ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday, 1 December 2012

ಕೈ ಬೀಸಿ ಕರೆದ ಕರ್ವಾಲೊ!



ನನಗೆ, ಒಬ್ಬ ಬರಹಗಾರ ಎಷ್ಟು ಸೃಜನಾತ್ಮಕವಾಗಿ ಯೋಚಿಸಬೇಕೆಂಬುದರ ದಿಕ್ಕಾದುದು ’ಕರ್ವಾಲೊ’. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರೇ ಹೇಳುವಂತೆ, ’ಸೃಷ್ಟಿಶೀಲ ಬರಹಗಾರ ಅನೇಕ ವೇಳೆ ತನ್ನ ಸಿದ್ಧಾಂತ, ತತ್ವ, ತರ್ಕ ಇತ್ಯಾದಿಗಳ ಇತಿಮಿತಿಗಳನ್ನು ತಿಳಿಯಲು ಅದನ್ನು ಅತಿರೇಖದ ಅಂಚಿನವರೆಗೆ ಒಯ್ಯಬೇಕಾಗುತ್ತದೆ. ಈ ರೀತಿ ತನ್ನ ಮಿತಿಯನ್ನು ಮೀರಿಯೇ ತನ್ನ ಸರಹದ್ದುಗಳನ್ನರಿಯಬೇಕಾದ ಅನಿವಾರ್ಯತೆ ಇರುವುದರಿಂದಲೇ ಎಲ್ಲಾ ಕಲಾಸೃಷ್ಟಿಯೂ ಅಪರಿಪೂರ್ಣತೆಯನ್ನು ಅನುಷಂಗಿಕವಾಗಿ ಒಳಗೊಂಡಿರುತ್ತದೆಂಬುದು ನನ್ನ ಭಾವನೆ’ ಎನ್ನುತ್ತಾರೆ. ಎಷ್ಟು ಸತ್ಯವಾದ ಮಾತು ಅಲ್ಲವೇ, ತನ್ನ ಸಿದ್ಧಾಂತ, ತತ್ವ ಮತ್ತು ತರ್ಕಗಳ ಪರಿಧಿಯನ್ನು ಅರಿಯುವ ಸೃಷ್ಟಿ ಅದಾಗಿದ್ದ ಮೇಲೆ ಅದರಲ್ಲಿ ಅನುಷಂಗಿಕವಾಗಿ ಅಪರಿಪೂರ್ಣತೆ ಸಹಜವೇ. ಇದು ಒಬ್ಬ ಬರಹಗಾರನ ದಿಕ್ಕನ್ನು ನಿರ್ದೇಶಿಸುವಷ್ಟು ಸತ್ವಯುತವಾದ ಪ್ರಸ್ತುತಿ ಎಂಬುದು ನನ್ನ ಭಾವನೆಯೂ ಹೌದು.

ಓದುವುದು ಕಡಿಮೆಯಾಗಿ ಬಹಳ ದಿನಗಳಾಗಿದ್ದವು. ಓದು ಎಂಬುದೂ ಮುಖ ಪುಸ್ತಕದ ಗೆಳೆಯರ ಬರಹಗಳಿಗೆ ಸೀಮಿತವಾಗಿತ್ತು. ನನ್ನ ಕಾಲೇಜಿನ ದಿನಗಳಲ್ಲಿ ಎಸ್.ಎಲ್.ಭೈರಪ್ಪ, ಜಿಎಸ್ಸೆಸ್, ಕುವೆಂಪು, ಎಂಡಮೂರಿ ಮತ್ತು ರವಿ ಬೆಳಗೆರೆಯವರನ್ನು ಖುಷಿಯಿಂದ ಓದುತ್ತಿದ್ದ ನಾನು, ಅದೇನೋ ಕೆಲಸ ಅಂತಾದ ಮೇಲೆ ಓದು ಕಡಿಮೆಯಾಯ್ತೆಂದೇ ಹೇಳಬೇಕು. ಇತ್ತೀಚೆಗೆ ಸುಮ್ಮನೆ ಎತ್ತಿಕೊಂಡ ಪುಸ್ತಕ ತೇಜಸ್ವಿಯವರ ’ಕರ್ವಾಲೊ’.

