ಅವನು
--------
ನನಗಿನ್ನೂ ಅರ್ಥವಾಗಿಲ್ಲ,
ಆಕೆ ನನ್ನಿಂದ
ದೂರಾದದ್ದಾದರೂ ಯಾಕೆಂದು?
ಅವಳಿಲ್ಲದ ದಿನಗಳಲಿ
ತೀರಿಲ್ಲದ ಬದುಕಲ್ಲಿ
ಉಳಿದದ್ದಾದರೂ ಏನೆಂದು?
ಆಕೆ ವಿಮುಖಳಾದಾಗಲೆಲ್ಲಾ
ಸಾಂತ್ವನ ಸುರಿದು,
ಕೈಯ್ಯಲ್ಲಿ ಕೈ ಹಿಡಿದು,
ಮಳೆಯಲ್ಲಿ ನೆನೆಯದಂತೆ,
ಎದೆಗವುಚಿಕೊಂಡದ್ದು!
ಅವಳು ಸುಮ್ಮನಿದ್ದು,
ನನ್ನನ್ನು ತಬ್ಬಿದ್ದು,
ಅಳುವಾಗಲೆಲ್ಲ ನನ್ನೆದೆಯೊಳಗೆ
ಮೊಗ ಉದುಗಿಸಿ ಬಿಕ್ಕಿದ್ದು ಯಾಕೆಂದು?
ಅರ್ಥವಾಗಲಿಲ್ಲ ನನಗೆ
ನೆನಪುಗಳೊಂದಿಗೆ ಒಬ್ಬಂಟಿ ಪಯಣ
ನನಗೊಬ್ಬನಿಗ್ಯಾಕೆಂದು?
ಅವಳು ನೋಡಲೆಂದೇ
ವಿಧ-ವಿಧದ ಕೇಶ ವಿನ್ಯಾಸ,
ಅವಳ ಮೆಚ್ಚಿಸಲೆಂದೇ
ಗಿಟ್ಟಿಸಿಕೊಂಡ ಉದ್ಯೋಗ,
ಅವಳಿಗಾಗಿ ಬದಲಿಸಿಕೊಂಡ
ಜೀವನ ಶೈಲಿ,
ಬಿಟ್ಟ ಸಿಗರೇಟು ಸೇವನೆ!
ನನ್ನ ಪ್ರೀತಿಯನ್ನು ಅವಳಿಗರ್ಥ
ಮಾಡಿಸಲು ಹೆಣಗಿದ್ದು!
ಇಷ್ಟೆಲ್ಲದರ ನಡುವೆ
ಅರ್ಥವಾಗಲಿಲ್ಲ ನನಗೆ,
ಆಕೆ ನನ್ನನ್ನು ಬಿಟ್ಟದ್ದು ಯಾಕೆಂದು?
ಅವಳ ಮದುವೆಗೆ ನನ್ನನ್ನು
ಬರಲೇ ಬೇಕೆಂದು
ಕರೆದದ್ದು ಯಾಕೆಂದು?
ಅವಳು
--------
ಅವನು ನನ್ನನ್ನು
ಪ್ರೀತಿಸಿದ್ದನೇನೋ ಹೌದು,
ನಾನೂ ಪ್ರೀತಿಸಿದ್ದಿರಬಹುದು,
ಆದರೆ ನಾನೆಂದು ಒಪ್ಪಿಲ್ಲ!
ಅದಕ್ಕಾಗೆ ಗೆಳೆಯ
ಎಂದಲ್ಲದೆ ಮತ್ತೇನೂ ಕರೆದಿಲ್ಲ!
ಆಗಾಗ ತಲೆ ಒರಗಿಸಿದ್ದುಂಟು,
ಅತ್ತು ಕರೆದದ್ದುಂಟು, ನಗುವ
ಬಯಸಿದ್ದುಂಟು!
ಹೊರಗೆ ಬೇಡವೆಂದರೂ,
ಒಳಗೊಳಗೇ ಬೇಕೆನಿಸಿದ್ದುಂಟು!
ಆದರೆ ಪೋಷಕರ ಮನವ
ನೋಯಿಸಲಾರೆ,
ಅವರ ಮಾನವ ಬೀದಿಗೆ ತಂದ
ಕೆಟ್ಟ ಮಗಳಾಗಲಾರೆ!
ಅವರಾದರೂ ಹೆತ್ತವರು,
ಹಾಳು ಬಾವಿಗೆ ತಳ್ಳಿಯಾರೇ?
ಜೋಪಾನ ಮಾಡಲೆಂದೇ
ಬಂದವನು ಅವನು,
ಅವನ ಜೀವನ ಸ್ಪರ್ಶದಿ
ಪುಳಕಿತಗೊಂಡೆನು!
ಅವನೊಲವಿಗೆ ಋಣಿಯೂ ನಾನು!
ಬದುಕ ಹೆಜ್ಜೆಯ ನಡುವೆ,
ಗೆಳೆಯನ ನೆನಪಿರಲೆಂದು
ಅವನನ್ನೂ ಕರೆದು ಬಂದೆ
ನನ್ನ ಮದುವೆಗೆ!
ನಾನು
---------
ಪ್ರೀತಿ ಪ್ರೇಮವೆಂಬ
ಈ ಕ್ಲಿಷ್ಟ ಎಳೆಗಳನು
ನಾ ವಿಮರ್ಶಿಸಿ
ಕೂರಲಾರೆ!
ಅವಳು - ಅವನಲ್ಲಿ
ಬೆರೆತ ನಮ್ಮನ್ನು
ನಾ ಹುಡುಕುತ್ತಿದ್ದೇನೆ!
ಅವಳು - ಅವನಲ್ಲಿ
ಬೆರೆತ ನಿಮ್ಮನ್ನೂ
ನಾ ಹುಡುಕುತ್ತಿದ್ದೇನೆ!
- ಪ್ರಸಾದ್.ಡಿ.ವಿ.
ಚಿತ್ರ ಕೃಪೆ: ಅಂತರ್ಜಾಲ
ಅವಳು ನಿಮ್ಮಲ್ಲಿ, ನೀವವಳಲ್ಲಿ ಲೀನವಾಗಿ ಒಲವ ಬಂಧದಲ್ಲಿ. ಅದನ್ನೂ ನಾವು ಎದುರು ನೋಡುತ್ತೇವೆ!
ReplyDeleteಹೊಸ ಪ್ರಸಾದ ಪ್ರಯೋಗ!
ತ್ರಿಮುಖ ಕವನ ಪ್ರಯೋಗ ನನಗೆ ಇಷ್ಟವಾಯಿತು.
ReplyDeleteಅವರವರ ಭಾವಕ್ಕೆ ಎನ್ನುವಂತೆ ನಿಮ್ಮ ಈ ವಿಭಿನ್ನತೆ ನನಗೆ ನೆಚ್ಚಿಗೆಯಾಯ್ತು.
"ಅವಳು - ಅವನಲ್ಲಿ
ಬೆರೆತ ನಮ್ಮನ್ನು
ನಾ ಹುಡುಕುತ್ತಿದ್ದೇನೆ!"
ಇಲ್ಲಿದೆ ನಿಜವಾದ ಕಾವ್ಯ.