ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 28 January 2016

ಸೋಲೊಪ್ಪಿಕೊಂಡೆವು!


ನಿರಂತರ ಜೀತದ ಧ್ಯಾನಕ್ಕೆ ಮೈಯೊಡ್ಡಿಕೊಂಡೆವು ನಮ್ಮನ್ನು ಕ್ಷಮಿಸಿ, ಚಿಟ್ಟೆಯ ಅಂದವನ್ನು ಸಹಿಸದ ನೀವು ರೆಕ್ಕೆಗಳನ್ನು ಸಿಗಿದಿರಿ, ವಿರೂಪಗೊಂಡರೂ ನಿರ್ಲಿಪ್ತತೆ ನಟಿಸಿದರಾಯ್ತು, ಬಿಟ್ಟುಬಿಡಿ ಸೋಲೊಪ್ಪಿಕೊಂಡೆವು! ತತ್ವ ಸಿದ್ಧಾಂತ ಎಂದು ಬಾಯಿ ಬಡಿದುಕೊಳ್ಳಲು ನಾವೆಷ್ಟರವರು? ಅರೆ ಹೊಟ್ಟೆ ಹಾಕಿದರೂ, ಮುಚ್ಚಿದ ಬಟ್ಟೆಯೊಳಗೆ ಸಾವಿರಾರು ತೂತು ಬಿದ್ದರೂ ರಟ್ಟೆ ತುಂಬಿಸಿಕೊಂಡು ಹೋರಾಟಕ್ಕೆ ನಿಂತದ್ದು ತಪ್ಪೇ, ತಪ್ಪು; ಆದರೆ ನೀವು ನಿಮ್ಮ ಘನತೆ ಮೀರಿ ರೋಹಿತನನ್ನು ಬಾಣಲೆಯಲ್ಲಿ ಉರಿದದ್ದು, ಅವ ಮೇಲೇಳದಂತೆ ಆತ್ಮದ ಕಾಲು ಮುರಿದದ್ದು, ಕಣ್ಣಂಚಿನ ಕಂಬಿನಿಯ ಉಸಿರು ಕದ್ದು ನಿಶಬ್ಧ ಅಡರಿತು, ಇಷ್ಟಕ್ಕೆ ಬಿಡಿ ನಾವು ಸೋಲೊಪ್ಪಿಕೊಂಡೆವು! ಹಿಟ್ಟಿಲ್ಲದ ಅವನು ತನ್ಹೊಟ್ಟೆ ತುಂಬಿಸಿಕೊಳ್ಳುವುದು ಬಿಟ್ಟು ನ್ಯಾಯ, ಶಾಂತಿ, ಸಮಾನತೆ, ಗಾಂಧೀ-ಅಂಬೇಡ್ಕರ್, ಮನುಷ್ಯ ಪ್ರೀತಿ ಎಂದು ಹೊರಟದ್ದು ತಪ್ಪೇ, ಜೀವಕ್ಕಾದರೆ ಜಾತಿ, ಸಾವಿಗೂ ಜಾತಿಯೇ? ಹೋಗಲಿ ಬಿಡಿ, ನಾವು ಸೋಲೊಪ್ಪಿಕೊಂಡೆವು! ಶತ ಶತಮಾನಗಳು ವಿದ್ಯೆ, ವಿವೇಕಗಳನ್ನು ಕಸಿದಿರಿ, ಅಂತಃಸತ್ವ, ಮಾಂಸ ಖಂಡದ ಶಕ್ತಿಯನ್ನು ಬಸಿದಿರಿ, ಮನುಷ್ಯರನ್ನು ಮನುಷ್ಯರೆನಿಸಲು ಬ್ರಿಟೀಷರು ಬರಬೇಕಾಯ್ತು, ಈಗಲೂ ಸಂಸ್ಕೃತದೊಳಗೆ ಬ್ರಾಹ್ಮಣ್ಯ ನಾಜೂಕಾಗಿ ಚಲಾವಣೆಯಾಗುತ್ತದೆ; ಜನಪದರ ಆಚರಣೆಗಳು ಹೇಳ ಹೆಸರಿಲ್ಲದೆ ಮಕಾಡೆ ಮಲಗುತ್ತವೆ, ಅನಾಗರೀಕವೆಂದು ಬೀಗ ಜಡಿಸಿಕೊಂಡು! ಮೀರುವುದಿಲ್ಲ ಬಿಡಿ, ಏರುವುದಿಲ್ಲ ಬಿಡಿ, ನಿಮಗೆ ಜಿಂದಾಬಾದ್, ನಮ್ಮನ್ನು ಬದುಕಲು ಬಿಡಿ, ನಾವು ಸೋಲೊಪ್ಪಿಕೊಂಡೆವು! - ಮಂಜಿನ ಹನಿ

Thursday, 26 November 2015

ನಾನು ಕವಿಯಾಗುಳಿಯುವುದು?


