ಗಾಳಿ ನಾನು,
ಗಾವುದವನ್ನೂ ಬಿಡದೆ ಬೀಸಿದ್ದೇನೆ,
ತಿಳಿಯಾಗಿ, ಮೆಲುವಾಗಿ,
ಹದವಾಗಿ, ಬಿರುಸಾಗಿ...
ಬೀಸು ಬೀಸಿಗೂ
ಘಮಲು ಹಾಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!
ಹೂದೋಟ ಹೊಕ್ಕಿದ್ದ ನಾ
ಹೊತ್ತು ತಂದದ್ದು ಪರಿಮಳವನ್ನೇ,
ಪಸರಿಸಬೇಕೆಂದು ಬೀಸಿದ್ದಷ್ಟೇ,
ನನಗೇನು ಗೊತ್ತಿತ್ತು
ಹೂಗಳೂ ಗಬ್ಬು ನಾರುತ್ತವೆಂದು,
ಹೂ ಘಮಲಿಗಿಂತ
ಅಮಲೇರಿದ್ದ ಜನರ
ತುಳಿತಕ್ಕೆ ಸಿಕ್ಕ ಕುಸುಮಗಳ
ಚೀರಾಟ ಜೋರೆಂದು,
ಚೀರಾಟವ ಚಿವುಟಿ
ಮಾಲೆಗೆ ಕೊರಳೊಡ್ಡಿ
ನಕ್ಕ ಜನರ ಕೇಕೆಯನ್ನೂ ಹೊತ್ತೊಯ್ಯುತ್ತೇನೆ,
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!
ನಲ್ಲನ ಬಿಸಿಯುಸಿರ ಬಿಸಿಗೆ ಕರಗುವ
ಮುಗುದೆಯ ಮನದ
ಪಿಸುದನಿಯನ್ನೂ ಹೊತ್ತೊಯ್ಯುತ್ತೇನೆ,
ಅರಿವಿಗೂ ಬಾರದಂತೆ,
ಅವರಿವರು ಅವರೆಡೆಗೆ
ತಿರುಗಿಯೂ ನೋಡದಂತೆ..!
ಹೃದಯಕ್ಕೆ ಕಿವಿಗೊಟ್ಟು
ಉಚ್ಛ್ವಾಸ - ನಿಚ್ಛ್ವಾಸದೊಳಗನಿಲವಾಗಿ
ರಕ್ತದೊಳು ಬೆರೆತುಹೋಗುತ್ತೇನೆ
ನನ್ನಿರುವೂ ತಿಳಿಯದಂತೆ..!
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!
ಮೈಗಂಟಿದ ಸುಗಂಧವನ್ನೂ ಬೀಸುತ್ತೇನೆ,
ಬೆವರ ಬಸಿರಿಗಂಟಿದ
ದುರ್ಗಂಧವನ್ನೂ ಬೀಸುತ್ತೇನೆ,
ಸುಕೋಮಲತೆಯನು ಹೊಸಕಿ
ಮೈಲಿಗೆಯ ಮರೆಮಾಚಲು
ಗಂಧಕ್ಕೆ ಮೈತೀಡಿ
ಅಮಲ ಪರಿಮಳ
ಬೀರುವ ಘಮಲೊಳಗೆ
ಬಡವರ ಬೆವರು ಬೀದಿ ಪಾಲು,
ಎರಡನ್ನೂ ತೂರುತ್ತೇನೆ,
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!
- ಪ್ರಸಾದ್.ಡಿ.ವಿ.
ಯಾವ ಬೇದಭಾವವೂ ಇಲ್ಲದ ಮನಸು ಹೊಂದಿ ತನ್ನ ಏಕತಾನತೆಯ ಬುದ್ಧಿಯಲ್ಲೇ ಎಲ್ಲವನೂ ಅರಗಿಸಿಕೊಳ್ಳುವ ಜಾಣ್ಮೆ ಈ ಬೀಸುವ ಸ್ನೇಹಿತನದ್ದು!
ReplyDeleteಅವನ ಆತ್ಮದೊಳಗೆ ಹೊಕ್ಕು ಭಾವರಂಗನು ಮಾರ್ಮಿಕವಾಗಿ ನಮಗಿತ್ತ ಪರಿ ಮೆಚ್ಚಲೇಬೇಕು ಪ್ರಸಾದ್. ಬಿರುಗಾಳಿಯಾಗದೆ ಮೃದುವಾಗಿ ಗಾಳಿಯನ್ನು ಮಾತನಾಡಿಸಿದ್ದರಲ್ಲಿ ವಿಭಿನ್ನತೆಯಿದೆ. ಸುಂದರ ಪ್ರಯತ್ನ.
