ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 20 October 2026

ಕಾಗೆಗಳಿಗೆ ಹೆಂಡ ಇಟ್ಟೆವು!

 



ಅಪ್ಪಜಿ ಎಂದಿನಂತೆ ಟೆನ್ಶನ್ ತೆಗೆದುಕೊಂಡು ಲೇಟ್ ಆಯ್ತು, ಲೇಟ್ ಆಯ್ತು ಎಂದು ಶತಪಥ ಹಾಕುತ್ತಿದ್ದರು. ನಾವು ಎಷ್ಟೇ ಪ್ರಯತ್ನ ಪಟ್ಟರು ಊರಿಗೆ ತಲುಪುವುದು ತಡವೇ ಆಗುತ್ತದೆ. ಇವತ್ತೂ ಊರು ತಲುಪಿ, ಜಿಗುಳಿನ ದಂಡೆಯಲ್ಲಿ ದೇವರು ಪೂಜುವುದಕ್ಕೆ ಹೋಗುವುದರೊಳಗೆ ಬೆಳಿಗ್ಗೆ ಹನ್ನೊಂದು ಗಂಟೆಯೇ ಆಗಿತ್ತು.

ಸುತ್ತಮುತ್ತಲಿನ ಸತ್ತೆ ತೆಗೆದು, ಶುಚಿ ಮಾಡಿ, ಮೂರು ಬೇರೆ ಬೇರೆ ದಿಕ್ಕಿಗೂ ಒಂದೊಂದು ಬಾಳೆ ಎಲೆ ಹಾಸಿ, ಒಂದೊಂದು ಎಲೆಯ ಮೇಲೂ ತೊರೆಯಿಂದ ಹೆಕ್ಕಿದ ದುಂಡನೆಯ ಮೂರು ಮೂರು ಕಲ್ಲುಗಳನ್ನಿಟ್ಟು, ಹರಿಶಿಣ ಕುಂಕುಮ ಹಚ್ಚಿ ಮನೆ ದೇವರುಗಳನ್ನು ಕರೆಯಲಾಯ್ತು.

ಎರಡು ಹೆಣ್ಣು ದೇವರಿಗೂ ಮೂರೂವರೆ ಕೆಜಿ ತೂಗುವ ಕೋಳಿಗಳನ್ನು ಹರಕೆ ಕೊಟ್ಟೆವು. ಪೂಜೆ ಮುಗಿಸಿ ಮನೆಗೆ ಹಿಂದಿರುಗುವುದರೊಳಗೆ ಹನ್ನೆರಡರ ಆಸುಪಾಸು.

ಬರುತ್ತಿದ್ದ ಹಾಗೆ ಹೊಟ್ಟೆಗೆ ಒಂದಿಷ್ಟು ಉಪ್ಪಿಟ್ಟು ತಿಂದು ಮನೆಯ ಹೆಂಗಸರು ಅಡುಗೆಗೆ ರೆಡಿ ಮಾಡುತ್ತಿದ್ದರೆ ನಾವು ಕುಯ್ದಿದ್ದ ಕೋಳಿಗಳನ್ನು, ಅಂಗಡಿಯಲ್ಲೇ ಇದ್ದು ಕತ್ತರಿಸಿಕೊಂಡು ಬಂದ ಮಾಂಸವನ್ನು ತೊಳೆದು ಮಾಡುವುದರಲ್ಲಿ, ಈರುಳ್ಳಿ, ಟೊಮ್ಯಾಟೊ ಕಟ್ ಮಾಡಿ, ಕಾಯಿ ತುರಿದುಕೊಟ್ಟು, ಅವರು ಕೊಡುವ ಮಸಾಲೆಗಳನ್ನು ರುಬ್ಬಿಕೊಡುವುದರಲ್ಲಿ ತೊಡಗಿಕೊಂಡೆವು.

ನಮ್ಮ ಮನೆದೇವರುಗಳು, ಹಿರೀಕರು ಪ್ಯೂರ್ ನಾನ್ವೆಜ್ಜು. ಎಲೆ ತುಂಬ ಮುದ್ದೆ, ಮಾಂಸ, ಕೋಳಿ ತುಂಬಿ, ಒಂದೊಂದು ಲೋಟ ಹೆಂಡ ಇಟ್ಟು ಎಡೆ ಇಡದೆ ಹಬ್ಬ ಮುಗಿಸಲು ಕೊಡುವುದಿಲ್ಲ.

