ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 14 April 2015

ಒಲುಮೆಯ ಮುದ್ದುವಿಗೆ: ಪತ್ರ - ೩


ಪತ್ರ - ೩
-------------

ಒಲುಮೆಯ ಮುದ್ದುಗೆ,

ನೆನ್ನೆ ಯಾಕ್ ಪತ್ರ ಬರೀಲಿಲ್ಲ ಗೊತ್ತಾ ನಿಂಗೆನಾನೊಬ್ಬ ನಿಂಗೋಸ್ಕರ ಕಾಯ್ತಿರ್ತೀನಿ ಅನ್ನೋ ನೆನಪಾದ್ರೂ ಇದ್ಯಾಮೊನ್ನೆ ರಾತ್ರಿ ಎಲ್ಲಾ ಕಾಲ್ ಮಾಡಿ ಸತ್ತಿದ್ದೀನಿಎಷ್ಟ್ ಸಲ ರಿಂಗಾದ್ರೂ ಎತ್ತೋರೇ ಇಲ್ಲ. ಎಲ್ ಹೊಗಿದ್ದೆ ನೀನುಎಷ್ಟ್ ಶತಪಥ ಹಾಕಿದ್ದೀನಿಬೆಳಗಿನ ಜಾವ ನಾಲ್ಕಾದ್ರೂ ನಿದ್ದೆನೇ ಇಲ್ಲ ಈ ಹಾಳಾದ್ ಕಣ್ಣಿಗೆ. ನೀನು ಆರಾಮಾಗಿ ಬಿದ್ಕೊಂಡಿದ್ದೆ ಅಲ್ವಾನಿದ್ದೆ ಬರದ ಆ ಕ್ಷಣಗಳಲಿ ಏನ್ ಮಾಡ್ಲಿ ಅಂತ ತಿಳೀದೆ ನೀನು ನನಗಾಗಿ ಕೊಟ್ಟ ಆ ಕೃಷ್ಣನ ಪೇಂಟಿಂಗ್ ನೋಡ್ತಾ ಕಾಲ ಕಳ್ದಿದ್ದೀನಿ. ಅವ್ನನ್ನ ನೋಡಿದಷ್ಟೂ ನಿನ್ನ ನೆನಪಾಗಿ ಕಣ್ಣೆಲ್ಲಾ ಹನಿಗೂಡ್ತಿತ್ತು. ಅಳ್ತಿರ್ಲಿಲ್ಲ ಆದ್ರೆ ಆ ಭಾವಕ್ಕೇನಂತ ಕರಿಬೇಕೋ ಗೊತ್ತಿಲ್ಲಏನಂತ ಕರಿಬೋದು ಮುದ್ದು ಅದನ್ನಾನಿನ್ ಉತ್ರ ಏನೂಂತ ಗೊತ್ತು ಬಿಡು, ’ಏನೂ ಇಲ್ಲ’ ಹಂಗಂದ್ರೆ, ’ಗೊತ್ತಿಲ್ಲ’, ಏನಿಲ್ಲ ಅಂದ್ರೆ, ’ಏನೇನೂ ಇಲ್ಲ!’.

