ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 5 March 2013

ದಿನಕ್ಕೊಂದು ವಚನಗಳೂ, ಅದರ ಕರ್ತೃ ಬೇಲೂರರೂ



ಕಾವ್ಯವನ್ನು ಆಳವಾಗಿ ಓದಿಕೊಂಡು, ಇಂದಿನ ಕನ್ನಡ ಸಾಹಿತ್ಯದಲ್ಲಿ ತನ್ನದೇನಾದರೂ ನವೀನತೆಯ ಕೊಡುಗೆ ಕೊಡಬೇಕೆಂಬ ಸಾಹಿತಿಗಳ ಹಂಬಲವೇ ಸಾಹಿತ್ಯದ ದಿಕ್ಕನ್ನು ಇದುವರೆವಿಗೂ ನಿರ್ದೇಶಿಸುತ್ತಾ ಬಂದಿರುವುದು ಮತ್ತು ಸಾಹಿತ್ಯಿಕ ಪ್ರಯೋಗಗಳಿಗೆ ಕಾರಣೀಭೂತವಾಗಿರುವುದು. ಇಂಥ ವಿಷಯಗಳನ್ನು ತನ್ನ ಯೋಚನಾಧಾಟಿಗಳಲ್ಲಿ ಅಂತರ್ಗತ ಮಾಡಿಕೊಂಡು, ಸಾಹಿತ್ಯಿಕವಾಗಿ ಹೊಸದೇನಾದರೂ ಪ್ರಯೋಗಿಸುವ ಉತ್ಕಟ ಆಸ್ಥೆ, ಶ್ರದ್ಧೆ ಇರುವವರು ಬೇಲೂರು ರಘುನಂದನ್ ರವರು. ಬೇಲೂರರು ನನಗೆ ಅಂತರ್ಜಾಲದ ಮೂಲಕ ಪರಿಚಯವಾದವರು. ಸಾಹಿತ್ಯವನ್ನು ಓದಿ ಆಸ್ವಾದಿಸುವ ನನ್ನ ಅಸ್ವಾದನೆಯ ನಾಲಿಗೆಗೆ ಇವರ ವಚನಗಳು ಬಹಳವೇ ರುಚಿಸುತ್ತಿದ್ದವು. ಹೀಗೆ ಒಂದು ಗಾಢ ಸಾಹಿತ್ಯ ನನಗೆ ಸಿಕ್ಕಿದ್ದೇ ತಡ ನನ್ನೊಳಗಿನ ಓದುಗ ಜಾಗೃತವಾದನಲ್ಲದೆ, ಅದರ ಬಗ್ಗೆ ಒಂದು ಟಿಪ್ಪಣಿ ಬರೆಯಲು ಯೋಚಿಸಿದೆ. ಸಿಕ್ಕ ಒಂದು ಒಳ್ಳೆಯ ಓದಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂಬ ಭಾವ ನನ್ನದು.

