ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday, 9 February 2013

ತೊರೆಯ ಮೇಲಿನ ಬದುಕು! - ೧




ಬೆರಳಿಗೊಂದು ಉಂಗುರ, ಎದೆ ತುಂಬ ಪ್ರೀತಿ!
------------------------------------------
ನಾನು ನಿಶ್ಚಿಂತನಾಗಿ ಮಲಗಿದ್ದೆ, ಅದು ಬೆಳಗ್ಗಿನ ಏಳು ಗಂಟೆಯಿರಬಹುದು! ಆ ಸೂರ್ಯನಿಗೂ ನನ್ನನ್ನು ಕಂಡರೆ ಅದೇನೋ ಹೊಟ್ಟೆ ಉರಿ, ಆರು ಗಂಟೆಗೆಲ್ಲಾ ಎದ್ದು ಬಂದು ನನ್ನ ಕೋಣೆಯ ಕಿಟಕಿಯ ಮುಂದೆ ನಿಂತು ಬಿಡುತ್ತಾನೆ, ಹಾಳಾದವನು! ನನ್ನ ಶ್ರೀಮತಿ ಒಳಗೆ ಧೂಪ ಹಚ್ಚಿಟ್ಟು, ಪಿಳ್ಳಂಗೋವಿ ಕಳ್ಳ ಕೃಷ್ಣನ ಎದುರು, ’ಕೃಷ್ಣ ಸ್ತುತಿ’ ಮಾಡುತ್ತಿದ್ದುದು ಕೇಳಿಸುತ್ತಿತ್ತು! ನಮ್ಮ ಮೂರು ವರ್ಷದ ಪುಟಾಣಿ ಪುಟ್ಟಿ ಹತ್ತಿರ ಬಂದು,

“ಪಪ್ಪಾ ಏಳು ಪಪ್ಪಾ, ನೀನು ಏಳದಿದ್ದರೆ ಅಮ್ಮ ಕೋಲು ತರ್ತಾಳಂತೆ” ಎನ್ನುತ್ತಾ ನನ್ನನ್ನು ಅಲುಗಾಡಿಸಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಳು.

“ಹೇ ಶಾರೀ ಪುಟ್ಟಿ, ಇಷ್ಟು ಬೇಗ ಎದ್ದು ಏನ್ಮಾಡ್ತಿದೆ ನನ್ನ ಮುದ್ದು? ಪಪ್ಪಾಗೆ ಭಾನುವಾರ ರಜಾ ಇದೆ.. ಹಾಗೆಲ್ಲಾ ಡಿಸ್ಟರ್ಬ್ ಮಾಡಬಾರ್ದು ಅಲ್ವಾ? ಪಪ್ಪ ಇನ್ನೊಂದ್ ಸ್ವಲ್ಪ ಹೊತ್ತು ಮಲ್ಗುತ್ತೆ ಅಂತ ಅಮ್ಮಂಗೆ ಹೇಳಮ್ಮ” ಎಂದು ಲಲ್ಲೆ ಗರೆದು ಅವಳನ್ನು ಕಳುಹಿಸಲು ನೋಡಿದೆ.

ಅವಳು ಬಿಡಬೇಕಲ್ಲಾ, ತನ್ನ ಅಮ್ಮನ ರಾಯಭಾರಿಯಂತೆ ನನ್ನನ್ನು ಎಬ್ಬಿಸುವ ಕೆಲಸ ಮುಂದುವರೆಸಿಯೇ ಇದ್ದಳು! ಇತ್ತ ಕಡೆ ಅವಳಮ್ಮ, ಅರ್ಥಾತ್ ನನ್ನ ಅರ್ಧಾಂಗಿ ಶುಶ್ರಾವ್ಯವಾಗಿ ’ಬೆಣ್ಣೆ ಕದ್ದನಮ್ಮ ಕೃಷ್ಣಾ, ಬೆಣ್ಣೆ ಕದ್ದನಮ್ಮಾ…” ಹಾಡನ್ನು ಗುನುಗುತ್ತಾ ಬಂದವಳು, ಮೆಲ್ಲಗೆ ನನ್ನ ಕಿವಿಯ ಹತ್ತಿರ ಬಂದು,

“ಏನು ಸಾಹೇಬ್ರು ಇನ್ನೂ ಮಲ್ಗಿದ್ದೀರಿ? ಇವತ್ತಿನ ಸ್ಪೆಷಲ್ ಏನು ಅಂಥಾ ನೆನಪಿಲ್ವಾ?” ಎಂದಳು ಪಿಸುಗುಟ್ಟುವಂತೆ. ಶಾರೀ ಅಲ್ಲಿಲ್ಲದಿದ್ದರೆ ನನ್ನವಳನ್ನು ಹಾಗೆಯೇ ಬರಸೆಳೆದಪ್ಪಿ ಮುದ್ದಿಸುತ್ತಿದ್ದೆ. ಏಕೆಂದರೆ ಶಾರೀ ಮುಂದೆ ನಾನಾರನ್ನೂ ಮುದ್ದಿಸುವಂತಿಲ್ಲ, ನನ್ನ ಹೆಂಡತಿಯನ್ನೂ ಸಹ! ನನ್ನ ಮಗಳಿಗೆ ತನ್ನ ಪಪ್ಪನ ಮೇಲೆ ಅಷ್ಟು ಪೊಸ್ಸೆಸ್ಸಿವ್ ನೆಸ್! ಆ ಕ್ಷಣಕ್ಕೆ, ನನ್ನ ಮೇಲೆ ನನ್ನ ಮಗಳಿಗಿದ್ದ ಪ್ರೀತಿಗೆ ಖುಷಿಪಡಲೇ ಇಲ್ಲ ಒಂದು ರಸಮಯ ರೊಮ್ಯಾಂಟಿಕ್ ಕ್ಷಣ ಮಿಸ್ ಆಗುತ್ತಿದೆ ಎಂದು ದುಃಖಿಸಲೇ? ಎರಡೂ ತೋಚದೆ ಸುಮ್ಮನೆ ಎದ್ದು ಕೂತೆ! ಹೌದುರೀ… ನೀವೇ ಹೇಳಿ, ನಲ್ಲೆ ಕಿವಿಯಲ್ಲುಸುರುವಾಗ ಯಾರು ತಾನೆ ರೋಮಾಂಚನಗೊಳ್ಳಲಾರರು?! ನನ್ನ ಕಣ್ಣುಗಳು ಸಾವಿರ ಭಾವಗಳನ್ನೂ ತಮ್ಮೊಳಗಿಂದ ಸೂಸಿ, ತನ್ನ ಮನದನ್ನೆಯನ್ನು ತಮ್ಮೊಳಗೆ ತುಂಬಿಸಿಕೊಳ್ಳುತ್ತಿದ್ದವು…

“ಸಾಹೇಬ್ರು ತುಂಬಾ ರೋಮ್ಯಾಂಟಿಕ್ ಆಗಬೇಡಿ, ಮಗಳು ಎದುರಿಗಿರುವುದು ನೆನಪಿರಲಿ” ಎಂದುಬಿಡುವುದೇ ಅವಳು! ಹಾಂ ಮಧುವಂತಿ ನನ್ನ ಮಡದಿ, ಮನದನ್ನೆ, ಪಟ್ಟದರಸಿ, ನನಗಾಗಿ ನನ್ನ ಮುದ್ದು ಶಾರೀಯನ್ನು ಕೊಟ್ಟ ನನ್ನೊಳಗಿನರ್ಧ.

“ಮಧೂ…” ಎಂದು ನನ್ನ ಕಣ್ಣುಗಳಲ್ಲಿದ್ದ ಎಲ್ಲಾ ಭಾವಗಳನ್ನೂ ಒಮ್ಮೆಲೇ ಒಂದೇ ಸವಿನುಡಿಯ ಮೂಲಕ ಚಿಮ್ಮಿಸಲು ಪ್ರಯತ್ನಿಸಿದೆ! ಹೂ ಹೂಂ, ವರ್ಕ್ ಔಟ್ ಆದಂತೆ ಕಾಣಲಿಲ್ಲ! ಯಾವುದೋ ಪರವಶತೆಯಿಂದ ಎಚ್ಚೆತ್ತುಕೊಂಡವಳಂತೆ ಮತ್ತೆ ಕೇಳಿದಳು,

“ಇವತ್ತು ಏನು ಸ್ಪೆಷಲ್ ಎಂದು ಗೊತ್ತಿದೆ ತಾನೇ? ಇನ್ನೂ ಹೀಗೇ ಮಲ್ಗಿದ್ದೀರಲ್ರೀ?” ಎಂದು ಜೋರು ಮಾಡಿದಳು.

