ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 4 February 2014

ಉಪ್ಪು ಕಡಲೆ!


ಸೈಕಲ್ ಮೇಲೇರಿ,
ಪೆಡಲ್ ಎಟುಕದೆ
ತುಳಿಯುತ್ತಾನೆ, ಕೂಗುತ್ತಾನೆ
’ಕಡ್ಲೆಯೋ, ಕಡಗಡ್ ಕಡ್ಲೆಯೋ...’
ಬಾಲ್ಯದ ಸಂಭ್ರಮಕ್ಕೆ
ನನಗೆ ಕವಿತೆಯ ಸಿಹಿ!
ಬೆವರವನ ಶಾಯಿ!

ಕೂಗು ಬೀದಿಯಲೆದರೆ,
ಮಾರು ದೂರಕೆ ಸರಿದವನ
ಮುತ್ತಿಕೊಳ್ವ ನಾಲ್ಕು ಪಿಳ್ಳೆಗಳು!
ಮಕ್ಕಳ ಕಿಸೆ ಸೇರುವ
ಉಪ್ಪು ಕಡ್ಲೆಗಳು!
ಇವನ ಜೇಬಿಗೆಂಟಾಣೆಯ ಕಸುವು!
ನಾಲಿಗೆಯು ನೀರೂರಿ
ಕವಿತೆಯ ಹರಿವು!

ಇಳಿದ ಕೆಲಸ ಇಳಿಸಿ,
ಮತ್ತೆ ಪೆಡಲ್ ತುಳಿವ,
ಕಾಲೆಟುಕದ ವಾಮನ!
ಒಂದು ಕಾಲು ಮುಂದೆ ಮಾಡಿ,
ಇನ್ನೊಂದನು ಹಿಂದೆ ನೀಡಿ,
ಮತ್ತೆ ಕೂಗೆಳೆವುದೇ ಜೀವನ -
"ಕಡಗಡ್ ಕಡ್ಲೆಯೋ, ಉಪ್ಪುಕಡ್ಲೆಯೋ.."

ರಜಾಕ್ ಸಾಬರ
ಶ್ರಮದ ಬುತ್ತಿ 
ಹತ್ತಾರು ಊರುಗಳಲ್ಲಿ
ಬಿಚ್ಚಿದೆ -
ತ್ರೀಶೂಲ ಹಿಡಿದ ಈ ಜನ
'ಅವರು' ನಮ್ಮವರಲ್ಲ
ಎಂದರೆ,
ನನ್ನ ಬಾಲ್ಯದ ನೆನಪುಗಳನ್ನೂ
ಪಾಕಿಸ್ತಾನಕ್ಕೆ ಕಳಿಸಲೇ?!

~ ಮಂಜಿನಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

2 comments:

  1. ಬಾಲ್ಯಕ್ಕೆ ಎಳೆದೊಯ್ದು ನಿಲ್ಲಿಸಿ ಬಿಟ್ರೀ ಗೆಳೆಯ.
    ನಮ್ಮ ಹಳ್ಳೀ ಕಡೆ ಹಳೆ ಕಬ್ಬಿಣದ ಸಾಮಾನು ತೆಗೆದುಕೊಂಡು ಪಾಪಂಪಪ್ಪು ಕೊಡುತ್ತಿದ್ದ ಆ ಸೈಕಲ್ ಸವಾರ ನೆನಪಾದ.

    ReplyDelete
  2. "bevaru kavithe bareyuttade "
    (Y) (Y) ..cheanagide :) :)

    ReplyDelete