ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday, 12 April 2015

ಒಲುಮೆಯ ಮುದ್ದುವಿಗೆ: ಪತ್ರ - ೧


ಪತ್ರ - ೧
--------

ಒಲುಮೆಯ ಮುದ್ದುಗೆ,

ನಿಂಗೆ ನನ್ ಪತ್ರ ಅರ್ಥವಾಗುತ್ತೋ, ನಿದ್ರೆನೇ ಬರಿಸುತ್ತೋ ಅನ್ನೋ ಭಯಗಳನ್ನು ಮೀರಿ ಪತ್ರ ಬರೀತಿದ್ದೀನಿ ಸಹಿಸ್ಕೊ. ನಿದ್ರೆ ಬಂದ್ರೆ ತಾಚಿ ಮಾಡು, ನನ್ನ ಪತ್ರ ನಿನ್ನ ತಟ್ಟಿ ಮಲಗಿಸುತ್ತೆ.

ನಿನ್ಜೊತೆ ಅಷ್ಟು ಕೊರೀತೀನಿ, ಆದ್ರೂ ಯಾಕ್ ಪತ್ರ ಬರೀತಿದ್ದೀನಿ ಅಂತ ಆಶ್ಚರ್ಯ ಅಲ್ವಾ? ನಂಗೊತ್ತು! ಇವೆಲ್ಲಾ ನನ್ನೆದೆಯ ಪಿಸುಮಾತುಗಳು. ಕಿವಿಯಲ್ಲಷ್ಟೇ ಪಿಸುಗುಟ್ಟುವ ನನ್ನೊಲವ ಗುಟ್ಟುಗಳು. ನನ್ನೊಳಗೆ ಕುಡಿಯೊಡೆವ ಕನಸುಗಳು, ನಿನಗಾಗಿ ಕಾತರಿಸಿದ ಕ್ಷಣಗಳು, ನಿನಗಾಗಿ ಕಾದಿರುವ ನಾನು, ನನ್ನ ಜಗತ್ತು, ನೀನು, ನಿನ್ನ ಜಗತ್ತು, ಎಲ್ಲವನ್ನೂ ಅಕ್ಷರಕ್ಕಿಳಿಸುತ್ತಿದ್ದೇನೆ. ನಿನ್ನೊಲವ ನೈವೇದ್ಯಕ್ಕೆ ಮುಡಿಪಿಡುತ್ತಿದ್ದೇನೆ.

ಇದೇ ರೀತಿ ಫೆಬ್ರವರಿ ೧೪ರ ವರೆಗೂ ಒಂದಷ್ಟು ಪತ್ರಗಳು ನಿನ್ನನ್ನು ತಲುಪಲಿವೆ. ಅದರಲ್ಲಿ ಕಿವಿಗೊಟ್ಟರಷ್ಟೇ ಕೇಳಿಸುವ ಎದೆಬಡಿತಗಳಿವೆ.

ಹೆಣ್ಣಿನ ಪ್ರೀತಿ ಮತ್ತು ಮನಸ್ಸುಗಳು ಸಮುದ್ರಕ್ಕಿಂತ ಆಳ ಮತ್ತು ನಿಶ್ಚಲವಂತೆ. ನಾವೇ(ಗಂಡಸರು) ನದಿಗಳು, ಚಲನೆಯನ್ನೇ ಪ್ರೀತಿ ಎಂದು ನಂಬಿರುತ್ತೇವೆ. ಅಂಕು, ಡೊಂಕೆನ್ನದೆ ಚಲಿಸುತ್ತಲೇ ಇರುತ್ತೇವೆ. ನೀನು ಸಿಕ್ಕ ಮೇಲೆಯೇ ನನಗಿದರರ್ಥವಾಗುತ್ತಿದೆ. ನಿನ್ನೊಲವೊಳಗೆ ಕರಗಿದಷ್ಟೂ ನಿನಗಿಷ್ಟದ ರುಚಿ ಪಡೆದು ಭೋರ್ಗರೆದು ಉಕ್ಕುತ್ತಿದ್ದೇನೆ, ನಾನಾಗೇ ಉಳಿಯುತ್ತಿದ್ದೇನೆ. ನಿನ್ನ ತೀರ ತಾಕುವವರೆಗೂ ಹೀಗೇ ಇರುತ್ತೇನೆ, ತಾಕಿದ ಮೇಲೂ ಹೀಗೇ ಇರುತ್ತೇನೆ. ನಾನಿರುವಂತೆಯೇ ಒಪ್ಪಿಕೊಂಡು ಅಪ್ಪಿಕೊಂಡಿರುವ ನಿನಗೆ ಋಣಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)


