ಕವಿತೆಯನ್ನು
ಹುಡುಕಿ ಹಿಡಿಯುವ
ಹಾದಿಗಳ್ಯಾವುವೂ
ಸಿಗುತ್ತಲೇ ಇಲ್ಲ...
ಎಲ್ಲಿ ಹಿಡಿಯುವುದು
ಮರಳುಗಾಡ ಮರೀಚಿಕೆಯ?
ಕಂಡಂತೆ ಕಾಣ್ವ
ಕಾಣದ ಭ್ರಮೆಯ?
ದೇವನಲ್ಲಿ ಹುಡುಕಲೆ
ವೈಚಾರಿಕತೆಯ ಬಿಂಬ?
ಪ್ರೇಮನಲ್ಲಿ ಹುಡುಕಲೆ
ಅಮೂರ್ತತೆಯ ಪ್ರತಿಬಿಂಬ?
ಸಾವಿನಲ್ಲಿ ಹುಡುಕಲು
ಆಕಾಶ ಮುಟ್ಟಿಹುದು
ಸಾವಿನಾಚೆಯ ಸೃಷ್ಠಿ ದಿಬ್ಬ!
ಕರಗುತ್ತಿವೆ ಪ್ರಯತ್ನಗಳು
ಪ್ರಶ್ನಾರ್ಥಕಗಳಲ್ಲಿ,
ಪೂರ್ಣವಿರಾಮಗಳು ಹಾಳಾಗಲಿ
ಅಲ್ಪವಿರಾಮಗಳಾದರೂ
ಬೇಡವೇ ದಣಿವಾರಿಸಿಕೊಳಲು?
ಕಣ್ಣಿಗೆ ಕಪ್ಪು ಕತ್ತಲೆ ಕಟ್ಟಿ
ಅಗಾಧತೆಗೆ ತಳ್ಳಿದ್ದಾರೆ,
ಸೂರ್ಯ ಹುಟ್ಟುವುದೂ
ಕಾಣುತ್ತಿಲ್ಲ,
ಚಂದಿರನ ನೆರಳೂ
ಮೈಮೇಲೆ ಬೀಳುತ್ತಿಲ್ಲ!
ನಿರ್ವಿಕಾರ ನಿರ್ಲಜ್ಜ
ಚೀತ್ಕಾರಗಳು ಚೀರುತ್ತವೆ,
ಯಾವಕ್ಕೂ
ಸವಿಯಾದ ಬೆಸುಗೆಯಿಲ್ಲ,
ನವಿರಾದ ಹೊಸುಗೆಯಿಲ್ಲ,
ಎದೆಯ ಮೇಲಣ
ಸಿವುರುಗಳಿಗೆ ಹಚ್ಚಲು
ತುಪ್ಪ ಸಿಗಲಿಲ್ಲ,
ಕೈಗೆ ಸಿಕ್ಕುವುದಲ್ಲ ಕವಿತೆ?
ಸಿಕ್ಕು ಸಿಕ್ಕಾಗಿ ಕುಕ್ಕುವುದು!
- ಮಂಜಿನ ಹನಿ
ಚಿತ್ರಕೃಪೆ: ಗೂಗಲ್ ಅಂತರ್ಜಾಲ
ಕರಗುತ್ತಿವೆ ಪ್ರಯತ್ನಗಳು
ReplyDeleteಪ್ರಶ್ನಾರ್ಥಕಗಳಲ್ಲಿ,
ಛಂದದ ಪ್ರಯತ್ನ ಸರ್.....ಇಷ್ಟವಾಯಿತು...
ಹಾಂ ಸಿವುರು ಅಂದ್ರೆ ಎನು ???
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಚಿನ್ಮಯ್ ರವರೆ. ಪ್ರಸಾದ್ ಅನ್ನಿ ಸಾಕು, ಸರ್ ಯಾಕೆ ಅಲ್ವಾ? :-)
Deleteಸಿವುರು ಹೆಸರುಪದ(ನಾಮಪದ):
(ದೇ) (ನಯವಾದ ಮರ, ಲೋಹ ಮೊ.ವುಗಳ) ಮೊನೆಯುಳ್ಳ ನವುರಾದ ಕಡ್ಡಿ
ಎಂಬರ್ಥದಲ್ಲಿ ಬಳಸಿಕೊಂಡಿದ್ದೇನೆ. ಇದು ಆಡು ಭಾಷೆಯ ಪದವಾಗಿ ನಂತರದಲ್ಲಿ ನಿಘಂಟಿನಲ್ಲಿ ಸ್ಥಾನ ಪಡೆದಿದೆ. ಈ ಅರ್ಥವನ್ನು ಪ್ರೊ. ಜಿ.ವಿ. ಯವರ ಕನ್ನಡ-ಕನ್ನಡ ನಿಘಂಟಿನಿಂದ ಕೊಟ್ಟಿದ್ದೇನೆ.
ನನಗೂ ಯಾಕೋ ಇತ್ತೀಚೆಗೆ ಇದೇ ಸ್ಥಿತಿ.. ಕವಿತೆ ಯಾಕೋ ಹುಟ್ಟುತ್ತಲೇ ಇಲ್ಲ! ತೀರಾ ನೊಂದಿದ್ದೇನೆ.
ReplyDelete