ಬೇಲೂರರು ಈಗಾಗಲೇ ಸಾಹಿತ್ಯದ ಪಟ್ಟುಗಳನ್ನು ಬಲ್ಲ ಬರಹಗಾರರು. ಈಗಾಗಲೇ ನಾಲ್ಕು ಕವನಸಂಕಲನಗಳನ್ನು ಹೊರತಂದಿದ್ದಾರೆ (ಶ್ವೇತಪ್ರಿಯ, ಕನ್ನಡಿ ಮುಂದೆ ನಿಂತಾಗ, ಹಸುರು, ಕವಿಶೈಲದ ಕವಿತೆಗಳು). ಈಗಿನ ಅವರ ಭರವಸೆಯ ರಚನೆ “ದಿನಕ್ಕೊಂದು ವಚನ”. ವಚನಗಳು ಎಂದೊಡನೆಯ ಎಲ್ಲರಿಗೂ ನೆನಪಿಗೆ ಬರುವುದು ವಚನಗಳ ಹರಿಕಾರ ಬಸವಣ್ಣನ ಕಾಲದ ಕಾವ್ಯ ಸೃಷ್ಠಿಗಳು. ಬಸವಣ್ಣ, ಅಲ್ಲಮ, ಅಕ್ಕ, ಜೇಡರ ದಾಸಿಮ್ಮಯ್ಯ, ಸಿದ್ದರಾಮ ಹೀಗೆ ಒಬ್ಬಿಬ್ಬರಲ್ಲದೆ ಎಲ್ಲರೂ ದಿಗ್ಗಜರೇ. ವಚನ ಸಾಹಿತ್ಯದ ಸರ್ವ ಸಾಧ್ಯತೆಗಳನ್ನೂ ತಮ್ಮ ಸಾಹಿತ್ಯದ ಮೂಲಕ ದೋಚಿಬಿಟ್ಟಿದ್ದಾರೆ. ಅದಕ್ಕಾಗಿಯೇ ವಚನ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ಕನ್ನಡ ಕೊಟ್ಟ ಅತ್ಯಮೂಲ್ಯ ಕೊಡುಗೆ ಎಂಬ ಹೆಗ್ಗಳಿಕೆ ಇರುವುದು. ಸಾಧ್ಯತೆಗಳೆಲ್ಲಾ ಸೋರಿಹೋಗಿರುವ ವಚನ ಸಾಹಿತ್ಯ ಪ್ರಕಾರದಲ್ಲಿ ಬೇಲೂರು ರಘುನಂದನ್ ರವರು ಕೃಷಿ ಮಾಡುವುದನ್ನು ನೋಡಿ ನನಗೆ ಎಲ್ಲಿಲ್ಲದ ಆಶ್ಚರ್ಯವಾಗಿತ್ತು. ಇಂದಿನ ಸಾಧ್ಯತೆಗಳನ್ನೂ ಸಹ ವಚನಕಾರರು ಹಿಂದೆಯೇ ಬರೆದಿಟ್ಟಿರುವುದರಿಂದ ಬೇಲೂರರು ವಚನ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿರುವುದು ನನಗೆ ಕುತೂಹಲದ ಕೇಂದ್ರವಾಗಿತ್ತು. ಆಗಿನಿಂದ ಅವರ ವಚನಗಳನ್ನು ಆದಷ್ಟು ಆಳವಾಗಿ ಗ್ರಹಿಸಲು ಪ್ರಾರಂಭಿಸಿದೆ.

ವಚನ ಸಾಹಿತ್ಯಕ್ಕೆ ಇಂದಿನ ಅಗತ್ಯತೆಗಳ ಪೋಷಾಕು ತೊಡಿಸಿ, ಭಾಷೆಯನ್ನೂ ಈಗಿನ ಆಗುಗಳಿಗೊಗ್ಗಿಸಿ ಬರೆಯುತ್ತಿರವುದು ಬೇಲೂರರ ಸಾಂದರ್ಬಿಕ ಪ್ರಜ್ಞೆಗೆ ಹಿಡಿದ ಕನ್ನಡಿ. ಸಾಮಾಜಿಕ ಕಾಳಜಿ, ಸಾತ್ವಿಕ ಪ್ರಜ್ಞೆ, ಲೈಂಗಿಕ ಅಶಿಸ್ತಿನ ವಿರುದ್ಧದ ಧ್ವನಿ, ಸ್ತ್ರೀಯರನ್ನು ತಮ್ಮ ಭೋಗದ ವಸ್ತುಗಳಂತೆ ಬಳಸಿಕೊಳ್ಳುತ್ತಿರುವ ಸಮಾಜದ ಮೇಲಿನ ತಿರಸ್ಕಾರ, ಸ್ತ್ರೀಪರವಾದ ಧೋರಣೆಗಳು ಮತ್ತು ಸಮಾಜದ ಆಗುಗಳಿಗೆ ತುಡಿಯುವ ಸೂಕ್ಷ್ಮ ಸಂವೇಧಿತನ ರಘುನಂದನ್ ರ ವಚನಗಳಲ್ಲಿ ಢಾಳಾಗಿ ಸಿಗುತ್ತವೆ. ಸಮಾಜದಿಂದಲೇ ಸಮಾಜವನ್ನು ತಿದ್ದುವ ಕಾರ್ಯ ರಘುನಂದನ್ ರವರ ವಚನಗಳಿಂದ ಸಾಧ್ಯ. ಅವುಗಳು ಸಾಹಿತ್ಯಿಕವಾಗಿ ಮೌಲ್ಯ ಗಳಿಸಿಕೊಂಡಿರುವುದಲ್ಲದೆ, ಸಾಮಾಜಿಕವಾಗಿಯೂ ಮೌಲ್ಯ ಸಂಪಾದಿಸಿವೆ. ಕಾವ್ಯತ್ಮಕವಾಗಿ ಈ ವಚನಗಳನ್ನು ನೋಡುವುದಾದರೆ ಸಾಕಷ್ಟು ಚೆಂದದ ರೂಪಕಗಳು, ಉಪಮೆಗಳನ್ನು ದುಡಿಸಿ ಸಾಹಿತ್ಯಶೀಲ ಪ್ರತಿಮೆ ಕಟ್ಟಿದ್ದಾರೆ ಬೇಲೂರರು.

