ಮಾಯದೂರಿನ ರಾಜ
ಏಳು ಕೋಟೆಯ ದಾಟಿ,
ಬಂದೇ ಬರುವನು
ಜಾಜಿ, ಮೊಲ್ಲೆಯ ಹೊತ್ತು
ಕಾದ ಕದಪಿಗೆ ಮುತ್ತು
ತಂದೇ ತರುವನು...
ಕಾಡಿಗೆಯ ಕೊಳದೊಳಗೆ
ನಗುವ ನೈದಿಲೆ ಮೊಗ್ಗು
ನಿದ್ದೆಗೆಡಿಸುವ ನಲ್ಲನವನೆ?
ಏನೆಂದು ಹೆಸರಿಡಲಿ,
ಕನಸೂರ ದಾರಿಯಲಿ
ಕಂಡ ಚಂದ್ರನವನೆ...
ಕೈತುಂಬು ಬಳೆಗಳಿಗೆ,
ಹಣೆತುಂಬ ಸಿಂಧೂರ;
ಸಿಹಿಯಾದ ನಿದ್ದೆಯಲಿ
ಮದುವೆಯ ಕನಸೊಂದು ಬಿತ್ತು,
ಅಲ್ಲಿದ್ದವನೂ ಅವನೇ,
ಹೊನ್ನ ಮೂಗುತಿಗೆ ಕೆಂಪು ನತ್ತು!
ಹತ್ತು ಹಲ ಕನವರಿಕೆ
ಅವ ಕನಸೇರಿ ಬರುವಾಗ..
ನಿದ್ದೆಗೆಡಿಸುವ
ನಿರೀಕ್ಷೆಗಳಿಗೇನು ಕಮ್ಮಿ?
ಎಲ್ಲಿರುವ, ಹೇಗಿರುವ, ಒಂದಾದಮೇಲೊಂದು
ಬರುವವು ಪ್ರಶ್ನೆಗಳು ಚಿಮ್ಮಿ ಚಿಮ್ಮಿ...
- ಮಂಜಿನ ಹನಿ
ಚಿತ್ರಕೃಪೆ: ದೀಪಕ್.ಡಿ.
ರೂಪದರ್ಶಿ: ರಮ್ಯ.ಹೆಚ್.ಕೆ.
'ಕಾದ ಕದಪಿಗೆ ಮುತ್ತು' ವಾವ್. ಇತ್ತೀಚೆಗೆ ನಾನು ಓದಿದ ಒಳ್ಳೆಯ ನವೋದಯ ಕಾವ್ಯ ಸೃಷ್ಟಿ ಇದು.
ReplyDeleteಆಕೆಯ ನಿರೀಕ್ಷೆಗಳು ಸಾದ್ದೃಷವಾಗಿವೆ ಇಲ್ಲಿ.
Super
ReplyDelete