ಬೆರಳಿಗೊಂದು ಉಂಗುರ, ಎದೆ ತುಂಬ ಪ್ರೀತಿ!
------------------------------------------
ನಾನು ನಿಶ್ಚಿಂತನಾಗಿ ಮಲಗಿದ್ದೆ, ಅದು ಬೆಳಗ್ಗಿನ ಏಳು ಗಂಟೆಯಿರಬಹುದು!
ಆ ಸೂರ್ಯನಿಗೂ ನನ್ನನ್ನು ಕಂಡರೆ ಅದೇನೋ ಹೊಟ್ಟೆ ಉರಿ, ಆರು ಗಂಟೆಗೆಲ್ಲಾ ಎದ್ದು ಬಂದು ನನ್ನ ಕೋಣೆಯ
ಕಿಟಕಿಯ ಮುಂದೆ ನಿಂತು ಬಿಡುತ್ತಾನೆ, ಹಾಳಾದವನು! ನನ್ನ ಶ್ರೀಮತಿ ಒಳಗೆ ಧೂಪ ಹಚ್ಚಿಟ್ಟು, ಪಿಳ್ಳಂಗೋವಿ
ಕಳ್ಳ ಕೃಷ್ಣನ ಎದುರು, ’ಕೃಷ್ಣ ಸ್ತುತಿ’ ಮಾಡುತ್ತಿದ್ದುದು ಕೇಳಿಸುತ್ತಿತ್ತು! ನಮ್ಮ ಮೂರು ವರ್ಷದ
ಪುಟಾಣಿ ಪುಟ್ಟಿ ಹತ್ತಿರ ಬಂದು,
“ಪಪ್ಪಾ ಏಳು ಪಪ್ಪಾ, ನೀನು ಏಳದಿದ್ದರೆ ಅಮ್ಮ ಕೋಲು ತರ್ತಾಳಂತೆ” ಎನ್ನುತ್ತಾ
ನನ್ನನ್ನು ಅಲುಗಾಡಿಸಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಳು.
“ಹೇ ಶಾರೀ ಪುಟ್ಟಿ, ಇಷ್ಟು ಬೇಗ ಎದ್ದು ಏನ್ಮಾಡ್ತಿದೆ ನನ್ನ ಮುದ್ದು?
ಪಪ್ಪಾಗೆ ಭಾನುವಾರ ರಜಾ ಇದೆ.. ಹಾಗೆಲ್ಲಾ ಡಿಸ್ಟರ್ಬ್ ಮಾಡಬಾರ್ದು ಅಲ್ವಾ? ಪಪ್ಪ ಇನ್ನೊಂದ್ ಸ್ವಲ್ಪ
ಹೊತ್ತು ಮಲ್ಗುತ್ತೆ ಅಂತ ಅಮ್ಮಂಗೆ ಹೇಳಮ್ಮ” ಎಂದು ಲಲ್ಲೆ ಗರೆದು ಅವಳನ್ನು ಕಳುಹಿಸಲು ನೋಡಿದೆ.
