ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday, 26 December 2014

ಸಿಗದೆ ಸತ್ತ ಸಾಲು!


ನಿನ್ನ ಕಣ್ಣ ಇಶಾರಿಗೆ
ಸಿಗದ ಸಾಲೊಂದು
ನೆನ್ನೆ ಸತ್ತುಹೋಯ್ತು,
ಅದರಲೆಂತಹ ಪದ್ಯವಿತ್ತೊ,
ಗದ್ಯವಿತ್ತೊ,
ಎದೆಯ ಬಾಣಲೆಯಲಿ
ಶುದ್ಧವಾಗಿ ಕುದ್ದ ಹದವಿತ್ತೊ?
ಅರಿಯುವ ಮುನ್ನವೇ
ಮುಗಿಯುವ ಧಾವಂತ,
ಬರೆಸಿಕೊಳ್ಳದೆ ಹೋಯ್ತು!

ಬೆಳದಿಂಗಳ ಚಂದಿರನ
ಕಚ್ಚಿ ತಿನ್ನುವ ಆಸೆಗೆ,
ನಿನ್ನ ಕೆನ್ನೆ ನೋಡಿ ಕರುಬುವ ಸಾಲು,
ನಾನು ಹುಡುಕಾಡಿ ತಂದ
ಮೊಲ್ಲೆ ಮುಡಿಸುವ ಸಾಲು,
ಒಲವ ದೀವಟಿಗೆಗೆ ಬತ್ತಿ ನೇಯುವ ಸಾಲು,
ನಮ್ಮಿಬ್ಬರ ಸಂಜೆಯ ಮಬ್ಬಿಗೆ
ಹಲ್ಲು ಸೆಟ್ಟಾದ ಸಾಲು,
ಅಲ್ಲೇ ಅಸು ನೀಗಿದೆ ನೋಡು
ನೀನು ನೋಡದೆ ಉಳಿದ ಸಾಲು!

ರಕ್ತ, ಮಾಂಸ, ಮಜ್ಜೆಗಳನ್ನೆಲ್ಲಾ
ತುಂಬಿಕೊಂಡೇ ಬೆಳೆದಿತ್ತು,
ಸಾಲದ್ದಕ್ಕೆ ಕನಸುಗಳ ಕಸುವಿತ್ತು,
ಧರ್ಮ ಬೆರೆಸಿದ ಕತ್ತಲ ಸಂಚಿಗೆ
ಅನೀಮಿಕ್ ಬಿಳಿ ರಕ್ತಕಣಗಳು,
ಪ್ರತಿರೋಧಿಸದೆ ಕುಂತಿವೆ ಗೆಳತಿ,
"ಐ ಲವ್ ಯೂ" ಅಂತಲೂ ಅನ್ನದೆ
ನಿನ್ನಿಶಾರಿಗೂ ಸಿಕ್ಕದೆ
ನೋವು, ನಂಜಿಗೆ ಹಲ್ಲು ಗಿಂಜಿದೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಅನ್ವರ್ಥವಾಗಿಯೇ ಉಳಿದೆ!


ಸುಲಭಕ್ಕೆ ಸಿಕ್ಕಿದ್ದು,
ಅನುಮಾನಕ್ಕೀಡಾಗಿದೆ,
ಪ್ರಶ್ನಿಸುತ್ತಾ
ನೆಮ್ಮದಿ ಕಳೆದುಹೋಗಿದೆ,
ನೋವುಗಳಿಗೆ
ಪುಳಕಗೊಂಡು ಅತಿಯಾಗಿ ಸುಖಿಯಾದೆ,
ನೀವು ಹುಚ್ಚನೆಂದರೆ ಹೌದು?
ಮಿತಿ ಮೀರಿದರೇನು,
ನಾನು ನಾನಾಗಿಯೇ ಉಳಿದೆ!