ನಾನು ತಲೆ ಕೆರೆದುಕೊಳ್ಳುತ್ತಾ, “ಇವತ್ತು ಭಾನುವಾರ ಅಂತ ಗೊತ್ತು, ಮತ್ತೇನು ಸ್ಪೆಷಲ್? ನನಗೆ ನೆನಪಿಲ್ವಲ್ಲೇ” ಎಂದೆ. ಪಾಪ ಹಾಯಾಗಿ ಹಕ್ಕಿಯಂತೆ ಹಾರುತ್ತಿದ್ದವಳು ಜರ್ರೆಂದು ಭೂಮಿಗೆ ಇಳಿದು ಹೋದಳು! ಆದರೂ ತನ್ನ ಬೇಸರವನ್ನು ತೋರಗೊಡದೆ,

“ಏನಿಲ್ಲ ಇವತ್ತು ಭಾನುವಾರ ಅಲ್ವಾ… ಅದಕ್ಕೆ ಕೃಷ್ಣನ ಗುಡಿಯಲ್ಲಿ ಪೂಜೆಗೆ ಕೊಟ್ಟಿದ್ದೇನೆ. ಬೇಗ ರೆಡಿಯಾಗಿ ಬನ್ನಿ, ಎಂಟು ಗಂಟೆಗೆಲ್ಲಾ ಪೂಜೆಗೆ ಹೋಗಬೇಕು” ಎಂದಳು.

ಅವಳು ನನ್ನೊಳಗಿನರ್ಧ ಎಂದು ಮೊದಲೇ ಹೇಳಿದ್ದೇನೆ, ಅವಳ ಮನದ ತಳಮಳಗಳು, ಸಂಭ್ರಮಗಳು ನನಗೆ ತಿಳಿಯದಿರುತ್ತವೆಯೇ? ನನಗೂ ಅವಳನ್ನು ಸತಾಯಿಸುವುದೆಂದರೆ ಅದೇನೋ ಒಂಥರಾ ಖುಷಿ!

“ಸರಿ ಹಾಗಿದ್ರೆ ಸ್ನಾನ ಮಾಡಿ ಬರುತ್ತೇನೆ” ಎಂದು ಮೇಲೆದ್ದು ಸ್ನಾನದ ಮನೆ ಕಡೆಗೆ ಹೆಜ್ಜೆ ಹಾಕಿದೆ. ಹದಿನೈದು ನಿಮಿಷಗಳಲ್ಲಿ ಸ್ನಾನ ಮುಗಿಸಿದವನೇ, ಇನ್ನು ಹತ್ತು ನಿಮಿಷಗಳಲ್ಲಿ ರೆಡಿಯಾಗಿ ಹೊರಗೆ ಬಂದೆ. ಅದಾಗ ಗಡಿಯಾರ ೭.೩೦ ತೋರಿಸುತ್ತಿತ್ತು! ಹೊರಗೆ ಬಂದವನ ಮೊಗದಲ್ಲಿ ಏನಾದರೂ ಸಂಭ್ರಮಗಳು ಇಣುಕುತ್ತಿರಬಹುದೇ ಎಂದು ನಿರೀಕ್ಷಿಸುತ್ತಿದ್ದ ಮಧೂಗೆ ನಿರಾಸೆ ಕವಿದು, ಗಂಗೆ ಕಣ್ಣುಗಳಿಂದ ಹರಿಯಲು ಹವಣಿಸುತ್ತಿದ್ದಳು. ನನಗೆ ಆ ಕ್ಷಣಗಳನ್ನು ಸಂಪೂರ್ಣ ಸವಿಯಬೇಕೆಂಬ ಹಂಬಲವಿದ್ದ ಕಾರಣ, ನಾನು ಅವಳ ದುಃಖವನ್ನಾಗಲಿ, ತುಳುಕಲು ಹವಣಿಸಿದ್ದ ಗಂಗೆಯನ್ನಾಗಲಿ ತಡೆಯಲು ಪ್ರಯತ್ನಿಸಲಿಲ್ಲ!

ತನ್ನ ನಿರಾಸೆಯ ಬೆಟ್ಟದಿ ಪ್ರಯಾಸಪಟ್ಟು ಹನಿಗೂಡಿ ಮಂಜು, ಮಂಜಾಗಿದ್ದ ತನ್ನ ಕಣ್ಣಾಲಿಗಳ ಮೂಲಕ ನನ್ನನ್ನು ನೋಡುತ್ತಿದ್ದವಳನ್ನು ಎಚ್ಚರಿಸುವ ತೆರದಿ,

"ಏನೇ ಹಾಗೇ ನೋಡುತ್ತಾ ನಿಂತೆ, ತಡವಾಗುತ್ತದೆ ಎಂದೆಯಲ್ಲ ನಡೀ ಕೃಷ್ಣ ಮಂದಿರಕ್ಕೆ ಹೋಗಿ ಬರೋಣಾ..." ಎಂದೆ.

ಅವಳಿಗೆ ಇನ್ನು ತಡೆಯಲು ಆಗಲಿಲ್ಲ! ಕಣ್ಣುಗಳಲ್ಲಿ ಗಂಗಾಜಲ ಉಕ್ಕಿ ಹರಿಯತೊಡಗಿತು, ಪ್ರವಾಹ ನನ್ನ ಮನಸಲ್ಲಿ!

"ರೀ... ನಿಜ ಹೇಳಿ, ಇವತ್ತು ಏನು ವಿಶೇಷ ಎಂದು ನಿಮಗೆ ನೆನಪಿಲ್ವಾ? ಎಲ್ಲಿ ನೆನಪಿರಬೇಕು ಹೇಳಿ, ನಾನು ಯಾರು ನಿಮಗೆ? ಇದನ್ನೆಲ್ಲಾ ಸಂಭ್ರಮವೆಂದು ಆಚರಿಸುತ್ತೇನಲ್ಲಾ ನಾನು ದಡ್ಡಿ!" ಎಂದು ಸೈರನ್ ಸ್ಟಾರ್ಟ್ ಮಾಡಿದಳು! ನಾನು ಏನೂ ನೆನಪಿಲ್ಲದವನಂತೆ ನಟಿಸುತ್ತಾ,

"ಅಂಥದ್ದೇನು ಸಂಭ್ರಮವೇ ಇವತ್ತು? ನನಗಂತೂ ನೆನಪಿಲ್ಲ! ಹಾಂ ನನ್ನ ಕರ್ಚೀಫ್ ಮರೆತಿದ್ದೇನೆ. ತಾಳು ಬಂದೆ" ಎಂದು ನಮ್ಮ ರೂಮು ಹೊಕ್ಕೆ.

ಅವಳು ತನ್ನೊಳಗೇ, 'ದಿನವೂ ನಾನು ನೆನಪಿಸಿ ನಿಮ್ಮ ಜೇಬಿಗೆ ತುರುಕುವ ಕರ್ಚೀಫು ನೆನಪಿಗೆ ಬರುತ್ತದೆ, ಈ ದಿನ ನೆನಪಿಲ್ಲ ಆಲ್ವಾ?' ಎಂದುಕೊಂಡಿರಬಹುದೇ? ನನ್ನೊಳಗೇ ಭಾವಿಸಿಕೊಂಡು ನಕ್ಕೆ! ಕರ್ಚೀಫಿನೊಂದಿಗೆ ಹೊರಬಂದ ನಾನು ಅವಳಿಗೆ ಹೊರಡೋಣವೆಂಬಂತೆ ಸನ್ನೆ ಮಾಡಿದೆ. ಇನ್ನು ನನ್ನ ಮುಂದೆ ಹೀಗೆ ಕಣ್ಣೀರು ಸುರಿಸುವುದರಿಂದ ಲಾಭವಿಲ್ಲವೆಂದು ಭಾವಿಸಿದ ಅವಳು,

"ನನಗೆ ತಲೆ ನೋವು ಶುರುವಾಯ್ತು, ನಾನು ಎಲ್ಲಿಗೂ ಬರುವುದಿಲ್ಲ!" ಎಂದು ಸೋಫಾದ ಮೇಲೊರಗಿ ಕೂತಳು.

"ನನಗೆ ಆ ತಲೆನೋವು ಹೋಗಿಸುವ ವಿದ್ಯೆ ಗೊತ್ತಿದೆ..." ಎಂದು ನಿಧಾನವಾಗಿ ಅವಳ ಪಕ್ಕದಲ್ಲಿ ಹೋಗಿ ಕುಳಿತೆ.

"ಇಷ್ಟೆಲ್ಲಾ ಮಾಡಿ ಈಗ ನಾಟಕ ಆಡಬೇಡಿ..." ಎಂದು ಕೋಪ ನಟಿಸುತ್ತಾ ನನ್ನನ್ನು ದೂರ ತಳ್ಳಿದಳು. ಹೊರಗೆ ನಮಗಾಗಿ ಕಾದಿದ್ದ ಶಾರೀ ಒಳಗೆ ಬಂದು ಅವರಮ್ಮನ ತೊಡೆಯ ಮೇಲೆ ಆಸೀನಳಾದಳು. ನಾನು ಸಾವರಿಸಿಕೊಂಡು, ಜೋಬಿನೊಳಗಿಂದ ಬೆಚ್ಚಗೆ ನನ್ನೆಲ್ಲಾ ಆಟಗಳನ್ನು ನೋಡಿ ನಗುತ್ತಿದ್ದ ಆ ವಜ್ರದುಂಗುರವನ್ನು ಅವಳ ಮುಂದೆ ರೋಮಿಯೋನಾ ರೀತಿಯಲ್ಲಿ ತೆಗೆದಿಡುತ್ತಾ,

"ಐ ಲವ್ ಯೂ" ಎಂದೆ. ಅವಳ ಮೊಗದ ಮೇಲೆ ಕೋಪವಾಗಿ ನಲಿಯುತ್ತಿದ್ದ ಭಾವ ನಗುವಾಗಿ ಪರಿವರ್ತನೆಯಾಯ್ತು!