ಅವಳು ಬಿಡಬೇಕಲ್ಲಾ, ತನ್ನ ಅಮ್ಮನ ರಾಯಭಾರಿಯಂತೆ ನನ್ನನ್ನು ಎಬ್ಬಿಸುವ
ಕೆಲಸ ಮುಂದುವರೆಸಿಯೇ ಇದ್ದಳು! ಇತ್ತ ಕಡೆ ಅವಳಮ್ಮ, ಅರ್ಥಾತ್ ನನ್ನ ಅರ್ಧಾಂಗಿ ಶುಶ್ರಾವ್ಯವಾಗಿ
’ಬೆಣ್ಣೆ ಕದ್ದನಮ್ಮ ಕೃಷ್ಣಾ, ಬೆಣ್ಣೆ ಕದ್ದನಮ್ಮಾ…” ಹಾಡನ್ನು ಗುನುಗುತ್ತಾ ಬಂದವಳು, ಮೆಲ್ಲಗೆ ನನ್ನ
ಕಿವಿಯ ಹತ್ತಿರ ಬಂದು,
“ಏನು ಸಾಹೇಬ್ರು ಇನ್ನೂ ಮಲ್ಗಿದ್ದೀರಿ? ಇವತ್ತಿನ ಸ್ಪೆಷಲ್ ಏನು ಅಂಥಾ
ನೆನಪಿಲ್ವಾ?” ಎಂದಳು ಪಿಸುಗುಟ್ಟುವಂತೆ. ಶಾರೀ ಅಲ್ಲಿಲ್ಲದಿದ್ದರೆ ನನ್ನವಳನ್ನು ಹಾಗೆಯೇ ಬರಸೆಳೆದಪ್ಪಿ
ಮುದ್ದಿಸುತ್ತಿದ್ದೆ. ಏಕೆಂದರೆ ಶಾರೀ ಮುಂದೆ ನಾನಾರನ್ನೂ ಮುದ್ದಿಸುವಂತಿಲ್ಲ, ನನ್ನ ಹೆಂಡತಿಯನ್ನೂ
ಸಹ! ನನ್ನ ಮಗಳಿಗೆ ತನ್ನ ಪಪ್ಪನ ಮೇಲೆ ಅಷ್ಟು ಪೊಸ್ಸೆಸ್ಸಿವ್ ನೆಸ್! ಆ ಕ್ಷಣಕ್ಕೆ, ನನ್ನ ಮೇಲೆ ನನ್ನ
ಮಗಳಿಗಿದ್ದ ಪ್ರೀತಿಗೆ ಖುಷಿಪಡಲೇ ಇಲ್ಲ ಒಂದು ರಸಮಯ ರೊಮ್ಯಾಂಟಿಕ್ ಕ್ಷಣ ಮಿಸ್ ಆಗುತ್ತಿದೆ ಎಂದು
ದುಃಖಿಸಲೇ? ಎರಡೂ ತೋಚದೆ ಸುಮ್ಮನೆ ಎದ್ದು ಕೂತೆ! ಹೌದುರೀ… ನೀವೇ ಹೇಳಿ, ನಲ್ಲೆ
ಕಿವಿಯಲ್ಲುಸುರುವಾಗ ಯಾರು ತಾನೆ ರೋಮಾಂಚನಗೊಳ್ಳಲಾರರು?! ನನ್ನ ಕಣ್ಣುಗಳು ಸಾವಿರ ಭಾವಗಳನ್ನೂ ತಮ್ಮೊಳಗಿಂದ
ಸೂಸಿ, ತನ್ನ ಮನದನ್ನೆಯನ್ನು ತಮ್ಮೊಳಗೆ ತುಂಬಿಸಿಕೊಳ್ಳುತ್ತಿದ್ದವು…
“ಸಾಹೇಬ್ರು ತುಂಬಾ ರೋಮ್ಯಾಂಟಿಕ್ ಆಗಬೇಡಿ, ಮಗಳು ಎದುರಿಗಿರುವುದು ನೆನಪಿರಲಿ”
ಎಂದುಬಿಡುವುದೇ ಅವಳು! ಹಾಂ ಮಧುವಂತಿ ನನ್ನ ಮಡದಿ, ಮನದನ್ನೆ, ಪಟ್ಟದರಸಿ, ನನಗಾಗಿ ನನ್ನ ಮುದ್ದು
ಶಾರೀಯನ್ನು ಕೊಟ್ಟ ನನ್ನೊಳಗಿನರ್ಧ.
