ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday, 2 January 2013

ಸದ್ಗುಣ ಸತಿ!




ಅಂಗಳ ಗುಡಿಸಿ,
ಆರತಿ ಹಚ್ಚಿಟ್ಟು ಕೈಮುಗಿಯುತ್ತಾಳೆ,
ಮಾಳಿಗೆ ಸೋರದಂತೆ
ಜಂತಿಯ ತೊಲೆ ಕಟ್ಟುತ್ತಾಳೆ,
ಮನೆಯ ಸಮವಿಟ್ಟು ಸರಿದೂಗುತ್ತಾಳೆ,
ಸೇವೆಗೆ ಸರಿನಿಂತು ಉಸಿರಾಗುತ್ತಾಳೆ!

ಅರಿವೊಳಗಿನ ಗುರುವವಳು,
ದಾರಿ ತೋರಿ ತಣ್ಣಗಿರುವಳು,
ಗೆದ್ದೆನೆಂದು ಬೀಗುವವು
ಗಂಡೆದೆ, ತೋಳುಗಳು!
ಯಶಸ್ಸಿನ ಹಿಂದೆ ನಿಂತ ಮಂತ್ರಿ,
ಅವನಾನಂದವ ಕಣ್ತುಂಬಿಕೊಳ್ವಳು!

ಅನ್ನ ಅನ್ನಕ್ಕೂ ಮುತ್ತಿಟ್ಟು,
ಪ್ರೀತಿಯಿಂದ ತುತ್ತಿಟ್ಟು,
ತನ್ನ ಹಸಿವ ಇಂಗಿಸಿಯಾದರೂ,
ಹೊತ್ತು ಹೊತ್ತಿಗೆ ಅನ್ನವುಣಿಸಿ
ಗಂಡ-ಮಕ್ಕಳ ಹೊಟ್ಟೆ ತುಂಬಿಸುವ
ಅನ್ನಪೂರ್ಣೇಶ್ವರಿ ಅವಳು!

ವಯ್ಯಾರದಿ ತುಳುಕಿ ಬಳುಕಿ,
ಶೃಂಗಾರದಿ ಬಳಿಗೆ ಬರುವ,
ಸುಖ-ಸಂತೋಷವ ಮೊಗೆದು ಸುರಿವ
ಚೈತನ್ಯದ ಬುಗ್ಗೆಯವಳು
ಶಯನ ಸುಖದಿ ಗಂಡನೆದೆಯಾ
ತಣಿಸಲುಕ್ಕಿ ಹರಿವಳು!

ಹಣೆಯಲ್ಲಿ ಕೆಂಪು ಬಿಂದಿ,
ಕೈಯಲ್ಲಿ ಹಸಿರ ಬಳೆ,
ಮೂಗಿನ ಮೇಲ್ ರತ್ನದಾ ನತ್ತು,
ನಕ್ಕರರಳುವ ದಂತಪಂಕ್ತಿ!
ಅರಳುವಳು ದೇವತೆ,
ಕಮಲದೊಳಗಿನ ಕಮಲದಂತೆ!

ತನ್ನಾಸೆಗಳ ಕೊಂದು,
ನೋವಲ್ಲಿ ಬೆಂದು
ಕಾವಲಿಯ ಮೇಲೆ ಬಿದ್ದರೂ,
ಎಲ್ಲವನ್ನೂ ಸಹಿಸಿ
ತಪ್ಪುಗಳ ಮನ್ನಿಸಿ ಮತ್ತೆ ಮಿಡಿವಳು
ಕುಲಧರ್ಮ ಪತ್ನಿ, ಕ್ಷಮಯಾ ಧರಿತ್ರಿ!


- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

1 comment:

  1. ಇಂದು ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಮಹಿಳೆಯರ ಮೇಲೆನ ದೌರ್ಜನ್ಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಸ್ತ್ರೀಯ ಔನತ್ಯವನ್ನು ಚಿತ್ರಿಸಿದ ಈ ಕವನ ನೆಚ್ಚಿಗೆಯಾಯ್ತು.

    ReplyDelete