ಹಾಗಾಗಿ ದೊಡ್ಡ ದೊಡ್ಡ ತಪ್ಪಲೆಗಳಲ್ಲಿ ಆಡಿನ ಮಾಂಸ, ಕೋಳಿ‌ ಮಾಂಸಗಳು ಬೇಯುತ್ತಿದ್ದವು. ನಮಗೆ ಈ ಹಬ್ಬ ಮತ್ತು ಮಾರಿ ಹಬ್ಬದ ಊಟಗಳಿಗಿಂತ ಅವುಗಳೊಂದಿಗೆ ತಗುಲಿಕೊಂಡ ಪ್ರೋಸೆಸ್‌ಗಳು ಬಹಳ ಖುಷಿ ಕೊಡುತ್ತವೆ. ಆ ಮಸಾಲೆ, ಮಾಂಸ ಬೇಯುವ ವಾಸನೆಗೆ ಬಾಯಲ್ಲಿ ನೀರೂರುತ್ತಿತ್ತು.

ಅಡುಗೆ ಮುಗಿಯುವವರೆಗೂ ಅಪ್ಪಜಿ ಆಗಾಗ ಅಡುಗೆ ಮನೆಗೆ ಹೋಗುವುದು ಆಯ್ತಾ ಆಯ್ತಾ ಅಂತ ಕೇಳುವುದು ನಡೆಯುತ್ತಿತ್ತು.

ಇತ್ತ ಕಡೆ ನಡುಮನೆಗೆ ನೀರು ತಕ್ಕಳಿಸಿ, ಒರೆಸಿ, ಮೂರು ಮೂರು ಉದ್ಧ ನಾಮದ ಎರಡು ನಾಮಗಳು, ಬಿಳಿ, ಕೆಂಪು ಬೊಟ್ಟುಗಳನ್ನು ಬಳಿದು, ಒಳಮನೆಯಲ್ಲಿ ಅಡ್ಡ ಬಿಳಿ ನಾಮದ ಮೂರು ನಾಮಗಳನ್ನು ಬಳಿದು ರೆಡಿ ಮಾಡಿದೆವು. ನಾವು ವೆಂಕಟೇಶ್ವರನ ಒಕ್ಕಲಿನವರು, ನಮ್ಮಜ್ಜಿ ಮನೆಯವರು ಶಿವನ ಒಕ್ಕಲಿನವರು. ನಮ್ಮಜ್ಜಿ ಮನೆ ಕಡೆಯಲ್ಲಿ ಗಂಡು ಮಕ್ಕಳಿಲ್ಲದ ಕಾರಣ ಅವರ ಹಿರೀಕರಿಗೆ ಎಡೆ ಇಡುವುದು ನಮ್ಮ ಹಬ್ಬದ ಭಾಗವಾಗಿದೆ. ಹಾಗಾಗಿ ಈ ವ್ಯವಸ್ಥೆ ನಮಗೆ ಬುದ್ಧಿ ತಿಳಿದಂದಿನಿಂದ ನಡೆದುಕೊಂಡು ಬಂದಿದೆ.

ಪೂಜೆಗೆ ಎಲ್ಲಾ ರೆಡಿಯಾದ ಮೇಲೆ ನಡುಮನೆಯಲ್ಲಿ ಮೂರು ಎಲೆ, ಒಳಮನೆಯಲ್ಲಿ ಮೂರು ಎಲೆ ಇಟ್ಟು, ಬಡಿಸುವುದಕ್ಕೆ ಶುರು ಮಾಡಿದರು. ಉಪ್ಪು, ಸೌತೆಕಾಯಿ, ಈರುಳ್ಳಿ, ನಿಂಬೆಹಣ್ಣು, ಮೊಟ್ಟೆ, ಮುದ್ದೆ, ಘೀ ರೈಸು, ಬಿಳಿ ಅನ್ನ, ಕೋಳಿ ಗೊಜ್ಜು, ಮಾಂಸದ ಸಾರು, ಒಂದೂವರೆ ಸೌಟು ಮಾಂಸ, ಹೀಗೆ ಒಂದೊಂದಾಗಿ ಬಂದು ಎಲೆ ತುಂಬಿಕೊಂಡಿತು.

ಒಂದು ಗಂಡಸರಿಗೆ, ಎರಡನೆಯದು ಹೆಂಗಸರಿಗೆ, ಮೂರನೆಯದು ಈರರಿಗೆ ಅಂತ ಮೂರು ಮೂರು ಎಡೆಗಳು ಒಂದೊಂದು ಕಡೆ. ಒಟ್ಟು ಆರು ಎಡೆಗಳು. ಈರರು ಅಂದರೆ ಮನೆ, ಮಠ ಬಿಟ್ಟು ಎಲ್ಲೋ ಹೋಗಿ ಸತ್ತವರು, ಸಂಸ್ಕಾರ ಮಾಡಲು ಸಾಧ್ಯವಾಗದವರು, ನಮ್ಮ ಜನಪದ ಆಚರಣೆಗಳು ಅವರನ್ನೂ ಒಳಗೊಳ್ಳಬೇಕು ಎಂಬುದು ಮೂರನೆ ಎಡೆ ಇಡುವುದರ ಕಾರಣವಿರಬಹುದು.

