ಭಾವಗಳನ್ನೆಲ್ಲಾ ಅದುಮಿಟ್ಟುಕೊಂಡು
ಬದುಕಿಗೆ ನೊಗ ಹೂಡುತ್ತಾಳೆ,
ಗಂಡನಿಗೆ ರಸ ಹೀರಿ ಎಸೆದ ಸಿಪ್ಪೆ,
ಮಕ್ಕಳಿಗೆ ತಮ್ಮನ್ನು ಉದ್ಧರಿಸಲು ನಿಂತ ದೇವರು,
ದೇವರಲ್ಲಿ ಬೇಡುವುದು ಬಿಟ್ಟು
ದೇವರ ಕಷ್ಟ ಕೇಳುವುದುಂಟಾ? ಹಾಗೆ!
ಮನಸಿನ ತುಮುಲಗಳ
ಹರಿಯಬಿಡದಂತೆ
ಎಚ್ಚರವಹಿಸುವಳು,
ನೀಲುವಿನ ಪದ್ಯ ಓದಿ
ಪುಳಕಗೊಳ್ಳುವಳು; ಹೌದೆ?
ಯಾರಾದರೊಬ್ಬರು
ಸಣ್ಣವಾಗ್ತಿದ್ದೀ ನೋಡು
ಎನ್ನಲಿ ಎಂದು ಪರಿತಪಿಸಿ
ಸುಮ್ಮನಾಗುವಳು,
ಪಾಪ ಅವಳನ್ನವಳೇ ಕನ್ನಡಿಯಲಿ ಕಂಡು
ವರ್ಷಗಳಾಗಿರಬಹುದೆ?
ಜಿಜ್ಞಾಸೆಯ ಸಿಕ್ಕುಗಳಿಂದ ಬಿಡಿಸಿಕೊಳ್ಳುವ ಕನಸು,
ಆದರೆ ಶಿಲೆಯಾದ ಇವಳಿಗೆ
ಗೌತಮನ ಶಾಪವೇನೆಂದೆ ತಿಳಿಯದು,
ರಾಮನಂತು ದಾರಿ ಮರೆತಿರಬಹುದು?
ಓಡುವ ಕಾಲದಲಿ
ಸಾವಿರ ಸಾವಿರ ಅಹಲ್ಯೆಯರು!
--> ಮಂಜಿನ ಹನಿ
20/09/2017 ರಲ್ಲಿ ಬರೆದ ಕವಿತೆ.
No comments:
Post a Comment