ಅಂಥದ್ದೊಂದು ನವ್ಯ ಪ್ರಯೋಗದ ಪ್ರತಿಮೆ ಈ ವಚನದಲ್ಲಿ ಸಿಗುತ್ತದೆ:

ಜಲ ಕುಡಿದ ಮರ ಬಲಿತು,
ಜೋಲು ಮೊಲೆಗಳೇ ಮರದ ತುಂಬೆಲ್ಲಾ.
ಹಲಸೊಳಗೆ ಕಸ ತುಂಬಲಾಗದು,
ವಿಷ ಸ್ರವಿಸಿ ಸಾವಿನ ರಸ ಅದು ಹರಿಸದು.
ಹೊರ ಮೈ ಮುಳ್ಳು ನೋಡಿ,
ಒಳ ಗರ್ಭವ ಪಾಪಸುಕಳ್ಳಿ ಅಂದರೆ,
ಕಣ್ಣಿನ ನರಗಳಿಗೆಲ್ಲಾ ಕನ್ನಡಕ ತೊಡಿಸಬೇಕು!

ಮನೆಯೆಂದರೆ ಹಲಸಿನಂತಲ್ಲ,
ಹೊಲಸು ಕಾಣದ ಏರ್ಪಾಟುಸೌಧ!
ಮನಸು ಕನಸಿಗೆಲ್ಲಾ ಬಣ್ಣದಬಳೆ ತೊಡಿಸಿ,
ಬರೀ ಸದ್ದು ಮಾಡುವ ಗದ್ದುಗೆಯು,
ಹಲಸಿನಂತಾದರೆ ಸರಿಯಲ್ಲವೇ ?
ಶ್ವೇತಪ್ರಿಯ ಗುರುವೆ .......

ಈ ವಚನದಲ್ಲಿ, ಹಲಸಿನ ಉಪಮೆಯಿಟ್ಟು ಒಂದು ಮನೆಯಾಗುವ ಸಾಧ್ಯತೆಯನ್ನು ಬಿಡಿಸಿಡಲು ಪ್ರಯತ್ನಿಸಿದ್ದಾರೆ ವಚನಕಾರ. ಹಲಸು ಹೊರಗೆ ನೋಡಲು ಮುಳ್ಳುಗಳನ್ನು ಹೊಂದಿದ್ದು ಅದರೊಳಗೆ ಕಸ ತುಂಬುವುದರಿಂದ ಮುಕ್ತವಾಗಿದೆ. ಕಸ ಅದರ ಹತ್ತಿರ ಸುಳಿದರೂ ಅದರ ಒಳ ನುಗ್ಗಲಾಗದು ಅದರಂತೆಯೇ ಒಂದು ಮನೆಯೂ ಆಗಬೇಕು. ಹೊಲಸುಗಳಿಂದ ದೂರ ಸರಿದು ಆದ ಏರ್ಪಾಟು ಸೌಧವಾಗದೆ ಹೊಲಸು ಮನೆಯ ಸುತ್ತ ಸುಳಿದರೂ ಮನೆಯ ಒಳ ನುಸುಳಲು ಸಾಧ್ಯವಾಗಬಾರದು. ಸಾಮರಸ್ಯವೇ ಮನೆಯ ಜೀವಾಳವಾಗಬೇಕು ಎಂಬುದನ್ನು ಸಾರಿದ್ದಾರೆ. ಈಗಾಗಲೇ ಸಮಾಜದಿಂದ ದೂರಾಗುತ್ತಿರುವ ’ತುಂಬು ಕುಟುಂಬ’ ದ ಪರಿಕಲ್ಪನೆಯನ್ನು ಈ ವಚನದ ಮೂಲಕ ಮತ್ತೆ ಬಿತ್ತಲು ಪ್ರಯತ್ನಿಸಿದ್ದಾರೆ.

