ನಿನ್ನ ಕಣ್ಣ ಇಶಾರಿಗೆ
ಸಿಗದ ಸಾಲೊಂದು
ನೆನ್ನೆ ಸತ್ತುಹೋಯ್ತು,
ಅದರಲೆಂತಹ ಪದ್ಯವಿತ್ತೊ,
ಗದ್ಯವಿತ್ತೊ,
ಎದೆಯ ಬಾಣಲೆಯಲಿ
ಶುದ್ಧವಾಗಿ ಕುದ್ದ ಹದವಿತ್ತೊ?
ಅರಿಯುವ ಮುನ್ನವೇ
ಮುಗಿಯುವ ಧಾವಂತ,
ಬರೆಸಿಕೊಳ್ಳದೆ ಹೋಯ್ತು!
ಬೆಳದಿಂಗಳ ಚಂದಿರನ
ಕಚ್ಚಿ ತಿನ್ನುವ ಆಸೆಗೆ,
ನಿನ್ನ ಕೆನ್ನೆ ನೋಡಿ ಕರುಬುವ ಸಾಲು,
ನಾನು ಹುಡುಕಾಡಿ ತಂದ
ಮೊಲ್ಲೆ ಮುಡಿಸುವ ಸಾಲು,
ಒಲವ ದೀವಟಿಗೆಗೆ ಬತ್ತಿ ನೇಯುವ ಸಾಲು,
ನಮ್ಮಿಬ್ಬರ ಸಂಜೆಯ ಮಬ್ಬಿಗೆ
ಹಲ್ಲು ಸೆಟ್ಟಾದ ಸಾಲು,
ಅಲ್ಲೇ ಅಸು ನೀಗಿದೆ ನೋಡು
ನೀನು ನೋಡದೆ ಉಳಿದ ಸಾಲು!
ರಕ್ತ, ಮಾಂಸ, ಮಜ್ಜೆಗಳನ್ನೆಲ್ಲಾ
ತುಂಬಿಕೊಂಡೇ ಬೆಳೆದಿತ್ತು,
ಸಾಲದ್ದಕ್ಕೆ ಕನಸುಗಳ ಕಸುವಿತ್ತು,
ಧರ್ಮ ಬೆರೆಸಿದ ಕತ್ತಲ ಸಂಚಿಗೆ
ಅನೀಮಿಕ್ ಬಿಳಿ ರಕ್ತಕಣಗಳು,
ಪ್ರತಿರೋಧಿಸದೆ ಕುಂತಿವೆ ಗೆಳತಿ,
"ಐ ಲವ್ ಯೂ" ಅಂತಲೂ ಅನ್ನದೆ
ನಿನ್ನಿಶಾರಿಗೂ ಸಿಕ್ಕದೆ
ನೋವು, ನಂಜಿಗೆ ಹಲ್ಲು ಗಿಂಜಿದೆ!
- ಮಂಜಿನ ಹನಿ
ಚಿತ್ರಕೃಪೆ: ಗೂಗಲ್ ಅಂತರ್ಜಾಲ
"ನಮ್ಮಿಬ್ಬರ ಸಂಜೆಯ ಮಬ್ಬಿಗೆ
ReplyDeleteಹಲ್ಲು ಸೆಟ್ಟಾದ ಸಾಲು"
ಯಾಕೋ ಗೊತ್ತಿಲ್ಲ ತೀರಾ ಭಾವುಕನಾದೆ!