಪ್ರಿಯ ಮಡದಿಗೆ ಮೊಲ್ಲೆ ಮುಡಿಸಿ ನಿಮ್ಮ ಪ್ರೇಮವನ್ನು ನಿವೇಧಿಸಿ. ಮಕ್ಕಳ ಆಟ-ಪಾಠಗಳಲ್ಲಿ ಒಮ್ಮೆ ಸಹಕರಿಸಿ. ಸ್ನೇಹಿತರೊಂದಿಗೆ ಒಂದಷ್ಟು ಹಿತಕರ ಕ್ಷಣಗಳನ್ನು ಕಳೆಯಿರಿ. ಅವುಗಳಲ್ಲಿ ಸಿಗುವ ಸಂತೋಷ ಕೋಟಿ ಹಣ ಕೊಟ್ಟರು ಸಿಗದಂತಹದ್ದು. ಜೀವನ ಎಂಬುದೊಂದು ಕಲೆ. ಅದನ್ನು ಅಷ್ಟೇ ಕಲಾತ್ಮಕವಾಗಿ ಬದುಕಬೇಕು. ನಾಳೆ ಎಂಬುದೇ ಇಲ್ಲದಂತೆ, ಇಂದು ಎಂದಿಗೂ ಮುಗಿಯದಂತೆ. 'ನಾಳೆ ಮಾಡುವುದನ್ನು ಇಂದೇ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು, ನಾಳೆ ಎಂಬುದು ಹಾಳು' ಎಂಬ ನಾಣ್ನುಡಿಯಂತೆ 'ಹಾಳೆಂಬ ನಾಳೆಯಲಿ ನಾನಿಲ್ಲ' ಎಂಬ ವಾಸ್ತವದಲ್ಲಿ, 'ಹಾಲೆಂಬ ಇಂದಿನಲ್ಲೇ' ಜೇನನ್ನು ಬೆರೆಸಿ ಜೀವನವನ್ನು ಹಾಲು-ಜೇನಾಗಿಸಿ ಬದುಕಬೇಕು ಕಾಲನೂ ಕರುಬುವಂತೆ.

- ಪ್ರಸಾದ್.ಡಿ.ವಿ.