ಸರಿ, ಇಷ್ಟು ಇಡುವುದು ಅರ್ಧ ಕೆಲಸದಂತೆ. ಒಂದೊಂದು ಲೋಟ ಹೆಂಡ ಇಡುವುದನ್ನು ತಪ್ಪಿಸಕೂಡದು, ಅದು ಇನ್ನರ್ಧ. ಅದು ಎಡೆಯ ಬಹು ಮುಖ್ಯ ಅಂಗ. ಮುಂಚೆ ಎಲ್ಲಾ ಹೆಂಡ, ಈಗ ಬದುಕಿರುವವರು ಕುಡಿಯುವ ಬ್ರ್ಯಾಂಡಿನೋ, ರಮ್ಮೋ, ವಿಸ್ಕಿನೋ ಇಡುತ್ತಾರೆ.

ಎಡೆ ಎಲ್ಲಾ ಇಟ್ಟಾದಮೇಲೆ ಪೂಜೆ ಶುರುವಾಯಿತು. ಒಬ್ಬೊಬ್ಬರೆ ಬಂದು ಗಂಧದ ಕಡ್ಡಿ, ಕರ್ಪೂರ, ಸಾಂಬ್ರಾಣಿ ಬೆಳಗಿ, ಕೈ ಮುಗಿದು ಅಡ್ಡ ಬಿದ್ದೆವು.

ಪೂಜೆ ಮುಗಿದ ಮೇಲೆ ಹೊರಗೆ ಹೋಗಿ ಐದು ನಿಮಿಷ ನಿಲ್ಲಬೇಕು. ಆ ಐದು ನಿಮಿಷದಲ್ಲಿ ಹಿರಿಯರು ಬಂದು ಊಟ ಮಾಡಿ ಹೋಗುತ್ತಾರೆ, ಅದಕ್ಕಾಗಿ ಅಡುಗೆ ಸಪ್ಪೆಯಾಗುತ್ತದೆ ಎಂಬುದು ನಂಬಿಕೆ.

ಐದು ನಿಮಿಷ ಕಳೆದು ಒಳಗೆ ಹೋದೆವು. ಗಂಡಸರು, ಹೆಂಗಸರಿಗೆ ಇಟ್ಟ ಎಡೆಗಳು ಪ್ರಸಾದ, ನಾವು ತಿನ್ನಬಹುದು. ಈರರಿಗೆ ಇಟ್ಟ ಎಡೆಗಳನ್ನು ಮನೆಯ ಛಾವಣಿಯ ಮೇಲೆ ಕಾಗೆಗಳಿಗೆ ಇಡಬೇಕು. ಈರರ ಎಡೆಗೆ ಇಟ್ಟ ಅಂದರೆ, ಹೆಂಡವನ್ನೂ ಸೇರಿಸಿ ಇಡಬೇಕು. ಲೋಟ ಇಡುವ ಬದಲು, ಅದರಲ್ಲಿದ್ದ ಹೆಂಡವನ್ನು ಮಾಂಸ ಮತ್ತು ಅನ್ನದ ಮೇಲೆ ಸುರುವಿ, ಎಲೆಯ ಸಮೇತ ಛಾವಣಿಯ ಮೇಲಿಟ್ಟೆವು.

ಒಂದೆರಡು ನಿಮಿಷದಲ್ಲೆ ಕಾಗೆಗಳು ಬೀಳಲು ಶುರು ಮಾಡಿದವು. ಒಂದು ಕಾಗೆಯಂತೂ ಒಂದು ಮಾಂಸದ ತುಂಡನ್ನು ಎತ್ತಿಕೊಂಡು ಕೊಕ್ಕಿ ಕೊಕ್ಕಿ ತಿಂದಿತು. ಹೊಟ್ಟೆ ತುಂಬಿಸಿಕೊಂಡು ಹಾರುವಾಗ ಸ್ವಲ್ಪ ವಾಲಿದಂತೆ, ಬಿದ್ದೇ ಬಿಡುವಂತೆ ಭಾಸವಾಯ್ತು. ಮನುಷ್ಯರಿಗೆ ಮತ್ತೇರುವಂತೆ ಕಾಗೆಗಳಿಗೂ ಮತ್ತೇರುತ್ತದಾ? ಅಂತ ಒಂದು ಅನುಮಾನ ಮನಸ್ಸಿನ್ನುಳಿದು, ಮಿದುಳಿಗೆ ಹುಳವಾಯಿತು.

~ ಮಂಜಿನ ಹನಿ

PC: ಅಂತರ್ಜಾಲ

No comments:

Post a Comment