"ರಾಘು ಇಷ್ಟು ಹೊತ್ತು ಸತಾಯಿಸಿದಿರಲ್ಲಾ, ನನಗೆ ಅಳುವೇ ಬಂದಿತ್ತು..." ಎಂದು ಹುಸಿಮುನಿಸು ತೋರಿಸಿದಳು, ಆದರೆ ಆ ನಗು ಮಾತ್ರ ಅವಳ ಮೊಗದ ಮೇಲೆ ಹೊಳೆಯುತ್ತಲೇ ಇತ್ತು. ಅವಳ ನಗು ನನ್ನನ್ನು ಸಂಪೂರ್ಣ ಭಾವಪರವಶನಾಗುವಂತೆ ಮಾಡಿಬಿಡುವ ಔಷಧ! ಹೌದು ಇಂದು ನಮ್ಮ ಮೊದಲ ಮದುವೆಯ ಒಂಬತ್ತನೇ ವಾರ್ಷಿಕೋತ್ಸವ!

ಇದೇನು ಇವರು ಎಷ್ಟು ಸಾರಿ ಮದುವೆಯಾಗಿದ್ದಾರೆ ಎಂದು ಹುಬ್ಬೇರಿಸಬೇಡಿ! ಇಂದಿಗೆ ಒಂಬತ್ತು ವರ್ಷಗಳ ಹಿಂದೆ ಅಧಿಕೃತವಾಗಿ ನಮ್ಮ ನಡುವೆ ಹೊತ್ತಿಸಿದ ಪ್ರೀತಿಯೆಂಬ ನಂದಾದೀಪಾ, ನಮ್ಮ ಜೀವನಕ್ಕೆ ಬೆಳಕಾಗಿರುವುದಲ್ಲದೆ, ನಮಗೆ ನಮ್ಮ ಮುದ್ದು ಶಾರೀಯನ್ನೂ ಕೊಟ್ಟಿದೆ. ನಾವು ವರ್ಷಕ್ಕೆರಡು ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ! ಒಂಬತ್ತು ವರ್ಷಗಳ ಹಿಂದಾದ ಪ್ರೀತಿಯೆಂಬ ಮದುವೆಯ ವಾರ್ಷಿಕೋತ್ಸವ ಮತ್ತು ನಾಲ್ಕು ವರ್ಷದಿಂದೀಚೆಗೆ ಅಧಿಕೃತ ವಿವಾಹ ವಾರ್ಷಿಕೋತ್ಸವ!

ಮಧೂವನ್ನೂ, ಶಾರ್ವಾರಿಯನ್ನೂ ನೋಡುತ್ತಿದ್ದ ನನ್ನ ಮನಸ್ಸು ಹಿಂದಿಂದೆ ಓಡುತ್ತಿತ್ತು...


ಚಿತ್ರಕೃಪೆ: ರತೀಶ್ ನರೂರ್, ಅಂತರ್ಜಾಲ

Thursday, 31 January 2013

'ಏಕಾಂಬರ' ಎಂಬ ಕಾದಂಬರಿಯೂ, ಓದುಗರೆಂಬ ನಾವೂ!

ಈ ವಿಮರ್ಶಾತ್ಮಕ ಲೇಖನ ಅವಧಿಯಲ್ಲಿ ಪ್ರಕಟಗೊಂಡಿದ್ದು ಅದರ ಲಿಂಕ್ ಇಲ್ಲಿದೆ:



ನಾನೀಗ ಹೇಳ ಹೊರಟಿರುವುದು ಏಕಾಂಬರನೆಂಬ ಬ್ಯಾಂಕ್ ಮ್ಯಾನೇಜರ್ರೂ, ಅವಶೇಷದಂಚನ್ನು ತಲುಪಿರುವ ಕಳೇಬರದಂತಹ ಅವನುಡುಪುಗಳೂ, ಅವುಗಳ ಪ್ರೇರಣೆಯಿಂದ ಕಥೆ ಬರೆದು ಜಗದ್ವಿಖ್ಯಾತನಾದ ಮೂಲಿಮನಿಯೂ, ಆ ಕಥೆಯ ಭಾಗವಾಗಿ, ದೊಡ್ಡದೂ ಅಲ್ಲದ ಪುಟ್ಟದೂ ಅಲ್ಲದ ಪಟ್ಟಣವಾದ ಗುಣಸಾಗರದಲ್ಲಿ ಸಮಾವೇಶಗೊಳ್ಳಲಿರುವ 'ಸನಾತನ ಉಡುಪುಗಳ ಸಮಾವೇಶ'ವೂ, ಆ ಗುಣಸಾಗರದ ಶಾಸಕನಾದಂತಹ ರೇವಣ್ಣನೂ, ಮುಖ್ಯಮಂತ್ರಿಗಳಾಗಿದ್ದು ಮಾಜಿಗಳಾದಂತಹ ಮಾನ್ಯ ಮೂಗಪ್ಪನವರೂ, ದೇಶ ವಿದೇಶಗಳ ಗಣ್ಯಾತಿಗಣ್ಯರೂ, ಇವರೆಲ್ಲರನ್ನೂ ತನ್ನ ವಾರೆಗಣ್ಣಿನಲ್ಲಿ ಕುಣಿಸುವ ಭುವನೈಕ ಸುಂದರಿ ಈಶಾನ್ಯ ಜೈನಳೂ, ಅವಳನ್ನು ಎರಡನೇ ಪತ್ನಿಯಾಗಿ ಪಡೆದ ಗಾಯಕ್ವಾಡನೂ, ಅವನ ಕನಸಿನ ಕೂಸಾದ ಸಣಾಪುರ ಜಿಲ್ಲೆಯ ಗ್ರಾನೈಟ್ ಗಣಿಯ ಪರವಾನಿಗೆಯೂ, ಒಬೆರಾಯ್ ಗ್ರೂಪ್ ಆಫ್ ಹೋಟೆಲ್ಸ್ ನ ಮಾಲಕನಾದ ಪ್ರದ್ಯುಮ್ನ ರಾಯೂ, ಇವರೆಲ್ಲರ ಅವಾಂತರಗಳನ್ನು ಸಹಿಸುವ ನಿರುಪದ್ರವಿ ಗುಣಸಾಗರದ ಜನತೆಯೂ, ನಾವುಗಳಾದ ನಾವೂ, ಅವರುಗಳಾದ ಅವರೂ ಬಂದು ಹೋಗುವ ಸಕಾಲಿಕ, ಸಾರ್ವತ್ರಿಕ ಕಾದಂಬರಿ 'ಏಕಾಂಬರ'ದ ಬಗ್ಗೆ.

ಕುಂವೀಯವರ ಕೆಲವು ಸಣ್ಣ ಕಥೆಗಳನ್ನು ಹೊರತುಪಡಿಸಿ ಕಾದಂಬರಿಯಿಂದ ನಾನು ಅವರನ್ನು ಓದಲು ಪ್ರಾರಂಭಿಸಿದ್ದು ಈ ಏಕಾಂಬರನ ಮೂಲಕವೇ. ಇಲ್ಲಿ ನನ್ನನ್ನು ಬಹುವಾಗಿ ಹಿಡಿದಿಟ್ಟಿದ್ದು ಅವರ ಬರವಣಿಗೆಯ ಶೈಲಿ. ಅವರು ರೂಪಕಗಳ ಮೂಲಕ ವಾಸ್ತವಗಳನ್ನು ಸಮೀಕರಿಸುವ ರೀತಿ ನೋಡಿ ಬೆಕ್ಕಸ ಬೆರಗಾದೆ. ಅವರ ಭಾಷೆ ನಮ್ಮ ದಕ್ಷಿಣ ಕರ್ನಾಟಕದ ಕನ್ನಡಕ್ಕಿಂತ ಭಿನ್ನವಾಗಿದ್ದುದು ಮೊದಮೊದಲು ಓದಿಕೊಳ್ಳಲು ಕಷ್ಟವೆನಿಸಿದರೂ, ನಂತರದಲ್ಲಿ ಅದೇ ಇಷ್ಟವಾಗಿ ಓದಿಕೊಂಡೆ. ತನ್ಮೂಲಕ ಭಾಷೆ ಮತ್ತು ಶೈಲಿ ಒಬ್ಬ ಬರಹಗಾರನ ತಾಕತ್ತು ಎಂಬುದನ್ನು ಅರ್ಥೈಸಿಕೊಂಡೆ. ಈ ಕಾದಂಬರಿ ನನ್ನ ಶಬ್ಧಕೋಶವನ್ನೂ ಹಿಗ್ಗಿಸಿದ್ದು ಸುಳ್ಳಲ್ಲ. ಒಬ್ಬ ಸಶಕ್ತ ಬರಹಗಾರ ತನ್ನ ಮುಂದಿನ ಪೀಳಿಗೆಯ ಯುವ ಬರಹಗಾರರಿಗೆ ಪರೋಕ್ಷವಾಗಿ ಮಾರ್ಗದರ್ಶನ ನೀಡುವುದೆಂದರೆ ಹೀಗೇ, ಅವರ ಯೋಚನಾಧಾಟಿಯ ಹರಿವನ್ನು ನೇರ್ಪಡಿಸುತ್ತಾ, ಅವರಲ್ಲಿನ ಕ್ರಿಯಾಶೀಲತೆಗೆ ಕಿಡಿಯಾಗುತ್ತಾ, ಒಂದು ವಸ್ತುವಿನ ಒಳಹೊಳವುಗಳನ್ನು ದಕ್ಕಿಸಿಕೊಳ್ಳುವುದು ಹೇಗೆಂದು ತನ್ನ ಬರವಣಿಗೆಯ ಮೂಲಕ ಬಿಚ್ಚಿಡುತ್ತಾ ಸಾಗುವುದು. ಆ ವಿಷಯದ ಮಟ್ಟಿಗೆ ಏಕಾಂಬರ ಒಂದು ಕ್ರಾಂತಿಯೇ ಹೌದು. ಲೇಖಕರು ವಿವರಿಸುವ ಪ್ರತಿಯೊಂದು ದೃಷ್ಟಿಕೋನಗಳು ಭಿನ್ನವೇ ಆಗಿದ್ದು, ಆ ಸಂದರ್ಭಕ್ಕೆ ನಾವೇ ಪ್ರತ್ಯಕ್ಷದರ್ಶಿಗಳಾಗಿದ್ದರೂ ಲೇಖಕರು ಸೆರೆಹಿಡಿದಂತಹ ದೃಷ್ಟಿಕೋನಗಳನ್ನು ಸಿಕ್ಕಿಸಿಕೊಳ್ಳಲು ಸಾಧ್ಯವಿತ್ತೇ ಎಂಬ ಬಗ್ಗೆ ನನಗೆ ಅನುಮಾನವಿದೆ! ಓದುಗನಿಗಂತೂ ಭರಪೂರ ಮನೋರಂಜನೆಯಿದೆ.

