ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday, 27 November 2013

ಬಿಡುಗಣ್ಣ ನಕ್ಷತ್ರ!


ನಿತ್ಯವೂ ಸಿಕ್ಕುತ್ತಾಳೆ ಆ ಹುಡುಗಿ,
ಕೈಯ್ಯಲ್ಲಿ ಕೆಂಪು ಹೂವು,
ಕಣ್ಣಲ್ಲಿ ಕೋಟಿ ಕನಸು!
ಕೆಂಪು ಹೂವೆಂದರೆ
ಬಹುಶಃ ಗುಲಾಬಿಯಿರಬಹುದು,
ಆ ಹುಡುಗಿಗೆ ಹೇಳಿಕೊಟ್ಟವರಾರೋ
ಕೆಂಪಿಗೆ ಬಿಕರಿಯಾಗುವ
ತಾಕತ್ತಿದೆಯೆಂದು?
ನನಗೋ ಆ ಕೆಂಪು
ರಕ್ತದ ಕಲೆಗಳಂತೆ ಕಾಣುತ್ತದೆ!
ಆ ಹುಡುಗಿಯೂ ರಕ್ತ ಬಸಿದಿರಬಹುದೆ,
ಬೆವರ ಬದಲಾಗಿ?!

ಅಕ್ಷರಗಳ ಹಂಗಿಲ್ಲದೆ,
ಓರಗೆಯ ಮಕ್ಕಳೊಂದಿಗೆ
ಬೆರೆತು ಕುಣಿಯುವ ಆಸೆಗಳಿಲ್ಲದೆ
ಬಾಲ್ಯ ಕಳೆಯಲು
ಆ ಹುಡುಗಿ ತೀರ್ಮಾನಿಸಿರಬಹುದು!
ಏಕೆಂದರೆ ರಸ್ತೆ ದಾಟುವ
ಯೂನಿಫಾರ್ಮ್ ತೊಟ್ಟ
ಇತರ ಮಕ್ಕಳು ಅವಳೊಳಗೆ
ಒಂದು ತಿರಸ್ಕಾರದ ನಗೆ ಮತ್ತು
ಬಿಸಿಕಣ್ಣೀರಾಗುತ್ತಾರಷ್ಟೆ!
ಹಸಿದು ಕುದುರೆಯೇರಿದ ಬಾಲ್ಯಕ್ಕೆ,
ಕಿತ್ತ ಲಗಾಮೇ ಸಾಥಿ!

ಬಡವನ ಹಸಿವಿಗೆ ಸಾವಿರ ಬಾಯಿ!
ಇವಳು ಒಂದಿಲ್ಲೊಂದು
ಬಾಯಿಗೆ ಗಂಜಿ ಹುಯ್ಯುತ್ತಲೇ ಇರಬಹುದು,
ಅವಳಮ್ಮ ಕಾಯಿಲೆಯಿಂದ
ಮೂಲೆ ಹಿಡಿದಿರಬಹುದು,
ಅಪ್ಪ ಕುಡಿದು ಬಡಿಯಬಹುದು,
ತಮ್ಮ-ತಂಗಿಯರು
ಅರೆಹೊಟ್ಟೆ ಉಣ್ಣಬಹುದು,
ಇವಳು ಅವರಿಗೆಲ್ಲಾ ಗಂಜಿ ಹುಯ್ದು,
ತನ್ನ ಹೊಟ್ಟೆಗೆ ತಣ್ಣೀರು ಬಟ್ಟೆ ತಟ್ಟಬಹುದು!
ಮತ್ತೆ ಬೆಳಗೆದ್ದೊಡನೆ
ಅದೇ ರಸ್ತೆಗಳು, ಟ್ರಾಫಿಕ್ಕು ಸಿಗ್ನಲ್ಗಳು!

