ಕುಪ್ಪಳಿಯಲ್ಲಿ ಆಯೋಜನೆಗೊಂಡಿದ್ದ ’ಕಾವ್ಯ ಕಮ್ಮಟ’ ತನ್ನ ಕೆಲಸವನ್ನು ಸಂಪೂರ್ಣ ಮಾಡಿ ಮುಗಿಸಿದೆ. ಒಂದು ಕಾವ್ಯ ಪರಂಪರೆಯ ಉಗಮದಿಂದ ಹಿಡಿದು, ಅದು ಸಾಕಾರಗೊಂಡು ನಿಂತ ಹಾದಿಗಳು, ಕವಲುಗಳು, ಜನರ ಹತ್ತಿರಕ್ಕೆ ಇಳಿದು ಎದೆ ಸೇರಿದ ಪರಿ, ಹೀಗೆ... ಸಾಕಷ್ಟನ್ನು ಬಿಟ್ಟುಕೊಟ್ಟ ಬಗೆ ಮೆಚ್ಚುವಂತದ್ದು.
ಹಾಗೆ ನೋಡುವುದಾದರೆ, ಅಲ್ಲಿ ಸೇರಿದ್ದ ಶಿಬಿರಾರ್ಥಿಗಳೆಲ್ಲರ ಗ್ರಹಿಕೆಯ ಮೂಲಗಳು ಭಿನ್ನ ಭಿನ್ನವಾಗಿದ್ದವು. ಅವರು ಮುಂದೆ ಬರೆದರೂ ಅದು ಕಟ್ಟಿಕೊಳ್ಳುವ ನೆಲೆಗಳೂ ಬೇರೆ ಬೇರೆಯೇ ಆಗಿರುತ್ತವೆ. ಕೇವಲ ಸಾಹಿತ್ಯದ ವಿದ್ಯಾರ್ಥಿಗಳಲ್ಲದೆ, ಬೇರೆಬೇರೆ ಮೂಲದಿಂದ ಬಂದವರೂ ಅಲ್ಲಿದ್ದರು. ಆದ್ದರಿಂದ ಮೊದಲ ದಿನದ ಪಂಪ, ರನ್ನ, ಕುಮಾರವ್ಯಾಸ ಮುಂತಾದವರು ತೂಕಡಿಸುವಂತೆ ಮಾಡಿದರು ಎಂಬ ಗೊಣಗಾಟವಿತ್ತು! ಆದರೆ ನನಗನ್ನಿಸಿದ್ದು ಅವರು ನಡೆಸಿಕೊಂಡು ಬಂದ ಕನ್ನಡ ಕಾವ್ಯ ಪರಂಪರೆಗೆ ವಾರಸುದಾರರಾಗಬಯಸುತ್ತಿರುವ ನಾವು, ಒಮ್ಮೆ ಪಕ್ಷಿ ನೋಟದಂತೆಯಾದರೂ ಅವರೆಡೆಗೊಮ್ಮೆ ತಿರುಗಿ ನೋಡಬಹುದು. ಅವರಿಗೆ ಸಿಕ್ಕ ಹೊಳಹುಗಳು ನಮ್ಮ ಈಗಿನ ಕಾಲದ ಸಾಹಿತ್ಯಕ್ಕೂ ಆಪ್ಯಾಯಮಾನವಾಗುವಂತೆ ದಕ್ಕಬಹುದು. ಪೂರ್ವಜರನ್ನೊಮ್ಮೆ ನೆನೆಯುವುದರಲ್ಲೇನೂ ತಪ್ಪಿಲ್ಲ.