ಏಕಾಂಬರದ ವಸ್ತುವಿನ ಬಗ್ಗೆ ಅವಲೋಕಿಸುವುದಾದರೆ, ಲೇಖಕರೇ ಹೇಳಿಕೊಳ್ಳುವಂತೆ ಓದುಗನಿಗೆ ಒಂದೇ ಓದಿಗೆ ಗ್ರಾಹ್ಯವಾಗಬಲ್ಲ ಸಮಕಾಲೀನ ವಸ್ತುವನ್ನು ಒಳಗೊಂಡಿದೆ. ಸನಾತನ ದೇಶೀಯ ಉಡುಪುಗಳು, ಬಟ್ಟೆ ಉದ್ಯಮಗಳು ಭಾರತದಂತಹ ನಾಡಲ್ಲಿ ಬೆಳೆದು ನಿಲ್ಲಲು ಪಟ್ಟ ಪರಿಪಾಟಲುಗಳೂ, ಕಾರ್ಮಿಕರು ಮತ್ತು ರೈತರ ಕಷ್ಟ ಕಾರ್ಪಣ್ಯಗಳೂ, ಕಾರ್ಲ್ ಮಾರ್ಕ್ಸ್ ಮತ್ತು ಚೆಗುವೆರಾರಂತಹ ಎಡ ಪಂಥೀಯ ನಾಯಕರ ಚಿಂತನೆಗಳೂ, ರಾಜಕೀಯ ಮೇಲಾಟಗಳೂ, ಅವರ ಆಷಾಡಭೂತಿ ನಡಾವಳಿಗಳೂ, ಈ ರಾಜಕೀಯ ಮೇಲಾಟಗಳಿಗೆ ಪರೋಕ್ಷಕವಾಗಿ ಕಾರಣವಾಗಿದ್ದುಕೊಂಡು ಅದನ್ನು ಸಹಿಸುತ್ತಲೂ ಇರುವ ಜನತೆ, ಜಾಗತೀಕರಣ, ಹೀಗೆ ಸಾಕಷ್ಟು ಒಳನೋಟಗಳನ್ನು ಹಾಸ್ಯಮಯವಾಗಿ ಶಾಂತ ಸಾಗರದಂಥ ಓದುಗನ ಮನದಾಳಕ್ಕೆ ಕಲ್ಲು ತೂರುವಂತೆ ತೂರಿದ್ದಾರೆ. ಹಾಗೆ ತೂರಿದ ಕಲ್ಲುಗಳು ಒಂದರ ಮೇಲೊಂದರಂತೆ ಆಂತರಿಕ ಜಿಜ್ಞಾಸು ತರಂಗಗಳನ್ನೆಬ್ಬಿಸುತ್ತಾ ಯೋಚನೆಗೆ ಹಚ್ಚುತ್ತವೆ. ಇಲ್ಲಿ ಹಾಸ್ಯ ಪ್ರಧಾನವಾದ ಕೆಲಸ ಮಾಡಿದ್ದು, ಕಾದಂಬರಿಯನ್ನೋದಿಸುತ್ತಾ ತನಗೆ ಕೊಟ್ಟ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಗಂಭೀರ ವಿಷಯಗಳನ್ನೂ ಮನದಾಳದ ಕೊಕ್ಕೆಗೆ ಸಲೀಸಾಗಿ ಸಿಕ್ಕಿಸುತ್ತಾ ತಮ್ಮ ಬರವಣಿಗೆಯ ಪಾರಮ್ಯ ಮೆರೆಯುತ್ತಾರೆ ಲೇಖಕರು.

ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಒಳ್ಳೆಯ ಓದಿನೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಸ್ವ-ಅಧ್ಯಯನವನ್ನು ಉತ್ತೇಜಿಸಿದ ಕಾದಂಬರಿ ಇದು. ವಿಜ್ಞಾನವನ್ನು ವಿಷಯವಾಗಿ ಓದಿರುವ ನನಗೆ ಈ ಎಡಪಂಥೀಯ ಒಳನೋಟಗಳ ಬಗ್ಗೆ ಅರಿವು ಮೂಡಿಸಿ ಆ ಬಗ್ಗೆ ಒಂದಷ್ಟು ಅಧ್ಯಯನ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದು ಏಕಾಂಬರ. ಭಗತ್, ಶುಭಾಶ್, ಆಜಾದ್ ಮುಂತಾದವರನ್ನು ಹೀರೋಗಳಾಗಿ ಕಂಡ ಕಣ್ಣುಗಳಿಗೆ ಕಾರ್ಲ್ ಮಾರ್ಕ್ಸ್, ಚೆಗುವೆರಾರನ್ನೂ ದಕ್ಕಿಸಿದ್ದು ಏಕಾಂಬರದ ಹೆಗ್ಗಳಿಕೆ. ಒಂದು ಓದಿನ ಪ್ಯಾಕೇಜ್ ಆಗಿ ನೋಡುವುದಾದರೆ ಏಕಾಂಬರ ಮನೋರಂಜನೆಯನ್ನೂ, ಸಾಕಾಲಿಕ ರಾಜಕೀಯ ಸ್ಥಿತ್ಯಂತರಗಳನ್ನೂ, ಜಾಗತೀಕರಣದ ಮೇಲಾಟಗಳನ್ನೂ, ಸಮಾಜದ ವಿವಿಧ ಸ್ಥರಗಳಲ್ಲಿರುವ ಮಾನವನ ವಿವಿಧ ಮುಖವಾಡಗಳ ಅವಲೋಕನವನ್ನೂ ಒದಗಿಸುತ್ತದೆ. ಪ್ರತ್ಯೇಕವಾಗಿ ನಿಂತು ನೋಡುವಾಗ ಹಾಸ್ಯಾಸ್ಪದವಾಗಿ ಕಾಣುವ ಸನ್ನಿವೇಷಗಳು ಇಲ್ಲಿ ಸ್ವಾಭಾವಿಕವಾಗಿಯೂ ಅತೀ ರಂಜನೀಯವೆನಿಸದೆ ಸಹಜವಾಗಿಯೂ, ಪ್ರತಿಯೊಂದು ಸಂದರ್ಭಗಳೂ ಒಂದಕ್ಕೊಂದು ತಾರ್ಕಿಕವಾಗಿ ಅಂಟಿಕೊಂಡಂತೆಯೂ ಕಾಣುತ್ತವೆ. ಒಮ್ಮೊಮ್ಮೆ ಕಾದಂಬರಿಯ ಅಂತ್ಯ ಆವೇಗದಲ್ಲಿ ಹೊರಟ ಕಾರಿನ ಬ್ರೇಕುಗಳನ್ನು ತಕ್ಷಣಕ್ಕೆ ಅದುಮಿದಂತೆನಿಸಬಹುದು, ಇದ್ದಕ್ಕಿದ್ದಂತೆಯೇ ಎಲ್ಲವೂ ಉಪಾಂತ್ಯ ಕಂಡುವು ಎನಿಸಲೂಬಹುದು. ಆದರೆ ಯಾವುದೇ ಕಥೆಗೂ ವಾಸ್ತವದಲ್ಲಿ ಅಂತ್ಯವೆಂಬುದಿರುವುದಿಲ್ಲ ಎಂಬ ತಾರ್ಕಿಕ ಉಪಾಂತ್ಯವನ್ನು ನಾವಿಲ್ಲಿ ಕಾಣಬಹುದು. ಇದರ ಅಂತ್ಯವನ್ನು ನೋಡುವಾಗ ನನಗೆ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳಲ್ಲಿನ, ’ಇಲ್ಲಿಗೆ ಕಥೆ ಮುಗಿಯಿತೆಂದು ತಿಳಿಯಬೇಡಿ. ಕಥೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟನ್ನು ಹಾಕುತ್ತದೆಯಷ್ಟೆ.’ ಎಂಬ ಸಾಲುಗಳು ನೆನಪಾದವು.