ಅವಳ ಬೆವರಿಗೆ
ಒಂದು ಅಂಕಿಯ ಮುಂದೆ ಸಾವಿರಾರು
ಸೊನ್ನೆಗಳ ಸುತ್ತಿ ಅದರ ಮುಂದೆ
ರೂಪಾಯಿ ಬರೆದಷ್ಟು ಬೆಲೆಯಿರಬಹುದು,
ಏಕೆಂದರೆ ಅದು ಕೆಳಗೆ ಬಿದ್ದ
ಜಾಗವೆಲ್ಲಾ ಸುಟ್ಟುಹೋಗುತ್ತದೆ!
ಒಮ್ಮೊಮ್ಮೆ ಅದರೊಳಗೆ ಬೆವರಷ್ಟೆ ಇರದೆ
ಬಿಸಿಯುಸಿರು, ಕಣ್ಣೀರು, ಹತಾಶೆ,
ಕಾಮುಕರ ಕಣ್ಣಳತೆ-ಕೈಯಳತೆಗಳೂ ಇರುತ್ತವೆ!
ಅಸುಗೂಸನ್ನಾದರೂ ಬಿಟ್ಟಾವೆಯೇ ಇವು?
ಎಂಬ ವಾಕರಿಕೆಯೂ ಇರಬಹುದು!

ಅವಳು ಪ್ರತಿ ಸಿಗ್ನಲ್ನಲ್ಲೂ,
ಒಬ್ಬರ ಬಳಿಯಲ್ಲದಿದ್ದರೆ,
ಮತ್ತೊಬ್ಬರ ಬಳಿ, ಅವರಲ್ಲವೆಂದರೆ
ಮತ್ತಿನ್ನೊಬ್ಬರ ಬಳಿ
ತೆರಳುವುದನ್ನು ನೋಡಿದ್ದೇನೆ!
ಯಾವುದೋ ಒಂದು ಕಾರು ತೂರಿದ
ಕಡೆಗೆ ಬಿಡುಗಣ್ಣು ಬಿಟ್ಟು
ನೋಡುವುದನ್ನು ನೋಡಿದ್ದೇನೆ!
ಸಾಕಷ್ಟು ವಿಫಲ ಯತ್ನಗಳ
ನಡುವೆಯೂ ನಗು ಮಾಸುವುದಿಲ್ಲ,
ಆ ಹೂವಿನದು, ಆ ಹುಡುಗಿಯದು!
ಆ ನಿರಂತರ ಭರವಸೆಗೆ ಏನನ್ನಬಹುದು?
ಯೋಚಿಸಿ ಕೂತ ನನಗೆ,
ಫ್ಯಾನ್ ನ ಗಾಳಿ ಕೂಡ ಬೆವರಿಸುತ್ತದೆ!

ಆ ಹುಡುಗಿ ನಾಳೆಯೂ ಸಿಗಬಹುದು,
ನಾಡಿದ್ದೂ ಸಿಗಬಹುದು,
ಆಚೆ ನಾಳೆಯೂ ಕೂಡ,
ಗುಲಾಬಿಗೂ, ಕೆಂಪಿಗೂ ಬಿಕರಿಯಾಗುವ
ತಾಕತ್ತಿರುವವರೆಗೂ
ಸಿಗುತ್ತಲೇ ಇರಬಹುದು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

ಇಲ್ಲಿ ಕೆಂಪು ಎಂಬುದು ’ಕನಸುಗಳು’ ಎಂಬರ್ಥದಲ್ಲಿ ಬಳಕೆಯಾಗಿದೆ.

1 comment:

  1. ಪುಟ್ಟ ವಯಸಿನಲೇ ಬಿಕ್ಕೆ ಬೀಳದೆ ಸ್ವಾವಲಂಬಿ ಹುಡುಗಿ, ಮನಗೆದ್ದಳು.ಬಡತನದ ಕಣ್ಣೀರ ಕಥನ ಇಲ್ಲಿ ಕರುಳು ಹಿಂಡುವಂತೆ ಚಿತ್ರಿತವಾಗಿದೆ.

    ReplyDelete