ಪ್ರೇಮಿಗಳ ದಿನದ ವಿಶೇಷಕ್ಕೆ ಬರೆದ ಒಂದಷ್ಟು ಪತ್ರಗಳು, ಫೆಬ್ರವರಿ ತಿಂಗಳಲ್ಲಿ...

Saturday, 4 April 2015

ಪದ್ಯದ ಹಣತೆಗಳು


ಪದ್ಯದ ಹಣತೆಗಳು
ಮೆರವಣಿಗೆ ಹೊರಟಿವೆ,
ಹಿಡಿದವರಿಗೆ ಹಿಡಿಯಷ್ಟು,
ಕೊಂಡವರಿಗೆ ಕೊಡದಷ್ಟು,
ಹಿಡಿಗೂ ಸಿಕ್ಕದ,
ಕೊಡಕೂ ದಕ್ಕದ,
ನೋಡು, ನೋಡಲ್ಲಿ
ಪದ್ಯದ ಹಣತೆಗಳು!

ಕಲ್ಯಾಣಿಯಲಿ ಮೀಯದ
ದೀಪಗಳ ಸಾಲು ಸಾಲು
ಭಕುತಿಗೆ ಒಲಿಯದ ಬೆಳಕು,
ನೀಲಗಾರರ ಕಂಠಕ್ಕೆ,
ಮಂಟೆಸ್ವಾಮಿಯ ಪಾದಕ್ಕೆ,
ಮಾದಪ್ಪನ ಗದ್ದುಗೆಗೆ,
ಜನಪದರ ತಂಬೂರಿಗೆ,
ದಿಗ್ಗನೆ ಹತ್ತಿಕೊಂಡು
ಉರಿದಿವೆ,
ಪದ್ಯದ ಹಣತೆಗಳು
ಸರತಿ ಸಾಲಲ್ಲಿ
ಮೆರವಣಿಗೆ ಹೊರಟಿವೆ!

ಪದಗಳಲಿ ಶಬ್ಧ ಮಾಡಿ,
ಭಾವಗಳಲಿ ಶುದ್ಧ ಮಾಡಿ,
ಶೃತಿಗೆ ಬೇಡುವ
ಮಾನವೀಯತೆಯ ದೀಪದೊಳಗೆ
ಲೇಖನಿಯ ಬತ್ತಿ ಹಿಡಿದು
ಮೆರವಣಿಗೆ ಹೊರಟಿವೆ,
ಪದ್ಯದ ಹಣತೆಗಳು!

- ಮಂಜಿನ ಹನಿ

ಚಿತ್ರ ಕೃಪೆ: ಮದನ್.ಸಿ.ಪಿ.

Tuesday, 24 March 2015

ಮೊನ್ನೆ ಹೊಳೆದ ಪದ್ಯ!


ಮೊನ್ನೆ ಹೊಳೆದ
ಪದ್ಯವೊಂದಿದೆ,
ಯುಗಾದಿಯ
ವರ್ಷತುಡುಕಿಗೆ,
ಬಿಯರು ಬಾಟಲ
ಕೊನೆಯ ಡ್ರಾಪಿಗೆ,
ಕೈ ಕೊಟ್ಟ ಹುಡುಗಿಯ
ಉಸಿರ ಸದ್ದಿಗೆ,
ಎದೆಯ ಕೊರೆಯುವ
ಹಳಸು ಕನಸಿಗೆ,
ಕೊಳೆತು ನಾರುವ
ಶವದ ಪೂಜೆಗೆ,
ಯಾವೊಂದಕೂ
ಜಪ್ಪಯ್ಯ ಅನ್ನದೆ
ಉಳಿದೇ ಹೋದ
ಪದ್ಯವೊಂದಿದೆ!

