ಅಮಲೇರಿದ
ಬುದ್ಧನಂತೆ
ಕಣ್ಣುಮುಚ್ಚಿ
ಕುಳಿತುಬಿಡುತ್ತೇನೆ,
ಕತ್ತಲೆ
ರಾತ್ರಿಯಲ್ಲಿ
ಕಣ್ಣಿಗೆ
ಬಟ್ಟೆ ಕಟ್ಟಿಕೊಂಡು
ಪಹರೆಗೆ
ನಿಲ್ಲುವ
ಸಾವಿರ
ಆಸೆಗಳಿಗೆ
ನಾನು
ಬುದ್ಧ ಎಂಬ ಸುಳ್ಳು ಹೇಳುತ್ತೇನೆ,
ನಿಂತ
ನೆಲ ಕುಸಿಯುತ್ತದೆ,
ಆಯ ತಪ್ಪುತ್ತದೆ,
ಪಾಯ
ತೋಡುತ್ತಿರುವ ಸಮಾಧಿಗೆ
ಬೆಳಕು
ಹಿಡಿದು ನಿಂತ
ನೋವುಗಳನ್ನು
ಕೈಯಲ್ಲಿ ಹಿಡಿದು
ಕೊರಳಿಗೆ
ಹಾಕಿಕೊಂಡು
ನಗುತ್ತ
ನಿಂತಿದ್ದಾನೆ ಬುದ್ಧ,
ಕೊರಳ
ಹಾರದ ಸಮೇತ
ಆತ ಅಂಗೂಲಿ ಮಾಲನನ್ನು ಹೋಲುತ್ತಿದ್ದಾನೆ,
ನಾನು
ಕೇಳಿದೆ;
ನೀನೇ
ಏನು ಬುದ್ಧ ಭಗವಾನ?
ಅಲ್ಲಪ್ಪ
ನಾನು ಬರಿಯ ಬುದ್ಧ,
ಅವ ಹೇಳುತ್ತಾನೆ,
ಇದೇನಿದೆ
ಇಷ್ಟೋಂದು ನೋವಿನ ಹಾರಗಳು,
ಅಂಗೂಲಿ
ಮಾಲನಿಂದ
ಎರವಲು
ಪಡೆದೆಯೆ? ನನ್ನ ಮಾತು,
ಅವನೊಬ್ಬನದಷ್ಟೇ
ಅಲ್ಲ
ನೋಡು
ನಿನ್ನದೂ ಇದೆ,
ಎಂದು
ಒಂದನ್ನೆತ್ತಿ ತೋರಿದ,
ಹೌದೌದು,
ಇದನ್ನೆಲ್ಲಾ
ಇಟ್ಟುಕೊಂಡು ಏನು ಮಾಡ್ತೀಯೋ ಪುಣ್ಯಾತ್ಮ?
ನಾನು
ಬೆರಗಾಗುತ್ತಿದ್ದೆ,
ಒಂದೊಂದು
ನೋವಿನ ಹಾರಕ್ಕೂ
ಒಂದೊಂದು
ದೀಪದಂತೆ
ಮಾರುತ್ತಿದ್ದೇನೆ,
ಈ ನೋವಿನ ಹಾರಗಳಿಂದ
ಆ ದೀಪಗಳ ಬತ್ತಿ ಹೊಸೆಯುತ್ತೇನೆ
ಎಂದ,
ನಾನು
ಮೌನಕ್ಕೆ ಸಿಕ್ಕುತ್ತಲೇ,
ಹೊರಡಲನುಮತಿ
ಕೊಡೆನ್ನುತ್ತಾನೆ,
ಕತ್ತಲಾಯಿತು,
ದೀಪ
ಹಚ್ಚಿಟ್ಟೆ, ಬುದ್ಧ ಬೆಳಕಾಗಿದ್ದ,
ಊರು
ಬೆಳಗುವುದರೊಳಗೆ
ಅವನಿಗೆಷ್ಟು
ಕಾಲ ಬೇಕೋ?
ನಾನು
ಬಯಲಾದರಷ್ಟೇ
ಅವನಾಗುತ್ತೇನೆಂಬ
ಅರಿವಾವರಿಸುತ್ತಿದೆ!
--> ಮಂಜಿನ
ಹನಿ
ಚಿತ್ರಕೃಪೆ: ಕೃಷ್ಣ ಗಿಳಿಯಾರ್
ನಾನೂ ಬುದ್ಧನಾಗಬೇಕು...
ReplyDelete