ಮಿಸುಕಾಡುತ್ತಿದ್ದ
ಕವಿತೆಯನ್ನು
ಅರ್ಧಕ್ಕೆ ತುಂಡರಿಸಿ
ಅಪೂರ್ಣವಾಗುಳಿಸಿದ
ಪಾಪಕ್ಕೆ,
ರಟ್ಟೆಯ ಬೆವರು, ಕರುಳ ಹಸಿವು,
ಕಣ್ಣೀರ ಬಿಸುಪು,
ಹುಟ್ಟು ಸಾವು, ಕ್ಲೀಷೆ - ಸಾಂತ್ವನ,
ಆದರದ ಭಾವಗಳು,
ಎಲ್ಲವೂ ಅಸಹಕಾರ ಹೂಡಿ,
ಲೇಖನಿಯಲ್ಲಿಳಿಯುತ್ತಿಲ್ಲ...

ತಿಂಗಳೊಪ್ಪತ್ತಿಗೆ ಮುಗಿದು
ಜೇಬು ಹರಿದ
ಖಾಲಿ ಸಂಬಳಗಳು,
ವ್ಯಾಪಾರದಲ್ಲೇ ಮುಗಿದುಬಿಡುವ
ಒಲವು, ದಾಂಪತ್ಯ,
ಹಸೆ ಹೊಸುಗೆ, ಪೋಲಿತನಗಳು,
ಆಧ್ಯಾತ್ಮ, ಮೌನ, ಧ್ಯಾನ
ಎಂದು ದಿಗಿಲ್ಹತ್ತಿಸಿ
ಭ್ರಮೆಯಾಗುವ ನಕಲಿತನಗಳು,
ಯಾವುವೂ ಸ್ಫುಟವಾಗುತ್ತಿಲ್ಲ,
ಭಾವಸೆಲೆಯಾಗುತ್ತಿಲ್ಲ...

ದೇಹಿ ಎಂದವನ ಹೊಟ್ಟೆ ತುಂಬಿಸದೆ
ಅಭಿಷೇಕಕ್ಕೆ ಎರವಾದ ಹಾಲು,
ಬತ್ತಿದೆದೆಯ ಕಚ್ಚಿ
ಬಾಯೊಣಗಿಸಿಕೊಳ್ಳುವ
ಅಪೌಷ್ಠಿಕ ಮಗು,
ಮಿಷಿನರಿಗಳ ಹಣದ ದಾಹಕ್ಕೆ
ಸೊರಗಿ ಕಣ್ಣೀರು ಹರಿಸುತ್ತ
ಶಿಲುಬೆಗೊರಗಿ ನಿಂತ ಯೇಸು,
ಬುರ್ಖಾದೊಳಗೆ ಕಣ್ಣೀರು ಸುರಿಸುವ
ಇಂಝಮಾಮನ ಆರನೇ ಪತ್ನಿ,
ದಲಿತನನ್ನು ಒಳಗೆ ಕೂಡದ
ಮಹಾಮಹಿಮ ಪರಮಾತ್ಮನ
ದೇವಳಗಳು, ಗೋಮಾತೆ,
ಮನಷ್ಯರನ್ನು ಕೊಂದು ಜಿಹಾದಿಗೆ
ಕುರಾನಿನ ಬಣ್ಣ ಹಚ್ಚುವ
ISIS ಮಹಾತ್ಮರು,
ಯುದ್ಧದ ಅಮಲೇರಿಸಿಕೊಂಡ
ಅಮೇರಿಕದಂತಹ ದೇಶಗಳು,
ಯಾವುವೂ ನನ್ನೊಳಗೆ
ಸಂವೇದನೆ ಹುಟ್ಟಿಸುತ್ತಿಲ್ಲ;
ಕಾವಲು ಪಡೆಗಳ ನಡುವೆ?