ಕೆನ್ನೆ ಕೆನ್ನೆ ಬಡಿದುಕೊಂಡು
ಜನಜಂಗುಳಿಯ ನಡುವೆ
ತಾಸುಗಟ್ಟಲೆ ಕಾದರೆ ಕ್ಷಣಗಳ ಮಟ್ಟಿಗೆ
ಕಾಣಿಸಿಕೊಳ್ಳುತ್ತಾನೆ,
ಉಧೋ ಉಧೋ ದೇವರೆನ್ನು,
ಎಂದರು... ನಾನು ನಕ್ಕುಬಿಟ್ಟೆ,
ಪಾಪ ಅಲ್ಲಿಲ್ಲದ ದೇವರೂ ನಕ್ಕುಬಿಟ್ಟ,
ಬಹಿಷ್ಕಾರಗೊಂಡು ಅನ್ನವಿರದವರ
ಮನೆಯಲ್ಲಿ ಹಸಿವಾಗಿದ್ದಾನಂತೆ,
ಅವರಂತೂ
ದಿನ ಹೊಟ್ಟೆತುಂಬಿಸುವ ಪೂಜೆ ಮಾಡುವರು,
ಸಂತೃಪ್ತಿಯಾಗಿಲ್ಲ
ಆದರೂ ಬದುಕಿರುವನು ಜೀವದಂತೆ,
ದೇವರ ನಂಬದ ನಾನು
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರ್ಕಾರವೊಂದು ಸರ್ವಾನುಮತದಿ
ವೋಟು ಗಿಟ್ಟಿಸಿ
ಅಧಿಕಾರ ಹಿಡಿಯಿತೆಂದುಕೊಳ್ಳಿ,
ಚುಕ್ಕಾಣಿಯ ಮೇಲೆ ಕಣ್ಣಿರಲಿ,
ನಾಯಕರೆಂದರೆ ನಾಯಕರು,
"ಡೊಂಕು ಬಾಲದ ನಾಯಕರು..."
ನೇರೆ ರಸ್ತೆಯಲಿ ಅಂಕುಡೊಂಕಾಗಿ ನುಸುಳಿದರೆ?
ಎಂದಿದ್ದೆ ಬಂತು,
ನಾಯಕರಿಲ್ಲದ ಪ್ರತಿಪಕ್ಷದ ಪಟ್ಟ ನನಗೆ,
ವ್ಯಂಗ್ಯಕ್ಕೆ ಬೆತ್ತವಾದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಮುಂದೆ ಮುಂದೆ ನಡೆದವಳ ಹಿಂದೆ ಅಲೆದೆ,
ಬೇಡವೆಂದರೂ ಕಾಡಿ ಗೋಗರೆದೆ,
ಒಲಿದ ಹೂವು ಮುಡಿಯೇರುವ ಮುನ್ನ,
ವೈಫಲ್ಯದ ಹೊಳೆಯಲಿ ಕೊಚ್ಚಿ ಹೋಗಿದೆ,
ಅಂಗಾತ ಬಿದ್ದವನ
ಎದೆಬಿರಿವ ನೋವಿಗೆ ಮುಲುಗುಟ್ಟಿ,
ನೆನಪುಗಳ ಮುಲಾಮು ಹಚ್ಚುವೆ,
ಸುಖಕ್ಕೆ ಸಿಹಿಯಾಗಿ ನರಳುವೆ,
ಕವಿತೆಯೆಂದರು, ಕವಿಯೆಂದರು,
ಎದರಿ ಓಡಿದೆ, ಅಲೆದೆಡೆಯಲ್ಲೆ ಬದುಕಿದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರಿಯಿದ್ದನ್ನೂ ಅನುಮಾನಿಸಿ,
ಸರಿಯಿಲ್ಲದ್ದನ್ನೂ ಪ್ರಶ್ನಿಸುವೆ,
ನೀವು ಆಗದೆಂಬಂತೆಯೇ ಬದುಕುವೆ,
ನೀನ್ಯಾಕೆ ಹೀಗೆಂದರೆ?
ನಾನೆನ್ನಲಿ? ನಾನಂತೂ ಹೀಗೇ..
ಅನ್ವರ್ಥವಾಗಿಯೂ ಇದ್ದೆ,
ಅನರ್ಥವಾಗಿಯೂ ಇದ್ದೆ,
ಬಹು ಅರ್ಥವಾಗಿಯೂ ಇದ್ದೆ,
ಸಂಕೋಚ, ಸಂಕುಚಿತ, ಹೇಗೆಲ್ಲಾ ಇದ್ದೆ,
ಒಟ್ಟು ಇದ್ದೆ,
ಅನ್ನ ತಿನ್ನುವ ಮನುಷ್ಯನಾಗಿಯೇ ಉಳಿದೆ,
ಅಟ್ ಲೀಸ್ಟ್ ಬದುಕಿಯೇ ಇದ್ದೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Sunday, 14 December 2014

