ಮೊನ್ನೆ ಹೊಳೆದ
ಪದ್ಯವೊಂದಿದೆ,
ಯುಗಾದಿಯ
ವರ್ಷತುಡುಕಿಗೆ,
ಬಿಯರು ಬಾಟಲ
ಕೊನೆಯ ಡ್ರಾಪಿಗೆ,
ಕೈ ಕೊಟ್ಟ ಹುಡುಗಿಯ
ಉಸಿರ ಸದ್ದಿಗೆ,
ಎದೆಯ ಕೊರೆಯುವ
ಹಳಸು ಕನಸಿಗೆ,
ಕೊಳೆತು ನಾರುವ
ಶವದ ಪೂಜೆಗೆ,
ಯಾವೊಂದಕೂ
ಜಪ್ಪಯ್ಯ ಅನ್ನದೆ
ಉಳಿದೇ ಹೋದ
ಪದ್ಯವೊಂದಿದೆ!
ನೆರಳು ಬೆಳಕಿನ
ಆಸೆ ಬಿಸುಪಿಗೆ,
ಕಳಚಿ ಬೀಳದ
ಹೂವು ಹಣ್ಣಿಗೆ,
ಬೆನ್ನು ಬಾಗಿದ
ಪೋಲಿ ಕನಸಿಗೆ,
ದಾಹ ತೀರದ
ತುಟಿಯ ಜೇನಿಗೆ,
ಮಿಡಿದ ನಾಡಿಯ
ಸಡಿಲ ಲಾಡಿಗೆ,
ಬದುಕು ಬೇಡಿದ
ಬತ್ತದಾಸೆಗೆ,
ಯಾವೊಂದಕೂ
ಒಲಿಯದ
ಪದ್ಯವೊಂದಿದೆ!
ಸೋತು ಸೊರಗುವ
ನೋವ ಸೆರೆಗೆ,
ಜೀವ ಕಟ್ಟುವ
ಜಿನನಣತಿಗೆ,
ದೀಪ ಹಚ್ಚುವ
ಬುದ್ಧ ಪ್ರೀತಿಗೆ,
ಭಾರ ಹೆಚ್ಚುವ
ಅಹಮಿನ ಅಣಕೆಗೆ,
ಕದಲದೆ ಇಳಿದ
ಪದ್ಯವೊಂದಿದೆ,
ಬರೆಯಲಾಗದು
ಬದುಕ ಬೇಕು,
ಬದುಕು ಮುಂದಿದೆ!
--> ಮಂಜಿನ ಹನಿ
ಸರಕು ಬಹಳಿದ್ದರೂ ಕವಿಗೆ ಕೆಲವೊಮ್ಮೆ ಕವಿತೆ ಕಟ್ಟಲಾರದ ಕಾರ್ಯಭಾರ!
ReplyDeleteಈ ಕವಿತೆಯ ಹೂರಣ ಮತ್ತು ಬಹು ಸಾಮಗ್ರಿಯ ವೈವಿಧ್ಯತೆ ತಮ್ಮ ಕಾವ್ಯ ಶಕ್ತಿಗೆ ಕನ್ನಡಿ!