ಹಕ್ಕಿಯೊಂದು ಕೊಕ್ಕ ಚಾಚಿ
ಕಾಳೊಂದನು ಕುಕ್ಕಿ ಹೆಕ್ಕಿ
ಗಂಟಲೊಳಗಿನೆಂಜಿಲುನಿಸಿ
ಗುಟುಕಿರಿಸಿರೆ
ಕಾಳ ಜೀವ ಹಾರಿ ಹೋಯ್ತು,
ಸಸಿಯ ಹುಟ್ಟು ಕಮರಿ ಹೋಯ್ತು
ಹಕ್ಕಿಯ ಹಸಿವಿಗೆ..!
ಹಸಿದ ಹಾವು ಅಹಾರವರಸಿ
ಮರದಲಿದ್ದ ಗೂಡನ್ಹುಡುಕಿ
ಅದರಲಿದ್ದ ಮೊಟ್ಟೆ ಕುಕ್ಕಿ
ಸಾರ ಹೀರಿರೆ,
ಹಸುಳೆ ಹಕ್ಕಿ ಹತ್ಯೆಯಾಯ್ತು,
ಹತ್ಯೆಗೆ ಹತ್ಯೆ ಜೊತೆಯಾಯ್ತು,
ಹಾವಿನ ಹಸಿವಿಗೆ..!
ಗಿಡುಗವೊಂದು ಹೊಂಚುಹಾಕಿ
ತೆವಳುತಿದ್ದ ಉರುಗನ ಮೇಲೆ
ತನ್ನೆರಡು ಕಾಲ ಮೀಟಿ
ಹೊತ್ತು ಹೋಯ್ದಿರೆ,
ಹಾವು ಕೂಡ ಹತ್ಯೆಯಾಯ್ತು,
ಕಾಲನಾಟ ಏರಿಯಾಯ್ತು,
ಗಿಡುಗನ ಹಸಿವಿಗೆ..!
ಮಳೆಯೊಂದಿಗೆ ಮಿಂಚು ಬಂತು
ಮಿಂಚ ವಿದ್ಯುತ್ ಸ್ಪರ್ಷ ತಂತು
ಸ್ಪರ್ಷ ತಗುಲಿ ಗಿಡುಗ ಸತ್ತು
ಪಯಣ ಮುಗಿಸಿರೆ,
ಸತ್ತ ಗಿಡುಗ ಭುವಿಗೆ ಬಿತ್ತು,
ಬೆಳೆವ ಸಸಿಗೆ ಸತುವಾಯ್ತು,
ಹೊಸ ಬೀಜದುಗಮಕೆ..!
ಸಾವಿಗೊಂದು ಸಾವಿನ್ಹುತ್ತ,
ಹುಟ್ಟಿಗೊಂದು ಹುಟ್ಟಿಸುತ್ತಾ,
ತನ್ನ ಇರುವ ತೋರಿಸುತ್ತಾ,
ಜೀವಗಳನ್ನಣಕಿಸುತ್ತಾ,
ನಿಸರ್ಗ ಹಿಡಿದ ಬಿಗಿ ಹಿಡಿತ,
ಇದು ಸಮತೋಲನ,
ಪ್ರಕೃತಿಯ ಸಮತೋಲನ..!
- ಪ್ರಸಾದ್.ಡಿ.ವಿ.
ನಿಜ ನಿಮ್ಮ ಮಾತು....
ReplyDeleteಜೀವನ ಚಕ್ರ...
ಸಮತೋಲನ ಕಾಪಾಡಲು ಪಾಲನಾ ಕರ್ತ ವಿಷ್ಣು ತನ್ನ ಕೆಲಸ ಸದಾ ನಿಭಾಯಿಸುತ್ತಾ ಇರುತ್ತಾನೆ
ಯಾರೆ ಆಗಲಿ, ಮನುಜ ಇಲ್ಲ ಪ್ರಾಣಿ ಸ೦ಕುಲ ದಲ್ಲಿ ಇದ್ದಷ್ಟು ದಿನವೂ ರಾಜನಾಗೇ ಇರಲು ಸಾದ್ಯ ವಿಲ್ಲ... ದೇವರ ಆಟಕ್ಕೆ ಲೀಲೆಗೆ ಗುರಿಯಾಗಲೇ ಬೇಕು...
ಚಕ್ರ ತಿರುಗಿದ೦ತೆ ಒಮ್ಮೆ ಹಾರದುತ್ತಿದ್ದವ ಮತ್ತೊಮ್ಮೆ ಕಾಲು ಮುರಿದು ಬೀಳಲೇ ಬೇಕು...
ಎಲ್ಲರಿಗೂ ಸಾವು ಕಟ್ಟಿಟ್ಟ ಬುತ್ತಿ... ಇದ್ದಷ್ಟು ದಿನ ಇನ್ನೊಬ್ಬರಿಗೆ ನೋವನ್ನು೦ಟು ಮಾಡದೆ ಸ೦ತೊಶದಿ೦ದ ಜೀವನ ನಸಾಗಿಸುವುದು ಒಳ್ಳೆಯದಲ್ಲವೆ,....???