ಬಟವಾಡೆಗೆ ಬಣ್ಣಗಳು!


ಬಣ್ಣಗಳನು
ಮಾರಲು ತಂದಿದ್ದೇನೆ…
“ಕಾಸಿಗೊಂದು,
ಕೊಸರಿಗೊಂದೆಂದು ಕೇಳಬೇಡಿ”;
“ಸಾಲ ಕೇಳಿ, ಸ್ನೇಹ ಕಳೆದುಕೊಳ್ಳಬೇಡಿ..”
ಎಂಬ್ಯಾವ ಫಲಕಗಳೂ ಇಲ್ಲಿಲ್ಲ…
ಬಿಟ್ಟಿಯಾಗೇ ಬಿಕರಿಗಿಟ್ಟಿದ್ದೇನೆ,
ಬದಲಿಯಾಗಿ ಒಂದೊಂದು
ನೋವನ್ನು ಒತ್ತೆಯಿಡಿ,
ಬೇಕಿದ್ದರೆ ಬಾಂಡು ಬರೆದುಕೊಡಿ!

ಒಬ್ಬಳೇ ಮಗಳನ್ನು ಬೆಳೆಸಲು
ಹೆಣಗುವ ಅಮ್ಮನ ಆರ್ದ್ರತೆ,
ತಬ್ಬಲಿಯಾದ ಮಕ್ಕಳ ಕಣ್ಣೀರು,
ಜಾತಿಯ ಬಡಪಟ್ಟಿಗೆ ಮುದುರಿ
ಮೂಲೆ ಸೇರುವ ಸಹನೆಯ ಕೊರಗು,
ತಡರಾತ್ರಿಗೆ ನಲುಗುವ ವೇಶ್ಯೆಯ
ಮಲ್ಲಿಗೆ ಕಂಪು,
ನೋವಿಗೆ ಮದ್ದು ಹುಡುಕುವ
ಭಗ್ನ ಪ್ರೇಮಿಯ ಎದೆಯ ಕಾವು,
ಎದೆಯೊಡೆದು ಸತ್ತ ಸಾವು,
ಎಲ್ಲಕ್ಕೂ ಮುಲಾಮಿದೆ ನನ್ನ ಬಳಿ,
ಬೋಗುಣಿಗೆ ನೋವು ಸುರಿಯಿರಿ,
ಸ್ವಚ್ಛಂದ ಬಣ್ಣ ಹೆಕ್ಕಿರಿ!

ಸಾವಿರಾರು ಬಣ್ಣಗಳ
ಸುರಿದು ನಿಮ್ಮ ಮುಂದಿಡುತ್ತೇನೆ,
ಕಪ್ಪು ಹಲಗೆಯ ಮೇಲೆ,
ಬಿಳಿಯ ಕ್ಯಾನ್ವಾಸಿದೆ,
ಬೇಕಾದ ಬಣ್ಣ ಬಳಿದುಕೊಳ್ಳಿ.
ಕಲಾಕೃತಿಯಾಗಿ ನೀವು ನಕ್ಕರೆ ಸಾಕು;
ಕುಂಚವಾದವಗೆ ಇನ್ನೇನು ಬೇಕು?!
ತಿರುಕನಂತೆ ತಿರುಗುತ್ತಾ ಹೊರಡುತ್ತೇನೆ,
ಇರುವ ದಿಕ್ಕುಗಳಾದರೂ ನಾಕೇ ನಾಕು;
ಸಂಧಿಸುತ್ತಲೇ ಸಂದಾಯ
ಪದ್ಯದೊಂದಿಗೆ ಮತ್ತು ಮದ್ಯದೊಂದಿಗೆ!