ನಿನ್ನ ಸವಿನುಡಿಗೆ ಮುದಗೊಳ್ಳದೆಕಿವಿಯ ಮೇಲೆಲ್ಲಾ ಜೇನು ಸುರಿಯದೆಕಿವಿ ಸುತ್ತಾ ಇರುವೆಗಳು ಮುತ್ತದೆಮನಸಿನ ತುಂಬ ಮಲ್ಲಿಗೆಸಂಪಿಗೆಜಾಜಿಸೇವಂತಿಗೆಸೂರ್ಯಕಾಂತಿಕೇದಿಗೆಯ ಮೊಗ್ಗುಗಳರಳದೆನವಿರಾಗಿ ನರಳದೆಸಾವಿರ ಜೀವದ ಮೇಳ ಕಟ್ಟುವ ಕನಸು ಕಂಗಳು ನನ್ನ ನೋಡದೆಸಾವೂ ಬರದೆ ಜೀವಂತವಿರುವ ನರಕ ನಿನಗ್ಹೇಗೆ ಗೊತ್ತು ಹೇಳುನಾನು ಇದನ್ನೆಲ್ಲಾ ಹೇಳುವಾಗ, ’ಇವನ್ನೆಲ್ಲಾ ನಿನ್ನ ಕಥೆಕವನಗಳಿಗಿಟ್ಕೋನನ್ಹತ್ರ ಹೇಳ್ಬೇಡ’ ಅಂತಂದ್ಬಿಡ್ತಿ. ಆದರೆ ನಿಜಕ್ಕೂ ನನಗೆ ಹೀಗನಿಸುವುದು ನಿನಗೂ ಗೊತ್ತಿರುತ್ತೆ ಅಲ್ವಾಆದ್ರೂ ಯಾಕ್ ಸತಾಯಿಸ್ಬೇಕು?

ನಿದ್ದೆ ಬರದಿದ್ದೆ ಒಳ್ಳೆದಾಯ್ತೇನೋ ನೋಡುಕನಸೊಂದು ಬಿದ್ದಿತ್ತು. ಬೆಳಗಿನ ಜಾವ ನಂಗೆ ಸಕ್ರೆ ನಿದ್ದೆ ಸಮಯ. ನೀನು ಎಬ್ಬುಸ್ತನೇ ಇರ್ತೀಯಾನಾನು ಮಲ್ಗೇ ಇರ್ತೀನಿ. ಎದ್ದೇಳೋ ಟೈಮಾಯ್ತುಆಫೀಸ್ಗೋಗಲ್ವಾನಿನ್ನದು ಏರು ದನಿಯಲ್ದಿದ್ರೂ ಕಿವಿ ಹತ್ರನೇ ಬಂದು ಕೂಗಿದ್ರೆ ಕಿರ್ಚ್ದಂಗನ್ಸಲ್ವಾನಾನು ಹೊದಿಕೆ ಎಳ್ಕೊಂಡ್ ಮಲ್ಕೋಬೇಕುಇನ್ನು ಹತ್ತಿರ ಬಂದು ಕಿವಿ ಕಚ್ಚಿಬಿಟ್ಟೆ. ಅಷ್ಟ್ರಲ್ಲಿ ಹಾಳಾದ್ದು ನಿದ್ದೆ ಬಂದುಬಿಡ್ತು. ನೀನು ಮತ್ತೆ ನನ್ನೊಳ ಸೇರಿ ಹೋದೆ. ಆಮೇಲೆನಿದ್ದೆಯೆಂದರೆ ಸವಿ ನಿದ್ದೆನಿನ್ನೊಲವ ಕನಸುಗಳೇ ಜೋಲಿ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೨