ಬೇಲೂರರ ವಚನಗಳಲ್ಲಿ ಸಾಂಸಾರಿಕ ಸ್ವಸ್ಥತೆಯ ಕಾಳಜಿ  ವ್ಯಕ್ತವಾಗುವುದರ ಜೊತೆಗೆ ಸಾತ್ವಿಕ ಪ್ರಜ್ಞೆಯನ್ನೂ ಉತ್ತೇಜಿಸಲು ಪ್ರಯತ್ನಿಸಿದ್ದಾರೆ. ಹಣ ಮತ್ತು ಗುಣಗಳ ನಡುವಿನ ಮೌಲಿಕ ತುಲನೆ, ಮದುವೆಯ ನೆಪದಲ್ಲಿ ಹೆಣ್ಣಿನ ಮನಸ್ಸಿನ ಮೇಲಾಗುವ ದೌರ್ಜನ್ಯ ಮತ್ತು ಆಕೆಯನ್ನು ಒಬ್ಬ ಮನುಷ್ಯಳು ಎಂದೂ ಸಹ ಗೌರವಿಸದ ಕೆಲವು ಪುರುಷರ ಆಮಾನವೀಯ ನಡವಳಿಕೆಗಳನ್ನು ತಮ್ಮ ವಚನಗಳ ಮೂಲಕ ಕಟುವಾಗಿ ಖಂಡಿಸಿದ್ದಾರೆ. ಮತ್ತೊಂದು ವಚನದಲ್ಲಿ ಭಾಷೆಯೆಂಬುದು ಹಸುಗೂಸಿನ ತೊದಲು ನುಡಿಗಳಿಂದ ಪ್ರಾರಂಭವಾದರೆ, ಭಾಷೆಯನ್ನುಳಿಸಲು ಇನ್ಯಾವುದೇ ಹೆಚ್ಚಿನ ಕಾರ್ಯಕ್ರಮಗಳ ಅಗತ್ಯವಿಲ್ಲ ಎನ್ನುವ ಮೂಲಕ ಭಾಷಾಭಿಮಾನ ಮರೆತ ಕುರುಡು ಮತಿಗಳಿಗೆ ಸರಿಯಾಗಿ ಕುಟುಕಿದ್ದಾರೆ.

ಹೀಗೆ ಲೈಂಗಿಕ ಅಶಿಸ್ತಿನ ವಿರುದ್ಧದ ವಚನವೊಂದು ನನ್ನ ಗಮನ ಸೆಳೆಯಿತು:

ಕಾಮಕ್ಕೆ ಕಣ್ಣಿಲ್ಲ ಸರಿ, ಈಗ ಕಿವಿಯೂ ಇಲ್ಲ.
ರತಿದೇವನ ಮೈಯೆಲ್ಲಾ ನಾಲಿಗೆ ತೆರೆದ ಬಾಯಿ.
ರುಚಿ ಕಂಡ ತಂಬುಲದ ತಂಬಿಗೆಗೆ ಲೋಲುಪತೆಯ ಜೊಲ್ಲು.
ರತಿದೇವಿಯ ನರಮಂಡಲಕ್ಕೆ ಹುಸಿಬೀಗ ಜಡಿದು,
ಕಣ್ಣಾಟ ಮೈಮಾಟದ ಮಂತ್ರಕ್ಕೆ ಯಂತ್ರ ಮಗ್ನ.
ಎಳೆ ಕೊನರು,ಹೂದಳವಾಗಿ,ಬೀಸುಗತ್ತಿಯಾಗಿ,
ಮೆದುಳಲ್ಲಿ ಸಾವಿರ ಸಿಡಿಮದ್ದಿನ ಸ್ಪೋಟ ಸಿಡಿಸುವ ಕಾಮ,
ದೇಹದೊಳಗೆ ಕೋಟಿ ಒಯಾಸೀಸಿನ ಚಿಲುಮೆಯಾಗದೆ,
ಕಣ್ಣು ಕಿವಿ ಬಾಯಿ ಸ್ಪರ್ಶ ರುಚಿಗಳ ನಿಜ ರೂಪ ಕಳಚಿ,
ಹೆಳವಾದ ಹೆಣವಾಗುತ್ತಿದೆಯಲ್ಲ ಶ್ವೇತಪ್ರಿಯ ಗುರುವೆ.