ನೆರಳು ಬೆಳಕಿನ
ಆಸೆ ಬಿಸುಪಿಗೆ,
ಕಳಚಿ ಬೀಳದ
ಹೂವು ಹಣ್ಣಿಗೆ,
ಬೆನ್ನು ಬಾಗಿದ
ಪೋಲಿ ಕನಸಿಗೆ,
ದಾಹ ತೀರದ
ತುಟಿಯ ಜೇನಿಗೆ,
ಮಿಡಿದ ನಾಡಿಯ
ಸಡಿಲ ಲಾಡಿಗೆ,
ಬದುಕು ಬೇಡಿದ
ಬತ್ತದಾಸೆಗೆ,
ಯಾವೊಂದಕೂ
ಒಲಿಯದ
ಪದ್ಯವೊಂದಿದೆ!

ಸೋತು ಸೊರಗುವ
ನೋವ ಸೆರೆಗೆ,
ಜೀವ ಕಟ್ಟುವ
ಜಿನನಣತಿಗೆ,
ದೀಪ ಹಚ್ಚುವ
ಬುದ್ಧ ಪ್ರೀತಿಗೆ,
ಭಾರ ಹೆಚ್ಚುವ
ಅಹಮಿನ ಅಣಕೆಗೆ,
ಕದಲದೆ ಇಳಿದ
ಪದ್ಯವೊಂದಿದೆ,
ಬರೆಯಲಾಗದು
ಬದುಕ ಬೇಕು,
ಬದುಕು ಮುಂದಿದೆ!

--> ಮಂಜಿನ ಹನಿ

Saturday, 7 March 2015

ಹೆಣ್ಣೆಂದರೆ?!


ಹೆಣ್ಣೆಂದರೆ,
ಒಡಲೊಳಗೆ ಹೆತ್ತುಹೊತ್ತು
ಸಹಿಸಿದ
ಅಮ್ಮನ ನಿಟ್ಟುಸಿರು, ಸೆರಗ ಬೆವರು,
ಅಪ್ಪನ ಒಳಕುದಿಯ
ಉಪಶಮನದ ಗುಳಿಗೆ,
ಮಕ್ಕಳ ಚೈತನ್ಯದ ಚಿಲುಮೆ,
ಸಂಬಂಧಗಳ ಒಲುಮೆ,
ಕಪ್ಪುಮಣ್ಣ ಬನದ ಕರಡಿ,
ಬಿಳಿಯ ಅಳ್ಳೆ, ಹತ್ತಿ ಬೆಳೆ!

ಹೆಣ್ಣೆಂದರೆ,
ಶತಮಾನಗಳ ದಾಟುವ
ಜೀವದ ಕೊಂಡಿ,
ಅಂತಃಕರಣ, ಬತ್ತದೆದೆ,
ಎದೆಯ ಹಾಲ ಸಿಹಿ,
ಸೆರಗಿಗಷ್ಟೇ ಗೊತ್ತಿರುವ
ಅವುಡುಗಚ್ಚಿದವರ ಆತಂಕದ ನೆರಳು,
ಗಂಟಲುಬ್ಬಿ
ಮಾತಾಗದ ಕಣ್ಣೀರು,
ಮಕ್ಕಳ ಬದುಕ ಕಟ್ಟಿದ
ಅಜ್ಜಿಯ ಛಲ,
ಬಡಿದಾಡುವ ಬದುಕ ಬವಣೆ,
ಕಾಮುಕರ ಎಡೆಮುರಿ ಕಟ್ಟಿ,
ಕಾಮದುಂಡೆಗಳ ನುಂಗಿ
ಜಗವ ಪಾಲಿಸುವ
ಉತ್ತನಹಳ್ಳಿಯ ಉರಿಮಾರಿ,
ಉರಿ ಗದ್ದುಗೆಯ ಸಹನೆ!

ಹೆಣ್ಣೆಂದರೆ,
ಮತ್ತೇನೂ ಅಲ್ಲ,
ತನ್ನೊಳಗೆ ಕುದಿಯುವ
ಲಾವಾಗ್ನಿ ಪರ್ವತಗಳ
ತಣಿಸಿ, ತಣ್ಣಗೆ ನಗುವ
ಭೂಮಿಯೊಡಲು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday, 2 March 2015

ಲಯಬದ್ಧ - ಒಲವನಾದ


ಕಚ್ಚಿ ಹಿಡಿದಿದೆ ತೊಟ್ಟು ಹೂವನು,
ಹೂವು ಅರಳಲಿ ಜಿಹ್ವೆ ಜೇನು,
ಅಮಲು ತುಂಬಿದ ಮಲ್ಲಿಗೆಯ ದಂಡೆ,
ಮುಡಿಸುವೆ ತಾಳು ಈಗಲೆ ಬಂದೆ!