ಈಗ್ಗೇ ಸ್ವಲ್ಪ ದಿನಗಳಂತರದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳನ್ನು, ಭ್ರಷ್ಟಾಚಾರಗಳನ್ನೂ ಕಂಡ ನಮ್ಮ ಜನತೆಯ ಮನಸ್ಥಿತಿಯನ್ನು ಕಾದಂಬರಿಯಲ್ಲಿ ಬರುವ ಗುಣಸಾಗರದ ಜನರ ಮನಸ್ಥಿತಿಗೆ ಹೋಲಿಸಿ ಬರೆದಿರುವ ತುಣುಕು ನನ್ನನ್ನು ಬಹಳವಾಗಿ ಸೆಳೆಯಿತು. ಆದ್ದರಿಂದ ಅದನ್ನಿಲ್ಲಿ ನಮೂದಿಸುತ್ತಿದ್ದೇನೆ:
"ಕಳೆದೊಂದು ತಿಂಗಳಲ್ಲಿ ನೊಣ ಕ್ರಿಮಿಕೀಟಗಳ ಉಪಟಳಗಳಿಂದ ಗುಣಸಾಗರದ ಜನತೆ ರೋಸಿ ಹೋಗಿತ್ತಷ್ಟೆ, ಎಷ್ಟು ರೋಸಿತ್ತೆಂದರೆ ಅವೆಲ್ಲ ತಮ್ಮ ಬದುಕಿನ ಅವಿಭಾಜ್ಯ ಅಂಗವೆಂದೋ, ತಮ್ಮ ಪೂರ್ವಜನ್ಮದ ಕರ್ಮವೆಂದೋ ಭಾವಿಸಿ ಕ್ರಮೇಣ ಅವುಗಳಿಗೆ ತಾವೋ, ತಮಗೆ ಅವೋ ಹೊಂದಿಕೊಂಡು ಸಹಜೀವನವನ್ನು ಆರಂಭಿಸಿದ್ದರು. ತಾವು ತಿನ್ನುವ ಆಹಾರದಲ್ಲಿ, ತಾವು ಕುಡಿಯುವ ನೀರಿನಲ್ಲಿ, ತಾವು ಸೇವಿಸುವ ಗಾಳಿಯಲ್ಲಿ ಅಂಥ ಕ್ರಿಮಿಕೀಟಗಳ ಅವಶೇಷಗಳಿರುವುದು ಅನಿವಾರ್ಯವೆಂದೇ ಭಾವಿಸಿದ್ದರು."
ಈ ಮೂಲಕ ಒಂದೊಳ್ಳೆಯ ಕಾದಂಬರಿಯನ್ನು ಕೊಟ್ಟ ಕುಂವೀಯವರ ಈ ವರ್ಷದ ಮಹಾತ್ವಾಕಾಂಕ್ಷೆಯ ಕೂಸಾದ ’ಒಳಚರಂಡಿಗಳು’ ಕಾದಂಬರಿಗೆ ಶುಭಾಶಯಗಳನ್ನು ಕೋರುತ್ತೇನೆ.

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ರಘು ಅಪಾರ

Tuesday, 22 January 2013

ಅಂತರಾತ್ಮ!




ಉಕ್ಕುಕ್ಕುವ ಗಂಗೆಯನ್ನು
ಹೇಗೆ ತಾನೇ ಒತ್ತಿ ಹಿಡಿಯಲಿ ನಾನು,
ಹರಿವುದದರ ಕ್ರಮ!
ಹರಿದು ತನುವನ್ನು ಹಗುರ ಮಾಡುವ
ಆತ್ಮಕ್ಕೆ ಸಾವಿರ ಪ್ರಣಾಮ!

ಮಾನವ, ದಾನವ, ತನ್ನೊಳಗೇ ದೈವಾ,
ಎಲ್ಲ ಅವತಾರವನ್ನೂ ಎತ್ತಿದ ಮೇಲೆ
ತನ್ನಿಂತಾನೇ ತಟಸ್ಥ!
ಎಲ್ಲಾ ಭಾವಗಳಿಗೆ ಮಿಡಿದಮೇಲೂ
ಮನಸಾ ಸಮಚಿತ್ತ ಭಾವ ಸ್ವಸ್ಥ!

ಮುಚ್ಚು ಮರೆಯಿರದೆ, ಮಡಿ ಮೈಲಿಗೆಯುಡದೆ
ಪೂರ್ವಾಪರಗಳ ಗೊಡವೆಯಿರದೆ
ಇದ್ದುದ್ದಿದ್ದಂತೆ ಹರವಿದೆ!
ಉತ್ತರಾಭಿಮುಖವಾಗಿ, ಸಿದ್ಧಕ್ಕೆ ಸಿದ್ಧನಾಗಿ
ಪರಿಶುದ್ಧ ಆತ್ಮನಾದ ಅಂತರಾತ್ಮ!

- ಪ್ರಸಾದ್.ಡಿ.ವಿ.

Thursday, 17 January 2013

ಕಂಡಷ್ಟು, ಉಂಡಷ್ಟು: ಆಧುನಿಕ ಕನ್ನಡ ಸಾಹಿತ್ಯ!



ಸಾಹಿತ್ಯಿಕವಾಗಿ ಕನ್ನಡ ಕಾವ್ಯವನ್ನು ವಿಮರ್ಶಿಸುವುದಾದರೆ, ಕಾವ್ಯ ಪ್ರತಿಯೊಂದು ಕಾಲಘಟ್ಟದಲ್ಲಿಯೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಸಾಗಿದೆ. ಕಾವ್ಯ ಹೀಗೇ ಇರಬೇಕೆಂಬ ಕಟ್ಟುಪಾಡುಗಳನ್ನು ಮೀರಿ ಬೆಳೆದು ನಿಂತಿದೆ. ಹಾಗೆ ಬೆಳೆದು ನಿಂತ ಪ್ರತಿಯೊಂದು ಸಾಹಿತ್ಯ ಪ್ರಕಾರಗಳನ್ನು ಸಾಹಿತ್ಯ ಕ್ರಾಂತಿಗಳೆಂದೂ ಅರ್ಥೈಸಬಹುದು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಾದ ಕ್ರಿಯಾಶೀಲ ಕ್ರಾಂತಿ ಕನ್ನಡ ಸಾಹಿತ್ಯಕ್ಕೆ ಮೆರುಗನ್ನು ನೀಡಿದ್ದಲ್ಲದೇ ಕನ್ನಡ ಸಾಹಿತ್ಯವನ್ನು ಜಾಗತಿಕ ಸಾಹಿತ್ಯದ ಮಟ್ಟಕ್ಕೆ ಕೊಂಡೊಯ್ಯಿತು ಎಂಬುದು ನಿರ್ವಿವಾದ. ಶಾಸ್ತ್ರೀಯ ಸಾಹಿತ್ಯ, ರಾಜಾಶ್ರಯ ಸಾಹಿತ್ಯ, ಹಳೆಗನ್ನಡ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಬೆಳೆದುಬಂದ ಕನ್ನಡ ಸಾಹಿತ್ಯ ಹದಿನೆಂಟನೆಯ ಶತಮಾನದ ಅಂತ್ಯಕ್ಕೆ ನವೋದಯ ಸಾಹಿತ್ಯವಾಗಿ ಚಿಗುರೊಡೆಯಿತು.