ಈ ವಚನದಲ್ಲಿ ವಚನಕಾರರು, ಕಾಮವೆಂಬುದು ಹೇಗೆ ಹಾದಿ ಬೀದಿಯಲ್ಲಿ ಬಿಕರಿಯಾಗುವ ಸರಕಿನಂತಾಗಿದೆ ಎಂಬುದನ್ನು ಪ್ರಚುರಪಡಿಸುತ್ತಾ ಬೇಸರಗೊಳ್ಳುತ್ತಾರೆ. ’ಕಾಮಾತುರಾಣಾಂ ನಭಯಂ, ನಲಜ್ಜ’ ಎಂಬಂತೆ ಕಣ್ಣಿಲ್ಲದ ಕಾಮಕ್ಕೆ, ಈಗ ಕಿವಿಯೂ ಇಲ್ಲ. ನವರಸಗಳ ಸಂಗಮವಾದ ಈ ದೇಹದಲ್ಲಿ ಕಾಮದ ಭಾವ ಬೆಳೆದುನಿಂತದ್ದೇ ತಡ. ವಯಸ್ಸು, ಸಾಮಾಜಿಕ ಕಟ್ಟಲೆಗಳನ್ನು ಮೀರಿ ಕಾಮ ತನ್ನ ಮಂಗಾಟ ನಡೆಸುತ್ತದೆ. ಜೀವಕ್ಕೆ ತಂಪನ್ನೀಯುತ್ತಾ ಜೀವ ಸೆಲೆಯಾಗಬೇಕಿದ್ದ ಕಾಮ ನಿರ್ಲಜ್ಜತೆಯಿಂದ ಹೇಸಿಗೆಯಾಗುತ್ತಿದೆ ಎಂಬುದನ್ನು ವೇಧ್ಯವಾಗಿಸುತ್ತದೆ ಈ ವಚನ. ನಮ್ಮ ಈಗಿನ ಸಮಾಜದಲ್ಲಿ ಅವ್ಯಾಹತವಾಗಿ ಹೆಚ್ಚಾಗಿರುವ ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಅಮಾನವೀಯ ನಡವಳಿಕೆಗಳನ್ನು ನೋಡುತ್ತಿದ್ದರೆ ವಚನಕಾರರ ಈ ಅಭಿಪ್ರಾಯ ನಮ್ಮ ಸಾತ್ವಿಕ ಪ್ರಜ್ಞೆಗೆ ವೇಧ್ಯವಾಗುತ್ತದೆ.

ಇಂದಿನ ಆಗುಗಳಿಗೆ ಸಾಹಿತ್ಯಿಕವಾಗಿ ಸ್ಪಂದಿಸುತ್ತಾ, ತನ್ಮೂಲಕ ಸಮಾಜವನ್ನು ತಿದ್ದುತ್ತಾ ಸಾಹಿತ್ಯಿಕ ಜವಾಬ್ದಾರಿ ಮತ್ತು ಸಾಮಾಜಿಕ ಜವಾಬ್ದಾರಿಗಳೆರಡನ್ನೂ ನಿಭಾಯಿಸುತ್ತಿದ್ದಾರೆ ಬೇಲೂರರು. ಹೀಗೆ ವಚನಗಳ ಮೂಲಕ ಕೃಷಿ ಮುಂದುವರೆಸಿರುವ ಬೇಲೂರರು, ಹೆಣ್ಣು ಭ್ರೂಣ ಹತ್ಯೆ, ಆ ಮೂಲಕ ಸಮಾಜದಲ್ಲಿ ಸೃಷ್ಠಿಯಾಗುತ್ತಿರುವ ಲಿಂಗಾನುಪಾತದಲ್ಲಿನ ಅಂಕಿ ಅಂಶಗಳ ಅಸಮತೋಲನದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಬೂಟಾಟಿಕೆಯ ಭಕ್ತಿಗೆ ಅನ್ನ ಸಂತರ್ಪಣೆ ಏರ್ಪಡಿಸಿ, ಹಸಿವೆಂಬ ಉತ್ಸವ ಮೂರ್ತಿಗೆ ಒಂದು ದಿನದ ಜಾತ್ರೆ ಮಾಡಿ ಬಡವರನ್ನು ಬಡವರಾಗಿಯೇ ಉಳಿಸುವಂಥ ಪಟ್ಟಭದ್ರ ಶಕ್ತಿಗಳ ಬಗ್ಗೆಯೂ ಕಿಡಿ ಕಿಡಿಯಾಗಿದ್ದಾರೆ. ರಾಜಕೀಯ ನಾಯಕರ ಅಶಿಸ್ತಿನ ಮೇಲಾಟಗಳು, ಅತ್ತೆ ಸೊಸೆಯರ ನಡುವಿನ ಸಾಮರಸ್ಯದ ಅಗತ್ಯ, ಪ್ರೀತಿಯ ಆವಿಷ್ಕಾರ, ಸುಂದರ ಸಾಂಸಾರಿಕ ಪ್ರಜ್ಞೆಗಳು ಮತ್ತು ಬದಲಾವಣೆಯ ಮೂಲಗಳೂ ಬೇಲೂರರ ವಚನ ಸಾಹಿತ್ಯ ಕೃಷಿಯ ಹೊರತಾಗಿಲ್ಲ.