“ಮಧೂ…” ಎಂದು ನನ್ನ ಕಣ್ಣುಗಳಲ್ಲಿದ್ದ ಎಲ್ಲಾ ಭಾವಗಳನ್ನೂ ಒಮ್ಮೆಲೇ ಒಂದೇ
ಸವಿನುಡಿಯ ಮೂಲಕ ಚಿಮ್ಮಿಸಲು ಪ್ರಯತ್ನಿಸಿದೆ! ಹೂ ಹೂಂ, ವರ್ಕ್ ಔಟ್ ಆದಂತೆ ಕಾಣಲಿಲ್ಲ! ಯಾವುದೋ ಪರವಶತೆಯಿಂದ
ಎಚ್ಚೆತ್ತುಕೊಂಡವಳಂತೆ ಮತ್ತೆ ಕೇಳಿದಳು,
“ಇವತ್ತು ಏನು ಸ್ಪೆಷಲ್ ಎಂದು ಗೊತ್ತಿದೆ ತಾನೇ? ಇನ್ನೂ ಹೀಗೇ ಮಲ್ಗಿದ್ದೀರಲ್ರೀ?”
ಎಂದು ಜೋರು ಮಾಡಿದಳು.
ನಾನು ತಲೆ ಕೆರೆದುಕೊಳ್ಳುತ್ತಾ, “ಇವತ್ತು ಭಾನುವಾರ ಅಂತ ಗೊತ್ತು, ಮತ್ತೇನು ಸ್ಪೆಷಲ್? ನನಗೆ ನೆನಪಿಲ್ವಲ್ಲೇ” ಎಂದೆ. ಪಾಪ ಹಾಯಾಗಿ ಹಕ್ಕಿಯಂತೆ ಹಾರುತ್ತಿದ್ದವಳು ಜರ್ರೆಂದು ಭೂಮಿಗೆ ಇಳಿದು ಹೋದಳು! ಆದರೂ ತನ್ನ ಬೇಸರವನ್ನು ತೋರಗೊಡದೆ,
“ಏನಿಲ್ಲ ಇವತ್ತು ಭಾನುವಾರ ಅಲ್ವಾ… ಅದಕ್ಕೆ ಕೃಷ್ಣನ ಗುಡಿಯಲ್ಲಿ ಪೂಜೆಗೆ
ಕೊಟ್ಟಿದ್ದೇನೆ. ಬೇಗ ರೆಡಿಯಾಗಿ ಬನ್ನಿ, ಎಂಟು ಗಂಟೆಗೆಲ್ಲಾ ಪೂಜೆಗೆ ಹೋಗಬೇಕು” ಎಂದಳು.
ಅವಳು ನನ್ನೊಳಗಿನರ್ಧ ಎಂದು ಮೊದಲೇ ಹೇಳಿದ್ದೇನೆ, ಅವಳ ಮನದ ತಳಮಳಗಳು,
ಸಂಭ್ರಮಗಳು ನನಗೆ ತಿಳಿಯದಿರುತ್ತವೆಯೇ? ನನಗೂ ಅವಳನ್ನು ಸತಾಯಿಸುವುದೆಂದರೆ ಅದೇನೋ ಒಂಥರಾ ಖುಷಿ!
“ಸರಿ ಹಾಗಿದ್ರೆ ಸ್ನಾನ ಮಾಡಿ ಬರುತ್ತೇನೆ” ಎಂದು ಮೇಲೆದ್ದು ಸ್ನಾನದ ಮನೆ
ಕಡೆಗೆ ಹೆಜ್ಜೆ ಹಾಕಿದೆ. ಹದಿನೈದು ನಿಮಿಷಗಳಲ್ಲಿ ಸ್ನಾನ ಮುಗಿಸಿದವನೇ, ಇನ್ನು ಹತ್ತು ನಿಮಿಷಗಳಲ್ಲಿ
ರೆಡಿಯಾಗಿ ಹೊರಗೆ ಬಂದೆ. ಅದಾಗ ಗಡಿಯಾರ ೭.೩೦ ತೋರಿಸುತ್ತಿತ್ತು! ಹೊರಗೆ ಬಂದವನ ಮೊಗದಲ್ಲಿ ಏನಾದರೂ
ಸಂಭ್ರಮಗಳು ಇಣುಕುತ್ತಿರಬಹುದೇ ಎಂದು ನಿರೀಕ್ಷಿಸುತ್ತಿದ್ದ ಮಧೂಗೆ ನಿರಾಸೆ ಕವಿದು, ಗಂಗೆ ಕಣ್ಣುಗಳಿಂದ
ಹರಿಯಲು ಹವಣಿಸುತ್ತಿದ್ದಳು. ನನಗೆ ಆ ಕ್ಷಣಗಳನ್ನು ಸಂಪೂರ್ಣ ಸವಿಯಬೇಕೆಂಬ ಹಂಬಲವಿದ್ದ ಕಾರಣ, ನಾನು
ಅವಳ ದುಃಖವನ್ನಾಗಲಿ, ತುಳುಕಲು ಹವಣಿಸಿದ್ದ ಗಂಗೆಯನ್ನಾಗಲಿ ತಡೆಯಲು ಪ್ರಯತ್ನಿಸಲಿಲ್ಲ!