ಕುವೆಂಪು, ಬಿ.ಎಂ.ಶ್ರೀ, ಬೇಂದ್ರೆ ಅಜ್ಜ ಮತ್ತು ಮೊದಲಾದವರಿಂದ ಮೊದಲ್ಗೊಂಡ ನವೋದಯ ಸಾಹಿತ್ಯ ಓದುಗರಿಗೆ ಒಂದು ರೀತಿಯ ಏಕತಾನತೆಯನ್ನು ಅನುಭಾವಕ್ಕೆ ಕೊಟ್ಟಾಗ, ನವೋದಯೊತ್ತರ ಸಾಹಿತ್ಯ ರಚನೆಗೊಳ್ಳಲು ಪ್ರಾರಂಭವಾಯ್ತು. ಆ ಘಟನೆ ನವ್ಯ ಸಾಹಿತ್ಯದ ರಚನೆಗೆ ಪ್ರೇರಣೆಯಾಯ್ತು. ನವ್ಯ ಸಾಹಿತ್ಯವು ರಚನೆಗೊಂಡ ಹೊಸದರಲ್ಲಿ ಓದುಗರ ಮೆಚ್ಚುಗೆ ಪಡೆದದ್ದು ಸುಳ್ಳಲ್ಲ. ಆದರೆ ನವ್ಯ ಸಾಹಿತ್ಯವು ಬಹುವಾಗಿ ಪಾಶ್ಚಾತ್ಯ ಮತ್ತು ಆಂಗ್ಲ ಸಾಹಿತ್ಯದ ಪ್ರೇರಣೆಯಿಂದ ರೂಪುಗೊಂಡದ್ದು. ಇಲ್ಲಿ ಜನಸಾಮಾನ್ಯರ ದನಿ ಅವನತಿಯ ಹಾದಿ ಹಿಡಿದು, ಕನ್ನಡ ಸಾಹಿತ್ಯ ನಿಂತ ನೀರಾಗುವುದೇನೋ ಎಂಬ ಭ್ರಮಾತೀತ ಪರಿಸ್ಥಿತಿಗಳು ಸೃಷ್ಟಿಯಾದವು. ಈ ರೀತಿಯ ಸಾಹಿತ್ಯಿಕ ಭ್ರಾಂತಿ ಆ ಕಾಲದ ಕಾವ್ಯ ಕೃಷಿಯ ಮಾರ್ಗಗಳನ್ನು ತ್ಯಜಿಸುವುದಷ್ಟೇ ಅಲ್ಲದೇ ಅವುಗಳ ಸ್ಪೂರ್ತಿಯ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಅವುಗಳ ಮೌಲ್ಯಗಳನ್ನು ತ್ಯಜಿಸದ ಹೊರತು ದೂರವಾಗುವಂತದ್ದಾಗಿರಲಿಲ್ಲ. ಕೇವಲ ಅಚ್ಚಿಸುವ ತಂತ್ರಜ್ಞಾನಗಳು ಬದಲಾಗುವುದರಿಂದ ಅದು ಸಾಧ್ಯವಿಲ್ಲದ್ದಾಗಿತ್ತು! ಇಲ್ಲಿಯವರೆಗೂ ರಚನೆಗೊಂಡ ಕಾವ್ಯದ ಮೂಲ ಸ್ವರೂಪ ಲಯಬದ್ಧವಾಗಿದ್ದು, ಅದಕ್ಕೆ ತನ್ನದೇ ಆದ ಸಾಂಕೇತಿಕ ಸಿದ್ಧ ಶೈಲಿ ಮತ್ತು ತಂತ್ರಗಳನ್ನು ಒಳಗೊಂಡಿತ್ತು.

ಅಲ್ಲಿಯವರೆಗೂ ಕ್ರಾಂತಿ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಿತ್ತು. ಜನರ ಆಗು ಹೋಗುಗಳಿಗೆ, ಗ್ರಾಮೀಣ ಪರಿಕಲ್ಪನೆಗಳಿಗೆ, ಜೀವನಾನುಭವ ಮತ್ತು ತಿಳುವಳಿಕೆಗಳಿಗೆ ಒಗ್ಗಿಕೊಂಡಂತೆ ಸಾಹಿತ್ಯ ಸೃಷ್ಟಿ ಅಸಾಧ್ಯ ಎಂದಾದಾಗ, ತೇಜಸ್ವಿ ಮತ್ತು ದೇವನೂರ ಮಹದೇವರವರ ಮುಂದಾಳತ್ವದಲ್ಲಿ ನವ್ಯೊತ್ತರ, ದಲಿತ ಮತ್ತು ಬಂಡಾಯ ಸಾಹಿತ್ಯಗಳ ಕಾವ್ಯ ಸೃಷ್ಟಿ ಸಾಧ್ಯವಾಯ್ತು. ಇದು ಜನರ ಮಧ್ಯೆ ನುಡಿದಂತೆ ಸಾಗಿಬೆಳೆದ ಸಾಹಿತ್ಯ. ಈ ಹಂತದಲ್ಲಿ ಕಾವ್ಯ ಕ್ರಾಂತಿಕಾರಕ ಧೋರಣೆಗಳಿಗೆ ಒಗ್ಗಿಕೊಂಡಿತು. ಕಾವ್ಯದ ಆಮೂಲಾಗ್ರ ಬದಲಾವಣೆಯಾಯ್ತು, ಇಲ್ಲಿ ಸೃಷ್ಟಿಯಾದ ಸಾಹಿತ್ಯದ ಉದ್ದೇಶಗಳು ನಿನಾದವಾಗಿರದೇ ಜನರ ನಾಡಿ ಮಿಡಿತಕ್ಕೆ ಸ್ಪಂದಿಸುವುದಾಗಿತ್ತು. ಹಾಗೆ ಸೃಷ್ಟಿಯಾದ ಕಾವ್ಯವನ್ನು ಕವಿ ನುಡಿಸಿದ್ದು ತನ್ನದೇ ಧಾಟಿಯಲ್ಲಿ. ಈ ಮೂಲಕ ಹರಿದು ಬಂದ ಸಾಹಿತ್ಯವು ಓದುಗನ ಕಾಲಿಗೆ ತೊಡರಿ, ಓದುಗನದಾಗುತ್ತದೆ. ಓದುಗ ಅದನ್ನು ತನ್ನದು ಮಾಡಿಕೊಳ್ಳಬೇಕಾದ ಜವಾಬ್ದಾರಿ ಓದುಗನದ್ದು. ಇಲ್ಲಿ ಕಾವ್ಯ ಮತ್ತು ಓದುಗ ಇಬ್ಬರೂ ಕ್ರಿಯಾಶೀಲರಾಗಿದ್ದು, ಪೂರ್ವಾಗ್ರಹ ಪೀಡಿತರಾಗದೇ ಇರಬೇಕು.

ಕಾವ್ಯ ಓದುಗನಿಗೆ ದಕ್ಕುವುದೇ ಇಲ್ಲ ಎಂದು ಸತ್ಯಾಗ್ರಹ ಹೂಡಿ ಕೂರುವುದಲ್ಲ! ಜೊತೆಗೆ ಓದುಗ ಕಾವ್ಯ ಅದಾಗದೇ ಬಂದು ನನ್ನನ್ನು ಸೋಕಿ ಹೋದರೆ ಹೋಗಲಿ, ನಾನು ಮಾತ್ರ ಪ್ರಯತ್ನಿಸುವುದಿಲ್ಲ ಎಂದು ಇದ್ದುಬಿಡುವುದೂ ಸಲ್ಲ. ಕಾವ್ಯವೂ ಕೈಚಾಚಬೇಕು, ಓದುಗನೂ ಕೈಚಾಚಬೇಕು. ಅವನ ಅರಗಿಸಿಕೊಳ್ಳುವಿಕೆಗೂ, ಕಾವ್ಯದ ಸಾರಕ್ಕೂ ಅನುಸಂಧಾನವಾಗಬೇಕು, ಆಗಷ್ಟೇ ಒಂದು ಸೌಹಾರ್ದಯುತವಾದ ಹೊಂದಾಣಿಕೆಯ ಜ್ಞಾನದ ಹಸ್ತಲಾಘವ ಸಾಧ್ಯ.  ನನಗೆ ಅನುಭಾವಕ್ಕೆ ಸಿಕ್ಕ ಸಾಹಿತ್ಯವನ್ನು ಇಷ್ಟು ಮಾತ್ರ ಅರುಹಲು ಪ್ರಯತ್ನಿಸಿದ್ದೇನೆ.

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

Thursday, 10 January 2013

ಉಸಿರಾಡಲಿ ತಾಯಿ ಭಾರತಿ!




ಕಾಡವೇ ಕಂದಾಚಾರಗಳು,
ಅವುಗಳ ಪಾಡಿಗವು ಕುಣಿಯವೇ,
ಕಾಂಚಾಣಕ್ಕೆ ಹೂಂಕರಿಸಿ
ಕುಣಿವ ದೈತ್ಯ ದೇವತೆಯಂತೆ!
ಕುಣಿದದ್ದೆ ಕುಣಿದದ್ದು,
ಉಂಡೆಲೆಯ ಮೇಲೂ
ಹೊರಳಿ ಬಿದ್ದವು ಮೌಲ್ಯಗಳು!
ಅಂಧಾಚರಣೆಯ ಹೆಸರಲ್ಲಿ
ಮೆತ್ತಿಕೊಂಡವು ಮೈಗೆ,
ಕಂಡಕಂಡವರ ಎಂಜಲಗಳು!
ಕಂದಾಚಾರ, ಡಂಬಾಚಾರಗಳು
ಗಂಟು ಬಿಡಲಿಲ್ಲ, ನಂಟೂ ಬಿಡಲಿಲ್ಲ!

ದೇವರಿಗೆ ಹಚ್ಚಿಟ್ಟ
ಧೀ ಶಕ್ತಿ ತೂಗು ದೀಪ,
ಮನೆ ಸುಟ್ಟ ಕೊಳ್ಳಿಯಾಯ್ತಂತೆ!
ಉರಿಸಿಟ್ಟ ಊದುಗಡ್ಡಿಯ ಹೊಗೆ
ಸಿಗರೇಟಿನ ಸುರುಳಿ ಸುತ್ತಿದ
ಧೂಮದೊಳು ಬೆರೆತಂತೆ!
ತಾಯಿಯೂ ಮಕ್ಕಳ
ಮಾನ ಕಾಯಲಾರದೆ
ಕೈ ಕಟ್ಟಿ ಕೂತಂತೆ!
ಬೆತ್ತಲಾದವು ಹೆಣ್ಮಕ್ಕಳು
ಹಾದಿ ಬೀದಿಯಲ್ಲಿ,
ಅವರವರನುಜರ ಕೈಯ್ಯಲ್ಲೇ!

