ಚೆಂದವಿರುವುದಂತೆ ನನ್ನ ಮುಖ,
ಆದರೆ ಹಳ್ಳದಂತಿರುವ ಈ
ಮೋಟು ಮೂಗಿನದ್ದೇ ಚಿಂತೆ ನನಗೆ!
ಅದು ಇದ್ದಂತಿರಲೆಂದು,
ಹೆಗ್ಗಣವೇ ಮುದ್ದೆಂದು
ನನ್ನ ಮೂಗನ್ನು ಸರಿಯಾಗಿ
ಎತ್ತಿಲ್ಲದ ಬಗ್ಗೆ
ದೂರಿದೆ ನಿನ್ನ ಮೇಲೆ ನನ್ನದೊಂದು?
ನನಗೀಗಲೂ ಕಲ್ಲು, ಮುಳ್ಳುಗಳ ಮೇಲೆ ಕಾಲಿಟ್ಟರೆ,
ಚರ್ಮ ಸುಲಿಯುತ್ತದೆಂಬ ಭಯ!
ನಿನ್ನಂಗೈಯ ಮೇಲೆ ನನ್ನ ಪಾದಗಳನ್ನಿಟ್ಟುಕೊಂಡು
ಮುನ್ನಡೆಸಿ ನಡಿಗೆ ಕಲಿಸಿದ್ದು
ನಿನ್ನ ಹರಿದ ಬೆರಳ ಚರ್ಮ
ನೋಡುವವರೆಗೂ ಅರಿವಾಗಲಿಲ್ಲ!
ನಡೆದಾಡುವ ದಾರಿಯುದ್ದಕ್ಕೂ
ಕಲ್ಲುಮುಳ್ಳುಗಳೇ ಇವೆಯಂತೆ!
ಈಗೇನು ಮಾಡಲಿ ಹೇಳು?
ದೂರಿದೆ ನಿನ್ನ ಮೇಲೆ ನನ್ನದೊಂದು?
ಮಗನ ಮೀಸೆ ಚಿಗುರುತ್ತಿದ್ದಂತೆ,
ಹಿಂದೆ ಮುಂದೆ ಸುಳಿಯುವ
ಹುಡುಗಿಯರ ಬಗ್ಗೆ ತಿಳಿ ಹೇಳುವ
ಅಮ್ಮಂದಿರೇ ಹೆಚ್ಚು ಈ ಜಗದೊಳಗೆ!
ಮುಂದೊಂದು ದಿನ ವೈಫಲ್ಯವನುಭವಿಸಿ
ಪ್ರೇಮಕ್ಕೊಂದು ಕಪ್ಪು ಗುಲಾಬಿ ಇಡುವುದನ್ನು
ಊಹಿಸಿದ್ದೂ, ಪ್ರೀತಿಸಲು ಬಿಟ್ಟದ್ದು ಏಕೆ?
ಆದ ಗಾಯಗಳಿಗೆ ತುಪ್ಪ ಸವರಿದ್ದು
ಆಮೇಲಿನಾ ಮಾತು! ಹೇಳು,
ದೂರಿದೆ ನಿನ್ನ ಮೇಲೆ ನನ್ನದೊಂದು?
ನಮ್ಮ ಮೇಲೆ ಕೇವಲ ಪ್ರೀತಿಯನ್ನೇ ಸುರಿದು,
ನೋವೆಲ್ಲಾ ನೀನೇ ನುಂಗಿ,
ಸುಮ್ಮನೆ ನಕ್ಕಿಬಿಟ್ಟದ್ದು!
ನಾನ್ಯಾವುದೋ ಸಿಟ್ಟನ್ನು
ನಿನ್ನ ಮೇಲೆ ಹರಿಯಬಿಟ್ಟಾಗ ಎದುರಾಡದೆ,
ಹಲ್ಕಚ್ಚಿ, ಯಾರಿಗೂ ಕಾಣದಂತೆ
ಸೆರಗಿನಂಚಲ್ಲಿ ಕಣ್ಣೊರೆಸಿಕೊಂಡದ್ದು!
ಆಪ್ತಳಾದ ನಿನ್ನೊಳಗಿನ ಮಮತಾಮಯಿ ಹೆಣ್ಣು
ಈಗಲೂ ನಿಗೂಢ?! ಹೇಳು, ಆ ಬಗ್ಗೆಯೂ
ದೂರಿದೆ ನಿನ್ನ ಮೇಲೆ ನನ್ನದೊಂದು?
- ಪ್ರಸಾದ್.ಡಿ.ವಿ.
ಚಿತ್ರ ಕೃಪೆ: ಅಂತರ್ಜಾಲ
Super!!
ReplyDeleteಅಮ್ಮ ಅಂದರೆ....
ReplyDeleteಇಷ್ಟವಾಯಿತು ಭಾವ ಬರಹ...
ಸೂಪರ್ ಸೂಪರ್ ಸೂಪರ್ ....
ReplyDeleteನನಗೂ ಕೆಲವು ದೂರುಗಳಿವೆಯಲ್ಲ ಎಂಬುದು ಈ ಕವನ ಓದಿದ ಮೇಲೆ ನೆನಪಾಯಿತು :)
ಎಂದಿಗೂ ದೂರವಾಗದವಳಿಗೊಂದು 'ಹತ್ತಿರದ' ದೂರು!
ReplyDeleteಅಮ್ಮನಿಗೆ ಈ ಕವನ ಪೂರ್ತಿ ಓದಿ ಹೇಳಿ ಅರ್ಥ ಹೇಳಿದೆ. ಅನಂತ ಧನ್ಯವಾದಗಳು ನಿಮಗೆ...
ReplyDeleteಗೆಳೆಯ ಈ ದೂರಿಗೆ ನಾನು ಕೂಡ ಪಾಲುದಾರ..
ReplyDeleteಗೆಳೆಯ ಈ ದೂರಿಗೆ ನಾನು ಕೂಡ ಪಾಲುದಾರ..
ReplyDelete