ನನ್ನ ತೋಳ ತಬ್ಬಲು, ಬಳ್ಳಿ ಮರವ ಹಬ್ಬಲು,
ಸಿರಿ ಮಲ್ಲಿಗೆಯ ಘಮ ಮುಡಿಯ ತುಂಬಲಿ,
ಎದೆಗೆ ಹಬ್ಬಿದೆ ನಲಿವ ಬಳ್ಳಿ;
ಹೇಗೆ ಹೇಳಲಿ ಬರಿಯ ಮಾತಲಿ?

ಮತ್ತೇರಿದ ದುಂಬಿ ಹೂವಿನದರ ಸೋಕಿದೆ,
ಸಾವಕಾಶವಿರಲಿ ಎದೆಯ ಏರಿಳಿತದಿ,
ದಳಗಳಲಿ ಸಿಕ್ಕ ದುಂಬಿಯ ಪ್ರೇಮದುನ್ಮಾದ,
ಲಯಬದ್ಧವಾದಂತಿದೆ ಒಲವ ನಾದ!

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Tuesday, 24 February 2015

ದೇವರ ಫರ್ಮಾನು!!


ಮಾನ್ಯ ಜಗದೋದ್ಧಾರಕ ಕರುಣಾಮಯಿ
ದೇವರೆ,
ಈಗಿಂದೀಗಲೇ ಫರ್ಮಾನು ಹೊರಡಿಸು;
ಹಣ್ಣು ಕಾಯಿ ಮಾಡಿಸಿ,
ಅಡ್ಡ ಪಲ್ಲಕ್ಕಿ ಉತ್ಸವಗಳು,
ಎಡೆ ಮಡೆ ಸ್ನಾನಗಳು,
ಭಾಗವತರ ಭಗವದ್ಗೀತೆಗಳು
ಭಕ್ತಿಯಾಗಿ ರಕ್ತದ ಹೊಳೆ ಹರಿಸಿ,
ಸವೆದು, ಸೋರಿ, ರಾಗ - ದ್ವೇಷದ
ಪದವಾಡಿಸಿ, ಮುಗಿದಿವೆ,
ಜೀವ ನಿಲ್ಲುವ ಮೊದಲು
ಪ್ರಪಂಚ ಉಸಿರಾಡುವಂತೆ
ಫರ್ಮಾನು ಹೊರಡಿಸು!

ಕತ್ತಲ ರಾಜ್ಯದಲ್ಲಿ ಹೊಳೆದು ಬಂದವನ
ಪವಾಡವಾಗಿಸಿ,
ನೀರ ಮೇಲೆ ನಡೆಸಿ,
ಉಣ್ಣದವರಿಗೆ ರೊಟ್ಟಿ ಕೊಡಿಸಿ,
ಅವ ದೇವ ಮಾನವನಲ್ಲ,
ಬರೀ ಮನುಷ್ಯತ್ವದ
ಕಾರುಣ್ಯ ಮೂರ್ತಿಯೆಂದರಿತ ಕೂಡಲೆ,
ಶಿಲುಬೆಗೇರಿಸಿ
ಮೊಳೆ ಜಡಿಸಿ ದೇವರಾಗಿಸಿದ್ದಾರೆ;
ಕೋಲ್ಕತ್ತೆಯ ಕೊಳಕು ಬೀದಿಗಳಲ್ಲಿ
ಕುಷ್ಟ ರೋಗಿಗಳನ್ನು ಬಾಚಿ ತಬ್ಬಿದ
ಮದರ್ ತೆರೇಸಾಳನ್ನು
ಕ್ರಿಶ್ವಿಯನ್ನಾಗಿಸಿದವರಿಗೆ
ಕಾರುಣ್ಯವನ್ನು ದಯಪಾಲಿಸಿ
ಫರ್ಮಾನು ಹೊರಡಿಸು!