ಹಾಗೆ ಅಧ್ಯಾತ್ಮದ ಇಂಬಿನಲ್ಲಿ ನೆಮ್ಮದಿಯನ್ನು ಶೋಧಿಸುವ ವಚನವೊಂದು ನನ್ನ ಗಮನ ಸೆಳೆಯಿತು:

ನೂರೆಂಟು ನೆಲಮಾಳಿಗೆ ಅಗೆದರೂ ನೆಮ್ಮದಿಯ ನಿಧಿಯಿಲ್ಲ.
ದೃಷ್ಟಿಸೂಚಿ ಎತ್ತ ಸಾಗಿದರೂ ನೆಮ್ಮದಿ ಹೊತ್ತು ತರುವ,
ನೌಕೆಗಳಿಲ್ಲ, ವಿಮಾನಗಳಿಲ್ಲ, ಧೂಮಕೇತುಗಳೇ ಎಲ್ಲಾ.
ನೆಮ್ಮದಿ ಮಾರುತ್ತೇವೆಂದ ನಗೆಕೂಟಗಳು ನಗೆಪಾಟಲು.
ಸಮಾಲೋಚನೆ,ಸಾಯುವ ಮುನ್ನ ಒಂದೆರಡು ಮಾತುಕಥೆ.
ನಿತ್ಯ ದೂರದರ್ಶನದಲ್ಲಿ ದಾರಿ ತೋರುತ್ತೇವೆಂದು ನಿತ್ಯಕರ್ಮಕ್ಕೂ
ಮುನ್ನವೇ ಬಂದು ಹಚ್ಚಿದ ಹಸೆಗೆ ಹೆಸರಾಗೋ,
ಜ್ಯೋತಿಷಿಗಳಿಗೇ ಏಳುರಾಡು ಶನಿಯ ವಕ್ರದೃಷ್ಟಿ.
ಅತಿಯಾಸೆಯಂತೂ ಸವತಿಸವತಿಯರ ಮನದ ಗಂಟುಮುದ್ದೆ.
ಹಣವೆಂದರೆ ಸತ್ತ ಹೆಣ ನೆಮ್ಮದಿಯ ಮುಂದೆ ಹಿಂದೆ.
ಮಾರಾಟಕ್ಕೂ ಸಿಗದ ಹಾರಾಟಕ್ಕೂ ಸಿಗದ ಈ ನೆಮ್ಮದಿ
ಕಣ್ಣೆದುರಿಗಿದ್ದರೂ ಅರಿವಿಗೆ ಬಾರದ ಸರ್ವಾಂತರ್ಯಾಮಿ
ಶ್ವೇತಪ್ರಿಯ ಗುರುವೆ.

ಈ ವಚನದಲ್ಲಿ ನೆಮ್ಮದಿಯನ್ನು ನಿಧಿ ಎಂದಿರುವ ವಚನಕಾರ, ನಾವು ನೆಮ್ಮದಿಯನ್ನು ಹುಡುಕುತ್ತಾ ಪಡುವ ಪರಿಪಾಟಲುಗಳನ್ನು ಕಟ್ಟಿಕೊಟ್ಟಿದ್ದಾರೆ. ನಾವು ನೆಮ್ಮದಿ ಹರಸುತ್ತಾ ನಗೆಕೂಟಗಳು, ಸಮಾಲೋಚನೆಗಳು ಮತ್ತು ಜ್ಯೋತಿಷ್ಯದ ಮೊರೆ ಹೊಕ್ಕರೂ ನೆಮ್ಮದಿ ಮಾತ್ರ ಕನ್ನಡಿಯೊಳಗಿನ ಗಂಟಾಗಿ, ನಾವು ಮಾಡುವ ಎಲ್ಲಾ ಪ್ರಯತ್ನಗಳೂ ನಗೆಪಾಟಲಾಗುತ್ತಿವೆ ಎಂಬುದನ್ನು ಸಾರಿ ಹೇಳಿದ್ದಾರೆ. ಹೀಗೆ ಹೊರಗೆಲ್ಲಾ ನೆಮ್ಮದಿಯನ್ನು ಹುಡುಕುವ ನಾವು ಅದು ನಮ್ಮೊಳಗೇ ಇದೆ ಎಂಬುದನ್ನು ಅನುಭಾವಿಸಿಯೇ ಇಲ್ಲ ಎಂಬುದನ್ನು ಸಾರುತ್ತದೆ ಈ ರಚನೆ.