--> ಮಂಜಿನ ಹನಿ

Sunday, 23 November 2014

ಅವಳ ಧ್ಯಾನ!


ಈ ಕ್ಷಣಕೆ ನಾನು ನೀನಾಗಿ
ಬಿಡಬೇಕೆಂಬ
ಖಾಸಗಿ ಯೋಚನೆಯೊಂದು
ಎದೆಯ ಬಾಣಲೆಯೊಳಗೆ ಬಿದ್ದು
ಕುದಿಯುತ್ತದೆ,
ಮೇಲೆತ್ತಲು ಬರುವ
ನಿನ್ನ ಕೈಯ ಬಿಸಿ ಸ್ಪರ್ಶಕೆ
ಕಾದೇ ಕಾಯುತ್ತದೆ,
ಕನಸುಗಳು ಜಹಂಗೀರು ಕರಿದರೆ
ನಾಲಿಗೆಗೆ ಸಿಹಿ ಸಕ್ಕರೆ!

ನನ್ನ ಕಣ್ಣೋಟಗಳೋ
ನಿನ್ನ ಕುಡಿ ಹುಬ್ಬ ಮೇಲೆ ಕುಣಿದು,
ನೊಸಲ ಬಿಂದಿಯ ಮೇಲೇರಿ
ಮುಂಗುರುಳಿಳಿಜಾರಲಿ ಜಾರಿ,
ನನ್ನ ನೆನಪಿಗೆ ಕೆಂಪೇರಿದ
ನಿನ್ನ ತಂಟ ಕೆನ್ನೆಯ ಮೇಲೆ
ಗುಲಾಬಿ ವರ್ಣ ಕಲೆಸುತ್ತದೆ,
’ಜಾಸ್ತಿ ನಗಬೇಡ ಕಣೇ,
ಕೆನ್ನೆಗಳಿಗೊಳಿತಲ್ಲ’ವೆಂಬ
ನನ್ನೆಚ್ಚರಿಕೆಯೊಳಗೆ
ಸೇಬು ಕಚ್ಚುವ ಆಸೆಯೊಂದನು
ಬೆಚ್ಚಗೆ ತೂಗಿ ಮಲಗಿಸಿದೆ!

ಕಣ್ಣ ಕಾಡಿಗೆಯ ಗೆರೆ ತೀಡಿ
ಗಲ್ಲಕ್ಕೊಂದು ದೃಷ್ಟಿಬೊಟ್ಟು,
ನಿನ್ನ ಐ ಲೈನರುಗಳಿಗಿಂತ
ಚೆಂದದ ಕುಸುರಿ,
ಎದೆಯಾಳದ ಕಣ್ಣ ಕುಂಚ
ಒಲವೆಂಬ ಮಸಿಗದ್ದಿ
ನೀನೆಂಬ ಚಿತ್ರವಾಗಿದೆ,
ನಿನ್ನನೆಷ್ಟೇ
ಕನಸಿ, ನೆನೆಸಿದರೂ
ತೀರದ ಹಸಿವೊಂದು ವಿಚಿತ್ರವಾಗಿದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಲಾಲಿ ಹಾಡು!


ಚೆಂದಾನೆ ಚಂದ್ರಮ
ಕಣ್ಣೊಳಗೆ ತುಂಬಲಿ,
ಕಣ್ಮುಚ್ಚಿ ಮಲಗೆ ಚಿನ್ನಾರಿ,
ಬೆಳಕಿನ ಕಂಬಳಿ
ಹೊದ್ಕೊಂಡು ಬರ್ತಾವೆ,
ಸುಖದ ಸಿಂಪಡಿಕೆ
ಹಗಲುಗಳ ಬೆನ್ನೇರಿ...