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ತುಂಬು ಮನದ ಧನ್ಯವಾದಗಳು ಪುಷ್ಪಣ್ಣ.. ಗಾಳಿಗೆ ಮೈಯೊಡ್ಡಿ, ಗಾಳಿಯನ್ನೂ ಹರಸಿದ್ದೀರಿ.. ನನ್ನ ಬರವಣಿಗೆ ಒಂದಷ್ಟು ಗಟ್ಟಿ ನೆಲಗಟ್ಟು ಕಾಣಲು ನೀವೆಲ್ಲ ಕೊಡುತ್ತಿರುವ ಸಹಕಾರವೇ ಕಾರಣ.. ನಾನು ಧನ್ಯ..:)))
Deleteಹಲವು ದಿನಗಳ ಬಳಿಕ ವಿಶಿಷ್ಟ ವಸ್ತುವಿಷಯ ಕಾವ್ಯ ಓದಿದ ತೃಪಿ ಇಲ್ಲಿ ಸಿಗುತ್ತಿದೆ.ಪದಗಳಲ್ಲಿ ಅವಿತು ಕುಳಿತ ಭಾವಗಳು ಒಂದಕ್ಕೊಂದು ತೆರೆಯುತ್ತಾ ಹೋಗಿದೆ. ಸುಂದರ ಕವಿತೆ. ಶುಭವಾಗಲಿ.
ReplyDeleteನಿಮ್ಮ ಮೆಚ್ಚುಗೆಯ ನುಡಿಗಳು ಬರೆಯುವ ಕೈಗಳನ್ನು ಗಟ್ಟಿಗೊಳಿಸುತ್ತವೆ ರವಿಯಣ್ಣ.. ನನ್ನ ಸಾಹಿತ್ಯದ ತೇರು ಮುಂದುವರೆಯಲು ಒತ್ತಾಸೆಯಾಗಿ ನಿಂತಿರುವವರು ನೀವು.. ನಿಮಗೆ ತುಂಬು ಮನದ ಧನ್ಯವಾದಗಳು..:)))
Deleteಗಾಳಿ ನಾನು
ReplyDeleteಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!
ಏನಾದರು ತನ್ನ ಪಾಡಿಗೆ ತಾ ಬೀಸುವ ಸ್ನೆಹಿತನ ಬಗೆಗಿನ ವರ್ಣನೆ ಚೆನಾಗಿದೆ...
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ತುಂಬು ಮನದ ಧನ್ಯವಾದಗಳು ಸಿಂಧು..:)))
Deleteಗಾಳಿಯನ್ನು ವರ್ಣಿಸುತ್ತ ನೀವು ಕಟ್ಟಿದ ಪದಗಳ ಮಾಲೆ ಸೊಗಸಾಗಿದೆ.. ಯಾವುದು ಎಲ್ಲಿ ಏನು ಎಂಬ ಸ್ಪಷ್ಟನೆ ಇಲ್ಲದೇ ಇದ್ದಲ್ಲಿ ಅದನ್ನು ಗಾಳಿ ಮಾತು ಎಂದು ಕರೆಯುತ್ತಾರೆ.. ಏನು ಮಾಡಲು ಸಾಧ್ಯ ಗಾಳಿ ಬರುವುದು ಹೋಗುವುದು ಯಾರಿಗೂ ತಿಳಿಯುವುದಿಲ್ಲ.. ನಮ್ಮ ಸುತ್ತಲು ಗಾಳಿ ಇದ್ದೇ ಇದೆ. ಆ ಗಾಳಿಯ ವಿವರಣೆ ನಿಮ್ಮ ಕವಿತೆಯಲ್ಲಿ ಅತೀ ಅರ್ಥಗರ್ಭಿತ.. ಒಟ್ಟಿನಲ್ಲಿ ಹೋಲಿಕೆ ಮತ್ತು ಸತ್ಯಾಂಶ ಎರಡು ಇಲ್ಲಿ ವಿಶೇಷವಾಗಿದೆ.. :) :)
ReplyDelete