ಫಿಲಾಸಫಿ ಮತ್ತು ತತ್ವಶಾಸ್ತ್ರವನ್ನು ವಿಷಯವಾಗಿ ಆರಿಸಿಕೊಂಡು ಎಮ್.ಎ. ಪದವಿ ಮಾಡಿಕೊಂಡ ತೇಜಸ್ವಿಯವರಿಗೆ ಪ್ರಕೃತಿ ವೈಚಿತ್ರಗಳ ಬಗ್ಗೆ ಇಷ್ಟು ಮಟ್ಟಿಗಿನ ಒಳನೋಟ ಸಾಧ್ಯವಾದದ್ದಾದರೂ ಹೇಗೆ ಎಂಬುದು ನನ್ನನ್ನು ಕಾಡುವ ಪ್ರಶ್ನೆ. ಪ್ರಕೃತಿ ವೈಚಿತ್ರಗಳ ಬಗ್ಗೆ ನಮಗರಿವಿಲ್ಲದಂತೆ ಆಸಕ್ತಿ ಮೂಡಿಸಬಲ್ಲ ಕಾದಂಬರಿ ಕರ್ವಾಲೊ. ಕಥಾನಾಯಕ ಕರ್ವಾಲೊ, ಒಬ್ಬ ಸಸ್ಯ ವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞ. ನೀವು ಓದಿಕೊಂಡು ಹೋದಂತೆ ಅವರು ಒಂದು ನಿಗೂಢವೂ, ಒಬ್ಬ ತತ್ವ ಜ್ಞಾನಿಯೂ, ಮಾನವ, ಜೀವಿ ಮತ್ತು ಸಸ್ಯ ಸಂಕುಲಗಳ ಕೊಂಡಿಯಾಗಿಯೂ ಕಾಣುತ್ತಾರೆ. ಇನ್ನುಳಿದ ಪಾತ್ರಗಳು ಮಂದಣ್ಣ, ಕರಿಯಪ್ಪ, ಪ್ರಭಾಕರ, ಲೇಖಕರು ಮತ್ತು ಕಿವಿ. ಮಂದಣ್ಣ ಒಬ್ಬ ಹುಟ್ಟು ನಿಸರ್ಗ ತಜ್ಞ! ಮೊದಲಲ್ಲಿ ಅವನೊಬ್ಬ ಹೆಡ್ಡನಂತೆ ಕಂಡು ಬಂದರೂ ಎಲ್ಲರಲ್ಲಿಯೂ ಅಸಾಮಾನ್ಯವಾದುದ್ದೇನೋ ಇರುತ್ತದೆ ಎಂಬ ವಾದಕ್ಕೆ ಅನ್ವರ್ಥವಾಗಿ ನಿಲ್ಲುತ್ತಾನೆ. ಓದುಗರನ್ನು ಅಚ್ಚರಿಗೊಳಿಸುತ್ತಾನೆ. ಕರಿಯಪ್ಪ ಉದ್ದುದ್ದವಾದ ಮರಗಳನ್ನು ಹತ್ತುವ ಮತ್ತು ಮಾಂಸಾಹಾರಗಳನ್ನು ಹದವಾಗಿ ತಯಾರಿಸುವ ಬಾಣಸಿಗ! ಕಾದಂಬರಿಯ ಉದ್ದಕ್ಕೂ ಲವಲವಿಕೆ ಉಕ್ಕಿಸುತ್ತಾ, ನಗಿಸುತ್ತಾ ಓದಿಸುವುದು ಅವನ ಹೆಗ್ಗಳಿಕೆ! ಪ್ರಭಾಕರ ಒಬ್ಬ ಫೋಟೋಗ್ರಾಫರ್, ಪ್ರಕೃತಿಯ ವೈಚಿತ್ರಗಳನ್ನು ಸೆರೆ ಹಿಡಿಯಲು ಕರ್ವಾಲೊರವರೊಂದಿಗೆ ಇರುತ್ತಾನೆ. ಪ್ರಭಾಕರನ ಕ್ಯಾಮೆರಾದ ದೃಷ್ಟಿಕೋನಗಳನ್ನು ಕರ್ವಾಲೊ ಸೂಕ್ಷ್ಮಗೊಳಿಸಿರುವ ಕಾರಣದಿಂದಲೇ, ಅವನು ಅವರೊಂದಿಗೆ ಉಳಿದಿರುತ್ತಾನೆ ಅವರ ಸಂಶೋಧನೆಗಳಿಗೆ ಒತ್ತಾಸೆಯಾಗಿ.