ಒದ್ದೆಯಾದ ಕರ್ಚೀಫು,
ಹೊದೆಯದ ಕಂಬಳಿ
ಸಾಲ ಕೇಳುವವು ಜೋಕೆ,
ತಿಳಿಗೊಳದ ಬನದೊಳಗೆ,
ಉರಿವಂಥ ಉರಿಯೇಕೆ?
ಕಾಲ ಕಳಿತಾವೆ, ಮಳೆ ಬರುತಾವೆ,
ನಗುವೊಂದು ಮೊಗವರಳಲು ಸಾಕೆ,
ಮತ್ತೇನು ಬೇಕೆ?!

ಕಣ್ಮುಚ್ಚಿ ಮಲಗು ಜೋಜೋಜೋ,
ಆಗಸದ ಜೋಲಿ ಜೋಜೋಜೋ..

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 18 October 2014

ಕತ್ತಲಿನ ಕವಿತೆ!


ನಿನ್ನೊಲವಿನ
ದಿವಿನಾದನುಭೂತಿಗಳು
ನನ್ನೆದೆಯನು ಹದವಾಗಿ
ಬೇಯಿಸಲು,
ಹಸಿ ಸೌದೆಯ ಬಿಸಿ ಶಾಖಕೆ
ಕಣ್ಣು ಪಸೆಯಾಡಿ
ಮತ್ತೆ ಮತ್ತೆ ನನ್ನ ಸಾವು,
ಒಲವ ಘೋರಿಯ ಮೇಲೆ
ನನ್ಹೆಸರ ಕೆತ್ತಿಟ್ಟ
ನಿನ್ನ ನುಣುಪು ಕೈ ರೇಖೆಗಳು
ನೆನಪಾಗಲು
ಮತ್ತೆ ಮರು ಹುಟ್ಟು, ಹೊತ್ತಿದ್ದೇನೆ!

ಎದುರಿಗೆ ಕೈ ಕೈ ಬೆಸೆದು
ನಡೆವ ಒಲವ ಜೋಡಿಗಳ ನೋಡಿ,
ಹಿಂದೊಮ್ಮೆ ನಾನೂ
ಒಲವ ಘಮಕ್ಕೆ ಅರಳಿಕೊಳ್ಳುವ
ದಿನಗಳ ನೆನಪು;
ಕತ್ತಲ ರಾತ್ರಿಗಳು ಕಾದ ಹೆಂಚು,
"ನಿಂಗೊತ್ತಲ್ಲ? ನಂಗೆ ಕತ್ತಲಂದ್ರೆ ಭಯ?"
ನೀ ಉಸುರಿದ್ದು ನನ್ನೆದೆಗಂಟಿ
ರಕ್ತದೊಂದಿಗೆ ಕುದ್ದ
ಕಮಟು ಕಮಟಾಗುತ್ತದೆ,
ಪ್ರೀತಿ ಉಳಿಸಿಕೊಳ್ಳಲಾಗದ ಅಸಹಾಯಕತೆ,
ಸಮಾಜದ ಮೇಲಿನ ನಂಬಿಕೆ
ಉರಿದು ಹೋಗುವುದು
ಸಣ್ಣ ಸಮಾಧಾನ ಕೊಡುತ್ತದೆ!

ಈ ರಾತ್ರಿಗಳು ಮಾತ್ರ
ಒಂದು ಸಮವಿರುವುದಿಲ್ಲ ನೋಡು,
ಮೈಯ ಕಣಕಣವೂ ಹುರಿಗೊಂಡು,
ರಕ್ತ ನಾಳಗಳಲಿ ಪಟಪಟ ಮಿಡಿತ,
ನೆರವೇರದ ಪೋಲಿ ಆಸೆಯೊಂದು
ಎದೆಯೊಳಗೆ ಭಗ್ಗನೆ
ಹೊತ್ತಿಕೊಂಡು ಉರಿದು,
ನಾ ಸ್ಖಲನಗೊಳ್ಳದೆ ಮಡುಗಟ್ಟುವಾಗ
ನಿನ್ನ ಮೈಥುನದ ಸವಿಯುಂಡ
ನರಳಿಕೆಗಳಿಗೆ
ಕನ್ನಡಿ ಸಾಕ್ಷಿಯಾಗಿ ನಗುತ್ತದೆ,
ನಾನು ಅಸಹನೆಯಿಂದ ಮುಖ ಮುಚ್ಚಲು,
ಕತ್ತಲಿನ ಕವಿತೆಯೊಂದು
ಆಹಾರ ಸಿಕ್ಕಂತಾಗಿ ಮಿಸುಕಾಡುತ್ತದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 4 October 2014

ಪ್ರೇಮದಮಲು!