ಹೀಗಿರುವಾಗ ಅನಿಸಿದ್ದನ್ನು ಬರೆದು,
ನಾನು ಕವಿಯಾಗುಳಿಯುವುದು
ಕಷ್ಟದ ಮಾತೆ? ಕನಸಿಂದೆದ್ದು
ಮೈ ಚಿವುಟಿಕೊಂಡೆ,
ನಿಜ ನಿಜ ನೋಯುವುದು?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 24 October 2015

ಕವಿ ನಾನು; ಕೊಲೆಗಡುಕನಲ್ಲ!


ಕೈಗೆ ಕಟ್ಟಿರುವ
ಬೇಡಿಗಳನ್ನೆಲ್ಲಾ ಬಿಡಿಸಿ
ಬಿಡುಗಡೆ ನೀಡಿ ಸ್ವಾಮಿ,
ನಾನು ಕವಿಯಷ್ಟೆ,
ಕೊಲೆಗಡುಕನಲ್ಲ!

ಗಂಟಲು ಬಿಗಿದು
ಉಸಿರುಗಟ್ಟಿಸಬೇಡಿ
ದಮ್ಮಯ್ಯ;
ಬರೆದುದರಲ್ಲೇ ಉಸಿರಾಡುವ ನಾವು
ಸತ್ಯ ನುಡಿಯುತ್ತೇವೆಂದು
ಭಯವೆ?
ಬನ್ನಿ ನಿಮ್ಮ ಕೆಂಪು ಬಣ್ಣದ
ಕೋವಿಗೆ ಕೊರಳು ಕೊಡಲು
ಸಿದ್ಧರಿದ್ದೇವೆ,
ಕೊಂದುಬಿಡಿ ಬದುಕಿಕೊಳ್ಳುತ್ತೇವೆ!

ಅದಕ್ಕೂ ಮೊದಲೆ ಹೇಳಿಬಿಡುತ್ತೇನೆ,
ನನ್ನ ಸಾವಿನ ಘೋರಿ,
ನಿಮಗೆ ಮಹಲಂತೂ ಅಲ್ಲ...
ನಿಮ್ಮ ಮದ್ದು ಗುಂಡು,
ಕೋವಿ, ಕತ್ತಿಗಳಿಗೆ ಪ್ರತಿಯಾಗಿ
ನನ್ನ ನೀಲಿ ಶಾಯಿ ಹರಿಯುತ್ತದೆ,
ತಾಕತ್ತಿದ್ದರೆ
ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ;
ರಕ್ತ ಬೀಜಾಸುರನ
ವಂಶಸ್ಥರು ನಾವು ನಿಮಗೀಗಾಗಲೆ
ಗೊತ್ತಿರಬೇಕಲ್ಲ?
ಈಗಾಗಲೇ ಲಕ್ಷಾಂತರ ಅನಂತ ಮೂರ್ತಿಗಳು,
ಕಲಬುರ್ಗಿಗಳು, ಪನ್ಸಾರೆಗಳ
ಉಪಟಳದಿಂದ ಬಸವಳಿದಿದ್ದೀರಿ?!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 29 August 2015

ಅದೊಂದು ಕೊರತೆ!


ಅದೊಂದು ಕೊರತೆಯಿದೆ,
ಮನೆಗೆ ತಡವಾಗಿ ಬಂದಾಗ
'ಎಲ್ಲಿ ಹೋಗಿದ್ಯೋ ಇಷ್ಟ್ ಹೊತ್ತು?'
ಎಂದು ರೋಫು ಹಾಕಿ
ಭದ್ರಕಾಳಿಯಾಗುವ ತಂಗಿಯದು,
ಅವಳನ್ನು ಛೇಡಿಸಿ ಅಳಿಸಿ
ಕಿತ್ತಾಡಿ, ಮಾತು ಬಿಟ್ಟು...
ಓಡಿ ಹೋಗಿ ಬಿಗಿದಪ್ಪಿ,
'ಸಾರಿ ಕಣಪ್ಪಿ' ಎಂದು
ಲಲ್ಲೆಗರೆಯುವ ಕನಸು ಕಂಡಾಗೆಲ್ಲಾ
ಕಣ್ಣೀರು ಕೂಡುತ್ತವೆ!