ತನ್ನ ನಿರಾಸೆಯ ಬೆಟ್ಟದಿ ಪ್ರಯಾಸಪಟ್ಟು ಹನಿಗೂಡಿ ಮಂಜು, ಮಂಜಾಗಿದ್ದ ತನ್ನ
ಕಣ್ಣಾಲಿಗಳ ಮೂಲಕ ನನ್ನನ್ನು ನೋಡುತ್ತಿದ್ದವಳನ್ನು ಎಚ್ಚರಿಸುವ ತೆರದಿ,
"ಏನೇ ಹಾಗೇ ನೋಡುತ್ತಾ ನಿಂತೆ, ತಡವಾಗುತ್ತದೆ ಎಂದೆಯಲ್ಲ ನಡೀ ಕೃಷ್ಣ
ಮಂದಿರಕ್ಕೆ ಹೋಗಿ ಬರೋಣಾ..." ಎಂದೆ.
ಅವಳಿಗೆ ಇನ್ನು ತಡೆಯಲು ಆಗಲಿಲ್ಲ! ಕಣ್ಣುಗಳಲ್ಲಿ ಗಂಗಾಜಲ ಉಕ್ಕಿ ಹರಿಯತೊಡಗಿತು,
ಪ್ರವಾಹ ನನ್ನ ಮನಸಲ್ಲಿ!
"ರೀ... ನಿಜ ಹೇಳಿ, ಇವತ್ತು ಏನು ವಿಶೇಷ ಎಂದು ನಿಮಗೆ ನೆನಪಿಲ್ವಾ?
ಎಲ್ಲಿ ನೆನಪಿರಬೇಕು ಹೇಳಿ, ನಾನು ಯಾರು ನಿಮಗೆ? ಇದನ್ನೆಲ್ಲಾ ಸಂಭ್ರಮವೆಂದು ಆಚರಿಸುತ್ತೇನಲ್ಲಾ ನಾನು
ದಡ್ಡಿ!" ಎಂದು ಸೈರನ್ ಸ್ಟಾರ್ಟ್ ಮಾಡಿದಳು! ನಾನು ಏನೂ ನೆನಪಿಲ್ಲದವನಂತೆ ನಟಿಸುತ್ತಾ,
"ಅಂಥದ್ದೇನು ಸಂಭ್ರಮವೇ ಇವತ್ತು? ನನಗಂತೂ ನೆನಪಿಲ್ಲ! ಹಾಂ ನನ್ನ
ಕರ್ಚೀಫ್ ಮರೆತಿದ್ದೇನೆ. ತಾಳು ಬಂದೆ" ಎಂದು ನಮ್ಮ ರೂಮು ಹೊಕ್ಕೆ.
ಅವಳು ತನ್ನೊಳಗೇ, 'ದಿನವೂ ನಾನು ನೆನಪಿಸಿ ನಿಮ್ಮ ಜೇಬಿಗೆ ತುರುಕುವ ಕರ್ಚೀಫು
ನೆನಪಿಗೆ ಬರುತ್ತದೆ, ಈ ದಿನ ನೆನಪಿಲ್ಲ ಆಲ್ವಾ?' ಎಂದುಕೊಂಡಿರಬಹುದೇ? ನನ್ನೊಳಗೇ ಭಾವಿಸಿಕೊಂಡು ನಕ್ಕೆ!