ಪತ್ರ - ೨
--------------

ಒಲುಮೆಯ ಮುದ್ದುಗೆ,

ಮೊನ್ನೆ ಏನಾಯ್ತು ಗೊತ್ತಾನಿಮ್ಮನೆ ಹಾದಿಲಿ ನಡ್ಕೊಂಡ್ ಬರ್ತಿದ್ದೆ. ಬೆಳದಿಂಗಳ ಮುಂಜಾನೆತಣ್ಣನೆಯ ಬೆಳಗಿನ ಜಾವಚುಮು ಚುಮು ಚಳಿ. ಕಂಡಷ್ಟಗಲದ ಆಕಾಶಕ್ಕೆ ತಾನೊಬ್ಬನೆ ಸುಂದ್ರ ಅನ್ನೋ ಥರ ನಗ್ತಾ ಇದ್ದ ಚಂದಿರ. ಅರೆರೇ ಬೆಳಗಿನ ಜಾವಕ್ಕೂ ಇದ್ದಾನಲ್ಲಾ ಪೋಲಿನಿನ್ನ ಕದಿಯುವ ಸಾಹಸಕ್ಕೆ ಕೈಹಾಕಿರಬಹುದೇ ಅಂತ ಅನುಮಾನ ಬಂತು. ಆದರೆ ನೀನು ನನ್ನವಳೆಂಬ ಆಸರೆಯೊಂದೇ ನನ್ನ ಮುಂದುವರೆಯುವಂತೆ ಮಾಡಿದ್ದು. ಹಾಲ್ನೊರೆ ಉಕ್ಕುಕ್ಕಿ ಭೂಮಿಯ ಮೇಲೆಲ್ಲಾ ಸುರೀತಿದ್ದ. ನಂಗೆ ಆಶ್ಚರ್ಯವೋ ಆಶ್ಚರ್ಯ! ಅಲ್ಲಾ ಇಷ್ಟೆಲ್ಲಾ ಹಾಲ್ನೊರೆ ಸುರೀತಿದ್ದಾನೆ, ’ನಂದಿನಿ ಡೈರಿಯವ್ರು ಹಾಲಿನ್ ರೇಟ್ ಕಮ್ಮಿ ಮಾಡ್ತಾರ ಅಂತ.

ನಾನು ಮುಂದಡಿ ಇಟ್ಟಂತೆಲ್ಲಾ ಅವ್ನೂ ಓಡ್ತಿದ್ದ. ಎಲಾ ಇವ್ನಾ ಯಾಕೋ ಓಡ್ತೀಯಾ ಅಂತ ಅಟ್ಟುಸ್ಕೊಂಡ್ ಹೋದೆ. ನಿಮ್ಮನೆಯಿಂದ ಆ ಗಣಪತಿ ದೇವಸ್ಥಾನ ದಾಟಿಅದ್ರು ಎದುರಿಗಿನ ಪಾರ್ಕು ದಾಟಿಉದ್ದುದ್ದ ರಸ್ತೆ ಬಿಟ್ಟು ಅಂಕುಡೊಂಕನ್ನೆ ಬಳಸುತಾನೆ. ನನ್ಗೂ ಮಾರ್ನಿಂಗ್ ಜಾಗ್ ಆದೀತೆಂದು ಓಡಿದೆಓಡಿದೆ. ಎದುರಿಗೆ ರಾಘವೇಂದ್ರ ಕನ್ವೆನ್ಶನ್ ಹಾಲ್ ಸಿಕ್ತು. ಮೇಲ್ ನೋಡಿದ್ರೆ ಅವ ಇಲ್ಲ. ನನಗೆ ದಾರಿ ಬಿಟ್ಟು ಓಡಿ ಹೋಗಿದ್ದ. ಸಾಕಷ್ಟು ಕನಸುಗಳನ್ನು ಕೊಟ್ಟು.