ಬೆಳದಿಂಗಳ ಕೊಳದ ನಡುವೆ ನಿಂತಿದ್ದೇನೆಂದು ಭಾಸವಾಗುತ್ತದೆ, ಎದುರಿಗೆ ಅವಳಿದ್ದಾಳೆ. ರೂಪವತಿ ಚೆಲುವೆ. ಅವಳ ಬಳಿ ಸುಳಿದಾಡುವ ಗಾಳಿಗೇ ಚಂದನದ ಗಂಧ ತೀಡಿದೆಯೇನೋ! ಮೈಮರೆತು ಮತ್ತನಂತಾಗುವ ನಾನು ಆಳವಾದ ಪ್ರೇಮದ ಸೆಲೆಯೊಳಗೆ ಸಿಲುಕಿದ್ದೇನೆ. ಎಷ್ಟೆಲ್ಲಾ ಹೇಳಬೇಕೆಂದು ಚಡಪಡಿಸುತ್ತೇನೆ, ಸಾಧ್ಯವೇ ಆಗುವುದಿಲ್ಲ! ಮಾತಾಗಿಬಿಡುವ ಮೌನಕ್ಕೆ ಕಾಯುತ್ತೇನೆ. ಹೇಗೋ ಕಷ್ಟಪಟ್ಟು ಹೇಳಬೇಕಾದ್ದನು ಅವಳೆದೆಗೆ ದಾಟಿಸಲು ಬಾಯ್ದೆರೆದೆ

"ವಿನೂ, ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು. ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕ, ನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲ, ಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆ, ಥರದ ಭ್ರಮೆಗೆ ಅದೇನೆನ್ನುವರೋ? ನನಗೆ ಮಾತ್ರ ತೀರದ ಚಡಪಡಿಕೆ! ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆ, ಕನ್ನಡಿಯೊಳಗಿನ ನನ್ನ  ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡ? ನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವ, ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸು, ಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟ, ಮಾತು, ಸ್ಪರ್ಶ, ಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲ, ಎಂಥ ತಮಾಶೆ ನೋಡು? ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನನ್ನು ಬಲೆಯಿಂದ ಪಾರು ಮಾಡ್ತೀಯಾ?" ನನ್ನೆಲ್ಲಾ ಮಾತುಗಾರಿಕೆಯನ್ನು ಉಪಯೋಗಿಸಿ ಇಷ್ಟು ಹೇಳಿ ಮುಗಿಸಿದ್ದೆ.

ನನ್ನ ಮಾತು ಕೇಳಿ ಅಮಾಯಕಳಂತೆ ನಕ್ಕ ಅವಳು, "ಮನು ನೀ ಏನು ಹೇಳಿದ್ಯೋ ಒಂದೂ ಅರ್ಥ ಆಗ್ಲಿಲ್ಲ. ನೀ ಯಾವ ಭಾಷೆಲೀ ಮಾತಾಡ್ತೀಯೋ?!" ಎನ್ನುತ್ತಾ ಪಿಳಿ ಪಿಳಿ ಕಣ್ಣು ಬಿಟ್ಟು, ಹುಬ್ಬೇರಿಸುತ್ತಾಳೆ.

ಅವಳ ರೀತಿಯ ಪ್ರತಿಕ್ರಿಯೆ ಕಂಡು ಕಂಗಾಲಾಗುವ ನಾನು, ಕಳವಳದಿಂದ ಅವಳ ಮುಖವನ್ನೇ ನೋಡುತ್ತೇನೆ..