’ನಾವು ಬರೆಯುತ್ತೇವೆ, ಹಿಂದಿನದನ್ನು ಓದುವ ಅಗತ್ಯವಿಲ್ಲ...’ ಎಂಬ ಅಸಡ್ಡೆಯ ಮಾತನಾಡುವುದು ಮೂರ್ಖತನವಾಗಬಹುದು. ಏಕೆಂದರೆ ಈಗಾಗಲೇ ನಾವು ಹೆರುತ್ತಿರುವುದು ’ನಾಳೆಗೆ ಸಾಯುವ ಕಾರ್ಪರೇಟ್ ಸಾಹಿತ್ಯ’! ನಿಜದ ಓದುಗರೊಂದಿಗೆ ಮುಖಾಮುಖಿಯಾಗುವಾಗ ಇರಿಸು ಮುರಿಸನುಭವಿಸುವ ಸಾಧ್ಯತೆ ಇದ್ದೇ ಇದೆ. ಅಂಥದ್ದರಲ್ಲಿ ಓದುವುದನ್ನು ತಿರಸ್ಕರಿಸುತ್ತೇವೆಂಬ ಧಾರ್ಷ್ಟ್ಯ ನಮ್ಮನ್ನಿನ್ನೆಲ್ಲಿಗೆ ತಂದು ನಿಲ್ಲಿಸಬಹುದೆಂಬುದನ್ನು ಮನದಲ್ಲೇ ಮಂಥನ ಮಾಡಿಕೊಳ್ಳಬಹುದು! ಹಾಗೆಂದ ಮಾತ್ರಕ್ಕೆ ಹಿಂದನವರನ್ನೆಲ್ಲ ಓದುವುದು ನಮ್ಮನ್ನು ಎತ್ತರಕ್ಕೆ ಏರಿಸಿಬಿಡುತ್ತದೆಂಬ ಭ್ರಮೆಯ ಮಾತಲ್ಲ ಇದು, ಮತ್ತು ಈಗ ಹುಟ್ಟುತ್ತಿರುವುದು ಬೂಸಾ ಸಾಹಿತ್ಯ ಎಂಬುದೂ ಅಲ್ಲ. ನಮ್ಮಲ್ಲಿರುವ ಜೀವನ ದರ್ಶನದಂತಹ ಸಾಹಿತ್ಯವನ್ನು ಸೃಷ್ಠಿಸಬಲ್ಲ ಸೃಷ್ಠಿಶೀಲತೆಯಷ್ಟೇ ನಮ್ಮನ್ನು ಮೇಲೇರಿಸಿದರೂ, ಅದನ್ನು ಕಟ್ಟಿಕೊಡುವುದನ್ನು ಹೇಳಿಕೊಡಬಲ್ಲ ಓದು ನಮ್ಮನ್ನು ವಿನೀತರನ್ನಾಗಿಸುತ್ತದೆ ಎಂಬುದಂತು ಸತ್ಯ!
ಈ ನನ್ನ ಮಾತನ್ನು ಸಾಕ್ಷೀಕರಿಸಲು, ಇತ್ತೀಚೆಗಿನ ದಿನಗಳಲ್ಲಿ ಹುಟ್ಟಿದಂಥ ಅನೇಕ ಕಾವ್ಯ, ಕಾದಂಬರಿ ಮತ್ತಿತರ ಸಾಹಿತ್ಯ ಪ್ರಾಕಾರಗಳತ್ತ ಚಿತ್ತ ಹರಿಸಬಹುದು. ಯಾರು ಎಷ್ಟೇ ಪಾತ್ರಗಳನ್ನು ಸೃಷ್ಟಿಸಿದರೂ, ಪ್ರೇಮದ ಅವತರಣಿಕೆಗಳಂತೆ ನಮ್ಮ ಮುಂದೆ ನಿಲ್ಲುವುದು ರೋಮಿಯೋ-ಜೂಲಿಯಟ್, ಸಲೀಂ-ಅನಾರ್ಕಲಿ ಮುಂತಾದ ಪಾತ್ರಗಳೇ! ಏಕೆಂದರೆ ಅವುಗಳಿಗಿರುವ ಸಾಹಿತ್ಯಿಕ ಗಟ್ಟಿತನ ಅದು. ಓದು ಖುಷಿಯೊಂದಿಗೆ, ಓದುಗರನ್ನು ಕಾಡುವಂತೆ ಗುಂಗಿಗೆ ಬೀಳಿಸುವುದು ’ಮೌಲ್ಯವುಳ್ಳ ಸಾಹಿತ್ಯ’ಕ್ಕಷ್ಟೇ ಸಾಧ್ಯ.
ಇನ್ನು ಕಾವ್ಯ ಕಮ್ಮಟದಲ್ಲಿ ಸಿಕ್ಕ ಅನುಭವಗಳನ್ನು ದಾಖಲಿಸುವುದಾದರೆ; ಕುಪ್ಪಳಿಯ ಆ ರಮ್ಯವಾದ ವಾತಾವರಣ, ಕುವೆಂಪುವೆಂಬ ಧ್ಯಾನಸ್ಥ ಮನವನ್ನು ಧೇನಿಸುವ ಭಾಗ್ಯ, ಕವಿಶೈಲ, ಕವಿಮನೆಗಳ ಸೂರ್ಯಾಸ್ತ, ನವಿಲು ಕಲ್ಲಿನ ಕೆಂಪು ಚೆಂಡಿನ ಸೂರ್ಯೋದಯ, ಸಿಬ್ಬಲುಗುಡ್ಡೆ, ತುಂಗಾ ನದಿಯ ಕಲ್ಲುಸಾರ, ರಸಋಷಿಯ ಕಾವ್ಯಕ್ಕೆ ನಿರಂತರ ಚೈತನ್ಯ ಒದಗಿಸಿದ ಸ್ಥಳಗಳ ವಿವರಣೆ ಮತ್ತು ದರ್ಶನ ಶಿವಾರೆಡ್ಡಿ ಸರ್ ರಿಂದ ಸಿಕ್ಕಿದ್ದು. ಫೇಸ್ಬುಕ್ ನಲ್ಲಷ್ಟೇ ನೋಡುತ್ತಿದ್ದ ಮುಖಗಳನ್ನು ಮುಖತಃ ಭೇಟಿ ಮಾಡಿದ್ದು, ಸಾಕಷ್ಟು ಹರಟೆ ಹೊಡೆದಿದ್ದು. ’ಜುಮ್ ಸಾಹಿತ್ಯ’ದ ಬಗ್ಗೆ ನಮ್ಮ ಓರಗೆಯ ಹುಡುಗರೊಂದಿಗೆ ಚರ್ಚೆ ಮಾಡಿದ್ದು! ;) ಇನ್ನೂ ಸಾಕಷ್ಟು.