ನಾನೀಗಅವನ ಮೇಲೆ ನನಗ್ಯಾಕಿಷ್ಟು ಅಸೂಯೆಅವ ನಿನ್ನ ನಿಜಕ್ಕೂ ಕದೀತಿದ್ನಅವನಿಗಷ್ಟು ಧೈರ್ಯವೇನನ್ನ ನಾನೇ ಪ್ರಶ್ನಿಸಿಕೊಳ್ತೇನೆ. ಇಲ್ಲ ಇಲ್ಲ.. ನೀನು ನನ್ನವಳೆಂದುನಾನು ನಿನ್ನವನೆಂದು ನಮ್ಮೆದೆಗಳ ಮೇಲೆ ಕೆತ್ತಿಟ್ಟಾಗಿದೆ! ಆದರೂ ನನಗ್ಯಾಕೆ ನಿನ್ನ ಕಳೆದುಕೊಳ್ಳುವ ಭಯಈ ಬೆಳಗಿನ ಜಾವಕ್ಕೆ ಈ ಪ್ರಶ್ನೆಯೊಂದು ನನ್ನನ್ಯಾಕೆ ನನ್ನಿಂದ ಕಸಿಯುತಿದೆಯೋಚಿಸುತ್ತಾ ಕೂತಿದ್ದೆ. ಆಗ ಹೊಳೆಯಿತುಈ ಥರ ಅನುಭವಿಸಿದ್ದ ಯಾವನೋ ಪುಣ್ಯಾತ್ಮ ಹೇಳಿದ್ದ, "ಶೀ ವಿಲ್ ನೆವರ್ ಬಿ ಯುವರ್ಸ್ಅಂಟಿಲ್ ಯೂ ಫೀಲ್ ಜಲಸ್". ಹೌದುಒಂದು ಕ್ಷಣಕ್ಕೂ ನಾನಿನ್ನ ಕಳೆದುಕೊಳ್ಳಲಾರೆ. ಆ ಚಂದಿರನಂತು ಮಳ್ಳಅಮಾವಾಸ್ಯೆಗೂ ಬೆಳದಿಂಗಳಾಚರಿಸುವ ಅತಿ ಆಸೆಗೆ ಸದಾ ಜಿನುಗುವ ನಿನ್ನ ಕಣ್ಣ ಹೊಳಪ ಕದ್ದೊಯ್ದು ಬಿಡುತ್ತಾನೆ. ನಾನಂತೂ ಸದಾ ಕಾವಲಿಗಿದ್ದೇನೆದೀಪಗಳನೇ ಖರೀದಿಸದ ನನಗೆ ನಿನ್ನ ಕಣ್ಣ ಹೊಳಪಷ್ಟೇ ಆಸರೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

Sunday, 12 April 2015

ಒಲುಮೆಯ ಮುದ್ದುವಿಗೆ: ಪತ್ರ - ೧


ಪತ್ರ - ೧
--------

ಒಲುಮೆಯ ಮುದ್ದುಗೆ,

ನಿಂಗೆ ನನ್ ಪತ್ರ ಅರ್ಥವಾಗುತ್ತೋ, ನಿದ್ರೆನೇ ಬರಿಸುತ್ತೋ ಅನ್ನೋ ಭಯಗಳನ್ನು ಮೀರಿ ಪತ್ರ ಬರೀತಿದ್ದೀನಿ ಸಹಿಸ್ಕೊ. ನಿದ್ರೆ ಬಂದ್ರೆ ತಾಚಿ ಮಾಡು, ನನ್ನ ಪತ್ರ ನಿನ್ನ ತಟ್ಟಿ ಮಲಗಿಸುತ್ತೆ.

ನಿನ್ಜೊತೆ ಅಷ್ಟು ಕೊರೀತೀನಿ, ಆದ್ರೂ ಯಾಕ್ ಪತ್ರ ಬರೀತಿದ್ದೀನಿ ಅಂತ ಆಶ್ಚರ್ಯ ಅಲ್ವಾ? ನಂಗೊತ್ತು! ಇವೆಲ್ಲಾ ನನ್ನೆದೆಯ ಪಿಸುಮಾತುಗಳು. ಕಿವಿಯಲ್ಲಷ್ಟೇ ಪಿಸುಗುಟ್ಟುವ ನನ್ನೊಲವ ಗುಟ್ಟುಗಳು. ನನ್ನೊಳಗೆ ಕುಡಿಯೊಡೆವ ಕನಸುಗಳು, ನಿನಗಾಗಿ ಕಾತರಿಸಿದ ಕ್ಷಣಗಳು, ನಿನಗಾಗಿ ಕಾದಿರುವ ನಾನು, ನನ್ನ ಜಗತ್ತು, ನೀನು, ನಿನ್ನ ಜಗತ್ತು, ಎಲ್ಲವನ್ನೂ ಅಕ್ಷರಕ್ಕಿಳಿಸುತ್ತಿದ್ದೇನೆ. ನಿನ್ನೊಲವ ನೈವೇದ್ಯಕ್ಕೆ ಮುಡಿಪಿಡುತ್ತಿದ್ದೇನೆ.