ಸಮಾನತೆ ಕುಡಿಯೊಡೆಯಲಿಲ್ಲ,
ಸಾತ್ವಿಕತೆ ಮೊಲೆಯೂಡಲಿಲ್ಲ,
ತಾಯಿ ಅಳುತ್ತಲೇ ಇದ್ದಾಳೆ,
ಸೀರೆಯೆಳೆದಾರು
ಹೊಲಸು ಕೆಡುಕರು
ಎಂಬ ಭಯದಲ್ಲಿ!
ಮುಕ್ತವಾಗಿಸಿರೋ ಅವಳ
ಕಬಂದ ಬಾಹುಗಳ
ಕಪಿ ಮುಷ್ಠಿಯಿಂದ!
ಸಮಾನತೆ, ಸ್ವಸ್ಥ ಗಾಳಿಯ
ಉಸಿರಾಡಲಿ ಭಾರತಾಂಬೆ,
ಕಾಣದೇ ಅವಳ ದಣಿವು ನಿಮಗೆ?

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Wednesday, 2 January 2013

ಸದ್ಗುಣ ಸತಿ!




ಅಂಗಳ ಗುಡಿಸಿ,
ಆರತಿ ಹಚ್ಚಿಟ್ಟು ಕೈಮುಗಿಯುತ್ತಾಳೆ,
ಮಾಳಿಗೆ ಸೋರದಂತೆ
ಜಂತಿಯ ತೊಲೆ ಕಟ್ಟುತ್ತಾಳೆ,
ಮನೆಯ ಸಮವಿಟ್ಟು ಸರಿದೂಗುತ್ತಾಳೆ,
ಸೇವೆಗೆ ಸರಿನಿಂತು ಉಸಿರಾಗುತ್ತಾಳೆ!

ಅರಿವೊಳಗಿನ ಗುರುವವಳು,
ದಾರಿ ತೋರಿ ತಣ್ಣಗಿರುವಳು,
ಗೆದ್ದೆನೆಂದು ಬೀಗುವವು
ಗಂಡೆದೆ, ತೋಳುಗಳು!
ಯಶಸ್ಸಿನ ಹಿಂದೆ ನಿಂತ ಮಂತ್ರಿ,
ಅವನಾನಂದವ ಕಣ್ತುಂಬಿಕೊಳ್ವಳು!

ಅನ್ನ ಅನ್ನಕ್ಕೂ ಮುತ್ತಿಟ್ಟು,
ಪ್ರೀತಿಯಿಂದ ತುತ್ತಿಟ್ಟು,
ತನ್ನ ಹಸಿವ ಇಂಗಿಸಿಯಾದರೂ,
ಹೊತ್ತು ಹೊತ್ತಿಗೆ ಅನ್ನವುಣಿಸಿ
ಗಂಡ-ಮಕ್ಕಳ ಹೊಟ್ಟೆ ತುಂಬಿಸುವ
ಅನ್ನಪೂರ್ಣೇಶ್ವರಿ ಅವಳು!

ವಯ್ಯಾರದಿ ತುಳುಕಿ ಬಳುಕಿ,
ಶೃಂಗಾರದಿ ಬಳಿಗೆ ಬರುವ,
ಸುಖ-ಸಂತೋಷವ ಮೊಗೆದು ಸುರಿವ
ಚೈತನ್ಯದ ಬುಗ್ಗೆಯವಳು
ಶಯನ ಸುಖದಿ ಗಂಡನೆದೆಯಾ
ತಣಿಸಲುಕ್ಕಿ ಹರಿವಳು!

ಹಣೆಯಲ್ಲಿ ಕೆಂಪು ಬಿಂದಿ,
ಕೈಯಲ್ಲಿ ಹಸಿರ ಬಳೆ,
ಮೂಗಿನ ಮೇಲ್ ರತ್ನದಾ ನತ್ತು,
ನಕ್ಕರರಳುವ ದಂತಪಂಕ್ತಿ!
ಅರಳುವಳು ದೇವತೆ,
ಕಮಲದೊಳಗಿನ ಕಮಲದಂತೆ!

ತನ್ನಾಸೆಗಳ ಕೊಂದು,
ನೋವಲ್ಲಿ ಬೆಂದು
ಕಾವಲಿಯ ಮೇಲೆ ಬಿದ್ದರೂ,
ಎಲ್ಲವನ್ನೂ ಸಹಿಸಿ
ತಪ್ಪುಗಳ ಮನ್ನಿಸಿ ಮತ್ತೆ ಮಿಡಿವಳು
ಕುಲಧರ್ಮ ಪತ್ನಿ, ಕ್ಷಮಯಾ ಧರಿತ್ರಿ!


- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Thursday, 27 December 2012

ಗಂಡಸರೆನ್ನಿಸಿಕೊಳ್ಳುವಂತಹ ನಾವೆಷ್ಟು ಸಭ್ಯರು!?!




ದೆಹಲಿಯಲ್ಲಿ 23 ವರ್ಷದ ಹೆಣ್ಣು ಮಗಳೊಬ್ಬಳು ತನ್ನ ಮಾನ ಹರಣಗೊಂಡು, ಮಾನಸಿಕವಾಗಿ ಮತ್ತು ದೈಹಿಕವಾಗಿ ಘಾಸಿಗೊಂಡು ತನ್ನ ಪ್ರಾಣವನ್ನೂ ಈ ರಕ್ತ ಪಿಪಾಸುಗಳಿಗೆ ಬಲಿಕೊಟ್ಟದ್ದನ್ನು ನೆನಪಿಸಿಕೊಂಡಾಗ ಮೈಯೆಲ್ಲಾ ಉರಿದು ಹೋಗಿ ನಮ್ಮ ಸಮಾಜದ ಮೇಲೆ, ನಮ್ಮ ಗಂಡು ಜಾತಿಯ ಮೇಲೇ ಅಸಹ್ಯ ಹುಟ್ಟುತ್ತದೆ! ಹೆಣ್ಣು ತನ್ನೆಲ್ಲಾ ಕಾಲಘಟ್ಟಗಳಲ್ಲಿ ನಂಬುವ ತಂದೆ, ಅಣ್ಣ, ತಮ್ಮ, ಗೆಳೆಯ, ಗಂಡ, ಮಾವ, ಭಾವ, ಮೈದುನ, ಮಗ ಹೀಗೆ ಹತ್ತು ಹಲವು ಅವತಾರಗಳಲ್ಲಿರುವ ಗಂಡಸರಾದ ನಾವೆಷ್ಟು ಸಭ್ಯರು ಎಂಬ ಅನುಮಾನ ಕಾಡುತ್ತದೆ! ಆ ಅನುಮಾನಕ್ಕೆ ಉತ್ತರ ಕಂಡುಕೊಳ್ಳುವ, ತನ್ನ ಹೀನ ನಡವಳಿಕೆಗಳನ್ನು ಪ್ರಶ್ನಿಸಿಕೊಳ್ಳುವ ಸಾತ್ವಿಕ ಪ್ರಜ್ಞೆ ನಮ್ಮಲ್ಲಿ ಜಾಗೃತಗೊಂಡದ್ದೇ ಆದರೆ ನಮ್ಮ ಸಮಾಜ 'ಅತ್ಯಾಚಾರ ಮುಕ್ತ' ಸಮಾಜವಾಗುವುದರಲ್ಲಿ ಅನುಮಾನವಿಲ್ಲ. ಅತ್ಯಾಚಾರವೆಂದರೆ ದೈಹಿಕವಾಗಿಯೇ ಆಗಬೇಕೆಂದಿಲ್ಲ, ಮಾನಸಿಕವಾಗಿ, ನೈತಿಕವಾಗಿಯೂ ಆಗಿರಬಹುದು. ಹೆಣ್ಣನ್ನು ಗೌರವ ಭಾವದಿಂದ ನಡೆಸಿಕೊಳ್ಳುವ ಜವಾಬ್ಧಾರಿ ಭಾರತಾಂಬೆಯ ಮಕ್ಕಳೆನಿಸಿಕೊಳ್ಳುವ ನಮ್ಮೆಲ್ಲರ ಮೇಲೂ ಇದೆ. ಗಂಡು ಮಕ್ಕಳ ತಾಯಿಯಂದಿರು ಮೊದಲು ತಮ್ಮ ಮಕ್ಕಳಿಗೆ ಇಂತಹ ಸಾತ್ವಿಕ ಶಿಕ್ಷಣವನ್ನು ಧಾರೆ ಎರೆಯಬೇಕು. 