ಅದೊಂದು ಕೊರತೆಯಿದೆ,
ನಾನಿರುವುದೇ ಹೀಗೆ,
ಏನಿವಾಗ? ಹಾಗೆ ಹೀಗೆ
ಎಂದು ಮೊಂಡು ಮಾಡುವಾಗೆಲ್ಲಾ
ನನ್ನ ಮೊಂಡುಗಳನ್ನೆಲ್ಲಾ ಮುದ್ದಿಸಿ
ತಿದ್ದಿ, ತೀಡಿ
ಬದುಕಿನ ದಾರಿ ತೋರುವ,
ಬಿದ್ದಾಗ
ಅಮ್ಮನಿಗಿಂತ ಮೊದಲೇ
ಓಡಿ ಬಂದು ಸಂತೈಸುವ
ಅಕ್ಕನಿಲ್ಲ ಎಂಬುದನ್ನು ನೆನೆವಾಗೆಲ್ಲಾ
ಅದೊಂದು ಕೊರತೆಯಿರುತ್ತದೆ!

ಜಗಳವಾಡಿ ಬೈದು,
ಸೂಕ್ಷ್ಮತೆಗಳನ್ನು ಮೀರಿ
ಆರೊಗೆಂಟಾಗಿ ನಡೆದುಕೊಳ್ಳುವಾಗೆಲ್ಲಾ
ಕಣ್ಣೀರಾಗುವ 'ಅವಳು'
'ನಿನಗೊಬ್ಬಳು ತಂಗಿನೋ, ಅಕ್ಕನೋ ಇರ್ಬೇಕಿತ್ತು'
ಅಂದಾಗೆಲ್ಲಾ ಅನಿಸುತ್ತದೆ,
ಹೌದು ಅದೊಂದು ಕೊರತೆಯಿದೆ,
ಈ ಸಮಪಾಕದ ಬದುಕೊಳಗೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday, 3 August 2015

ಬಯಲ ಬುದ್ಧ!


ಅಮಲೇರಿದ ಬುದ್ಧನಂತೆ
ಕಣ್ಣುಮುಚ್ಚಿ ಕುಳಿತುಬಿಡುತ್ತೇನೆ,
ಕತ್ತಲೆ ರಾತ್ರಿಯಲ್ಲಿ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ಪಹರೆಗೆ ನಿಲ್ಲುವ
ಸಾವಿರ ಆಸೆಗಳಿಗೆ
ನಾನು ಬುದ್ಧ ಎಂಬ ಸುಳ್ಳು ಹೇಳುತ್ತೇನೆ,
ನಿಂತ ನೆಲ ಕುಸಿಯುತ್ತದೆ,
ಆಯ ತಪ್ಪುತ್ತದೆ,
ಪಾಯ ತೋಡುತ್ತಿರುವ ಸಮಾಧಿಗೆ
ಬೆಳಕು ಹಿಡಿದು ನಿಂತ
ನೋವುಗಳನ್ನು ಕೈಯಲ್ಲಿ ಹಿಡಿದು
ಕೊರಳಿಗೆ ಹಾಕಿಕೊಂಡು
ನಗುತ್ತ ನಿಂತಿದ್ದಾನೆ ಬುದ್ಧ,
ಕೊರಳ ಹಾರದ ಸಮೇತ
ಆತ ಅಂಗೂಲಿ ಮಾಲನನ್ನು ಹೋಲುತ್ತಿದ್ದಾನೆ,
ನಾನು ಕೇಳಿದೆ;
ನೀನೇ ಏನು ಬುದ್ಧ ಭಗವಾನ?
ಅಲ್ಲಪ್ಪ ನಾನು ಬರಿಯ ಬುದ್ಧ,
ಅವ ಹೇಳುತ್ತಾನೆ,
ಇದೇನಿದೆ ಇಷ್ಟೋಂದು ನೋವಿನ ಹಾರಗಳು,
ಅಂಗೂಲಿ ಮಾಲನಿಂದ
ಎರವಲು ಪಡೆದೆಯೆ? ನನ್ನ ಮಾತು,
ಅವನೊಬ್ಬನದಷ್ಟೇ ಅಲ್ಲ
ನೋಡು ನಿನ್ನದೂ ಇದೆ,
ಎಂದು ಒಂದನ್ನೆತ್ತಿ ತೋರಿದ,
ಹೌದೌದು,
ಇದನ್ನೆಲ್ಲಾ ಇಟ್ಟುಕೊಂಡು ಏನು ಮಾಡ್ತೀಯೋ ಪುಣ್ಯಾತ್ಮ?
ನಾನು ಬೆರಗಾಗುತ್ತಿದ್ದೆ,
ಒಂದೊಂದು ನೋವಿನ ಹಾರಕ್ಕೂ
ಒಂದೊಂದು ದೀಪದಂತೆ
ಮಾರುತ್ತಿದ್ದೇನೆ,
ನೋವಿನ ಹಾರಗಳಿಂದ
ದೀಪಗಳ ಬತ್ತಿ ಹೊಸೆಯುತ್ತೇನೆ ಎಂದ,
ನಾನು ಮೌನಕ್ಕೆ ಸಿಕ್ಕುತ್ತಲೇ,
ಹೊರಡಲನುಮತಿ ಕೊಡೆನ್ನುತ್ತಾನೆ,
ಕತ್ತಲಾಯಿತು,
ದೀಪ ಹಚ್ಚಿಟ್ಟೆ, ಬುದ್ಧ ಬೆಳಕಾಗಿದ್ದ,
ಊರು ಬೆಳಗುವುದರೊಳಗೆ
ಅವನಿಗೆಷ್ಟು ಕಾಲ ಬೇಕೋ?
ನಾನು ಬಯಲಾದರಷ್ಟೇ
ಅವನಾಗುತ್ತೇನೆಂಬ ಅರಿವಾವರಿಸುತ್ತಿದೆ!