ಕವಿತೆಯ ಒಡಲೊಳಗೆ ಹೊಕ್ಕಿ ಅದರ ಸಾರವನ್ನರಗಿಸಿಕೊಂಡು ಮೆಚ್ಚಿ ಪ್ರತಿಕ್ರಿಯಿಸಿರುವ ನಿಮಗೆ ಧನ್ಯವಾದಗಳು ಸಿಂಧುರವರೆ.. ನಿಮ್ಮ ಮಾತುಗಳು ಸತ್ಯ, ಹುಟ್ಟು-ಸಾವುಗಳೇ ಭುವಿಯನ್ನು ತನ್ನ ಸಮತೋಲನದಲ್ಲಿ ಕಾಯ್ದುಕೊಳ್ಳುತ್ತಿರುವ ಜೀವನ ಚಕ್ರಗಳು.. ವಂದನೆಗಳು..
Deleteಆಹಾರ ಸರಪಣಿಯ ಸಮತೋಲನ. ಪ್ರತಿ ಸಾವಿಗೂ ಒಂದು ಹುಟ್ಟು. ಅದೇ ಜಗದ ಗುಟ್ಟು ಚೆನ್ನಾಗಿದೆ ಪ್ರಸಾದ್
ReplyDeleteನಿಮ್ಮ ಮೆಚ್ಚುಗೆಯ ಮಾತುಗಳಿಗೆ ವಂದನೆಗಳು ದಿಲೀಪ್..
Deleteಆಹಾರ ವರ್ತುಲತೆಯನ್ನು ಅತ್ಯುತ್ತಮವಾಗಿ ಕಟ್ಟಿ ಕೊಟ್ಟಿದ್ದೀರ.
ReplyDeleteನಿಮ್ಮ ಮೆಚ್ಚುಗೆಯ ಮಾತುಗಳಿಗೆ ನಲ್ಮೆಯ ಧನ್ಯವಾದಗಳು ಬದರಿ ಸರ್..:)
Deleteಕವಿತೆಯಲ್ಲಿರುವ ವಸ್ತುವಿಷಯಕ್ಕೆ ಬಂದಾಗ ನಿಮ್ಮ ಆಲೋಚನೆ ವಿಶಾಲವಾಗಿದೆ ಅನ್ನಿಸಿತು. ತುಂಬಾ ಚೆನ್ನಾಗಿದೆ ಅರಗಿಸಿಕೊಳ್ಳಬಲ್ಲೀರಿ ಮನಸ್ಸನ್ನು. ಲಯಬದ್ಧ ಪ್ರಯತ್ನಕ್ಕೆ ನನ್ನ ಚಪ್ಪಾಳೆ ಸದಾ ನಿಮ್ಮೊಂದಿಗೆ ಇದೆ. ಅಭಿನಂದನೆಗಳು.
ReplyDeleteನಿಮ್ಮ ಮಾತುಗಳು ನನಗೆ ಇನ್ನೂ ಹೆಚ್ಚೆಚ್ಚು ಬರೆಯಲು ಉತ್ತೇಜನ ನೀಡುತ್ತದೆ.. ನಿಮಗೆ ಅನಂತ ಅನಂತ ಧನ್ಯವಾದಗಳು ರವಿಯಣ್ಣ..:)
Deleteಪ್ರಸಾದ್ ಸರ್... ನಿಮ್ಮ ಜೀವಶಾಸ್ತ್ರ ಪಾಠ ತುಂಬಾ ಚೆನ್ನಾಗಿದೆ.. ಇದನ್ನು ನೀವು ಬಾಲು ಸರ್. ಅವರ ನಮ್ ಕನ್ನಡ ಗುಂಪಿನಲ್ಲೂ ಹಾಕಿ.. ಅಲ್ಲಿ ಹೊಸ ಪ್ರಯತ್ನ ಮಾಡ್ತಾ ಇದ್ದಾರೆ.. ನಿಮ್ಮ ಸಹಕಾರವೂ ಸಹ ಅಗತ್ಯ.. ಎಂದು ನಮ್ಮ ಕೋರಿಕೆ.. :)
ReplyDeleteಈ ಜೀವನ ಚಕ್ರ ವ್ಯವಸ್ಥೆಯ ಬಗ್ಗೆ ತುಂಬಾ ದಿನಗಳ ಮೊದಲೇ ಓದಿದ್ದೆವು ಮತ್ತು ನಮ್ಮ ಪ್ರೊಫೈಲ್ ಅಲ್ಲಿ ಸಹ ಶೇರ್ ಮಾಡಿದ್ದೆವು.. ಕವನ ಇಷ್ಟ ಆಗಿ ಕಾಮೆಂಟ್ ಮಾಡೋಕ್ಕೆ ಆಗ ಟೈಮ್ ಆಗಿರಲಿಲ್ಲ.. ಅದಕ್ಕೆ ಈಗ ಪ್ರತಿಕ್ರಿಯೆ ಹಾಕಿದ್ದು .. ಸ್ವಲ್ಪ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದೆವು.. ಬೇಸರ ಮಾಡಿಕೊಳ್ಳಬೇಡಿ.. ಶುಭದಿನ .. ವಂದನೆಗಳು.. :)
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಪ್ರಶಾಂತಣ್ಣ.. ನಿಮ್ಮ ಸಲಹೆಯಂತೆಯೇ ಅಲ್ಲಿಯೂ ಪ್ರಕಟಿಸುತ್ತೇನೆ..:)
Delete