ಇದೇ ರೀತಿ ಫೆಬ್ರವರಿ ೧೪ರ ವರೆಗೂ ಒಂದಷ್ಟು ಪತ್ರಗಳು ನಿನ್ನನ್ನು ತಲುಪಲಿವೆ. ಅದರಲ್ಲಿ ಕಿವಿಗೊಟ್ಟರಷ್ಟೇ ಕೇಳಿಸುವ ಎದೆಬಡಿತಗಳಿವೆ.

ಹೆಣ್ಣಿನ ಪ್ರೀತಿ ಮತ್ತು ಮನಸ್ಸುಗಳು ಸಮುದ್ರಕ್ಕಿಂತ ಆಳ ಮತ್ತು ನಿಶ್ಚಲವಂತೆ. ನಾವೇ(ಗಂಡಸರು) ನದಿಗಳು, ಚಲನೆಯನ್ನೇ ಪ್ರೀತಿ ಎಂದು ನಂಬಿರುತ್ತೇವೆ. ಅಂಕು, ಡೊಂಕೆನ್ನದೆ ಚಲಿಸುತ್ತಲೇ ಇರುತ್ತೇವೆ. ನೀನು ಸಿಕ್ಕ ಮೇಲೆಯೇ ನನಗಿದರರ್ಥವಾಗುತ್ತಿದೆ. ನಿನ್ನೊಲವೊಳಗೆ ಕರಗಿದಷ್ಟೂ ನಿನಗಿಷ್ಟದ ರುಚಿ ಪಡೆದು ಭೋರ್ಗರೆದು ಉಕ್ಕುತ್ತಿದ್ದೇನೆ, ನಾನಾಗೇ ಉಳಿಯುತ್ತಿದ್ದೇನೆ. ನಿನ್ನ ತೀರ ತಾಕುವವರೆಗೂ ಹೀಗೇ ಇರುತ್ತೇನೆ, ತಾಕಿದ ಮೇಲೂ ಹೀಗೇ ಇರುತ್ತೇನೆ. ನಾನಿರುವಂತೆಯೇ ಒಪ್ಪಿಕೊಂಡು ಅಪ್ಪಿಕೊಂಡಿರುವ ನಿನಗೆ ಋಣಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)


ಪ್ರೇಮಿಗಳ ದಿನದ ವಿಶೇಷಕ್ಕೆ ಬರೆದ ಒಂದಷ್ಟು ಪತ್ರಗಳು, ಫೆಬ್ರವರಿ ತಿಂಗಳಲ್ಲಿ...

Saturday, 4 April 2015

ಪದ್ಯದ ಹಣತೆಗಳು


ಪದ್ಯದ ಹಣತೆಗಳು
ಮೆರವಣಿಗೆ ಹೊರಟಿವೆ,
ಹಿಡಿದವರಿಗೆ ಹಿಡಿಯಷ್ಟು,
ಕೊಂಡವರಿಗೆ ಕೊಡದಷ್ಟು,
ಹಿಡಿಗೂ ಸಿಕ್ಕದ,
ಕೊಡಕೂ ದಕ್ಕದ,
ನೋಡು, ನೋಡಲ್ಲಿ
ಪದ್ಯದ ಹಣತೆಗಳು!

ಕಲ್ಯಾಣಿಯಲಿ ಮೀಯದ
ದೀಪಗಳ ಸಾಲು ಸಾಲು
ಭಕುತಿಗೆ ಒಲಿಯದ ಬೆಳಕು,
ನೀಲಗಾರರ ಕಂಠಕ್ಕೆ,
ಮಂಟೆಸ್ವಾಮಿಯ ಪಾದಕ್ಕೆ,
ಮಾದಪ್ಪನ ಗದ್ದುಗೆಗೆ,
ಜನಪದರ ತಂಬೂರಿಗೆ,
ದಿಗ್ಗನೆ ಹತ್ತಿಕೊಂಡು
ಉರಿದಿವೆ,
ಪದ್ಯದ ಹಣತೆಗಳು
ಸರತಿ ಸಾಲಲ್ಲಿ
ಮೆರವಣಿಗೆ ಹೊರಟಿವೆ!