--> ಮಂಜಿನ ಹನಿ

ಚಿತ್ರಕೃಪೆ: ಕೃಷ್ಣ ಗಿಳಿಯಾರ್

Wednesday, 8 July 2015

ಎಲ್ಲಾ ಎಂದಿನಂತೆಯೇ ಇದೆ...


ಎಲ್ಲಾ ಎಂದಿನಂತೆಯೇ ಇದೆ,
ಬಿಟ್ಟುಹೋದ
ಕಾಲದ ನಂತರವೂ
ಈ ಮುಖ ಪುಸ್ತಕದ ಹಾಳೆಗಳು
ಮೊದಲಿನಂತೆಯೇ ಇವೆ,
ಕುದಿವ ಕಾವು, ಒಡಲ ಬೇಗೆ,
ಮೈಥುನದ ಹಸಿವು,
ಸಂಜೆಗತ್ತಲ ಜೊಂಪೇರಿಸುವ
ಸುರಪಾನದಮಲು,
ನಶೆ, ನಾಶವಾಗದ ನಶೆಯ ಕಡಲು,
ಬದುಕು ಕಟ್ಟಲಾಗದ ಕರ್ಮಕ್ಕೆ
ತತ್ವಪದವಾಡುವ ಒಳಗುಟ್ಟು,
ಏನೂ ಬದಲಾಗದ ಮುಖದ ಹೊತ್ತಿಗೆ,
ತುತ್ತಿಗೆ ಮೈನವಿರೇಳುವ ಕಂಪನ,
ಏನು ತಾನೆ ಬದಲಾದೀತು?
ನಾನು? ನೀನು ಬಿಟ್ಟು ಹೋದ ಮಾತ್ರಕ್ಕೆ?

ನೋವುಗಳಲ್ಲಿ ನೆನಪಾಗುತ್ತಿದ್ದೆ,
ಬಿಕ್ಕುವಷ್ಟು,
ಕಣ್ಣು ತುಂಬಿ ಉಕ್ಕುವಷ್ಟು,
ಈಗಿಲ್ಲ...
ಹೈಕು ಸಿಗದ ನಿರಾಸೆಗೆ
ಬೀರು ಬಿಟ್ಟು ನೋವು ಕುಡಿದು,
ಮೊಸರನ್ನ ತಿಂದು
ತಣ್ಣಗೆ ಮಲಗಿಬಿಟ್ಟಿದ್ದೆ;
ಅಂತೆಯೇ ಬದುಕು ನಿಲ್ಲದೆ ಹೊರಟುಬಿಡುತ್ತದೆ,
ವರ್ಚುಯಲ್ ಬದುಕಿನ
ಕೊಂಡಿ ಕಳಚುತ್ತಾ ವಾಸ್ತವಕ್ಕೆ,
ಈಗೀಗ ನೀನ್ಯಾರೆಂದೂ ನೆನಪಾಗುವುದಿಲ್ಲ,
ಆಗೊಮ್ಮೆ, ಈಗೊಮ್ಮೆ ಅವಳ ಛೇಡಿಸುವ
ಅಕ್ಕ ಅನ್ಬೇಕಾ ಅವ್ಳ್ನಾ?
ಅನ್ನುವ ಮಾತುಗಳಿಗೆ,
ನಿಂಗವ್ಳ್ಯಾವ ಅಕ್ಕ? ಕೊಡ್ತೀನ್ ನೋಡು
ಎಂಬ ನನ್ನ ಹುಸಿಮುನಿಸ ಹೊರತು...
ಸದ್ಯಕ್ಕೆ ಮುನ್ನುಡಿ, ಬೆನ್ನುಡಿಗಳಿಲ್ಲದ
ಕವನ ಸಂಕಲನವೊಂದು
ಕಪ್ಪು ಕಾಗದದ ಹೂವಾಗುವುದು ತಪ್ಪಿ
ನಿಟ್ಟುಸಿರುಬಿಟ್ಟಿದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 18 June 2015