ನಿಧಾನವಾಗಿ ನನ್ನ ಬಳಿ ಬರುವ ಅವಳು, ಕಂಗಾಲಾದ ನನ್ನ ಕಂಗಳಲ್ಲಿ ಅವಳ ನೋಟವಿಟ್ಟು, ನನ್ನ ಕೆಳ ತುಟಿಯ ಮೇಲೆ ನವಿರಾಗಿ ಚುಂಬಿಸುತ್ತಾಳೆ. ಕರೆಂಟು ಹೊಡೆದ ಕಾಗೆಯಂತಾಗುವ ನಾನು ಪಿಳಿ ಪಿಳಿ ಕಣ್ಣು ಬಿಟ್ಟು ಅವಳನ್ನೇ ನೋಡುತ್ತೇನೆ. ಅವಳು ಮಾತ್ರ ಎಂದಿನಂತೆ ತುಂಟ ನಗವಾಗುತ್ತಾಳೆ!

ಹೆಣ್ಣು ಹೇಗೆಲ್ಲಾ ನಮ್ಮ ಜೀವನದೊಂದಿಗೆ ಹಾಸು ಹೊಕ್ಕಾಗಿದ್ದಾಳೆ ಕರುಣೆಯಾಗಿ, ಮಮತೆಯಾಗಿ, ಪ್ರೀತಿಯಾಗಿ, ಅಕ್ಕರೆಯಾಗಿ, ಒಲವಾಗಿ, ಪ್ರೇಮವಾಗಿ... ಆದರೆ ನಾವೆಷ್ಟೇ ತಪಸ್ಸು ಮಾಡಿದರೂ, ಅವಳೊಳಗೆ ಸಿಗದೊಂದು ಮರೀಚಿಕೆಯಿದೆ, ಅದರ ಚಲನ ವಲನಗಳರಿವುದು ಸಾಧ್ಯವೇ ಆಗುವುದಿಲ್ಲ. ಯೋಚನಾ ಲಹರಿಯೊಳಗೆ ಸಿಕ್ಕುತ್ತೇನೆ...

ಬಾಗಿಲು ಬಡಿಯುವ ಶಬ್ದ, ದಡಕ್ಕೆನೇಳುವ ನನಗೆ ಮರೆಯದ ಸವಿ ನಿದ್ರೆ ಕಳೆದು ಹೋಗಿದ್ದು ಗೊತ್ತೇ ಆಗುವುದಿಲ್ಲ!

"ಅರೇ ಇದು ಕನಸಾ?" ತಲೆ ಕೊಡವಿಕೊಳ್ಳುತ್ತೇನೆ.

ಹಾಲ್ನಲ್ಲಿ ಕೆಂಪು ಬಣ್ಣದ ಸೆಲ್ವಾರ್ನಲ್ಲಿ ಮುದ್ದಾಗಿ ಸಿಂಗರಿಸಿಕೊಂಡು ಬಂದಿರುವ ವಿನೂ ನಿಂತಿದ್ದಾಳೆ. ಈಗಷ್ಟೇ ಏಳುತ್ತಿದ್ದ ನನ್ನ ಕಂಡು,
"ಹೇ ಕೋತಿ, ಈಗ ಏಳ್ತಿದ್ದೀಯೇನೋ? ಎಲ್ಲೋ ಕರೆದುಕೊಂಡು ಹೋಗ್ತೀನಿ ಬೇಗ ಬಾ ಅಂದಿದ್ದೆ?" ಎಂದು ಕೋಪ ನಟಿಸುವಳು.

"ಈಗ ರೆಡಿಯಾಗಿ ಬರ್ತೀನಿ, ಪೇಪರ್ ಓದ್ತಿರು" ಎಂದವನೆ, ಕಡೆ ತಿರುಗಬೇಕು, ಅವಳ ತುಟಿ ಮೇಲಿನ ಕೆಂಪು ಲಿಪ್'ಸ್ಟಿಕ್ ಪಳ ಪಳ ಎಂದು ಹೊಳೆಯುತ್ತದೆ.

--> ಮಂಜಿನ ಹನಿ


ಕಲೆ ಮತ್ತು ಧ್ವನಿ: ನಮ್ರತ ಸಿ ಸ್ವಾಮಿ