ಕರ್ಚೀಫಿನೊಂದಿಗೆ ಹೊರಬಂದ ನಾನು ಅವಳಿಗೆ ಹೊರಡೋಣವೆಂಬಂತೆ ಸನ್ನೆ ಮಾಡಿದೆ. ಇನ್ನು ನನ್ನ ಮುಂದೆ ಹೀಗೆ
ಕಣ್ಣೀರು ಸುರಿಸುವುದರಿಂದ ಲಾಭವಿಲ್ಲವೆಂದು ಭಾವಿಸಿದ ಅವಳು,
"ನನಗೆ ತಲೆ ನೋವು ಶುರುವಾಯ್ತು, ನಾನು ಎಲ್ಲಿಗೂ ಬರುವುದಿಲ್ಲ!"
ಎಂದು ಸೋಫಾದ ಮೇಲೊರಗಿ ಕೂತಳು.
"ನನಗೆ ಆ ತಲೆನೋವು ಹೋಗಿಸುವ ವಿದ್ಯೆ ಗೊತ್ತಿದೆ..." ಎಂದು
ನಿಧಾನವಾಗಿ ಅವಳ ಪಕ್ಕದಲ್ಲಿ ಹೋಗಿ ಕುಳಿತೆ.
"ಇಷ್ಟೆಲ್ಲಾ ಮಾಡಿ ಈಗ ನಾಟಕ ಆಡಬೇಡಿ..." ಎಂದು ಕೋಪ ನಟಿಸುತ್ತಾ
ನನ್ನನ್ನು ದೂರ ತಳ್ಳಿದಳು. ಹೊರಗೆ ನಮಗಾಗಿ ಕಾದಿದ್ದ ಶಾರೀ ಒಳಗೆ ಬಂದು ಅವರಮ್ಮನ ತೊಡೆಯ ಮೇಲೆ ಆಸೀನಳಾದಳು.
ನಾನು ಸಾವರಿಸಿಕೊಂಡು, ಜೋಬಿನೊಳಗಿಂದ ಬೆಚ್ಚಗೆ ನನ್ನೆಲ್ಲಾ ಆಟಗಳನ್ನು ನೋಡಿ ನಗುತ್ತಿದ್ದ ಆ ವಜ್ರದುಂಗುರವನ್ನು
ಅವಳ ಮುಂದೆ ರೋಮಿಯೋನಾ ರೀತಿಯಲ್ಲಿ ತೆಗೆದಿಡುತ್ತಾ,
"ಐ ಲವ್ ಯೂ" ಎಂದೆ. ಅವಳ ಮೊಗದ ಮೇಲೆ ಕೋಪವಾಗಿ ನಲಿಯುತ್ತಿದ್ದ
ಭಾವ ನಗುವಾಗಿ ಪರಿವರ್ತನೆಯಾಯ್ತು!
"ರಾಘು ಇಷ್ಟು ಹೊತ್ತು ಸತಾಯಿಸಿದಿರಲ್ಲಾ, ನನಗೆ ಅಳುವೇ
ಬಂದಿತ್ತು..." ಎಂದು ಹುಸಿಮುನಿಸು ತೋರಿಸಿದಳು, ಆದರೆ ಆ ನಗು ಮಾತ್ರ ಅವಳ ಮೊಗದ ಮೇಲೆ ಹೊಳೆಯುತ್ತಲೇ
ಇತ್ತು. ಅವಳ ನಗು ನನ್ನನ್ನು ಸಂಪೂರ್ಣ ಭಾವಪರವಶನಾಗುವಂತೆ ಮಾಡಿಬಿಡುವ ಔಷಧ! ಹೌದು ಇಂದು ನಮ್ಮ ಮೊದಲ
ಮದುವೆಯ ಒಂಬತ್ತನೇ ವಾರ್ಷಿಕೋತ್ಸವ!
ಇದೇನು ಇವರು ಎಷ್ಟು ಸಾರಿ ಮದುವೆಯಾಗಿದ್ದಾರೆ ಎಂದು ಹುಬ್ಬೇರಿಸಬೇಡಿ!