ತಮ್ಮ ವಚನಗಳ ಕೃಷಿಯ ಮೂಲಕ ಸಾಹಿತಿಗಳ ಮತ್ತು ಓದುಗರ ಯೋಚನಾಧಾಟಿ ಮತ್ತು ಅಭಿರುಚಿಗಳು ಇಂದಿನ ಆಗುಗಳಿಗೆ ಸ್ಪಂದಿಸಬೇಕು ಎಂದು ದುಡಿಯುತ್ತಿರುವವರು ಬೇಲೂರು ರಘುನಂದನ್ ರವರು. ಮತ್ತೆ ಮತ್ತೆ ಚರಿತ್ರೆಗಳು, ಪುರಾಣಗಳ ಬಗ್ಗೆಯೇ ಬರೆಯುತ್ತಿದ್ದರೆ ಹಿಂದಿನ ಸಾಹಿತ್ಯಗಳು ಹೇಳಿದ್ದಕ್ಕಿಂಥ ಭಿನ್ನವಾಗಿದ್ದೇನನ್ನೋ ಹೇಳಲು ಸಾಧ್ಯವಿಲ್ಲ ಎಂಬುದನ್ನು ಪ್ರಸ್ತುತ ಯುವ ಸಾಹಿತಿಗಳು ಅರ್ಥೈಸಿಕೊಳ್ಳಬೇಕು. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ಅದೇ ಬಿಂದುವಿನಲ್ಲಿ ಸೇರುವುದರಿಂದ ಯಾವುದೇ ಸಾಹಿತ್ಯಿಕ ಮೌಲ್ಯವನ್ನೂ ದಕ್ಕಿಸಿಕೊಳ್ಳಲಾಗದು. ಹಳಸಲಾದ ಸಾಹಿತ್ಯ ಹೊಲಸಾಗಲು ಸಾಕಷ್ಟು ಸಮಯವೇನೂ ಬೇಕಿಲ್ಲ. ಆದ್ದರಿಂದ ಸಾಹಿತ್ಯಿಕ ಪರಿಕರಗಳ ಆಮೂಲಾಗ್ರ ಬದಲಾವಣೆಯ ಅಗತ್ಯ ಇಂದಿನ ಕನ್ನಡ ಸಾಹಿತ್ಯಕ್ಕೆ ಖಂಡಿತಾ ಇದೆ. ಯಾವುದೇ ಸಾಹಿತ್ಯಿಕ ಕ್ರಾಂತಿಯಾದರೂ ಮೊದಲು ಪ್ರಾರಂಭವಾದದ್ದು ಸಮಾನ ಮನಸ್ಕ ಗುಂಪುಗಳ ಮೂಲಕವೇ. ಹಾಗೆ ಆಗಲು ಈ ವಿಚಾರಗಳು ಸಾಕಷ್ಟು ಚರ್ಚೆಗೆ ಬರಬೇಕು. ಆಗಷ್ಟೇ ಸಾಹಿತ್ಯಿಕ ಬದಲಾವಣೆಗಳನ್ನು ನೋಡಲು ಸಾಧ್ಯ.

ವಚನಕಾರರ ಇಂಥ ಸಾಹಿತ್ಯಿಕ ದಿಕ್ಕನ್ನು ನಿರ್ದೇಶಿಸಬಲ್ಲ ವಚನ ಇದು:

ಚರಿತೆಗಳು ಚಿರತೆಗಳಂತೆ,
ಭಯ ಪಡಿಸಿದ್ದೇ ಪಡಿಸಿದ್ದು.
ತೀರದ ದಾಹ,ಇಂಗದ ಹಸಿವು,
ಹೇಳಿದ್ದನ್ನೇ ಕೇಳಬೇಕೆಂಬ ಮೋಹ ಅದಕೆ.
ನೆನ್ನೆ ಹೇಳಿದ್ದನ್ನೇ ಇಂದು ಕೇಳುತಿದ್ದರೆ,
ಹೊಸ ಮೆದುಳು,ಮನಸೂ 
ಮುಸುರೆಯಲಿ ತೇಲುತ್ತಿದ್ದಂತೆ !
ಹಳೇ ಎಂಜಲಿಗಿಂತ ನಿತ್ಯ ಬರುವ ಗಂಜಲವೇ ಲೇಸು 
ಶ್ವೇತಪ್ರಿಯಗುರುವೆ 