ಕಡು ಕತ್ತಲೆಯ ಗುಹೆಯೊಳಗೆ
ಮೊಹಮದ್ಪೈಗಂಬರರಿಗೆ
ಒಲಿದು ಬಂದು ಯಾ ಮೌಲಾ,
ಬೆಳದಿಂಗಳ ಅಲ್ಲಾ,
ಜಿಹಾದಿನ ಪಹರೆಯೊಳಗೆ,
ಮುಳುಗೇಳುತ್ತಿರುವ ಜಗಕೆ,
ರಕ್ತದ ಸೋಂಕು ತಗುಲಿ,
ಮನಸೆಲ್ಲಾ ಮಡುಗಟ್ಟಿ,
ಜಾಗತಿಕ ಟೆರರಿಸಂ ಮೈಯಾಗುವ ಮುನ್ನ,
ಕೆಟ್ಟ ಮನಸುಗಳ ಕಣ್ಣಾಗುವ ಮುನ್ನ
ಸಹನೆಯೊಂದು ಕುಡಿಯೊಡೆದು,
ದೇವರ ಅಮೂರ್ತ ರೂಪವೊಂದು
ಎಲ್ಲರೆದೆಗಳಲಿ
ಮನುಷ್ಯತ್ವವಾಗಿ ಚಿಗುರಲಿ;
ಶಪಿಸಿ ಈಗಿಂದೀಗಲೆ
ಫರ್ಮಾನು ಹೊರಡಿಸು!

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Monday, 5 January 2015

ಅವಳಂತೆ ಕವಿತೆ!


ನೀನಂದಂತೆ ಬರಿಯ ಖಾಲಿ ಪೋಲಿ
'ಐ ಮಿಸ್ ಯೂ', 'ಐ ಲವ್ ಯೂ' ಮತ್ತು
ಎದೆ ಬಿರಿದ ವಿರಹಗಳನು,
ಕೊತ ಕೊತನೆ ಕುದಿಯುವ
ವಿಷದ ಬಾಣಲೆಯೊಳಗೆ
ಬೇಯಿಸುವ ಸಲುವಾಗೇ
ನನ್ನೊಡಲಿಗೆ ಬೆಂಕಿ ಹಚ್ಚಿಕೊಂಡೆ,
ಆಹಾ, ಎಂಥ ಯಾತನೆ?!
ಆಘ್ರಾಣಿಸಿದಷ್ಟೂ ಕಮಟು ಕಮಟು,
ಹದಕ್ಕೆ ಬೇಯದ
ಹೃದಯ ಬೇಯಿಸುವುದೆಷ್ಟು ಕಷ್ಟ?!

ಅದಕ್ಕೊಂದಿಷ್ಟು ಪ್ರೀತಿ, ಪ್ರೇಮ,
ಮಿಡಿತ, ತುಡಿತ,
ನಗು - ಅಳು, ಖಾಲಿತನ, ಪೋಲಿತನ,
ಆತುರ, ಕಾತುರಗಳ ಜೊತೆಗೆ
ರುಚಿಗೆ ತಕ್ಕಷ್ಟು ಕೋಪ,
ಅಸಹನೆ, ನಿಟ್ಟುಸಿರ ತಾಪ,
ಮಾಂಸ, ಮಜ್ಜೆಗಳು ಉರುವಲಿಗೆ,
ರಕ್ತದ ತರ್ಪಣವಿದೆ
ತುಪ್ಪ ಸುರಿದಂತೆ ಉರಿವ ಬೆಂಕಿಗೆ!

ಕುದ್ದ ಭಾವಗಳು ಒಂದೊಂದಾಗಿ
ಚಿಮ್ಮಿ ಹಾರಿವೆ,
ಒಂದಕ್ಕೆ ಕಣ್ಣು ಹರಿದರೆ,
ಇನ್ನೊಂದು ಅರೆ ಸುಟ್ಟು,
ಮತ್ತೊಂದು ಕೈ ಊನ, ಕಾಲೂನ,
ಸತ್ತ ಭಾವಗಳೇನೂ ಸತ್ತಿರುವುದಿಲ್ಲ,
ಸಾಯುವುದೂ ಇಲ್ಲ,
'ನಾನೇ' ಕುದ್ದೆ, ಖುದ್ದು ಆವಿಯಾದೆ!

- ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