ಒಟ್ಟಿನಲ್ಲಿ ನಾವು ಬರೆಯುತ್ತಿರುವುದು ನಿಜಕ್ಕೂ ಸಾಹಿತ್ಯವೇ? ಎಂಬ ಜಿಜ್ಞಾಸೆಗೆ ನೂಕಿ, ನಮ್ಮ ಬರಹಗಳನ್ನೂ ಕವಿ, ಕರ್ತೃಗಳಿಂದ ಬೇರ್ಪಡಿಸಿ ವಿಮರ್ಷೆಯ ತಕ್ಕಡಿಯಲ್ಲಿ ತೂಗುವ ಅವಶ್ಯಕತೆಯನ್ನು ದಕ್ಕಿಸಿಕೊಟ್ಟಿತು ’ಕಾವ್ಯ ಕಮ್ಮಟ’. ಸಾಕಷ್ಟು ಓದಿಗೆ ಒಡ್ಡಿಕೊಂಡು ಅಸಂಖ್ಯ ಸಾಧ್ಯತೆಗಳಿಗೆ ತೆರೆದುಕೊಳ್ಳುವಂತೆ ಮಾಡಿತು ’ಕಾವ್ಯ ಕಮ್ಮಟ’. ನಮ್ಮನಮ್ಮಲ್ಲಿಯೇ ಚರ್ಚೆಗೆ ಅವಕಾಶ ನೀಡಿ ಕಾವ್ಯದ ಹೊಸ ಆಯಾಮಗಳನ್ನು ಸಿಕ್ಕಿಸಿಕೊಳ್ಳುವ ಪ್ರಯತ್ನಗಳಿಗೆ ನಾಂದಿಯಾಗಿತ್ತು. ಇಷ್ಟು ಸಾಕು, ’ಕಾವ್ಯ ಕಮ್ಮಟ’ ತನ್ನ ಕೆಲಸವನ್ನು ತಾ ಅಚ್ಚುಕಟ್ಟಾಗಿ ಮಾಡಿದೆ ಎಂದು ಹೇಳಲು.
ಇಷ್ಟೆಲ್ಲಾ ಹೇಳಿದರೂ ಅಲ್ಲೊಂದು, ಇಲ್ಲೊಂದು ನ್ಯೂನ್ಯತೆಗಳಿದ್ದುದನ್ನೂ ಅಲ್ಲೆಗೆಳೆಯಲಾಗುವುದಿಲ್ಲ! ಸಂಪನ್ಮೂಲ ವ್ಯಕ್ತಿಗಳು ಮತ್ತು ಅತಿಥಿಗಳು ಒಪ್ಪಿಕೊಂಡು ಬರದೆ ಇದ್ದುದು, ಕಾರ್ಯಕ್ರಮಗಳು ಅಂದುಕೊಂಡಂತೆ ಮುಗಿಯದೆ ಸಮಯಾಭಾವ ಸೃಷ್ಟಿಸಿದ್ದು, ಅದರಿಂದಾದ ಗಡಿಬಿಡಿಯಲ್ಲೇ ಸಮಾರೋಪ ಕೊನೆಗೊಂಡಿದ್ದು, ಕಾವ್ಯ ಕಮ್ಮಟದ ಪಠ್ಯದ ಪರಿಚಯವನ್ನು ಶಿಬಿರಾರ್ಥಿಗಳಿಗೆ ಮೊದಲೇ ಕೊಡದಿದ್ದುದು. ಹೀಗೆ, ಒಂದಷ್ಟು! ಮುಂದಿನ ದಿನಗಳಲ್ಲಿ ಈ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ’ಕಾಜಾಣ’ದ ಕನಸುಗಳು ಸಾಕಾರವಾಗಲಿ ಎಂದು ಆಶಿಸೋಣ :-)
- ಮಂಜಿನಹನಿ
★★★★★
ReplyDelete★★★★★
ReplyDelete