ಇದು ವಚನಕಾರನ ಸಾಹಿತ್ಯದ ಗತಿ ಬದಲಾಯಿಸುವ ತುಡಿತದಿಂದಲೇ ಪಡಿಮೂಡಿದ ವಚನ. ಚರಿತ್ರೆಗಳಿಂದ ಮತ್ತು ಇತಿಹಾಸಗಳಿಂದ ಪ್ರೇರಿತರಾಗಿ ಹೇಳಿದ್ದನ್ನೇ ಹೇಳುವುದರಿಂದ ಇಂದಿನ ಕಾಲಘಟ್ಟದ ಸಾಹಿತ್ಯ ಹಾದಿ ತಪ್ಪುತ್ತದೆ ಮತ್ತು ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತದೆ. ಆದ್ದರಿಂದ ಇಂದಿನ ಆಗುಗಳು ಸಾಹಿತ್ಯದ ದಿಕ್ಕನ್ನು ನಿರ್ಧರಿಸಬೇಕು ಎಂಬುದು ವಚನಕಾರರ ಅಭಿಲಾಷೆ.

ಯಾವ ವಿಷಯವನ್ನೂ ಅನುಭಾವಿಸಿ, ಸಮಾಜಮುಖಿಯಾಗಿ ಬರೆಯುತ್ತಿರುವ ಬೇಲೂರು ರಘುನಂದನ್ ರವರು ಭವಿಷ್ಯತ್ತಿನಲ್ಲಿ ಇನ್ನಷ್ಟು ಮೌಲಿಕ ಸಾಹಿತ್ಯಗಳನ್ನು ಕೊಡಲಿ ಎಂಬ ಅಭಿಲಾಷೆಯೊಂದಿಗೆ ಅವರ ಮಹತ್ವಾಕಾಂಕ್ಷೆಯ ’ದಿನಕ್ಕೊಂದು ವಚನ’ ಸರಣಿಗೆ ಶುಭ ಕೋರುತ್ತೇನೆ.

-  ಪ್ರಸಾದ್.ಡಿ.ವಿ. 

6 comments:

  1. This comment has been removed by the author.

    ReplyDelete
  2. ಈ ಮೂಲಕ ಶ್ರೀಯುತ. ಬೇಲೂರು ರಘುನಂದನ್ ಅವರಂತಹ ಅಪ್ರತಿಮ ಕವಿಯೊಬ್ಬರನ್ನು ನಮಗೆ ಪರಿಚಯಿಸಿದ ನಿಮ್ಮೊಲುಮೆಗೆ ಶರಣು. ಅವರ ಬ್ಲಾಗ್ ಲಿಂಕ್ ದಯಮಾಡಿ ತಿಳಿಸಿರಿ.

    ReplyDelete
  3. ಬೆಲೂರರ ವಚನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ ವಿಶ್ಲೇಷಣೆ ಮಾಡಿ, ನಮ್ಮ ಗ್ರಹಿಕೆಗೆ ಸಿಗದ ಶಬ್ದಾರ್ಥಗಳನ್ನೂ ಸರಿಯಾಗಿ ಗ್ರಹಿಸಿ ನಮ್ಮ ಮುಂದೆ ಮಂಡಿಸಿರುವ ಪ್ರಸಾದ್ ರವರು ಅಭಿನಂದನಾರ್ಹರು. ಹಾಗೆಯೇ ಬೇಲೂರು ರಘುನಂದನ್ ರವರಿಗೆ ಶುಭಕಾಮನೆಗಳು. ಮುಂದುವರಿಯಲಿ ವಚನಗಳ ಜಾತ್ರೆ. ನಾವು ಆಗುವ ಅದರೂಲ್ಲೊಂದು ಪಾತ್ರ.

    ReplyDelete
  4. ಬೇಲೂರರದು ವಿಭಿನ್ನ ಚಿಂತನೆ ವಿಬಿನ್ನ ಶೈಲಿ
    ಉತ್ತಮವಾಗಿ ಪರಿಚಯ ಮಾಡಿಸಿದ್ದೀರಿ. ಹಾಗೆ ಅವರ ಬ್ಲಾಗ್ ನ ಲಿಂಕ್ ಸಹ ಹಾಕಿದ್ದಲ್ಲಿ ಅನುಕೂಲವಾಗುತ್ತಿತ್ತು.

    ReplyDelete