ಇವೆಲ್ಲಾ ಪಾತ್ರಗಳನ್ನು ಒಂದು ತಹಬಂದಿಗೆ ತಂದು, ತಮ್ಮನ್ನೂ ನಿರೂಪಿಸಿಕೊಳ್ಳುವವರು ಲೇಖಕ. ಲೇಖಕ ಇಲ್ಲಿ ಒಬ್ಬ ಅಲೆಮಾರಿ ಮನೋಭಾವದ, ಮಾನವ ಸಹಜ ಭಾವಗಳನ್ನು ಹೊಂದಿರುವ, ಆರಕ್ಕೇರದ ಮೂರಕ್ಕಿಳಿಯದ ಬೇಸಾಯವನ್ನು ನೆಚ್ಚಿಕೊಂಡ ಕೃಷಿಕ. ಕೃಷಿಕರ ಕಷ್ಟಗಳು ಮತ್ತು ಅವರನುಭವಿಸುವ ತುಮುಲಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ತೇಜಸ್ವಿ. ಏಕತಾನತೆ ಬದುಕಿನ ಜಡ ಎಂದು ಭಾವಿಸುವ ಲೇಖಕ, ಈ ಕಷ್ಟಗಳ ಸರಮಾಲೆಯಲ್ಲಿ ಕೊಸರುತ್ತಾ ತನ್ನ ಜಮೀನನ್ನು ಮಾರಲು ಪ್ರಯತ್ನಿಸುತ್ತಾರೆ, ಮಾರುವುದಿಲ್ಲ! ಕೃಷಿಕನ ಕಷ್ಟದ ತೀವ್ರತೆ ಎಷ್ಟೆಂಬುದು ಓದುಗರ ಗಮನಕ್ಕೆ ಬರಲಿ ಎಂಬುದು ಲೇಖಕರ ಉದ್ದೇಶವಾಗಿತ್ತು ಎನಿಸುತ್ತದೆ! ಕಿವಿ ಲೇಖಕರ ಮನೆಯಲ್ಲಿ ಹುಟ್ಟಿ ಬೆಳೆದ ಸ್ಪ್ಯಾನಿಶ್ ನಾಯಿ, ಕಾದಂಬರಿಯ ಉದ್ದಕ್ಕೂ ಲೇಖಕರ ಅಪ್ತ ಮತ್ತು ಶಿಕಾರಿಯಲ್ಲಿ ಅವರಿಗೆ ಜೊತೆಗಾರ. ಇವೆಲ್ಲಾ ಪಾತ್ರಗಳನ್ನು ಕಾದಂಬರಿಯ ಹಂದರದೊಳಗೆ ಬಂಧಿಸಿರುವ ಅಪರೂಪದ ಪ್ರಾಣಿ, ದಶ-ದಶಮಾನಗಳ ಹಿಂದಿನ ’ಹಾರುವ ಓತಿ’. ಡೈನೋಸಾರ್ ನಂತೆ ಕಾಣಿಸಿಕೊಳ್ಳುವ ಅದು, ತನ್ನ ಪಕ್ಕೆಲುಬುಗಳ ಪಕ್ಕದಲ್ಲಿ ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತದೆ ಎಂಬುದು ಕರ್ವಾಲೊ ರವರ ನಂಬಿಕೆ. ಮಂದಣ್ಣ ಹೇಳುವಂತೆ ಅದು ನಾರ್ವೆ ಹಳ್ಳಿಯ ಸುತ್ತ ಮುತ್ತಲ ಪಶ್ಚಿಮ ಘಟ್ಟಗಳ ದಟ್ಟ ಕಾನನದಲ್ಲಿ ಇರುವುದು ಎಂಬ ಮೂಲದ ಜಾಡು ಹಿಡಿದು ಹೋಗುವ ಇವರ ಗುಂಪಿಗೆ ಹಾರುವ ಓತಿ ಸಿಕ್ಕೀತೆ? ಇವರಿಗೆ ಜೀವಿ ವೈವಿಧ್ಯಗಳ ಒಳಸುರುಳಿಗಳನ್ನು ಬಿಚ್ಚಿಡಲು ಸಹಕರಿಸೀತೇ? ಎಂಬುದೇ ಕಾದಂಬರಿಯ ಹಂದರ.



ತೇಜಸ್ವಿಯವರ ಬರವಣಿಗೆಯ ಶೈಲಿ ತುಂಬಾ ಸಾಮಾನ್ಯವಾಗಿದ್ದು, ಯುವ ಬರಹಗಾರರಿಗೆ ಮಾದರಿಯಾಗಬಲ್ಲದು. ಅಧ್ಯಾತ್ಮ, ಧರ್ಮ, ಧ್ಯಾನಗಳಂತೆ ವಿಜ್ಞಾನ ಮತ್ತು ಜೀವಿ ವೈವಿಧ್ಯವೂ ಸಾಕ್ಷಾತ್ಕಾರದ ಹಾದಿ ಎಂಬುದನ್ನು ವೇಧ್ಯವಾಗಿಸುವ ಕಾದಂಬರಿ ಕರ್ವಾಲೊ. ಓದುಗರಿಗೆ ಜೀವ ವೈವಿಧ್ಯಗಳ ಬಗ್ಗೆ ಆಸಕ್ತಿಯಿದ್ದರಂತೂ ಕರ್ವಾಲೊ, ರಸದೌತಣ! ಎಲ್ಲರೂ ’ಕರ್ವಾಲೊ’ ವನ್ನು ಒಮ್ಮೆಯಾದರೂ ಓದಲೇ ಬೇಕು.

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

2 comments:

  1. ಒಮ್ಮೆ ಓದಿದರೆ ಮತ್ತೆ ಮತ್ತೆ ಓದಲು ಎತ್ತಿಕೊಳ್ಳುವಂತೆ ಮಾಡುತ್ತದೆ ಕರ್ವಾಲೋ..

    ReplyDelete
  2. oduva kushiyalli omme kaadu suttisi baruva kaadambari edu...
    prati putagalu aa varnanegala joteyalli kondoyuva saamartyaviruva pustaka edu.....

    ReplyDelete