ಪದಗಳಲಿ ಶಬ್ಧ ಮಾಡಿ,
ಭಾವಗಳಲಿ ಶುದ್ಧ ಮಾಡಿ,
ಶೃತಿಗೆ ಬೇಡುವ
ಮಾನವೀಯತೆಯ ದೀಪದೊಳಗೆ
ಲೇಖನಿಯ ಬತ್ತಿ ಹಿಡಿದು
ಮೆರವಣಿಗೆ ಹೊರಟಿವೆ,
ಪದ್ಯದ ಹಣತೆಗಳು!

- ಮಂಜಿನ ಹನಿ

ಚಿತ್ರ ಕೃಪೆ: ಮದನ್.ಸಿ.ಪಿ.

Tuesday, 24 March 2015

ಮೊನ್ನೆ ಹೊಳೆದ ಪದ್ಯ!


ಮೊನ್ನೆ ಹೊಳೆದ
ಪದ್ಯವೊಂದಿದೆ,
ಯುಗಾದಿಯ
ವರ್ಷತುಡುಕಿಗೆ,
ಬಿಯರು ಬಾಟಲ
ಕೊನೆಯ ಡ್ರಾಪಿಗೆ,
ಕೈ ಕೊಟ್ಟ ಹುಡುಗಿಯ
ಉಸಿರ ಸದ್ದಿಗೆ,
ಎದೆಯ ಕೊರೆಯುವ
ಹಳಸು ಕನಸಿಗೆ,
ಕೊಳೆತು ನಾರುವ
ಶವದ ಪೂಜೆಗೆ,
ಯಾವೊಂದಕೂ
ಜಪ್ಪಯ್ಯ ಅನ್ನದೆ
ಉಳಿದೇ ಹೋದ
ಪದ್ಯವೊಂದಿದೆ!

ನೆರಳು ಬೆಳಕಿನ
ಆಸೆ ಬಿಸುಪಿಗೆ,
ಕಳಚಿ ಬೀಳದ
ಹೂವು ಹಣ್ಣಿಗೆ,
ಬೆನ್ನು ಬಾಗಿದ
ಪೋಲಿ ಕನಸಿಗೆ,
ದಾಹ ತೀರದ
ತುಟಿಯ ಜೇನಿಗೆ,
ಮಿಡಿದ ನಾಡಿಯ
ಸಡಿಲ ಲಾಡಿಗೆ,
ಬದುಕು ಬೇಡಿದ
ಬತ್ತದಾಸೆಗೆ,
ಯಾವೊಂದಕೂ
ಒಲಿಯದ
ಪದ್ಯವೊಂದಿದೆ!

ಸೋತು ಸೊರಗುವ
ನೋವ ಸೆರೆಗೆ,
ಜೀವ ಕಟ್ಟುವ
ಜಿನನಣತಿಗೆ,
ದೀಪ ಹಚ್ಚುವ
ಬುದ್ಧ ಪ್ರೀತಿಗೆ,
ಭಾರ ಹೆಚ್ಚುವ
ಅಹಮಿನ ಅಣಕೆಗೆ,
ಕದಲದೆ ಇಳಿದ
ಪದ್ಯವೊಂದಿದೆ,
ಬರೆಯಲಾಗದು
ಬದುಕ ಬೇಕು,
ಬದುಕು ಮುಂದಿದೆ!

--> ಮಂಜಿನ ಹನಿ

Saturday, 7 March 2015

ಹೆಣ್ಣೆಂದರೆ?!