ಇಂದಿಗೆ ಒಂಬತ್ತು ವರ್ಷಗಳ ಹಿಂದೆ ಅಧಿಕೃತವಾಗಿ ನಮ್ಮ ನಡುವೆ ಹೊತ್ತಿಸಿದ ಪ್ರೀತಿಯೆಂಬ ನಂದಾದೀಪಾ,
ನಮ್ಮ ಜೀವನಕ್ಕೆ ಬೆಳಕಾಗಿರುವುದಲ್ಲದೆ, ನಮಗೆ ನಮ್ಮ ಮುದ್ದು ಶಾರೀಯನ್ನೂ ಕೊಟ್ಟಿದೆ. ನಾವು ವರ್ಷಕ್ಕೆರಡು
ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ! ಒಂಬತ್ತು ವರ್ಷಗಳ ಹಿಂದಾದ ಪ್ರೀತಿಯೆಂಬ ಮದುವೆಯ
ವಾರ್ಷಿಕೋತ್ಸವ ಮತ್ತು ನಾಲ್ಕು ವರ್ಷದಿಂದೀಚೆಗೆ ಅಧಿಕೃತ ವಿವಾಹ ವಾರ್ಷಿಕೋತ್ಸವ!
ಮಧೂವನ್ನೂ, ಶಾರ್ವಾರಿಯನ್ನೂ ನೋಡುತ್ತಿದ್ದ ನನ್ನ ಮನಸ್ಸು ಹಿಂದಿಂದೆ ಓಡುತ್ತಿತ್ತು...
ಮುಂದಿನ ಭಾಗ: ನಮ್ಮದೂ ಒಂದು ಪ್ರೇಮ ಪ್ರಹಸನ!
ಚಿತ್ರಕೃಪೆ: ರತೀಶ್ ನರೂರ್, ಅಂತರ್ಜಾಲ
ಸರಸಮಯ ಜೀವನ ಕವನ
ReplyDeleteತುಂಬಾ ಖುಷೀಯಾಯ್ತು
ಸಖತ್ತಾಗಿದೆ ಪ್ರಸಾದ್ :-)
ReplyDeleteawesome
ReplyDeleteSuberb...well written!!
ReplyDeleteಓಹ್...ತುಂಬಾ ಖುಷಿಯಾಯ್ತು ಸರ್...
ReplyDeleteಆಗಾಗ ಬರೀತಾ ಇರಿ.
ಸಾಧ್ಯವಾದ್ರೆ ನಮ್ಮ ಪತ್ರಿಕೆಗೂ(ವಿಜಯ ಕರ್ನಾಟಕ) ಬರೆಯಿರಿ.
ಹ್ಞಾಂ...ನಿಮ್ಮ ಕಾಂಟಾಕ್ಟ್ ಕೊಟ್ಟಿರಿ ನನಗೆ. ಒಂದು ವಿಶೇಷ ಲೇಖನಕ್ಕಾಗಿ ನಿಮ್ಮನ್ನು ಮಾತನಾಡಿಸುವಾ ಅಂದುಕೊಂಡಿದ್ದೇನೆ.
-ಸಹ್ಯಾದ್ರಿ ನಾಗರಾಜ್
(sahyadri.nagaraj@gmail.com/ 8722631300)
ತುಂಬಾ ಭಾವುಕ ಬರಹ. ನೆಚ್ಚಿಗೆಯಾಯ್ತು.
ReplyDeleteರಸಮಯವಾಗಿದೆ ಅಣ್ಣಯ್ಯ..!!
ReplyDeleteಕಣ್ಣೆದುರೇ ಯಾವ್ದೋ ಸಿನೆಮಾ ನೋಡಿದ ಅನುಭವ..!!
ಭಾವನೆಗಳ ಹೊಳೆಯನ್ನೇ ಹರಿಸಿದ್ದೀರ. ಬಹಳ ಚೆನ್ನಾಗಿದೆ.ಶುಭವಾಗಲಿ.
ReplyDeletegood writeup.... :))
ReplyDelete