ಶೀಲ ಅಶ್ಲೀಲಗಳಾಚೆ


ಶೀಲ ಅಶ್ಲೀಲಗಳನ್ನು ಮೀರಿ
ನಾವು ಬರೆಯುವುದೇ ಹೀಗೆ,
ಖುಷಿಯ ಉಂಡು ಬಡಿಸುವ,
ತಣಿಸಿ ತಣಿಯುವ,
ಉತ್ಕೃಷ್ಟತೆಯ ವ್ಯಸನವಿರದೆ
ಶರಣಾಗುವ
ಪ್ರೇಮ, ಕಾಮಗಳ ಬಗ್ಗೆ
ಬರೆಯುತ್ತೇವೆ,
ಕೂಡದೆ ಪಲ್ಲವಿಸಿ
ಗರ್ಭವಲ್ಲದ ಬೇರೊಂದು
ಪವಿತ್ರ ಸ್ಥಳದಿಂದ ಉದುರಿ ಬಿದ್ದವರೆ
ಕ್ಷಮಿಸಿ,
ನಾವು ಬರೆಯುವುದೇ ಹೀಗೆ!

ಬೆತ್ತಲನ್ನು ಬೆತ್ತಲಾಗಿಯೂ,
ಕತ್ತಲನ್ನು ಕತ್ತಲಾಗಿಯೂ,
ಬೆವರನ್ನು ಬೆವರಾಗಿಯೂ,
ಹರವನ್ನು ಹರವಿದಂತೆಯೂ,
ಬೆದರದೆ, ಚದುರದೆ
ಕಟ್ಟಿಕೊಡುತ್ತೇವೆ,
ಆಧ್ಯಾತ್ಮ, ಶೂನ್ಯ, ಸೊನ್ನೆಗಳಿವೆ
ಕಾಮದಲ್ಲಿ,
ಕೂಡಿಕೆ, ಕಳೆಯುತ್ತವೆ
ಪ್ರೇಮದಲ್ಲಿ
ಎಂಬ ಸುಳ್ಳನಾಡುವುದಿಲ್ಲ,
ಅನುಭವಕ್ಕೆ ಬಂದದ್ದು ಪದ್ಯ,
ಕ್ಷಮಿಸಿ,
ನಾವು ಬರೆಯುವುದೇ ಹೀಗೆ!

ಸಿಕ್ಕಷ್ಟು ಬಾಚಿಕೊಂಡು,
ಆಸೆಯ ಬೀಜಗಳಿಗೆ
ಫಸಲು ಬೆಳೆಯುವ ಕನಸು,
ಭವಿತವ್ಯದ ಬದುಕಿಗೆ
ಕಣ್ಣು ಬಾಯಿ ಬಿಟ್ಟು
ಕಾದು ಕುಳಿತಿರುತ್ತೇವೆ,
ಪ್ರಾಪಂಚಿಕ ಸುಖಗಳಿಗೆ
ಜೋತು ಬಿದ್ದೆವು?
ನೀವು ಆರೋಪಿಸುವುದಾದರೆ,
ಹೌದು,
ನಾವು ವಾಸ್ತವಗಳಿಗೆ
ಬೇರು ಬಿಟ್ಟಿದ್ದೇವೆ,
ಸಸಿಗಳು ಡೌನ್ ಟು ಅರ್ಥ್,
ನಾವು ಬರೆಯುವುದೇ ಹೀಗೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