ಹೀಗೆ ಎಷ್ಟೆಲ್ಲಾ ಸಂಬಂಧಗಳೊಡಗೂಡಿ ಹೆಣ್ಣಿನೊಂದಿಗೆ ಬೆಸೆದುಕೊಂಡ ನಾವು ಮತ್ತೊಬ್ಬ ಹೆಣ್ಣನ್ನು ಕಾಮುಕ ಕಂಗಳಿಂದ ನೋಡುವ ಮೊದಲು, ನಾವೂ ಒಂದು ಹೆಣ್ಣಿನ ಅಪ್ಪನೋ, ಸಹೋದರನೋ, ಗೆಳೆಯನೋ, ಸಂಬಂಧಿಯೋ ಆಗಿರುತ್ತೇವೆಂಬ ಅಲ್ಪ ಪ್ರಜ್ಞೆ ಅಥವಾ ನಮಗೆ ಸಂಬಂಧಪಟ್ಟ ಆ ಹೆಣ್ಣನ್ನೂ ಯಾರದರೂ ಹೀಗೆ ನೋಡಿದ್ದರೆ ಸಹಿಸುತ್ತಿದ್ದೆವೇ? ಎಂಬ ಅರಿವನ್ನು ತಂದುಕೊಂಡರೆ, ಉಗುಳುವ ಮೊದಲೇ ತಪ್ತವಾಗಿಬಿಡುತ್ತದೆ ಕಾಮಾಗ್ನಿ!

ಕೆಲವು ವರ್ಷಗಳ ಹಿಂದ ನನ್ನ ಗೆಳತಿಯೊಬ್ಬಳ ಜೀವನದಲ್ಲಿ ನಡೆದ ಘಟನೆ: ಆಕೆ ಮಾರ್ಕೆಟ್ ಗೆ ಹೋಗಿ ಹಿಂದಿರುಗುವ ಧಾವಂತದಲ್ಲಿ ನಡೆದು ಹೋಗುತ್ತಿರುವುದನ್ನು ಕಂಡ ಒಬ್ಬ 16 ರಿಂದ 17 ವರ್ಷ ವಯಸ್ಸಿನ ಹುಡುಗ ಸೈಕಲ್ ನಲ್ಲಿ ಹಿಂಬಾಲಿಸುತ್ತಿದ್ದನಂತೆ. ಅಕ್ಕ ಪಕ್ಕದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತನ್ನ ವಯಸ್ಸಿಗಿಂತಲೂ ದೊಡ್ಡವಳಾದ ಅವಳನ್ನು ತಬ್ಬಿ ಹಿಡಿಯುವ ಪ್ರಯತ್ನ ಮಾಡಿದನಂತೆ. ಆಕೆಗೆ ಜಂಘಾಬಲವೇ ಉಡುಗಿಹೋಗಿದೆ! ಆಕೆ ಹೇಗೋ ಪ್ರಯತ್ನ ಮಾಡಿ, ತನ್ನ ಕೈಯ್ಯಲ್ಲಿದ್ದ ತರಕಾರಿಗಳನ್ನು ಅವನ ಮೇಲೆ ಕುಕ್ಕಿ, ಕೂಗಿಕೊಂಡು ಪ್ರತಿಭಟಿಸಿದ್ದರಿಂದ ಹೆದರಿ ಸೈಕಲ್ ಮೇಲೇರಿ ಓಡಿಹೋದನಂತೆ. ಆದರೆ ಆ ಘಟನೆಯ ನಂತರ ಆಕೆಯ ಮನಸ್ಥಿತಿ, ಅಬ್ಬಾ ನನಗೀಗಲೂ ಮೈ ಕಂಪಿಸುತ್ತದೆ. ಗಂಡಸರೆಂದರೆ ಆಕೆಗೆ ಅಸಹ್ಯ ಮೂಡಿಬಿಟ್ಟಿತ್ತು! ಎಲ್ಲಾ ಗಂಡಸರೂ ಹಾಗಿರುವುದಿಲ್ಲ, ಅಪ್ಪ, ಅಣ್ಣ, ತಮ್ಮ ಹೀಗೆ ಬಾಂಧವ್ಯ ಹಂಚಿಕೊಂಡವರೂ ಗಂಡಸರಲ್ಲವೇ? ಭಯ ಪಡಬೇಡ ಎಂದರೂ ಆಕೆ ಕೇಳದ ಸ್ಥಿತಿ ತಲುಪಿಬಿಟ್ಟಿದ್ದಳು! ಆಕೆಯ ನಂಬಿಕೆಯ ಮೇಲೆ ಬಲವಾದ ಹೊಡೆತ ಬಿದ್ದಿತ್ತು! ಹೀಗೆ ಹುಡುಕುತ್ತಾ ಹೋದರೆ ಹೆಣ್ಣಿನ ಮೇಲೆ ನಡೆಯುವ ಪೈಶಾಚಿಕ ಮನಸ್ಥಿತಿಯ ರಾಕ್ಷಸರ ದೌರ್ಜನ್ಯಗಳು ಅಸಂಖ್ಯ. ಇವರಿಂದಾಗಿ ಸಭ್ಯರೂ ಮುಖ ಮುಚ್ಚಿಕೊಳ್ಳಬೇಕಾದ ಸ್ಥಿತಿಗೆ ನಮ್ಮ ನಾಗರೀಕ ಸಮಾಜ(!) ಬಂದು ನಿಂತಿದೆ.

ದೆಹಲಿಯಲ್ಲಿ, ಆ ಆರು ಜನರಿಂದಾದ ಅತ್ಯಾಚಾರದಂತಹ ದುಷ್ಕೃತ್ಯ ಕೇವಲ ಆಕೆಯ ಮೇಲಾದ ದೌರ್ಜನ್ಯವಷ್ಟೇ ಅಲ್ಲಾ, ಮಾನವೀಯತೆಯ ಮೇಲಾದ ದೌರ್ಜನ್ಯ, ಸಭ್ಯ ಗಂಡಸರ ಸಭ್ಯತೆಯ ಮೇಲಾದ ದೌರ್ಜನ್ಯ! ಆ ಕುಕೃತ್ಯದಿಂದಾಗಿ ಎಲ್ಲಾ ಗಂಡಸರ ಆತ್ಮೀಯತೆಯೂ ಹಳದಿಗಣ್ಣಿನ ಸೋಗಿನಲ್ಲಿ ಕಾಣುತ್ತಿರುವುದು ದುರಂತ. ಯಾವುದೋ ಒಂದು ದುರ್ಬಲ ಮನಸ್ಥಿತಿಯಲ್ಲಿ ಹೆಣ್ಣಿನ ಜೊತೆ ಕೀಳಾಗಿ ನಡೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ, ನಿಮ್ಮ ಮಗಳೇ ನಿಮ್ಮ ಅಕ್ಕರೆಯ ಸ್ಪರ್ಶವನ್ನು ಕಾಮ ಪ್ರೇರಿತವಾದದ್ದೆಂದು ಅಸಹ್ಯ ಪಟ್ಟುಕೊಂಡರೆ? ನಿಮ್ಮ ಸಹೋದರಿಯೇ ನಿಮ್ಮ ಆತ್ಮೀಯ ಸ್ಪರ್ಶಕ್ಕೆ ಕೆಂಡ ಮುಟ್ಟಿದಂತೆ ಕೈ ಎಳೆದುಕೊಂಡರೆ? ನಿಮ್ಮ ನಲ್ಲೆಗೆ ಹಿತವೆನಿಸಬೇಕಾದ ನಿಮ್ಮ ಸ್ಪರ್ಶ ಕಾದ ಸಲಾಕೆಯಾದರೆ? ನಿಮ್ಮ ತಾಯಿಗೂ ನೀವು ಕಾಮ ಪಿಶಾಚಿಯಂತೆ ಕಂಡರೆ? ನಿಮ್ಮ ಅಮ್ಮನನ್ನೋ, ಸಹೋದರಿಯನ್ನೋ, ಮಗಳನ್ನೋ ನೀವು ಕಾಮುಕ ದೃಷ್ಟಿಯಿಂದ ನೋಡಬಲ್ಲಿರೇ? ನಿಮ್ಮ ಪ್ರಜ್ಞೆ ನಿಮ್ಮ ಕೈಜಾರಿ, ಅಮಾಯಕ ಹೆಣ್ಣು ಮಗಳ ಮೇಲೆರಗುವ ಮುನ್ನ ಒಮ್ಮೆ ಪ್ರಶ್ನಿಸಿಕೊಳ್ಳಿ, ನೀವೆಷ್ಟು ಸಭ್ಯರು? ಒಬ್ಬಳ ತಂದೆಯೋ, ಸಹೋದರನೋ, ಇನಿಯನೋ, ಮಗನೋ ಆಗಿರುವ ನೀವೆಷ್ಟು ಸಭ್ಯರು? ನಿಮ್ಮ ಕುಕೃತ್ಯದಿಂದ ಇಡೀ ನಾಗರೀಕ ಜಗತ್ತಿನ ಸಭ್ಯ ಗಂಡಸರನ್ನೂ ಬೆತ್ತಲೆ ನಿಲ್ಲಿಸುತ್ತಿರುವ ನೀವೆಷ್ಟು ಸಭ್ಯರು? ಒಮ್ಮೆ ಪ್ರಶ್ನಿಸಿಕೊಳ್ಳಿ. 

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