ಹೆಣ್ಣೆಂದರೆ,
ಒಡಲೊಳಗೆ ಹೆತ್ತುಹೊತ್ತು
ಸಹಿಸಿದ
ಅಮ್ಮನ ನಿಟ್ಟುಸಿರು, ಸೆರಗ ಬೆವರು,
ಅಪ್ಪನ ಒಳಕುದಿಯ
ಉಪಶಮನದ ಗುಳಿಗೆ,
ಮಕ್ಕಳ ಚೈತನ್ಯದ ಚಿಲುಮೆ,
ಸಂಬಂಧಗಳ ಒಲುಮೆ,
ಕಪ್ಪುಮಣ್ಣ ಬನದ ಕರಡಿ,
ಬಿಳಿಯ ಅಳ್ಳೆ, ಹತ್ತಿ ಬೆಳೆ!

ಹೆಣ್ಣೆಂದರೆ,
ಶತಮಾನಗಳ ದಾಟುವ
ಜೀವದ ಕೊಂಡಿ,
ಅಂತಃಕರಣ, ಬತ್ತದೆದೆ,
ಎದೆಯ ಹಾಲ ಸಿಹಿ,
ಸೆರಗಿಗಷ್ಟೇ ಗೊತ್ತಿರುವ
ಅವುಡುಗಚ್ಚಿದವರ ಆತಂಕದ ನೆರಳು,
ಗಂಟಲುಬ್ಬಿ
ಮಾತಾಗದ ಕಣ್ಣೀರು,
ಮಕ್ಕಳ ಬದುಕ ಕಟ್ಟಿದ
ಅಜ್ಜಿಯ ಛಲ,
ಬಡಿದಾಡುವ ಬದುಕ ಬವಣೆ,
ಕಾಮುಕರ ಎಡೆಮುರಿ ಕಟ್ಟಿ,
ಕಾಮದುಂಡೆಗಳ ನುಂಗಿ
ಜಗವ ಪಾಲಿಸುವ
ಉತ್ತನಹಳ್ಳಿಯ ಉರಿಮಾರಿ,
ಉರಿ ಗದ್ದುಗೆಯ ಸಹನೆ!

ಹೆಣ್ಣೆಂದರೆ,
ಮತ್ತೇನೂ ಅಲ್ಲ,
ತನ್ನೊಳಗೆ ಕುದಿಯುವ
ಲಾವಾಗ್ನಿ ಪರ್ವತಗಳ
ತಣಿಸಿ, ತಣ್ಣಗೆ ನಗುವ
ಭೂಮಿಯೊಡಲು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday, 2 March 2015

ಲಯಬದ್ಧ - ಒಲವನಾದ


ಕಚ್ಚಿ ಹಿಡಿದಿದೆ ತೊಟ್ಟು ಹೂವನು,
ಹೂವು ಅರಳಲಿ ಜಿಹ್ವೆ ಜೇನು,
ಅಮಲು ತುಂಬಿದ ಮಲ್ಲಿಗೆಯ ದಂಡೆ,
ಮುಡಿಸುವೆ ತಾಳು ಈಗಲೆ ಬಂದೆ!

ನನ್ನ ತೋಳ ತಬ್ಬಲು, ಬಳ್ಳಿ ಮರವ ಹಬ್ಬಲು,
ಸಿರಿ ಮಲ್ಲಿಗೆಯ ಘಮ ಮುಡಿಯ ತುಂಬಲಿ,
ಎದೆಗೆ ಹಬ್ಬಿದೆ ನಲಿವ ಬಳ್ಳಿ;
ಹೇಗೆ ಹೇಳಲಿ ಬರಿಯ ಮಾತಲಿ?

ಮತ್ತೇರಿದ ದುಂಬಿ ಹೂವಿನದರ ಸೋಕಿದೆ,
ಸಾವಕಾಶವಿರಲಿ ಎದೆಯ ಏರಿಳಿತದಿ,
ದಳಗಳಲಿ ಸಿಕ್ಕ ದುಂಬಿಯ ಪ್ರೇಮದುನ್ಮಾದ,
ಲಯಬದ್ಧವಾದಂತಿದೆ ಒಲವ ನಾದ!

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